ಸಾಗರ ಹಲ್ಲೆ ಪ್ರಕರಣ; ಮೂವರ ಬಂಧನ

0
153

ಸನ್ಮಾರ್ಗ ವಾರ್ತೆ

ಶಿವಮೊಗ್ಗ: ಸಾಗರ ನಗರ ಭಜರಂಗದಳದ ಸಹಸಂಚಾಲಕ ಸುನೀಲ್ ಎಂಬಾತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ  ಮೂವರನ್ನು ಬಂಧಿಸಲಾಗಿದೆ ಎಂದು ಎಸ್.ಪಿ. ಮಿಥುನ್ ಕುಮಾರ್ ಹೇಳಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮೀರ್, ಇಮಿಯಾನ್ ಹಾಗೂ ಮನ್ಸೂರ್ ಎಂಬವರನ್ನು ಬಂಧಿಸಲಾಗಿದೆ. ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಕಳೆದ ಐದು ತಿಂಗಳಿನಿಂದ ಸುನೀಲ್ ಚುಡಾಯಿಸುತ್ತಿದ್ದು, ಈ ಕಾರಣದಿಂದ ಹಲ್ಲೆಗೈದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಬಂಧಿತರಿಂದ  ಇನ್ನೂ ಹೆಚ್ಚಿನ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿರುವುದಾಗಿ ಹೇಳಿದರು.

ಸುನೀಲ್‌ಗೆ ತನ್ನ ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸಮೀರ್ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಅದನ್ನು ಲೆಕ್ಕಿಸದ ಸುನೀಲ್ ನಿನ್ನ ತಂಗಿಯ ನಂಬರ್ ಕೊಡು ಎಂದು ರೇಗಿಸುತ್ತಿದ್ದ. ಅದರಂತೆಯೇ ಸೋಮವಾರ ಸಮೀರ್ ಬೈಕ್‌ನಲ್ಲಿ ಬರುತ್ತಿರುವಾಗ ಸುನೀಲ್ ಮತ್ತೆ ರೇಗಿಸಿದ್ದ. ಇದರಿಂದ ಕುಪಿತಗೊಂಡ ಸಮೀರ್ ತನ್ನ ಬೈಕಲ್ಲಿದ್ದ ಮಚ್ಚನ್ನು ತೆಗೆದು ಹಲ್ಲೆಗೆ ಯತ್ನಿಸಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.

ಸಮೀರನು ಕುರಿಗಾಹಿ ಯುವಕನಾಗಿರುವ ಕಾರಣ ಎಂದಿನಂತೆ ಕುರಿಗೆ ಸೊಪ್ಪು ತರಲು ಬೈಕಲ್ಲಿ ಮಚ್ಚನ್ನು ಇಟ್ಟುಕೊಂಡಿದ್ದ. ಅದೇ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ಇಮಿಯಾನ್ ಮತ್ತು ಮನ್ಸೂರ್‌ನನ್ನು ವಶಕ್ಕೆ ಪಡೆಯಲಾಗಿದ್ದು ಅವರ ಪಾತ್ರದ ಬಗ್ಗೆ ವಿಚಾರಣೆಯ ಬಳಿಕ ಬಹಿರಂಗವಾಗಲಿದೆ.