ಶಾಫಿ ಸಅದಿ ವಿರುದ್ಧದ ಆರೋಪಲ್ಲಿ ಸತ್ಯಾಂಶವಿಲ್ಲ: ಸಅದಿಯಾ ಫೌಂಡೇಶನ್ ಸ್ಪಷ್ಟನೆ

0
498

ಸನ್ಮಾರ್ಗ ವಾರ್ತೆ

ಬೆಂಗಳೂರು : 2004ರಿಂದ ಕಾರ್ಯಾಚರಿಸುತ್ತಿರುವ, ಬೆಂಗಳೂರಿನ ಬನಶಂಕರಿ ಹಾಗೂ ಬನ್ನೇರುಘಟ್ಟಗಳಲ್ಲಿ ವಿವಿಧ ವಿದ್ಯಾಲಯಗಳನ್ನು ನಡೆಸುತ್ತಿರುವ ಬೆಂಗಳೂರು ಸಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿಯವರು ವಕ್ಫ್ ಅನುದಾನವನ್ನು ದುರುಪಯೋಗ ಮಾಡಿದ್ದಾರೆಂಬ ಕೆಲವರ ಆರೋಪ ಸತ್ಯಕ್ಕೆ ದೂರವಾದುದು ಎಂದು ಬೆಂಗಳೂರು ಸಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆ ಸ್ಪಷ್ಟಿಕರಣ ನೀಡಿದೆ.

ಶಾಫಿ ಸಅದಿ ಮೊದಲ ಬಾರಿಗೆ ರಾಜ್ಯ ವಕ್ಫ್ ಬೋರ್ಡ್ ಗೆ ಸದಸ್ಯರಾಗಿದ್ದು 2011ರಲ್ಲಿ. ಅಲ್ಲಿಂದೀಚೆಗೆ ಎರಡು ಅವಧಿಗೆ ಅವರು ರಾಜ್ಯ ವಕ್ಫ್ ಸದಸ್ಯರಾಗಿದ್ದಾರೆ. ಈ ಅವಧಿಯಲ್ಲಿ ಸಅದಿಯಾ ಸಂಸ್ಥೆ ವಕ್ಫ್ ಬೋರ್ಡ್ ನಿಂದ ಯಾವುದೇ ಧನ ಸಹಾಯ ಪಡೆದಿಲ್ಲ. ಸ್ಲಮ್ ಮಕ್ಕಳು ಸಹಿತ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಬೆಂಗಳೂರು ಸಅದಿಯಾ ಸಂಸ್ಥೆಯ ಬನ್ನೇರುಘಟ್ಟ ಶಾಖೆಯ ಮಸೀದಿ ಕಟ್ಟಡ ದುರಸ್ತಿಗೆ ಧನಸಹಾಯದ ಅಗತ್ಯವಿತ್ತು. ಸುಮಾರು ನಾಲ್ಕೂವರೆ ಕೋಟಿ ರೂ. ಮೌಲ್ಯದ ಮಸೀದಿ-ಮದ್ರಸ ಕಟ್ಟಡ ಹೊಂದಿರುವ ಬನ್ನೇರುಘಟ್ಟದ ಮಸೀದಿಯನ್ನು ವಕ್ಫ್ ಗೆ ನೋಂದಾಯಿಸಲಾಗಿದೆ. ಮಸೀದಿ ದುರಸ್ತಿ ಹಾಗೂ ಅಭಿವೃದ್ಧಿಗೆ ಅನುದಾನ ಬಯಸಿ ಸಅದಿಯಾ ಸಂಸ್ಥೆಯು ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಅದರಂತೆ ಕಂಪೌಂಡ್ ನಿರ್ಮಾಣಕ್ಕೆಂದು ಸುಮಾರು 19 ಲಕ್ಷ ರೂ. ಸರಕಾರದಿಂದ ಮಂಜೂರಾಗಿದ್ದು, ಅದರ ಮೊದಲ ಕಂತು ಐದು ಲಕ್ಷ ರೂ. ಸಅದಿಯಾ ಆಡಳಿತ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಅದೇ ಸಂದರ್ಭಕ್ಕೆ ಕೆಲವರಿಂದ ಇದಕ್ಕೆ ಆಕ್ಷೇಪ ಕೇಳಿಬಂತು. ಈ ಬಗ್ಗೆ ಮಾಹಿತಿ ಅರಿತ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿಯವರು ವಕ್ಫ್ ಬೋರ್ಡ್ ಸದಸ್ಯರೂ ಆಗಿರುವುದರಿಂದ; ಅವರೆ ಸ್ವತಃ ವಕ್ಫ್ ಬೋರ್ಡ್ ಸಿಇಒರವರನ್ನು ಸಂಪರ್ಕಿಸಿ ಆಕ್ಷೇಪಗಳ ಬಗ್ಗೆ ಇತ್ಯರ್ಥ ಆಗುವವರೆಗೆ ಅನುದಾನವನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ ಎಂದು ಸಅದಿಯಾ ಎಜುಕೇಶನಲ್ ಫೌಂಡೇಶನ್ ಪ್ರಕಟನೆಯಲ್ಲಿ ತಿಳಿಸಿದೆ.

ಈಗಾಗಲೇ ಕಂಪೌಂಡ್ ಇರುವ ಬನ್ನೇರುಘಟ್ಟ ಮಸೀದಿಗೆ ಮತ್ತೊಮ್ಮೆ ಕಂಪೌಂಡ್ ನಿರ್ಮಾಣಕ್ಕೆಂದು ಅನುದಾನ ಸಲ್ಲಿಸಲಾಗಿದೆ ಎಂಬ ದೂರುದಾರರ ಆರೋಪ ಸತ್ಯಕ್ಕೆ ದೂರವಾದುದು. ಈಗ ನಿರ್ಮಾಣವಾಗಿರುವುದು ಮಸೀದಿಯ ಮುಂಭಾಗದಲ್ಲಿ ಬರೀ ಗೇಟ್ ಮಾತ್ರವಾಗಿದೆ. ಆ ಗೇಟ್ ನ ಹೊರ ಆವರಣದ ಜಮೀನು ಕೂಡ ಮಸೀದಿಯದ್ದಾಗಿದೆ. ಅದಕ್ಕೆ ಕಂಪೌಂಡ್ ನಿರ್ಮಾಣವಾಗಬೇಕಿದೆ. ತುಸು ತಗ್ಗು ಮಟ್ಟದಲ್ಲಿರುವ ಜಮೀನು ಮಸೀದಿಯ ಹಿಂಭಾಗದಲ್ಲಿದ್ದು; ಅಲ್ಲಿ ಕೂಡ ಕಂಪೌಂಡ್ ಇಲ್ಲ. ಬಲಭಾಗದಲ್ಲೂ ಇಲ್ಲ. ಅಲ್ಲೆಲ್ಲ ಕಂಪೌಂಡ್ ನಿರ್ಮಾಣದ ಅಗತ್ಯ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊ ಮಸೀದಿಯ ಎಡಭಾಗದಲ್ಲಿನ ತಡೆಗೋಡೆ ಮಾತ್ರ. ಮಸೀದಿಯ ಎಡಭಾಗದಲ್ಲಿ ಮಾತ್ರ ತಾತ್ಕಾಲಿಕ ತಡೆಗೋಡೆ ಇದೆ. ಉಳಿದ ಭಾಗಗಳಲ್ಲಿ ಕಂಪೌಂಡ್ ನಿರ್ಮಾಣಕ್ಕಾಗಿ ಅನುದಾನ ಬಯಸಿ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಬದ್ಧವಾಗಿ ಅನುದಾನ ಮಂಜೂರಾಗಿದೆ. ಕಂಪೌಂಡ್ ಇಲ್ಲ ಎನ್ನುವುದಕ್ಕೆ ಹಾಗೂ ಕಂಪೌಂಡ್ ನಿರ್ಮಾಣದ ಅಗತ್ಯ ಇದೆ ಎನ್ನುವುದಕ್ಕೆ ಸೂಕ್ತವಾದ ಪುರಾವೆಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಸಅದಿಯಾ ಎಜುಕೇಶನಲ್ ಫೌಂಡೇಶನ್ ಸ್ಪಷ್ಟಿಕರಣ ನೀಡಿದೆ.

ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಶಾಫಿ ಸಅದಿಯವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಸಂಸ್ಥೆಯ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಮೇಲೆ ಸುಳ್ಳಾರೋಪ ಹೊರಿಸಿ ಮಾನಹಾನಿ ಮಾಡಿರುವವರ ವಿರುದ್ಧ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಅದಿಯಾ ಎಜುಕೇಶನಲ್ ಫೌಂಡೇಶನ್ ಪ್ರಕಟನೆ ತಿಳಿಸಿದೆ.