ಸನ್ಮಾರ್ಗ ಫ್ಯಾಕ್ಟ್ ಚೆಕ್: ಹಿಜಾಬನ್ನು ಬೆಂಬಲಿಸಿ ಯೂನಿಫಾರಂ ನಿಯಮವನ್ನು ಮೈಸೂರಿನ ಕಾಲೇಜು ಅಧಿಕೃತವಾಗಿ ತೆಗೆದು ಹಾಕಿಲ್ಲ; ಪ್ರಾಂಶುಪಾಲರ ಮೌಖಿಕ ಹೇಳಿಕೆಯಿಂದ ಉಂಟಾದ ಗೊಂದಲ

0
276

ಸನ್ಮಾರ್ಗ ಫ್ಯಾಕ್ಟ್ ಚೆಕ್

ಮೈಸೂರು: ಹಿಜಾಬನ್ನು ಬೆಂಬಲಿಸಿ ಯೂನಿಫಾರಂ ನಿಯಮವನ್ನು ಮೈಸೂರಿನ ಇತಿಹಾಸ ಪ್ರಸಿದ್ಧ ಖಾಸಗಿ ಕಾಲೇಜೊಂದು ತೆಗೆದು ಹಾಕಿತ್ತು ಎಂಬ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಅದು ಕೇವಲ ಮೌಖಿಕ ಹೇಳಿಕೆ. ಆದರೆ ಅಂತಹ ಬೆಳವಣಿಗೆ ಅಧಿಕೃತವಾಗಿ ನಡೆದಿಲ್ಲ. ಈ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲರು ಎರಡೆರಡು ಬಾರಿ ನೀಡಿದ ಗೊಂದಲದ ಮೌಖಿಕವಾದ ಹೇಳಿಕೆಯಿಂದ ಇಂತಹ ಬೆಳವಣಿಗೆಯಾಗಿದೆ ಎಂದು ಸನ್ಮಾರ್ಗ ಡಾಟ್. ಕಾ‌ಮ್ ನಡೆಸಿದ ಸತ್ಯ ಶೋಧನೆಯಲ್ಲಿ ತಿಳಿದು ಬಂದಿದೆ.

ಟೈಮ್ಸ್ ಪತ್ರಿಕೆಯಿಂದ ಪ್ರಕಟವಾದ ಮಾಹಿತಿ ತಪ್ಪಾಗಿದೆ ಎಂದು ಮಾಹಿತಿ ನೀಡಿರುವ ಮೈಸೂರಿನ ಪತ್ರಕರ್ತರೋರ್ವರು, ಅಧಿಕೃತವಾಗಿ ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಕೆಲವೊಂದು ಗೊಂದಲಗಳಿಂದಾಗಿ ಈ ರೀತಿಯಾಯಿತು. ಪ್ರಕಟಿಸುವ ಮುನ್ನ ಪತ್ರಿಕೆಯ ವರದಿಗಾರರಿಂದ ಸ್ವಲ್ಪ ಎಡವಟ್ಟಾಗಿದೆ ಎಂದು ಮೈಸೂರಿನ ಪತ್ರಕರ್ತರಾದ ಲೋಕೇಶ್ ಬಾಬು ಎಂಬವರು ಮೈಸೂರಿನ ಡಿಡಿಪಿಯು ಅವರಲ್ಲಿ ಮಾತನಾಡಿದ ಬಳಿಕ ಈ ವಿಚಾರವನ್ನು ತಿಳಿಸಿದ್ದಾರೆ.

ಈ ಬಗ್ಗೆ ಅದೇ ಕಾಲೇಜಿನ ವಿದ್ಯಾರ್ಥಿನಿಯೋರ್ವರ ಪೋಷಕರನ್ನು ಸಂಪರ್ಕಿಸಿದಾಗ, ವಿದ್ಯಾರ್ಥಿಗಳಿಗೆ ಹಿಜಾಬ್ ನಿರಾಕರಿಸಿದಾಗ ಪೋಷಕರಾದ ನಾವು ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡಿ ಮಾತನಾಡಿಸಿದೆವು.‌ಆಗ ಪ್ರಾಂಶುಪಾಲರು‌ ನಮಗೆ ನಮ್ಮ ಮಕ್ಕಳ ಶಿಕ್ಷಣ ಮುಖ್ಯ. ‌ಆದ್ದರಿಂದ ಹಿಜಾಬ್ ಶಿಕ್ಷಣ ಪಡೆಯುವುದಕ್ಕೆ ಸಮಸ್ಯೆಯಾಗುವುದು ಬೇಡ ಎಂದು ಯೂನಿಫಾರಂ ನಿಯಮವನ್ನು ನಾವು ತೆಗೆದು ಹಾಕುವುದಾಗಿ ಮೌಖಿಕವಾಗಿ ನಮಗೆ ಭರವಸೆ ನೀಡಿದ್ದರು. ಈ ವಿಚಾರ ಹೊರಗಿನ ಕೆಲ ಪಟ್ಟಭದ್ರ ಹಿತಾಸಕ್ತಿಯ ಸಂಘಟನೆಯವರು ತಿಳಿದು ಕೇವಲ ನಾಲ್ಕು ಮಂದಿ ವಿದ್ಯಾರ್ಥಿನಿಯರಿಗಾಗಿ ಯೂನಿಫಾರಂ ನಿಯಮವನ್ನು ತೆಗೆಯದಂತೆ ಒತ್ತಡ ಬಂದ ಬಳಿಕ ಪ್ರಾಂಶುಪಾಲರು ತಮ್ಮ ಮಾತು ಬದಲಾಯಿಸಿದ್ದಾರೆ‌‌. ಹೊರಗಿನ ಒತ್ತಡ ಬಂದ ಬಳಿಕ ಅಂತಹ ಬೆಳವಣಿಗೆ‌ ನಮ್ಮಲ್ಲಿ ಆಗಿಲ್ಲ ಎಂದು ಕೂಡ ಎರಡೆರಡು ಹೇಳಿಕೆ ನೀಡಿದ್ದರಿಂದ ಹೀಗಾಗಿದೆ ಎಂದು ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರಿನ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶ ನೀಡಿ, ಯೂನಿಫಾರಂ ನಿಯಮವನ್ನೇ ರದ್ದು ಮಾಡಲಾಯಿತು ಎಂದು ಸುದ್ದಿ ವೈರಲ್ ಆದ ಕೂಡಲೇ ಹೆಚ್ಚಿನ ಜನರು ಇದೊಂದು ಒಳ್ಳೆಯ ಬೆಳವಣಿಗೆ. ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ ಕಾಲೇಜಿನವರದ್ದು ಐತಿಹಾಸಿಕ ನಿರ್ಧಾರ ಎಂದು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದರು‌. ಆದರೆ ಈಗ ಅದಕ್ಕೂ ಹೊರಗಿನ ಶಕ್ತಿಗಳು ತಡೆ ಬೀಳುವಂತೆ ಒತ್ತಡ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ