ಮೋದಿಯವರೇ, ನಮಗೆ ನಿಮ್ಮ ಪೌರತ್ವ ಬೇಡ: ಸಿ ಎ ಎಯನ್ನು ತಿರಸ್ಕರಿಸಿದ ಪಾಕ್ ಹಿಂದೂಗಳು; ಕೇಂದ್ರಕ್ಕೆ ಮುಖಭಂಗ

0
19053

ಸನ್ಮಾರ್ಗ ವಾರ್ತೆ

ದುಬೈ: ಜ. 16- ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುವ ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಪಾಕಿಸ್ತಾನ ಅಲ್ಪಸಂಖ್ಯಾತರು ತೀವ್ರವಾಗಿ ಖಂಡಿಸಿದ್ದಾರೆ. ಹೊಸ ಕಾನೂನಿನಡಿಯಲ್ಲಿ ಅವರಿಗೆ ಪೌರತ್ವ ನೀಡುವ ಭಾರತದ ಪ್ರಸ್ತಾಪವನ್ನೂ ಅವರು ತಿರಸ್ಕರಿಸಿದ್ದಾರೆ. ಭಾರತದಲ್ಲಿ ಆಶ್ರಯ ಪಡೆಯಲು ತಾವು ಆಸಕ್ತಿ ಹೊಂದಿಲ್ಲ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ತಿರಸ್ಕರಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಗಲ್ಫ್ ನ್ಯೂಸ್ ಜೊತೆ ಮಾತನಾಡಿದ ದುಬೈ ಮೂಲದ ಪಾಕಿಸ್ತಾನಿ ಹಿಂದೂ ದಿಲೀಪ್ ಕುಮಾರ್ ಅವರು, “ಭಾರತ ರಚಿಸಿದ ಕಾನೂನು ಮಾನವೀಯತೆ ಮತ್ತು ಸನಾತನ ಧರ್ಮದ ಆಧ್ಯಾತ್ಮಿಕ ಮಾನದಂಡಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. “ಮಾನವರಾದ ನಾವು ಯಾವುದೇ ಧಾರ್ಮಿಕ ತಾರತಮ್ಯ ಒಳಗಾಗಬಾರದು. ಭಾರತದ ಮುಸ್ಲಿಮರು ಸರಕಾರೀ ಭಯೋತ್ಪಾದನೆಯನ್ನು ಎದುರಿಸಬೇಕೆಂದು ನಾವು ಬಯಸುವುದಿಲ್ಲ” ಎಂದು ಹೇಳಿದರು.

ಪಾಕಿಸ್ತಾನದ ಕ್ರಿಶ್ಚಿಯನ್ ಸಮುದಾಯ ಕೂಡ ಭಾರತದ ಹೊಸ ಪೌರತ್ವ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ ಎಂದು ಶಾರ್ಜಾ ಮೂಲದ ಪಾಕಿಸ್ತಾನಿ ಕ್ರಿಶ್ಚಿಯನ್ ಸಮುದಾಯದ ಮುಖಂಡ ರೆವರೆಂಡ್ ಜೋಹಾನ್ ಖಾದಿರ್ ಹೇಳಿದ್ದಾರೆ. “ನಾವು, ಪಾಕಿಸ್ತಾನದ ಕ್ರೈಸ್ತರು, ಭಾರತದಲ್ಲಿ ಆಶ್ರಯ ಪಡೆಯಲು ನಾವು ಆಸಕ್ತಿಯನ್ನು ಹೊಂದಿಲ್ಲ. ಮೋದಿಯ ಪೌರತ್ವ ಮಸೂದೆಯು ಅಲ್ಪಸಂಖ್ಯಾತರಿಗೆ ವಿರುದ್ಧವಾಗಿದೆ ಮತ್ತು ಮೂಲಭೂತ ಮಾನವ ಹಕ್ಕುಗಳಿಗೆ ಚ್ಯುತಿ ತರುತ್ತದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆ

ನಿಖರವಾದ ಅಧಿಕೃತ ಸಂಖ್ಯೆಗಳು ಲಭ್ಯವಿಲ್ಲದಿದ್ದರೂ, ಪಾಕಿಸ್ತಾನದಲ್ಲಿ ಪ್ರಸ್ತುತ 8 ದಶಲಕ್ಷಕ್ಕೂ ಹೆಚ್ಚು ಹಿಂದೂಗಳಿದ್ದಾರೆ ಎಂದು ಪಾಕಿಸ್ತಾನದ ಹಿಂದೂ ಕೌನ್ಸಿಲ್ ಹೇಳಿದೆ.

ಒಟ್ಟು 220 ದಶಲಕ್ಷ ಪಾಕ್ ಜನಸಂಖ್ಯೆಯಲ್ಲಿ ಹಿಂದೂಗಳು ಶೇ. 4 ರಷ್ಟಿದ್ದಾರೆ. ಅವರು ಸಿಂಧ್ ಪ್ರಾಂತ್ಯದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅರ್ಧಕ್ಕಿಂತ ಹೆಚ್ಚು ಜನರು ಭಾರತದ ಗಡಿಯಾಗಿರುವ ಆಗ್ನೇಯ ಜಿಲ್ಲೆ ಥಾರ್‌ಪಾರ್ಕರ್‌ನಲ್ಲಿ ಕೇಂದ್ರೀಕೃತವಾಗಿದ್ದಾರೆ. ಬಹುಪಾಲು, ಪಾಕಿಸ್ತಾನದ ಹಿಂದೂಗಳು ಸುಶಿಕ್ಷಿತರು ಮತ್ತು ವಾಣಿಜ್ಯ, ವ್ಯಾಪಾರ ಮತ್ತು ನಾಗರಿಕ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.

ಕೌನ್ಸಿಲ್ ಪ್ರಕಾರ, ಸರಿಸುಮಾರು 94 ರಷ್ಟು ಹಿಂದೂಗಳು ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ ಮತ್ತು ಶೇ. 4 ಕ್ಕಿಂತ ಹೆಚ್ಚು ಜನರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಈ ಜನಸಂಖ್ಯೆಯ ಒಂದು ಸಣ್ಣ ಭಾಗವು ಬಲೂಚಿಸ್ತಾನ್ ಮತ್ತು ಖೈಬರ್-ಪಖ್ತುನ್ಖ್ವಾ ಪ್ರಾಂತ್ಯಗಳಲ್ಲಿ ನೆಲೆಸಿದೆ.