ಈದ್‌ಗೆ ಮುನ್ನ ಶಾಂತಿಸಭೆಯೇಕೆ, ಮನವಿ ಸಲ್ಲಿಕೆಯೇಕೆ?

0
1357

ಸನ್ಮಾರ್ಗ ಸಂಪಾದಕೀಯ

ಮುಸ್ಲಿಮರ ಹಬ್ಬಗಳು ಹತ್ತಿರವಾದಾಗ ಜಿಲ್ಲಾಧಿಕಾರಿಗಳು ಶಾಂತಿಸಭೆಗೆ ಆದೇಶ ಕೊಡುವುದು ಮತ್ತು ಶಾಂತಿಯುತ ಹಬ್ಬಾಚರಣೆಗೆ ಅ ನುವು ಮಾಡಿ ಕೊಡುವಂತೆ ಮುಸ್ಲಿಮ್ ಸಂಘಟನೆಗಳು ಪೊಲೀಸ್ ಕಮೀಷನರ್‌ಗೆ ಮನವಿ ಸಲ್ಲಿಸುವುದೆಲ್ಲ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ ಬಾರಿಯ ಈದ್‌ಗೆ ಸಂಬಂಧಿಸಿಯೂ ಈ ಬೆಳವಣಿಗೆ ನಡೆದಿದೆ. ಹಾಗಂತ, ಇಂಥ ಮನವಿಗಳು ಮತ್ತು ಆದೇಶಗಳ ಅಗತ್ಯ ಏನಿದೆ? ಹಬ್ಬದ ಸಮಯದಲ್ಲಿ ಅಶಾಂತಿ ಉಂಟು ಮಾಡುವವರು ಯಾರು? ಏನವರ ಉದ್ದೇಶ? ಹಬ್ಬದ ವಾತಾವರಣವನ್ನು ಹಾಳುಗೆಡವುದರಿಂದ ಅವರಿಗೆ ದಕ್ಕುವುದೇನು? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುವುದು ಸಹಜ.

ಈ ದೇಶದಲ್ಲಿ ಆಚರಿಸಲ್ಪಡುವ ಯಾವುದೇ ಹಬ್ಬವು ಕೆಲವು ಮೂಲಭೂತ ಆಚಾರ ಪದ್ಧತಿಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಧರ್ಮೀಯರೂ ಧರ್ಮಾತೀತವಾಗಿ ಆಚರಿಸುವುದಕ್ಕೆ ಯೋಗ್ಯವಾಗಿರುವಂಥದ್ದು. ರಾಜಕೀಯವು ಧರ್ಮವನ್ನು ದುರುಪಯೋಗಿಸುವುದಕ್ಕಿಂತ ಮೊದಲು ಈ ಕೂಡು ಆಚರಣೆ ಈ ದೇಶದ ವೈಶಿಷ್ಟ್ಯವೂ ಆಗಿತ್ತು. ಹಾಗಂತ,

ಈಗ ಇಲ್ಲ ಎಂದಲ್ಲ. ಇದೆ. ಆದರೆ ನಾಲ್ಕೈದು ದಶಕಗಳ ಹಿಂದಿನ ವಾತಾವರಣಕ್ಕೆ ಹೋಲಿಸಿದರೆ ಈಗ ಈ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಬ್ಬಗಳ ಕೂಡು ಆಚರಣೆಗೆ ಭಂಗ ಎದುರಾಗಿದೆ. ಹಿಂದೂಗಳ ಹಬ್ಬ, ಜಾತ್ರೆ ಅಥವಾ ಸಂತೋಷ ಕೂಟಗಳಲ್ಲಿ ಮುಸ್ಲಿಮರು ಭಾಗವಹಿಸುವುದನ್ನು ನಿರಾಕರಣೆಯ ಭಾವದಲ್ಲಿ ನೋಡುವ ಸಂಗತಿಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಏನು? ಈ ಗೋಡೆಯನ್ನು ಕೆಡವುವುದು ಹೇಗೆ, ಯಾರು? ಇಲ್ಲಿ ಇನ್ನೂ ಒಂದು ಬಹುಮುಖ್ಯ ಸಂಗತಿ ಇದೆ.

ಮುಸ್ಲಿಮರ ಹಬ್ಬಗಳಿಗೆ ಹೋಲಿಸಿದರೆ ಹಿಂದೂ ಸಮುದಾಯದಲ್ಲಿ ಹಬ್ಬಗಳು ಅನೇಕ. ಮುಸ್ಲಿಮರಿಗೆ ಎರಡು ಹಬ್ಬಗಳಷ್ಟೇ ಇವೆ. ಆದರೆ ಮುಸ್ಲಿಮರಂತೆ ಹಿಂದೂ ಸಮುದಾಯದ ಸಂಘಟನೆಗಳೂ ಹಬ್ಬಗಳ ಸಮಯದಲ್ಲಿ ಪೊಲೀಸ್ ಕಮೀಷನರ್‌ಗೆ ಮನವಿ ಸಲ್ಲಿಸುವ ಬೆಳವಣಿಗೆ ನಡೆಯುತ್ತಿಲ್ಲ. ಜಿಲ್ಲಾಧಿಕಾರಿಯವರು ಶಾಂತಿಸಭೆಗೆ ಕರೆ ಕೊಡುವ ಪ್ರಸಂಗವೂ ನಡೆಯುತ್ತಿಲ್ಲ. ಅಂದರೆ, ಮುಸ್ಲಿಮರ ಹಬ್ಬಾಚರಣೆಗೆ ಸಂಬಂಧಿಸಿ ಇಲ್ಲೊಂದು ಅನುಮಾನದ ವಾತಾವರಣ ಇದೆ. ಭಯವನ್ನು ಹುಟ್ಟು ಹಾಕಲಾಗಿದೆ. ಅವರ ಸಂತೋಷ ಕೂಟಕ್ಕೆ ಎಲ್ಲಿಂದಲೋ ಯಾರೋ ಅಡ್ಡಿಪಡಿಸಲಿದ್ದಾರೆ ಎಂಬ ಪರಿಸ್ಥಿತಿ ಇದೆ. ಹಿಂದೂಗಳ ಹಬ್ಬಗಳಿಗೆ ಇಲ್ಲದ ಭಯವನ್ನು ಮುಸ್ಲಿಮರ ಹಬ್ಬಾಚರಣೆಗೆ ಇರುವಂತೆ ಮಾಡುತ್ತಿರುವವರು ಯಾರು? ಯಾಕೆ? ಈ ಬಗೆಯ ಅಡ್ಡಿಯಿಂದ ಅವರು ಪಡಕೊಳ್ಳುತ್ತಿರುವುದೇನು?

ದೇಶಕ್ಕೆ ಸ್ವಾತಂತ್ರ‍್ಯ ಲಭಿಸುವಾಗ ಈ ದೇಶದ ನಾಗರಿಕರಲ್ಲಿ ಖುಷಿ ಮತ್ತು ದುಃಖಗಳೆರಡೂ ಇದ್ದುವು. ನಾವು ಸ್ವತಂತ್ರರು ಎಂಬುದು ಖುಷಿಗೆ ಕಾರಣವಾದರೆ, ದೇಶ ವಿಭಜನೆಯಾಯಿತು ಎಂಬುದು ದುಃಖಕ್ಕೆ ಕಾರಣ. ದುಃಖ ಎಷ್ಟು ತೀವ್ರವಾಗಿ ಈ ದೇಶೀಯರನ್ನು ಕಾಡಿತೆಂದರೆ, ಖುಷಿಯನ್ನೇ ಅನುಭವಿಸಲಾಗದಷ್ಟು. ಮುಸ್ಲಿಮ್ ಮತ್ತು ಹಿಂದೂ ಎಂಬ ಗುರುತಿರುವ ಮನುಷ್ಯರ ಮಾರಣ ಹೋಮ ನಡೆಯಿತು. ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸಾಯಿಸಿದರು. ಹೀಗೆ ಸಾಯುವವರ ನೋವಲ್ಲಾಗಲಿ, ರಕ್ತದ ಬಣ್ಣದಲ್ಲಾಗಲಿ, ದೇಹ ಪ್ರಕೃತಿಯಲ್ಲಾಗಲಿ, ಹಸಿವು-ಬಾಯಾರಿಕೆ, ಸಂಕಟದಲ್ಲಾಗಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಚೂರಿಯನ್ನು ಚುಚ್ಚಿಸಿಕೊಂಡ ಹಿಂದೂವಿನದ್ದಾಗಲಿ ಮುಸ್ಲಿಮನದ್ದಾಗಲಿ ಆರ್ತನಾದ ಒಂದೇ. ಹರಿಯುತ್ತಿದ್ದ ರಕ್ತದ ಬಣ್ಣ ಒಂದೇ. ಎರಡು ಕೈ, ಎರಡು ಕಾಲು, ಎರಡು ಕಣ್ಣು, ಒಂದು ಬಾಯಿ, ಒಂದು ಮೂಗು.. ಹೀಗೆ ಸಾಯುವವರು ಮತ್ತು ಸಾಯಿಸುವವರ ನಡುವೆ ವ್ಯತ್ಯಾಸವೂ ಇರ ಲಿಲ್ಲ. ಮತ್ತೇಕೆ ಅವರು ಪರಸ್ಪರ ಇರಿದುಕೊಂಡರು. ಎಂದರೆ,

ದೇಶವಿಭಜನೆಯ ಹೆಸರಲ್ಲಿ ಅವರ ನಡುವೆ ಹುಟ್ಟು ಹಾಕಲಾಗಿದ್ದ ಧರ್ಮದ್ವೇಷ. ಬ್ರಿಟಿಷರು ಮತ್ತು ಅಂದಿನ ರಾಜಕೀಯ ನಾಯಕರ ತಂತ್ರ-ಕುತಂತ್ರ, ದುರುದ್ದೇಶಗಳ ಕಾರಣಕ್ಕಾಗಿ ದೇಶ ವಿಭಜನೆಗೊಂಡರೂ ಅದರ ಹೊಣೆಗಾರಿಕೆಯನ್ನು ಅವರು ಮುಸ್ಲಿಮರು ಮತ್ತು ಹಿಂದೂಗಳ ಮೇಲೆ ಹೊರಿಸಿದರು. ದ್ವೇಷ ಬಿತ್ತಿದರು. ಸ್ವಾತಂತ್ರ‍್ಯಪೂರ್ವದಲ್ಲೇ ಎರಡೂ ಸಮುದಾಯಗಳ ನಡುವೆ ಈ ದ್ವೇಷ ಭಾವವನ್ನು ಹುಟ್ಟು ಹಾಕಲಾಗಿತ್ತಾದ್ದರಿಂದ ವಿಭಜನೆಯ ಸಮಯದಲ್ಲಿ ಅದನ್ನು ಪರಾಕಾಷ್ಟೆಗೆ ತಲುಪಿಸುವುದು ಕಷ್ಟವಾಗಲಿಲ್ಲ. ಸ್ವಾತಂತ್ರ‍್ಯಾನಂತರವೂ ಈ ಭಯವನ್ನು ತಾಜಾವಾಗಿಟ್ಟು ಕೊಳ್ಳುವ ಶ್ರಮಗಳು ನಡೆಯುತ್ತಾ ಬಂದುವು. ಮುಸ್ಲಿಮ್ ವ್ಯಕ್ತಿಯ ತಪ್ಪುಗಳನ್ನು ಇಡೀ ಧರ್ಮದ ತ ಪ್ಪುಗಳಾಗಿ ಬಿಂಬಿಸುವುದು ಮತ್ತು ಆ ಮೂಲಕ ಜನರ ಭಾವನೆಗಳಿಗೆ ಕಿಚ್ಚಿಡುವುದು ನಡೆಯತೊಡಗಿತು. ಇವು ನಿಧಾನಕ್ಕೆ ಫಲ ಕೊಡುವ ಸೂಚನೆಗಳು ಲಭ್ಯವಾಗತೊಡಗಿದಂತೆಯೇ ದ್ವೇಷ ಭಾಷಣಗಳು ಹೆಚ್ಚತೊಡಗಿದುವು. ಪ್ರೇಮವು ಲವ್‌ಜಿಹಾದ್ ಆಯಿತು. ಭಯೋತ್ಪಾದನೆಯು ಜಿಹಾದ್ ಆಯಿತು. ಮುಸ್ಲಿಮರ ವೇಷ-ಭೂಷಣಗಳು, ಆಹಾರ ಕ್ರಮ, ಧಾರ್ಮಿಕ ನಿಯಮಾವಳಿಗಳು, ಮದ್ರಸ-ಬಾಂಗ್… ಹೀಗೆ ಒಂದೊಂದನ್ನೇ ಮುನ್ನೆಲೆಗೆ ತಂದು, ಅವುಗಳಿಗೆ ಕೋರೆ ಹಲ್ಲುಗಳನ್ನೂ ಚೂಪು ಉಗುರುಗಳನ್ನೂ ತೊಡಿಸಿ, ವಿಕೃತಗೊಳಿಸಿ ಹಂಚುವ ಪ್ರಕ್ರಿಯೆಗಳು ನಡೆದುವು. ರಾಜ ಕೀಯವಾಗಿ ಇವು ಲಾಭದಾಯಕ ಎಂದು ಸ್ಪಷ್ಟವಾಗುತ್ತಿದ್ದಂತೆಯೇ ಹೀಗೆ ಹಿಂದೂ ಮುಸ್ಲಿಮರನ್ನು ಪರಸ್ಪರ ಅನ್ಯಗೊಳಿಸುವ ವಿಷಯಗಳನ್ನು ಹುಡುಕಿ ಹುಡುಕಿ ಮುನ್ನೆಲೆಗೆ ತರಲಾಯಿತು. ಅದರಲ್ಲಿ ಹಬ್ಬಗಳೂ ಒಂದು. ನಮ್ಮ ಹಬ್ಬ- ಹರಿದಿನ-ಜಾತ್ರೆಗಳಲ್ಲಿ ಅವರ ಉಪಸ್ಥಿತಿಯೇಕೆ ಎಂಬ ಪ್ರಶ್ನೆಯೊಂದನ್ನು ಹುಟ್ಟು ಹಾಕಿ, ಅವರ ಉಪಸ್ಥಿತಿಯೇ ಅಪಾಯಕಾರಿ ಎಂಬಲ್ಲಿ ವರೆಗೆ ಅದನ್ನು ಉಬ್ಬಿಸಿ ಹಂಚುವಲ್ಲಿಗೆ ಹಬ್ಬಗಳೂ ವಿಭಜನೆಯಾದವು. ಇದರಿಂದಾಗಿ ಇವತ್ತು ಹೊಸ ತಲೆಮಾರು ನಾವು ಮತ್ತು ಅವರು ಎಂಬAತಹ ವಿಭಜನೆಯೊಂದಕ್ಕೆ ಸಾಕ್ಷಿಯಾಗುತ್ತಿದೆ. ನಮ್ಮ ಹಬ್ಬ, ನಮ್ಮ ಖುಷಿ, ನಮ್ಮ ಸಂತೋಷ… ಎಂಬಂತಹ ಅಲಿಖಿತ ಬೌಂಡರಿಯೊಂದು ನಿರ್ಮಾಣವಾಗುತ್ತಿದೆ. ಇದು ಪರಸ್ಪರರ ನಡುವೆ ಅನುಮಾನದ ವಾತಾವರಣಕ್ಕೂ ಕಾರಣವಾಗುತ್ತಿದೆ. ಅಂದಹಾಗೆ,

ಈ ಅನುಮಾನದ ಗೋಡೆ ಅಪಾಯಕಾರಿ. ಇದನ್ನು ಬೀಳಿಸಲೇಬೇಕು. ಇದಕ್ಕಿರುವ ಅತ್ಯುತ್ತಮ ದಾರಿಯೆಂದರೆ, ಹಿಂದೂ ಮತ್ತು ಮುಸ್ಲಿಮರು ಹಬ್ಬಗಳಂತಹ ಸಂತೋಷ ಕೂಟಗಳನ್ನು ಪರಸ್ಪರ ಜೊತೆಗೂಡಿ ಆಚರಿಸುವುದು. ಇಂತಹ ಕಲೆಯುವಿಕೆಯಿಂದ ಸಂತೋಷದ ಹಂಚಿಕೆಯಷ್ಟೇ ವಿನಿಮಯವಾಗುವುದಲ್ಲ, ಪರಸ್ಪರರ ನಡುವೆ ಮಾತು-ಕತೆಗಳೂ ನಡೆಯುತ್ತವೆ. ಸುಖ-ದುಃಖಗಳ ಆಮದು-ರಫ್ತುಗಳೂ ಆಗುತ್ತವೆ. ಇಂದಿನ ಅಗತ್ಯ ಇದು. ನಿಜವಾಗಿ,

ಹಬ್ಬ ಅಂದರೆ ಆತಂಕ ಅಲ್ಲ, ಸಂತೋಷ. ಈ ಸಂತೋಷವನ್ನು ಅನುಭವಿಸುವುದಕ್ಕೆ ಹಿಂದೂ-ಮುಸ್ಲಿಮರು ಜೊತೆಯಾಗಿ ಸಿದ್ಧಗೊಳ್ಳಬೇಕೇ ಹೊರತು ಶಾಂತಿ ಸಭೆಗಲ್ಲ. ಆದರೆ ಬರಬರುತ್ತಾ ಹಬ್ಬಗಳು ಆತಂಕದ ದಿನಗಳಾಗಿ ಮೂಡತೊಡಗಿವೆ. ನಾವು ಮತ್ತು ಅವರು ಎಂಬ ವಿಭಜನೆಗೆ ಕಾರಣವಾಗುತ್ತಿದೆ. ಈ ವಾತಾವರಣ ತಿಳಿಯಾಗಬೇಕು. ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ವಿಶ್ವಾಸ ದಿಂದ ಬದುಕುವ ಸ್ಥಿತಿ ನಿರ್ಮಾಣವಾಗಬೇಕು. ಯಾರು ಪರಸ್ಪರರನ್ನು ಅನ್ಯಗೊಳಿಸುತ್ತಾರೋ ಅವರನ್ನು ದೂರವಿಟ್ಟು ಹಿಂದೂ- ಮುಸ್ಲಿಮರು ಜೊತೆಯಾಗಿ ಬದುಕುವಂತಾಗಬೇಕು. ಹಬ್ಬಗಳು ಅದಕ್ಕಿರುವ ಒಂದು ಕಿಂಡಿ. ಈ ಕಿಂಡಿ ಮುಚ್ಚದಿರಲಿ.