ಆತ್ಮ ಸತ್ತವರಿಗೆ ದೇವನು ಸದ್ಬುದ್ಧಿಯನ್ನು ನೀಡಲಿ

0
729

ಸನ್ಮಾರ್ಗ ಸಂಪಾದಕೀಯ

ತಬ್ಲೀಗ್ ಜಮಾಅತ್ ಸದಸ್ಯರ ಬಗ್ಗೆ ದೇಶದ ಮಾಧ್ಯಮಗಳು ಅತ್ಯಂತ ದುಷ್ಟ ಅಪಪ್ರಚಾರ ಮಾಡಿದ 6 ತಿಂಗಳುಗಳ ಬಳಿಕ ಬಾಂಬೆ ಹೈಕೋರ್ಟ್ ಕಣ್ಣು ತೆರೆಸುವ ಮಾತುಗಳನ್ನಾಡಿದೆ. 29 ಮಂದಿ ವಿದೇಶಿಯರು ಮತ್ತು 6 ಮಂದಿ ಭಾರತೀಯರ ವಿರುದ್ಧ ದಾಖಲಿಸಲಾಗಿದ್ದ ಎಫ್‍ಐಆರ್‌ಗಳನ್ನು ರದ್ದುಪಡಿಸುತ್ತಾ ನ್ಯಾಯಮೂರ್ತಿಗಳಾದ ಟಿ.ವಿ. ನಲವಡೆ ಮತ್ತು ಎಂ.ಜಿ. ಸೆವ್ಲಿಕರ್‌ರನ್ನೊಳಗೊಂಡ ವಿಭಾಗೀಯ ಪೀಠವು ನೀಡಿರುವ 58 ಪುಟಗಳ ತೀರ್ಪು ವ್ಯವಸ್ಥೆಯ ಮುಖಕ್ಕೆ ಕಪಾಲಮೋಕ್ಷ ಮಾಡಿದಂತಿದೆ. ವಿಶೇಷ ಏನೆಂದರೆ, ತಬ್ಲೀಗಿ ಬೇಟೆಗೂ ರಾಜಕೀಯಕ್ಕೂ ತೀರ್ಪು ಸಂಬಂಧ ಕಲ್ಪಿಸಿರುವುದು.

ಕೊರೋನಾ ವೈರಸ್ ಪ್ರವೇಶಿಸುವುದಕ್ಕಿಂತಲೂ ಮೊದಲು ಸಿಎಎ ವಿರೋಧಿ ಪ್ರತಿಭಟನೆ ದೇಶದಲ್ಲಿ ತಾರಕ ಸ್ಥಿತಿಯಲ್ಲಿತ್ತು. ದೇಶದ ಯಾವ ಗಲ್ಲಿಯೂ ಸಿಎಎ ವಿರೋಧಿ ಪ್ರತಿಭಟನಾ ಸಭೆಯಿಂದ ಮುಕ್ತವಾಗಿಲ್ಲ ಎಂಬ ವಾತಾವರಣವಿತ್ತು. ಬಾಂಬೆ ಹೈಕೋರ್ಟ್‍ನ ತೀರ್ಪು ಈ ಕಡೆಗೆ ಬೆಳಕು ಚೆಲ್ಲಿದೆ. ಮುಸ್ಲಿಮರ ವಿರುದ್ಧ ಯಾವುದೇ ರೂಪದಲ್ಲಿ ಮತ್ತು ಯಾವುದೇ ಕಾರಣಕ್ಕೆ ಕ್ರಮ ಕೈಗೊಳ್ಳಬಹುದು ಎಂಬ ಪರೋಕ್ಷ ಎಚ್ಚರಿಕೆಯು ಈ ಎಫ್‍ಐಆರ್ ದಾಖಲು ರವಾನಿಸಿತ್ತು ಎಂಬುದಾಗಿ ಅದು ಹೇಳಿದೆ. ಮಾತ್ರವಲ್ಲ, ಇಂಥ ಎಫ್‍ಐಆರ್‌ಗಳ ಹಿಂದೆ ರಾಜಕೀಯ ಉದ್ದೇಶಗಳು ಇರುವಂತಿದೆ. ಯಾವುದೇ ಸಾಂಕ್ರಾಮಿಕ ಪಿಡುಗು ಮತ್ತು ವಿಪತ್ತುಗಳು ಎರಗಿದಾಗ ಸರಕಾರಗಳು ಬಲಿಪಶುಗಳನ್ನು ಹುಡುಕುತ್ತವೆ. ಈ ವಿದೇಶಿಯರನ್ನು ಸರಕಾರವು ಬಲಿಪ ಶುಗಳನ್ನಾಗಿ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ.. ಎಂದೂ ಹೇಳಿದೆ.

ತಾಂಜಾನಿಯ, ಐವರಿಕೋಸ್ಟ್, ಇಂಡೋನೇಶ್ಯಾ ಸೇರಿದಂತೆ ಜಗತ್ತಿನ 35 ದೇಶಗಳಿಂದ ದೆಹಲಿಯ ನಿಝಾಮು ದ್ದೀನ್ ಮರ್ಕಝ್‌ಗೆ ಆಗಮಿಸಿದ್ದ ಸಾವಿರಾರು ವಿದೇಶಿಯರನ್ನು ಹುಡುಕಿ ಹುಡುಕಿ ಬಂಧಿಸಿರುವುದನ್ನು ಕೋರ್ಟ್ ಪ್ರಶ್ನಿಸಿದೆ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಅವರ ವಿರುದ್ಧ ದಾಖ ಲಿಸಲಾಗಿರುವ ಎಫ್‍ಐಆರ್‌ಗಳು ಬೇರೆ ಬೇರೆ ರೀತಿಯಲ್ಲಿರುವುದನ್ನೂ ಬೊಟ್ಟು ಮಾಡಿದೆ.

ಕಳೆದ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ಲಾಕ್‍ಡೌನ್ ಘೋಷಿಸಿದಾಗ ದೆಹಲಿಯ ನಿಝಾಮುದ್ದೀನ್ ಮರ್ಕಝ್ ಮಾತ್ರ ತುಂಬಿಕೊಂಡಿದ್ದುದಲ್ಲ. ಜಮ್ಮುವಿನ ಮಾತಾ ವೈಷ್ಣೋದೇವಿ ಮಂದಿರವೂ ತುಂಬಿಕೊಂಡಿತ್ತು. ಅಲ್ಲಿ 400 ಮಂದಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು. ಈ ಯಾತ್ರಾರ್ಥಿಗಳನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿ ಎಂದು ಜಮ್ಮು-ಕಾಶ್ಮೀರದ ನ್ಯಾಯಾಲಯವು ಆದೇಶಿಸಿದ್ದು ಮಾರ್ಚ್ 30ರಂದು. ಮಹಾರಾಷ್ಟ್ರದ ನಾಂದೇಡ್‍ನಲ್ಲಿರುವ ಸಿಕ್ಖರ ಪ್ರಸಿದ್ಧ ಹಝೂರ್ ಗುರುದ್ವಾರದಲ್ಲಿ 3000 ಮಂದಿ ತುಂಬಿಕೊಂಡಿದ್ದರು. ಇವರನ್ನು ಅಲ್ಲಿಂದ ತೆರವುಗೊಳಿಸಲು ಪ್ರಾರಂಭಿಸಿದ್ದು ಎಪ್ರಿಲ್ 24ರಂದು. ಹಾಗೆಯೇ ಮಾರ್ಚ್ 19ರ ವರೆಗೆ ತಿರುಪತಿಯ ಬಾಲಾಜಿ ಮಂದಿರ ಭಕ್ತಾದಿಗಳಿಗೆ ಮುಕ್ತವಾಗಿತ್ತು. ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರತಿದಿನವೂ ಸೇರುತ್ತಿದ್ದರು. ಈ ಮಂದಿರವನ್ನು ಮಾರ್ಚ್ 20ರಂದು ಮುಚ್ಚಲಾಯಿತು. ಇನ್ನು, ಬಲದೇವ್ ಸಿಂಗ್ ಎಂಬ ಸಿಕ್ಖ್ ಪ್ರವಚ ನಕಾರ ಮಾರ್ಚ್ 12ರಂದು ಇಟಲಿ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದರಲ್ಲದೇ, ಸಿಕ್ಖರ ಬಹುಮುಖ್ಯ ಹಬ್ಬವಾದ ಹೋಲ ಮೊಹಲ್ಲಾದಲ್ಲಿ ಭಾಗಿಯಾದರು. ಆ ಹಬ್ಬದಲ್ಲಿ ಸಾವಿರಾರು ಮಂದಿ ಸೇರಿದ್ದರು. ಇದಾಗಿ ಮೂರ್ನಾಲ್ಕು ದಿನಗಳ ಬಳಿಕ ಬಲದೇವ್ ಸಿಂಗ್ ಕೊರೋನಾದಿಂದಾಗಿ ನಿಧನರಾದರು. ಆ ಬಳಿಕ 40 ಸಾವಿರ ಮಂದಿಯನ್ನು ಕ್ವಾರಂಟೈನ್‍ಗೆ ಒಳ ಪಡಿಸಲಾಯಿತು. ಅಲ್ಲದೇ, ಎಪ್ರಿಲ್ 10ರಿಂದ 15ರ ನಡುವೆ ಕಲಬುರ್ಗಿಯಲ್ಲಿ ಎರಡು ಜಾತ್ರೋತ್ಸವಗಳು ನಡೆದುವು. ಆಗಿನ್ನೂ ಲಾಕ್‍ಡೌನ್ ಜಾರಿಯಲ್ಲಿತ್ತು. ಒಂದು- ಚಿತ್ತಾಪುರ ತಾಲೂಕಿನ ಲಾವೂರ್ ಗ್ರಾಮದ ಸಿದ್ಧಲಿಂಗೇಶ್ವರ ದೇವರ ತೇರನ್ನು ಎಳೆಯುವ ಜಾತ್ರೆ ನಡೆದರೆ, ಎಪ್ರಿಲ್ 15ರಂದು ಅಳಂದ ತಾಲೂಕಿನ ಭೂಸನೂರು ಗ್ರಾಮದ ಹನುಮಾನ್ ಮಂದಿರದಲ್ಲಿ ಜಾತ್ರೋತ್ಸವ ನಡೆದಿತ್ತು. ಇದರಲ್ಲಿ ಸುಮಾರು 200 ಮಂದಿ ಭಾಗಿಯಾಗಿದ್ದರು. ದುರಂತ ಏನೆಂದರೆ,

ತಬ್ಲೀಗ್ ಸದಸ್ಯರನ್ನು ದೇಶವಿರೋಧಿಗಳಂತೆ ಮತ್ತು ಉದ್ದೇಶಪೂರ್ವಕವಾಗಿ ಕೊರೋನಾ ಹರಡುವವರಂತೆ ಮಾಧ್ಯಮಗಳು ಮತ್ತು ದೇಶದ ಆಡಳಿತ ಪಕ್ಷದ ಜನಪ್ರತಿನಿಧಿಗಳು ಗಂಟಲು ಹರಿಯುವಂತೆ ಬೊಬ್ಬಿಡುತ್ತಿದ್ದಾಗ ನಾಂದೇಡ್‍ನ ಗುರುದ್ವಾರದಲ್ಲಿ ಮತ್ತು ಜಮ್ಮುವಿನ ವೈಷ್ಣೋದೇವಿ ಮಂದಿರದಲ್ಲಿ ಭಕ್ತಾದಿಗಳು ತುಂಬಿಕೊಂಡಿದ್ದರು ಹಾಗೂ ಈ ಎಲ್ಲರೂ ಆ ಬಗ್ಗೆ ಒಂದು ಪದವನ್ನೂ ಉಲ್ಲೇಖಿಸಲಿಲ್ಲ ಎಂಬುದು. ಇಸ್ಲಾಮಿಕ್ ವೈರಸ್, ಕೊರೋನಾ ಜಿಹಾದ್, ತಬ್ಲೀಗಿ ಕ್ರೈಮ್, ಕೊರೋನಾ ಟೆರರಿಸಂ ಮುಂತಾದ ಹ್ಯಾಶ್‍ಟ್ಯಾಗ್‍ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿರುವಾಗ ಗುರುದ್ವಾರದಲ್ಲೂ ಮಂದಿರದಲ್ಲೂ ಸಿಲುಕಿಕೊಂಡ ಭಕ್ತಾದಿಗಳ ಬಗ್ಗೆ ಯಾವ ಹ್ಯಾಶ್‍ಟ್ಯಾಗ್‍ಗಳೂ ಕಾಣಿಸಿಕೊಳ್ಳಲಿಲ್ಲ.

ನಮ್ಮದೇ ರಾಜ್ಯದ ಪ್ರಮುಖ ಕನ್ನಡ ಪತ್ರಿಕೆಯು ‘ಸತ್ತವರೆಲ್ಲ ಒಂದೇ ಸಮುದಾಯದವರು’ ಎಂಬ ಶೀರ್ಷಿಕೆಯಲ್ಲಿ ಎಪ್ರಿಲ್ 28ರಂದು ಮುಖಪುಟ ಸುದ್ದಿಯನ್ನು ಪ್ರಕಟಿಸಿತು. ಆಗ ರಾಜ್ಯದಲ್ಲಿ ಕೇವಲ 3 ಮಂದಿ ಸಾವಿಗೀಡಾಗಿದ್ದರು ಮತ್ತು ಬರೇ 76 ಮಂದಿಗೆ ಸೋಂಕು ತಗುಲಿತ್ತು. ಕನ್ನಡ ಚಾನೆಲ್‍ಗಳ ಕಾರ್ಯಕ್ರಮಗಳಂತೂ ಒಂದನ್ನೊಂದು ಮೀರಿಸುವಷ್ಟು ವಿಷಕಾರಿಯಾಗಿದ್ದುವು. ‘ದೇಶಕ್ಕೆಲ್ಲ ಮರ್ಕಝ್ ಮಸೀದಿ ವ್ಯಾಧಿ’ ಎಂಬಂಥ ಹಲವು ಶೀರ್ಷಿಕೆಗಳಲ್ಲಿ ಅವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು.

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು- ‘ತಬ್ಲೀಗಿಗಳದ್ದು ತಾಲಿಬಾನ್ ಕೃತ್ಯ’ ಎಂದರು. ‘ದೆಹಲಿಯ ಮರ್ಕಝ್ ಸಭೆಯಲ್ಲಿ ಭಾಗಿಯಾಗಿ ರಾಜ್ಯಕ್ಕೆ ಹಿಂತಿರುಗಿದವರಲ್ಲಿ ಯಾರು ತಪಾಸಣೆಗೆ ಒಳಗಾಗಿಲ್ಲವೋ ಅವರನ್ನು ಗುಂಡಿಕ್ಕಿ ಕೊಲ್ಲಬೇಕು…’ ಎಂದು ಶಾಸಕ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಎಪ್ರಿಲ್ 7ರಂದು ಕರೆ ಕೊಟ್ಟರು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸುವಾಗ ಸುರಕ್ಷಿತ ಅಂತರವನ್ನು ಪಾಲಿಸಿಲ್ಲ ಎಂಬುದನ್ನು ಆಕ್ಷೇಪಿಸುತ್ತಾ ಬಿಜೆಪಿ ಶಾಸಕ ಮೇ 27ರಂದು ಹೇಳಿಕೆ ಕೊಟ್ಟದ್ದು ಹೀಗೆ-

‘ತಬ್ಲೀಗಿ ನಾಯಕ ಮೌಲಾನಾ ಸಾದ್‍ರ ಅಪೂರ್ಣ ಗುರಿಯನ್ನು ದಿಗ್ವಿಜಯ್ ಸಿಂಗ್ ಪೂರ್ತಿಗೊಳಿಸುತ್ತಿದ್ದಾರೆ.

‘ತಬ್ಲೀಗಿ ಜಮಾಅತ್ ಸದಸ್ಯರು ಮಾನವ ಬಾಂಬ್‍ಗಳಂತೆ’ ಎಂದು ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ರಾಜೀವ್ ಬಿಂದಾಲ್ ಎಪ್ರಿಲ್ 4ರಂದು ಘೋಷಿಸಿದರು.

ಅಂದಹಾಗೆ, 6 ತಿಂಗಳ ಬಳಿಕ ಒಮ್ಮೆ ತಿರುಗಿ ನೋಡುವಾಗ ನಾವೆಂಥ ವಿಷ ವರ್ತುಲದೊಳಗೆ ಸಿಲುಕಿದ್ದೇವೆ ಎಂದು ಪ್ರಾಮಾಣಿಕ ನಾಗರಿಕರಿಗೆ ಖಂಡಿತ ಅನಿಸಬಹುದು. ದಿಢೀರ್ ಲಾಕ್‍ಡೌನ್ ಘೋಷಣೆಯಾದುದರಿಂದಾಗಿ ತೊಂದರೆಯಾಗಿರುವುದು ನಿಝಾಮುದ್ದೀನ್ ಮರ್ಕಝ್‌ಗೆ ಮಾತ್ರವಲ್ಲ, ದೇಶದ ಬೇರೆ ಬೇರೆ ಮಂದಿರ, ಗುರುದ್ವಾರಗಳಿಗೂ ತೊಂದರೆಯಾಗಿದೆ. ರೈಲು, ವಾಹನ ಸೇವೆಗಳು ದಿಢೀರ್ ಸ್ಥಗಿತಗೊಳ್ಳುವುದರೊಂದಿಗೆ ಅವರೆಲ್ಲರೂ ಇದ್ದಲ್ಲೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೋರಿದೆ. ಅಲ್ಲದೇ, ನಿಝಾಮುದ್ದೀನ್ ಮರ್ಕಝ್‌ಗೆ ಸಂಬಂಧಿಸಿ ಹೇಳುವುದಾದರೆ, ಅಲ್ಲಿಂದ ಕೇವಲ 50 ಮೀಟರ್ ದೂರದಲ್ಲಿ ಪೊಲೀಸ್ ಠಾಣೆಯೂ ಇದೆ. ಮಾರ್ಚ್ 25ರಂದು ತಹಶೀಲ್ದಾರರು ವೈದ್ಯಕೀಯ ತಂಡದೊಂದಿಗೆ ಮರ್ಕಝ್ ಗೆ ಭೇಟಿ ನೀಡಿದ್ದಾರೆ. 26 ರಂದು ಭೇಟಿ ನೀಡಿದ್ದಾರೆ ಮತ್ತು 27 ಮತ್ತು 28ರಂದು ಅಲ್ಲಿನ ಕೆಲವರನ್ನು ವೈದ್ಯಕೀಯ ತಪಾಸಣೆಗೆಂದು ಕರೆದೊಯ್ದಿದ್ದಾರೆ. ಆ ಬಳಿಕ ಮಾರ್ಚ್ 30ರಂದು ಮರ್ಕಝ್ ಬಗ್ಗೆ ವದಂತಿಗಳು ಪ್ರಾರಂಭವಾಗಿದೆ.

ನಿಜವಾಗಿ, ವಿದೇಶಿಯರು ಮರ್ಕಝ್ ಸಭೆಯಲ್ಲಿ ಭಾಗವಹಿಸುವುದು ಸರಕಾರಕ್ಕೆ ಗೊತ್ತಿತ್ತು. ವೀಸಾ ಮಂಜೂರು ಮಾಡಿರುವುದೇ ಸರಕಾರ. ಹತ್ತಿರವೇ ಇದ್ದ ಪೊಲೀಸ್ ಠಾಣೆಗೂ ಗೊತ್ತಿತ್ತು. ಅಲ್ಲದೇ, ಮರ್ಕಝ್‌ನಲ್ಲಿ ಸಿಲುಕಿಕೊಂಡವರ ಬಗ್ಗೆ ಆಡಳಿತಕ್ಕೆ ತಕ್ಷಣವೇ ಮಾಹಿತಿಯನ್ನೂ ನೀಡಲಾಗಿತ್ತು. ಇಷ್ಟೆಲ್ಲ ಇದ್ದೂ ತಿಂಗಳುಗಳ ಕಾಲ ತಬ್ಲೀಗಿಗಳನ್ನು ರಾಜಕಾರಣಿಗಳು ಮತ್ತು ಮಾಧ್ಯಮಗಳು ಬೇಟೆಯಾಡಿದುವಲ್ಲ, ಯಾಕಾಗಿ? ಆಡಳಿತ ಮತ್ತು ಮಾಧ್ಯಮ ರಂಗವು ಜೊತೆ ಸೇರಿಯೇ ಇಂಥದ್ದೊಂದು ಸುಳ್ಳನ್ನು ಸೃಷ್ಟಿಸಿವೆ ಎಂದರೆ ತಪ್ಪೇ? ತನ್ನದೇ ನಾಗರಿಕರ ಮೇಲೆ ಆಡಳಿತವು ಹೀಗೆ ಅಮಾನುಷವಾಗಿ ನಡಕೊಂಡಿರುವುದಕ್ಕೆ ಸಿಎಎ ವಿರೋಧಿ ಪ್ರತಿಭಟನೆ ಕಾರಣವಾಗಿತ್ತೇ? ಆಡಳಿತ ಸಂದರ್ಭಕ್ಕಾಗಿ ಕಾಯುತ್ತಿತ್ತೇ? ಉತ್ತರಿಸುವುದು ಕಷ್ಟಕರವೇನೂ ಅಲ್ಲ. ಆತ್ಮ ಜೀವಂತ ಇದ್ದವರು ಬಾಂಬೆ ಹೈಕೋರ್ಟಿನ ತೀರ್ಪನ್ನು ಓದಿಕೊಂಡು ಆತ್ಮಾವಲೋಕನ ನಡೆಸಲಿ. ಧರ್ಮದ್ವೇಷದಿಂದ ಆತ್ಮವನ್ನೇ ಕೊಂದು ಕೊಂಡವರಿಗೆ ದೇವನು ಸದ್ಬುದ್ಧಿಯನ್ನು ದಯ ಪಾಲಿಸಲಿ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.