ಮಂಗಳೂರು: ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಹಿದಾಯತುಲ್ಲಾ.ಬಿ ದೇರಳಕಟ್ಟೆ ಇವರಿಗೆ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ಅಧ್ಯಕ್ಷರಾದ ಮುಹಮ್ಮದಲಿ ಉಚ್ಚಿಲ್ ಅವರು ಸ್ಮರಣಿಕೆ ಮತ್ತು ಮೂರು ಸಾವಿರ ರೂಪಾಯಿ ನಗದನ್ನು ವಿತರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸೀರತ್ ಸ್ವಾಗತ ಸಮಿತಿಯು ಇಲ್ಲಿನ ಐ.ಎಂ.ಎ. ಹಾಲ್ನಲ್ಲಿ ಆಯೋಜಿಸಿದ್ದ ಜಿಲ್ಲಾ ಶಿಕ್ಷಕರ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಈ ಬಹುಮಾನ ವಿತರಣೆಯನ್ನು ಮಾಡಲಾಯಿತು.
ದ್ವಿತೀಯ ಸ್ಥಾನವನ್ನು ಪಡೆದ ಝರೀನ ಬೇಗಂ ಉಳ್ಳಾಲ ಅವರಿಗೆ 2 ಸಾವಿರ ರೂಪಾಯಿ ನಗದು ಮತ್ತು ತೃತೀಯ ಸ್ಥಾನವನ್ನು ಪಡೆದ ಆಬಿದಾ ಮರ್ಯಮ್ ಪಕ್ಕಲಡ್ಕ ಹಾಗೂ ರುಕ್ಸಾನಾ ಫಾತಿಮಾ ನೆಕ್ಕಿಲಾಡಿ ಅವರಿಗೆ ತಲಾ 1 ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ನೀಡಲಾಯಿತು.
ಜುವೈರಿಯಾ ಸಮ್ಹ ಉಳ್ಳಾಲ, ಫಾತಿಮಾ ಫರ್ಹಾನಾ ಬೋಳಾರ, ಮರ್ಯಮ್ ಫಹೀಮಾ ಬೋಳಾರ, ಸಫರಾ ಇಸ್ಮಾಈಲ್ ಕಂದಕ್, ಲತೀಫಾ ಜೆಪ್ಪು, ಶಂಶಾದ್ ಅಬ್ದುಲ್ ಹಮೀದ್ ಗೋಳಿಕಟ್ಟೆ, ಮುನೀರಾ ಬಿ.ಸಿ. ರೋಡ್, ಫಾತಿಮಾ ನಾಫಿಯ ಬಂಟ್ವಾಳ, ಆಯಿಷತ್ ಮುರ್ಶಿದಾ ಮಲಾರ್, ಸಫಾನಾ ಬೈಲೂರುರವರಿಗೆ ತಲಾ ರೂ. 500ರಂತೆ 10 ಮಂದಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ ಮೌಲ್ಯಮಾಪಕರಾಗಿ ಸಹಕರಿಸಿದ ಮಿಸ್ಬಾ ಖಾನುಮ್ ತರೀಕೆರೆ ಇವರಿಗೆ ಸ್ಮರಣಿಕೆ ಮತ್ತು ನಗದನ್ನು ನೀಡಿ ಗೌರವಿಸಲಾಯಿತು.
ಒಟ್ಟು 69 ಪ್ರಶ್ನೆಗಳಿದ್ದ ಈ ಸ್ಪರ್ಧೆಯಲ್ಲಿ ಪ್ರತಿ ಪ್ರಶ್ನೆಗೂ ಒಂದು ಅಂಕವನ್ನು ನಿಗದಿಪಡಿಸಲಾಗಿತ್ತು. ವಿಶೇಷ ಏನೆಂದರೆ, ಭಾಗವಹಿಸಿದ ಒಟ್ಟು 156 ಮಂದಿ ಸ್ಪರ್ಧಿಗಳಲ್ಲಿ 4 ಮಂದಿ 69 ಅಂಕಗಳನ್ನು ಪಡೆದು ಸಮಬಲ ಸ್ಥಾಪಿಸಿದ್ದರು. ಆದ್ದರಿಂದ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ನಿರ್ಧರಿಸುವುದಕ್ಕೆ ಚೀಟಿ ಎತ್ತಲಾಯಿತು. ಉಳಿದಿಬ್ಬರನ್ನು ತೃತೀಯ ಸ್ಥಾನಿಯೆಂದು ನಿರ್ಧರಿಸಲಾಯಿತು.















