49 ಮಂದಿ ‘ದೇಶದ್ರೋಹಿ’ಗಳ ಕತೆ: ತಿಲಕರೂ ದೇಶದ್ರೋಹಿಯಾಗಿದ್ದರು…

0
692

ಸನ್ಮಾರ್ಗ ಸಂಪಾದಕೀಯ

ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ತರುವಾಯ ಪಂಜಾಬ್‍ನ ಸಿನಿಮಾ ಮಂದಿರದ ಹೊರಗಡೆ ಕೆಲವು ಸಿಕ್ಖ್ ಯುವಕರು ‘ಖಲಿಸ್ತಾನ್ ಜಿಂದಾಬಾದ್’ ಮತ್ತು ‘ರಾಜ್ ಕರೇಗಾ ಖಾಲ್ಸಾ’ ಎಂಬಂತಹ ಘೋಷಣೆಗಳನ್ನು ಕೂಗಿದ್ದರು. ಪಂಜಾಬ್ ಸರಕಾರ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿತ್ತು. 1995ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟು ಪ್ರಕರಣವನ್ನು ವಜಾಗೊಳಿಸಿ ಯುವಕರನ್ನು ದೋಷಮುಕ್ತಗೊಳಿಸಿತ್ತು. ‘ಬರೇ ಘೋಷಣೆಯನ್ನು ದೇಶದ್ರೋಹವಾಗಿ ಪರಿಗಣಿಸಲಾಗದು’ ಎಂದು ಕೋರ್ಟು ಅಭಿಪ್ರಾಯಪಟ್ಟಿತ್ತು. ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಹುಟ್ಟು ಹಾಕದ ಮತ್ತು ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸದ ಘೋಷಣೆಯು ದೇಶದ್ರೋಹವಲ್ಲ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.

2013ರಲ್ಲೂ ಇಂಥದ್ದೇ ಒಂದು ಬೆಳವಣಿಗೆ ನಡೆಯಿತು. ಲಲಿತ್ ಕುಮಾರಿ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸುಪ್ರೀಮ್ ಕೋರ್ಟು ವಜಾಗೊಳಿಸಿತ್ತು. ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ಕೊಡುವ ಮೊದಲು ಮ್ಯಾಜಿಸ್ಟ್ರೇಟರಿಗೆ ಆ ಬಗ್ಗೆ ಮನವರಿಕೆಯಾಗಬಹುದಾದ ಮಾಹಿತಿಗಳು ಪೊಲೀಸ್ ತನಿಖೆಯ ಮೂಲಕ ಲಭ್ಯವಾಗಿರಬೇಕು ಎಂದು ಅದಕ್ಕೆ ಕಾರಣವನ್ನು ಕೊಟ್ಟಿತ್ತು. ಕೇವಲ ದೂರಿನ ಆಧಾರದಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ಸೂಚಿಸುವಂತಿಲ್ಲ ಎಂಬ ಸಂದೇಶ ಆ ತೀರ್ಪಿನಲ್ಲಿತ್ತು. ಇದೀಗ ದೇಶದ್ರೋಹ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಓರ್ವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಕ್ಕೆ ಏನೆಲ್ಲ ಆಧಾರಗಳು ಬೇಕು, ಬರೇ ಹೇಳಿಕೆಯೊಂದು ದೇಶದ್ರೋಹವಾಗುತ್ತದೆಯೇ ಎಂಬಲ್ಲಿಂದ ಹಿಡಿದು ರಾಜಪ್ರಭುತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ 17ನೇ ಶತಮಾನದಲ್ಲಿ ಬ್ರಿಟಿಷರು ರಚಿಸಿದ ದೇಶದ್ರೋಹದ ಕಾನೂನನ್ನು ನಾವು ಇನ್ನೂ ಉಳಿಸಿಕೊಳ್ಳುವುದು ಎಷ್ಟು ಸರಿ ಎಂಬಲ್ಲಿವರೆಗೆ ಚರ್ಚೆ ತೀವ್ರಗತಿಯನ್ನು ಪಡೆದುಕೊಂಡಿದೆ. ಅಂದಹಾಗೆ,

ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿರುವುದು ಬಿಹಾರದ ಮುಝಫ್ಪರ್‍ಪುರ್ ನ ಪೊಲೀಸ್ ಠಾಣೆಯೊಂದಕ್ಕೆ ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನೀಡಿರುವ ಸೂಚನೆ. ದೇಶದ ಪ್ರಸಿದ್ಧ ವ್ಯಕ್ತಿತ್ವಗಳಾದ ಶ್ಯಾಮ್ ಬೆನಗಲ್, ಅಡೂರು ಗೋಪಾಲ ಕೃಷ್ಣನ್, ಅಪರ್ಣಾ ಸೇನ್, ರಾಮಚಂದ್ರ ಗುಹಾ ಸೇರಿದಂತೆ 49 ಮಂದಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಕೋರಿ ಸ್ಥಳೀಯ ನ್ಯಾಯವಾದಿ ಸುಧೀರ್ ಕುಮಾರ್ ಓಜಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಗುಂಪು ಹತ್ಯೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ಜುಲೈಯಲ್ಲಿ ಈ ಪ್ರಮುಖರು ಬರೆದ ಬಹಿರಂಗ ಪತ್ರವನ್ನು ಈ ನ್ಯಾಯವಾದಿ ದೇಶದ್ರೋಹದ ಕೃತ್ಯ ಎಂದು ಕೋರ್ಟ್‍ನಲ್ಲಿ ಹೇಳಿಕೊಂಡಿದ್ದರು. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿದ್ದರು. ಅದನ್ನು ಪರಿಗಣಿಸಿ ಎಫ್.ಐ.ಆರ್. ದಾಖಲಿಸುವಂತೆ ಮುಝಫ್ಫರ್ ನಗರ್ ಪೊಲೀಸ್ ಠಾಣೆಗೆ ಮ್ಯಾಜಿಸ್ಟ್ರೇಟ್ ಸೂಚನೆಯನ್ನು ನೀಡಿದರು. ಇದೀಗ ಈ ಇಡೀ ಪ್ರಕ್ರಿಯೆಯ ಕುರಿತೇ ಪ್ರಶ್ನೆಗಳೆದ್ದಿವೆ. ಸುಪ್ರೀಮ್ ಕೋರ್ಟ್‍ನ ಈ ಹಿಂದಿನ ಎರಡು ತೀರ್ಪುಗಳನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿದೆಯೇ ಎಂಬ ಚರ್ಚೆಗೆ ಇದು ಚಾಲನೆಯನ್ನು ನೀಡಿದೆ. ಸಾರ್ವಜನಿಕ ಶಾಂತಿಗೆ ಭಂಗ ತಾರದ ಮತ್ತು ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸದ ಪತ್ರವೊಂದನ್ನು ದೇಶದ್ರೋಹದ ಕೃತ್ಯವೆಂದು ವ್ಯಾಖ್ಯಾನಿಸುವುದನ್ನು ಒಪ್ಪಲಾಗದು ಎಂದು ಸಂವಿಧಾನ ತಜ್ಞರು ವಾದಿಸುತ್ತಿದ್ದಾರೆ. (ಇದೀಗ ಪೊಲೀಸರು ಈ ಪ್ರಕರಣವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದ್ದರೂ ಅದನ್ನು ಪ್ರತಿಭಟಿಸಿ ಓಜಾ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.) ನಿಜವಾಗಿ,

ಇದೊಂದು ದಮನ ತಂತ್ರ. ಪ್ರಜಾತಂತ್ರದ ಅತಿದೊಡ್ಡ ಗುಣ ಏನೆಂದರೆ, ಟೀಕೆ, ಪ್ರಶ್ನೆ, ಪ್ರತಿಭಟನೆಗೆ ಸದಾ ತನ್ನನ್ನು ತೆರೆದಿಟ್ಟಿರುವುದು. ರಾಜಪ್ರಭುತ್ವಕ್ಕೂ ಪ್ರಜಾಪ್ರಭುತ್ವಕ್ಕೂ ನಡುವೆ ಇರುವ ವ್ಯತ್ಯಾಸ ಇದು. 17ನೇ ಶತಮಾನದಲ್ಲಿ ಬ್ರಿಟನ್‍ನಲ್ಲಿ ರಾಜಪ್ರಭುತ್ವ ಇತ್ತು. ಪ್ರಶ್ನೆ ಮಾಡುವ ಸ್ವಾತಂತ್ರ್ಯವನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟರೆ ಅಧಿಕಾರಕ್ಕೆ ಸಂಚಕಾರ ಬರಬಹುದು ಎಂಬುದನ್ನು ಮನಗಂಡು ಟೀಕೆಯನ್ನು ದೇಶದ್ರೋಹವಾಗಿ ಕಾಣುವ ಕಾನೂನನ್ನು ರಚಿಸಲಾಯಿತು. 1870ರಲ್ಲಿ ಅದೇ ಕಾನೂನನ್ನು ಬ್ರಿಟಿಷರು ಭಾರತಕ್ಕೂ ತಂದರು. ಅದೇ ಕಾನೂನಿನಡಿಯಲ್ಲೇ 1897ರಲ್ಲಿ ಬಾಲಗಂಗಾಧರ ತಿಲಕ್‍ರನ್ನು ಬಂಧಿಸಿದರು. ದುರಂತ ಏನೆಂದರೆ, ಈ ಪ್ರಕರಣ ನಡೆದು ನೂರು ವರ್ಷಗಳೇ ಕಳೆದುಹೋಗಿವೆ. ಭಾರತದಲ್ಲಿ ಬ್ರಿಟಿಷ್ ರಾಜಪ್ರಭುತ್ವ ಹೊರಟು ಹೋಗಿ ಪ್ರಜಾತಂತ್ರ ನೆಲೆಗೊಂಡಿದೆ. ಆದರೂ ಈ ಪುರಾತನ ಕಾನೂನಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಷ್ಟಕ್ಕೂ,

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವಂತೂ ದೇಶದ್ರೋಹ ಎಂಬ ಪದ ಹೇಗೆಲ್ಲ ಮತ್ತು ಎಷ್ಟೆಲ್ಲ ಬಾರಿ ದುರುಪಯೋಗಕ್ಕೆ ಈಡಾಗಿದೆಯೆಂದರೆ, ಪ್ರತಿದಿನ ಒಬ್ಬರ ಮೇಲಾದರೂ ಈ ಹಣೆಪಟ್ಟಿಯನ್ನು ಅಂಟಿಸಲಾಗುತ್ತಿದೆ. ಬಿಜೆಪಿ ನಾಯಕರು ಅಥವಾ ಆ ಪಕ್ಷದ ಬೆಂಬಲಿಗರು ಟೀಕೆಯನ್ನೇ ಸಹಿಸುತ್ತಿಲ್ಲ. ಪ್ರಧಾನಿ ಮೋದಿಯವರ ವಿರುದ್ಧದ ಯಾವುದೇ ದನಿಯನ್ನು ದೇಶದ್ರೋಹದ ಹೇಳಿಕೆಯಾಗಿ ವ್ಯಾಖ್ಯಾನಿಸಿ ಬೆದರಿಸುವ ಶ್ರಮಗಳು ನಡೆಯುತ್ತಿವೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ.

ಪ್ರಜಾತಂತ್ರದಲ್ಲಿ ಯಾರೂ ಪ್ರಶ್ನಾತೀತರಲ್ಲ. ಪ್ರಧಾನಿ ಮೋದಿಯವರೂ ಅವರಲ್ಲಿ ಒಬ್ಬರು. ನಾಳೆ ರಾಹುಲ್ ಗಾಂಧಿಯೋ ಅಥವಾ ಇನ್ನಾರೋ ಪ್ರಧಾನಿಯಾದರೂ ಅವರಿಗೂ ಈ ನಿಯಮ ಅನ್ವಯಿಸುತ್ತದೆ. ಪ್ರಶ್ನಾತೀತ ಅನ್ನುವುದು ಸರ್ವಾಧಿಕಾರಿ ಪ್ರಭುತ್ವದ ಮನಸ್ಥಿತಿಯೇ ಹೊರತು ಪ್ರಜಾತಂತ್ರದ ಭಾಗವಲ್ಲ. ಅಡೂರ್ ಗೋಪಾಲಕೃಷ್ಣನ್ ಸೇರಿದಂತೆ 49 ಮಂದಿ ಪ್ರಮುಖರು ಬರೆದ ಪತ್ರದಲ್ಲಿ ಈ ದೇಶದ ಸ್ಥಿತಿಗತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಗುಂಪು ಥಳಿತ ಮತ್ತು ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹಿಂಸೆಗಳನ್ನು ತಡೆಯುವಂತೆ ಪ್ರಧಾನಿಯವರನ್ನು ಆಗ್ರಹಿಸಲಾಗಿದೆ. ಅಂದಹಾಗೆ, ಹೀಗೆ ಪತ್ರ ಬರೆಯುವುದೇ ಅಪರಾಧ ಎಂದಾದರೆ, ಪ್ರಜಾತಂತ್ರಕ್ಕೆ ಅರ್ಥವಾದರೂ ಏನು? ನಿಜವಾಗಿ,

ದೇಶದ ರಾಜಕೀಯ ವಾತಾವರಣವು ಹೊಸ ಆಯಾಮದೆಡೆಗೆ ಹೊರಳುತ್ತಿದೆ. ಪ್ರಧಾನಿ ಮೋದಿ ಮತ್ತು ಅವರ ತಂಡದ ಆಡಳಿತವನ್ನು ಪ್ರಶ್ನಿಸದಂತೆ ಅತ್ಯಂತ ಯೋಜನಾಬದ್ಧವಾಗಿ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಟೀಕೆಯನ್ನು ದೇಶವಿರೋಧಿಯಾಗಿ ಪರಿವರ್ತಿಸಲಾಗುತ್ತಿದೆ. ಟೀಕಾಕಾರರ ವಿರುದ್ಧ ಮಾತು ಮತ್ತು ಬರಹಗಳ ಮೂಲಕ ಮುಗಿಬಿದ್ದು ದಾಳಿ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯವರು ಪ್ರಶ್ನಾತೀತರು ಎಂಬ ಭಾವನೆಯನ್ನು ಸಾರ್ವಜನಿಕವಾಗಿ ಬಿಂಬಿಸುವ ಶ್ರಮದ ಭಾಗವಿದು. ಇನ್ನೊಂದೆಡೆ,

ಅರ್ಥವ್ಯವಸ್ಥೆ ತೀವ್ರಗತಿಯಲ್ಲಿ ಕುಸಿತವನ್ನು ಕಾಣುತ್ತಿದೆ. ನಿರುದ್ಯೋಗದ ಪ್ರಮಾಣವಂತೂ ಕಳೆದ 45 ವರ್ಷಗಳಲ್ಲೇ ಅತೀ ದಾರುಣ ಹಂತಕ್ಕೆ ಕುಸಿದು ಹೋಗಿದೆ. ‘ಉದ್ಯೋಗ ನಷ್ಟ ಮತ್ತು ಆರ್ಥಿಕ ಕುಸಿತವು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ’ ಎಂದು ಆರ್‍ಬಿಐ ಬಿಡುಗಡೆಗೊಳಿಸಿದ ಸಮೀಕ್ಷೆಗಳೇ ಹೇಳುತ್ತಿವೆ. ನೋಟು ಅಮಾನ್ಯೀಕರಣದ ದುಷ್ಪರಿಣಾಮದಿಂದ ದೇಶ ಇನ್ನೂ ಮೇಲೆದ್ದಿಲ್ಲ. ಜನರಲ್ಲಿ ಖರೀದಿಸುವ ಸಾಮಥ್ರ್ಯ ಕಡಿಮೆಯಾಗಿದೆ. ವಾಹನ ಉದ್ಯಮದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಬ್ಯಾಂಕುಗಳು ಜನಸಾಮಾನ್ಯರ ವಿಶ್ವಾಸವನ್ನು ಕಳಕೊಳ್ಳತೊಡಗಿದೆ. ಜನರಲ್ಲಿ ಒಂದು ಬಗೆಯ ಹತಾಶೆ, ಸಿಟ್ಟು, ಅಸಹನೆ ರೂಪುಪಡೆಯತೊಡಗಿದೆ. ಇಂಥ ಸ್ಥಿತಿಯಲ್ಲಿ ವಿರೋಧದ ದನಿಗೆ ಬೇರು ಮಟ್ಟದಲ್ಲೇ ಕಡಿವಾಣ ಹಾಕದಿದ್ದರೆ ಅದು ಸ್ಫೋಟಗೊಂಡು ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂಬ ಭಯ ಕೇಂದ್ರ ಸರಕಾರದ ಬೆಂಬಲಿಗರನ್ನು ಕಾಡತೊಡಗಿರುವಂತಿದೆ. ಅದರ ಭಾಗವಾಗಿ ಇಂಥ ಬೆಳವಣಿಗೆಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಆದ್ದರಿಂದ,

ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಆ ಮೂಲಕ ದೇಶಕ್ಕೆ ಪ್ರಬಲ ಸಂದೇಶವನ್ನು ರವಾನಿಸಬೇಕು.