18 ಗಂಟೆ ಸಾವಿನೊಂದಿಗೆ ಮುಖಾಮುಖಿ; ಸಮೀನಾಳಿಗಿದು ಎರಡನೇ ಹುಟ್ಟು

0
1796

ಸನ್ಮಾರ್ಗ ವಾರ್ತೆ

ಮುಝಪ್ಫರ್ ಬಾದ್, ಜ. 16: ಸಾವಿಗೆ ಮುಖಾಮುಖಿಯಾದ ಸಮೀನ ಮರಳಿ ಜೀವನಕ್ಕೆ ಮರಳಿದ್ದಾರೆ. ಮರಣದೆಡೆಗೆ ಕರೆದೊಯ್ದಿದ್ದ ಶೀತ ಆಕೆಯನ್ನು ಪುನಃ ಜೀವನಕ್ಕೆ ಕರೆತಂದಿದೆ. ಹದಿನೆಂಟು ಗಂಟೆ ಸಮೀಮಾ ಮಂಜಿನಲ್ಲಿ ಜೀವಚ್ಛವವಾಗಿ ಬಿದ್ದಿದ್ದರು.

ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ವಲಯದಲ್ಲಿ ವಾಸಿಸುವ ಹನ್ನೆರಡು ವರ್ಷದ ಸಮೀನಾಳ ಮನೆಯ ಮೇಲೆ ಸೋಮವಾರ ಮಂಜಿನ ಬೆಟ್ಟ ಕುಸಿದು ಬಿದ್ದಿತ್ತು. ಮಂಜು ಮುಚ್ಚಿಕೊಂಡ ಮನೆಯೊಳಗಿನ ಕೋಣೆಯಲ್ಲಿ ಅವಳು ಸಿಕ್ಕಿಬಿದ್ದಿದ್ದಳು. ಬದುಕುಳಿಯುತ್ತೇನೆ ಎಂದು ತಾನು ಭಾವಿಸಿಕೊಂಡಿರಲಿಲ್ಲ ಎಂದು ಮುಝಪ್ಫರ್‍ಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮೀನಾ ಹೇಳಿದ್ದಾಳೆ. ನೀಲಂ ಪ್ರದೇಶದಲ್ಲಿ ಹಿಮಪಾತದಿಂದ 74 ಮಂದಿ ಸತ್ತಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮಂಜಿನೊಳಗಾಗಿರುವ ಮೃತದೇಹಗಳನ್ನು ಹೊರತರುವ ಕಾರ್ಯ ನಡೆಯುತ್ತಿದೆ. ಸಮೀನಾಳ ಸಹೋದರ ಸಹೋದರಿ ಹಿಮಪಾತದಲ್ಲಿ ಕೊಲ್ಲಲ್ಪಟ್ಟರು. ಸಮೀನಾ ಬದುಕಿ ಉಳಿಯುವ ಆಶೆ ಇರಲಿಲ್ಲ ಎಂದು ತಾಯಿ ಶಹನಾಝ್ ಹೇಳಿದರು. ಸಂಬಂಧಿಕರು, ನೆರೆಮನೆಯವರು ಸಹಿತ ಹಲವರು ಈ ಮೂರು ಮಹಡಿಯ ಮನೆಯಲ್ಲಿದ್ದರು. ಇವರಲ್ಲಿ ಹದಿನೆಂಟು ಮಂದಿ ಮೃತಪಟ್ಟಿದ್ದಾರೆ. ಹಿಮಪಾತದಿಂದ ಒಟ್ಟು ನೂರು ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ.