ಸರಸ್ವತಿ ಕೊಲೆ ಪ್ರಕರಣ: ಪತಿ ಮತ್ತು ಅತ್ತೆಗೆ ಜೀವಾವಧಿ ಶಿಕ್ಷೆ; ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್

0
651

ಸರಸ್ವತಿ ಕೊಲೆ ಪ್ರಕರಣ: ಪತಿ ಮತ್ತು ಅತ್ತೆಗೆ ಜೀವಾವಧಿ ಶಿಕ್ಷೆ; ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: 2011ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದ್ದ ಸರಸ್ವತಿ ಎಂಬುವರ ಕೊಲೆ ಪ್ರಕರಣದ ದೋಷಿಗಳಾದ ಆಕೆಯ ಪತಿ ರವೀಶ ಹಾಗೂ ಅತ್ತೆ ಪಾರ್ವತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ೧ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೇಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮಂಗಳವಾರ ರಾಜ್ಯ ಹೈಕೋರ್ಟ್ ಕಾಯಂಗೊಳಿಸಿ ಆದೇಶಿಸಿದೆ.

ಜೀವಾವಧಿ ಶಿಕ್ಷೆ ವಿಧಿಸಿದ್ದ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ರವೀಶ ಮತ್ತು ಆತನ ತಾಯಿ ಪಾವರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಅಧೀನ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗ್ರಾಮದಲ್ಲಿ ರವೀಶ ಮತ್ತು ಪತ್ನಿ ಸರಸ್ವತಿ ವಾಸ ಮಾಡುತ್ತಿದ್ದರು. ಪತ್ನಿಯ ಶೀಲದ ಮೇಲೆ ರವೀಶಗೆ ಅನುಮಾನವಿತ್ತು. ಈ ಕುರಿತು ತಾಯಿ ಪಾವರ್ತಿಯೊಂದಿಗೆ ಆತ ಚರ್ಚಿಸಿದ್ದ. ಸೊಸೆಯನ್ನು ಕೊಲೆ ಮಾಡುವಂತೆ ಮಗನಿಗೆ ತಾಯಿ ಪಾರ್ವತಿಯೇ ಸೂಚನೆ ನೀಡಿದ್ದು ಕೊಲೆಗೆ ಯೋಜನೆ ರೂಪಿಸಿದ್ದರು. ೨೦೧೧ರ ಫೆ.೧೭ರಂದು ರವೀಶ ಹಾಗೂ ಪಾವರ್ತಿ ಸೇರಿ ಸರಸ್ವತಿಯನ್ನು ಮನೆ ಮುಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ವಿಟ್ಲ ಠಾಣಾ ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪಾವರ್ತಿ ಮೊದಲ ಆರೋಪಿಯಾದರೆ, ರವೀಶ ಎರಡನೆ ಆರೋಪಿ.

ಪ್ರಕರಣ ವಿಚಾರಣೆ ವೇಳೆ ರವೀಶ್ ಮತ್ತು ಸರಸ್ವತಿ ಅವರ ಪುತ್ರ ಲೋಹಿತಾಶ್ವ ಸಾಕ್ಷ್ಯ ನುಡಿದಿದ್ದ. ಘಟನೆ ನಡೆದಿದ್ದ ವೇಳೆ ಒಂಬತ್ತು ವರ್ಷದ ಲೋಹಿತಾಶ್ವ, ತನ್ನ ತಾಯಿಯನ್ನು ತಂದೆ ಹಾಗೂ ಅಜ್ಜಿಯೇ ಮನೆಯ ಮುಂದಿನ ಜಗಲಿಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಸಾಕ್ಷ್ಯ ನುಡಿದಿದ್ದ.

ಈ ಸಾಕ್ಷ್ಯ ಪರಿಗಣಿಸಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ರವೀಶ ಹಾಗೂ ಪಾವರ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸಹ ಲೋಹಿತಾಶ್ವ ನುಡಿದ್ದ ಸಾಕ್ಷ್ಯ ನಂಬಲರ್ಹವಾಗಿದೆ ಎಂದು ಅಭಿಪ್ರಾಯಪಟ್ಟು ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.