ಪ್ರವಾದಿ ಮುಹಮ್ಮದ್ (ಸ) ವಿವಾಹಗಳು ಮತ್ತು ವಿವಾದಗಳು ಮತ್ತು ವಿಮರ್ಶಕರು

0
3351

ಪ್ರವಾದಿ ಮುಹಮ್ಮದ್ (ಸ) ವಿವಾಹಗಳು ಮತ್ತು ವಿವಾದಗಳು ಮತ್ತು ವಿಮರ್ಶಕರು

✒ಅಬೂಕುತುಬ್

ಪ್ರವಾದಿ ಮುಹಮ್ಮದ್ ಸ ರವರ ಕುರಿತು ಹೇಳುವುದಾದರೆ ಅವರಿಗೆ 25 ವರ್ಷ ಪ್ರಾಯವಾದಾಗ 40 ವರ್ಷದ ವಿಧವೆ ಮಹಿಳೆಯೊಂದಿಗೆ ಮದುವೆ ಆಯಿತು. ಓರ್ವ ಪುರುಷ ಎಂಬ ನೆಲೆಯಲ್ಲಿ ಅತ್ಯಂತ ಹೆಚ್ಚು ದೈಹಿಕ ಆಕಾಂಕ್ಷೆಗಳು ಇರುವ ವಯಸ್ಸು ಯೌವನ ಆಗಿರುತ್ತದೆ. ಆ ಯೌವನದಲ್ಲಿ ತನಗಿಂತ ಹದಿನೈದು ವರ್ಷ ಹಿರಿಯ ಮತ್ತು ವಿಧವೆ ಮಹಿಳೆಯನ್ನು ಮದುವೆಯಾಗಿ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಮತ್ತು ಚಾಲ್ತಿಯಲ್ಲಿರುವ ವಿಲಕ್ಷಣ ಕಲ್ಪನೆಯನ್ನು ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ತಿದ್ದುವ ಮೂಲಕ ಎಷ್ಟೊಂದು ಅಡ್ವಾನ್ಸ್ ಇದ್ದರು ಎಂಬುದನ್ನು ನಾವು ಚಿಂತಿಸಬೇಕು.

ವಿದವೆ ಖದೀಜಾರೊಂದಿಗಿನ ದಾಂಪತ್ಯ ಸುಮಾರು 15 ವರ್ಷದ ವರೆಗೆ ಅಂದರೆ ಪ್ರವಾದಿತ್ವ ದೊರೆಯುವ ವರೆಗೂ (ಏಕ ಪತಿ-ಪತ್ನಿ) ಎಂಬ ನೆಲೆಯಲ್ಲಿ ಮುಂದುವರಿಯಿತು.

ಸಾಧಾರಣವಾಗಿ ಅರಬರು ಮಾತ್ರವಲ, ಹಿಂದೆ ಎಲ್ಲರೂ ಅಸಂಖ್ಯಾತ ಬಹುಪತ್ನಿತ್ವ ಹೊಂದಿದ್ದರು. ಆದರೆ ಪ್ರವಾದಿ ವರ್ಯರು ಅಂತಹ ಜಾಹಿಲಿಯ್ಯ ಕಾಲದಲ್ಲೂ ಆದರ್ಶ ಪತಿಯಾಗಿದ್ದರು.

ನಂತರ ಪ್ರವಾದಿತ್ವದ ಬಳಿಕವೂ ಖದೀಜಾ ಅತಿ ವೃದ್ಧಾಪ್ಯಕ್ಕೆ ತಲಪಿದಾಗಲೂ ಪ್ರವಾದಿ ಸ ಬೇರೆ ಮದುವೆ ಆಗಿರಲಿಲ್ಲ… ಖದೀಜಾರು ಮರಣ ಹೊಂದುವಾಗ ಪ್ರವಾದಿವರ್ಯರಿಗೆ 50 ವರ್ಷ. ಖದೀಜಾರಿಗೆ 65 ವರ್ಷ.

ಖದೀಜಾ ಮರಣದ ಅದೇ ವೇಳೆಯಲ್ಲಿ ಅವರ ದೊಡ್ಡ ಬೆನ್ನೆಲುಬು ಆಗಿದ್ದ ಚಿಕ್ಕಪ್ಪ ಅಬೂತಾಲಿಬ್ ಮರಣ ಹೊಂದಿದರು. ಆಗ ಪ್ರವಾದಿ ಸ ರವರು ಬಹಳ ದುಃಖವನ್ನು ಹೊಂದಿದ್ದರು. ಆ ವರ್ಷವನ್ನು ದುಃಖದ ವರ್ಷ ಎಂದು ಚರಿತ್ರೆಯಲ್ಲಿ ಕರೆಯಲಾಗುತ್ತದೆ. ಪ್ರವಾದಿಯ ದುಃಖ ಮತ್ತು ಏಕಾಂತಕ್ಕೆ ಸಾಂತ್ವನ ಆಗಿ ಓರ್ವ ಸಂಗಾತಿ ಪತ್ನಿ ಬೇಕಿತ್ತು. ಆಗ ಮದುವೆ ಆಗುವುದು ಸಹಜ. ಆದರೂ ಆ ಕಾಲದಲ್ಲೂ ಮತ್ತು ಅದರ ನಂತರದ ಒಂದು ವರ್ಷಗಳ ಕಾಲ ಪ್ರವಾದಿ ಮುಹಮ್ಮದ್ (ಸ) ಇನ್ನೊಂದು ಮದುವೆ ಆಗಿರಲಿಲ್ಲ. ಪ್ರವಾದಿವರ್ಯರಿಗೆ ಇನ್ನೊಂದು ಮದುವೆ ಕಷ್ಟವೂ ಆಗಿರಲಿಲ್ಲ. ತನ್ನ ಪ್ರೀತಿಯ ಪತ್ನಿ ವೃದ್ಧೆ ಖದೀಜಾ ತೀರಿಕೊಂಡ 3 ವರ್ಷಗಳ ವರೆಗೂ 50 ವರ್ಷದ ಸೌದಾರ ಹೊರತು ಪ್ರವಾದಿಯ ಜೀವನದಲ್ಲಿ ಇನ್ನೊಂದು ಪತ್ನಿ ಜೊತೆಗೆ ಇರಲಿಲ್ಲ.ಪ್ರವಾದಿಯ ಮಕ್ಕಳು ಚಿಕ್ಕವರು ಎಂಬ ಕಾರಣಕ್ಕಾಗಿ ಸೌದಾರನ್ನು ಮದುವೆ ಆಗಿದ್ದರು. ಹ.ಆಯಿಷಾ ಎಂಬ ಕನ್ಯೆಯನ್ನು ಮದುವೆಯಾಗಿ ಅವರು ಪ್ರವಾದಿ ಸ ರವರನ್ನು ಸೇರುವಾಗ ಆಗ ಪ್ರವಾದಿವರ್ಯರಿಗೆ ಸುಮಾರು 53 ವರ್ಷ ಆಗಿತ್ತು.

ಖದೀಜಾರ ಮರಣದ ಬಳಿಕ ಪ್ರವಾದಿವರ್ಯರು ಮದೀನಾ ತಲುಪಿದಾಗ ಅಲ್ಲಾಹನ ಆದೇಶದಂತೆ ಕೆಲವು ವಿವಾಹ ಆದರು. ಅದು ಪ್ರವಾದಿ ಎಂಬ ಪೋಸ್ಟ್ (ಮನುಷ್ಯರಿಗೆ ದೇವನ ವತಿಯಿಂದ ಸಿಗುವ ಸರ್ವೋಚ್ಚ ಹೊಣೆಗಾರಿಕೆ) ಆಧಾರದಲ್ಲಿ ಆದ ವಿವಾಹಗಳಾಗಿತ್ತು. ಅದರ ಹಿನ್ನೆಲೆ ಬಹಳ ಸ್ಪಷ್ಟವಾಗಿದೆ. ನಂತರ ಕುರಾನ್ ಸೂಕ್ತದಲ್ಲಿ ಹೇಳಲಾಯಿತು, ಇನ್ನೂ ನಿಮಗೆ ಎಷ್ಟೇ ಇಷ್ಟವಾದ ಮಹಿಳೆಯೊಂದಿಗೆ ಮದುವೆಗೆ ಅನುಮತಿ ಇಲ್ಲ ಎಂದು…..ಮತ್ತು ಆ ಎಲ್ಲಾ ಪ್ರವಾದಿ ಪತ್ನಿಯನ್ನು ಜಗತ್ತಿಗೆ “ಉಮ್ಮ” ಎಂದು ಹೇಳಲಾಯಿತು…(ಈ ಉಮ್ಮ ಎಂಬುದನ್ನೇ ಪ್ರವಾದಿ ಸ ರವರ ಪತ್ನಿಯರ ಬಗ್ಗೆ ಬೊಳುವಾರು ಮುಹಮ್ಮದ್ ಕುಂಞ ಕಾದಂಬರಿ ಬರೆದಿದ್ದಾರೆ)

ಆಯಿಷಾರವರನ್ನು ಪ್ರವಾದಿ ಸ ರವರು ಆರನೇ ವರ್ಷದಲ್ಲಿ ಮದುವೆ ಆಗಿದ್ದರು ಎಂದು ಹೇಳಲಾಗುತ್ತದೆ. ಮೂರು ವರ್ಷಗಳ ವರೆಗೆ ಅವರು ಬೇರೆ ಇದ್ದರು. ನಂತರ ಮೂರು ವರ್ಷಗಳ ನಂತರ ಪತಿ ಪತ್ನಿ ಎಂಬ ನೆಲೆಯಲ್ಲಿ ಒಂದಾದರು ಎಂದು ವಿಮರ್ಶಕರು ತಗಾದೆ ಎತ್ತುತ್ತಾರೆ.

ಪ್ರವಾದಿ ಮುಹಮ್ಮದ್ (ಸ) ಆಯಿಷಾ ಎಂಬ ಕನ್ಯೆಯನ್ನು ಮದುವೆಯಾಗುವಾಗ ಪ್ರವಾದಿವರ್ಯರಿಗೆ 51 ವರ್ಷ. ಮದುವೆಯಾಗಿ ನಾಲ್ಕು ವರ್ಷಗಳ ನಂತರ ಅವರು ಪ್ರವಾದಿವರ್ಯರ ಬಳಿ ಬಂದು ಸೇರಿದರು. ಅಷ್ಟರವರೆಗೆ ಅಂದಿನ ಸನ್ನಿವೇಶ, ಹಿಜಿರಾ(ಮದೀನಾಕ್ಕೆ ವಲಸೆ), ಸಂದಿಗ್ಧ ಪರಿಸ್ಥಿತಿ ಇತ್ಯಾದಿ ಕಾರಣಗಳಿಂದ ಆಯಿಷಾ ತಮ್ಮ ಮನೆಯಲ್ಲೇ ಇದ್ದರು.
ಪ್ರವಾದಿ ಮುಹಮ್ಮದ್ ರವರ ಬಾಲ್ಯ ಸ್ನೇಹಿತ ಮತ್ತು ಪ್ರವಾದಿ ಆಪ್ತ ಸಂಗಾತಿ ಅಬೂಬಕರ್ ರವರ ಮಗಳಾಗಿದ್ದರು ಆಯಿಷಾ (ರ). ಒಬ್ಬ ತಂದೆ ತನ್ನ ಮಗಳನ್ನು ಪ್ರೀತಿಯಿಂದ ಮದುವೆ ಮಾಡಿಸಿದ್ದು, ಮತ್ತು ಒಬ್ಬಳು ಪ್ರೀತಿಯಿಂದ ಪ್ರವಾದಿಯನ್ನು ಮದುವೆಯಾಗುವ ಸೌಭಾಗ್ಯಕ್ಕೆ ಭಾಜನರಾದರು. ನಿಜವಾಗಿ ಆಯಿಷಾರ ಸೌಭಾಗ್ಯ ಆಗಿತ್ತು, ಪ್ರವಾದಿವರ್ಯರನ್ನು ಮದುವೆ ಆಗಿದ್ದು. ಪ್ರವಾದಿ ಸ ರವರ ಎಲ್ಲಾ ಪತ್ನಿಯರ ಚರಿತ್ರೆಯನ್ನು ಅಧ್ಯಯನ ನಡೆದರೆ ಅವರೂ ಹಾಗೆಯೇ ಭಾವಿಸಿದ್ದರು ಎಂಬುದು ಸ್ಪಷ್ಟವಾಗಿ ಮನವರಿಕೆ ಆಗುತ್ತದೆ.

ಪ್ರವಾದಿವರ್ಯರ ಮದುವೆಯ ಬಗ್ಗೆ ಅತಿಹೆಚ್ಚು ವಿಮರ್ಶೆಗೆ ಒಳಪಟ್ಟ ಮದುವೆ ಆರು ವರ್ಷದ ಪುಟ್ಟ ಮಗುವನ್ನು ಪ್ರವಾದಿ ಸ ರವರು ಮದುವೆಯಾದರು ಎಂಬುದಾಗಿದೆ. ಓರಿಯಂಟಲಿಸ್ಟ್ ಗಳಿಂದ ಹಿಡಿದು ಪೌರ್ವಾತ್ಯ ಲೇಖಕರೂ ಇದನ್ನು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ.

ಒಂದೋ ಅದಕ್ಕೆ ಕಾರಣ ಅವರ ಪೂರ್ವಗ್ರಹ ಪೀಡಿತ ಮಾನಸಿಕತೆ ಅಥವಾ ಆ ವಿಷಯದ ಬಗ್ಗೆ ಇರುವ ಅಜ್ಞಾನ. ಇನ್ನೂ ಕೆಲವರು ಪ್ರವಾದಿವರ್ಯರನ್ನು ವಿಮರ್ಶೆ ಮಾಡಲಿಕ್ಕೇ ಪಡೆದಿದ್ದಾರೋ ಎಂಬ ಸಂಶಯ ಮೂಡುತ್ತದೆ. ಯಾಕೆಂದರೆ ನಿಸ್ವಾರ್ಥವಾಗಿ ಪ್ರವಾದಿಯನ್ನು ಅಧ್ಯಯನ ಮಾಡಿ ಇಂತಹ ತಗಾದೆ ಎತ್ತುವುದನ್ನು ಕಾಣುವುದಿಲ್ಲ.

ಉದಾಹರಣೆ:

1. “ಫಿತ್ನ” ಸಿನೆಮಾ ರಚಿಸಿದ ಅರ್ನಾಡ್ ವ್ಯಾನ್ ಡೂನ್ ಪ್ರವಾದಿವರ್ಯರ ಅತಿದೊಡ್ಡ ದ್ವೇಷಿ ಆಗಿದ್ದರು. ಅದಕ್ಕಾಗಿ ಪ್ರವಾದಿ ಮುಹಮ್ಮದ್ ರನ್ನು ನಿಂದಿಸಿ ಸಿನೆಮಾ ರಚಿಸಿದರು. ಆ ಬಳಿಕ ಅವರು ಪ್ರವಾದಿವರ್ಯರ ಬಗ್ಗೆ ನಿಷ್ಕಳಂಕವಾಗಿ ಅಧ್ಯಯನ ನಡೆಸಿದರು. ಬಳಿಕ ಪ್ರವಾದಿಯ ದೈವಿಕ ಮಾನವೀಯ ತತ್ವಗಳಿಗೆ ಮನಸೋತು ಇಸ್ಲಾಂ ಸ್ವೀಕರಿಸಿದರು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ಹಜ್ಜ್ ನಿರ್ವಹಿಸಲು ಮಕ್ಕಾ ಹೋದರು. ಮದೀನಾಕ್ಕೆ ಹೋಗಿ ಪ್ರವಾದಿಯವರ ಗೋರಿಯ ಮುಂದೆ ನಿಂತು ಕಣ್ಣೀರಿಳಿಸಿ ಬಿಕ್ಕಿ ಬಿಕ್ಕಿ ಅತ್ತು ಹೇಳಿದರು, “ನನ್ನ ಪ್ರೀತಿಯ ಪ್ರವಾದಿಯ ಗೋರಿಯ ಮುಂದೆ ನಿಲ್ಲಲು ನನಗೆ ನಾಚಿಕೆಯಾಗುತ್ತದೆ. ಒಂದು ಕಾಲದಲ್ಲಿ ನಾನಷ್ಟೊಂದು ಅವರನ್ನು ನಿಂದಿಸಿದ್ದೆ. ಯೂಟ್ಯೂಬ್ ನಲ್ಲಿ ಅವರ ವಿಡಿಯೋ ನೋಡಬಹುದು.

ಇದು ಇತ್ತೀಚಿನ ಕೇವಲ ಒಂದು ಉದಾಹರಣೆ. ಪ್ರವಾದಿಯ 1430 ವರ್ಷಗಳ ಇತಿಹಾಸ ಇಂತಹ ಹಲವಾರು ಘಟನೆಗಳನ್ನು ಉದಾಹರಿಸಬಹುದಾಗಿದೆ.

2. ಇನ್ನೊಂದು ಉದಾಹರಣೆ ನಾನು ಪ್ರೀತಿಸುವ ಇಸ್ಲಾಂ ಎಂಬ ಗ್ರಂಥ ಬರೆದ ಶ್ರೀ ಅಡಿಯಾರ್ ರದ್ದು. ಅವರೂ ಬಹಳಷ್ಟು ತಪ್ಪು ಗ್ರಹಿಕೆಗೆ ಈಡಾಗಿದ್ದರು. ಬಳಿಕ ಅವರು ಅಧ್ಯಯನ ಮಾಡಿದರು. ಬಳಿಕ ನಾನು ಪ್ರೀತಿಸುವ ಇಸ್ಲಾಂ ಎಂಬ ಗ್ರಂಥ ರಚಿಸಿದರು. ಆಗ ಅವರು ಮುಸ್ಲಿಂ ಆಗಿರಲಿಲ್ಲ. ಅವರ ಪುಸ್ತಕ ಓದಿ ಇಬ್ಬರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು.

3. ಇಸ್ಲಾಂ ಭಯೋತ್ಪಾದನೆಯ ಧರ್ಮ ಎಂಬ ಗ್ರಂಥ ಬರೆದ ಶಂಕರಾಚಾರ್ಯರ ಸ್ವಾಮೀಜಿ ನಂತರ ಪ್ರವಾದಿ ಮಹಮ್ಮದ್ ರವರ ಬಗ್ಗೆ ಅಧ್ಯಯನ ನಡೆಸಿದರು. ಬಳಿಕ ಇಸ್ಲಾಂ ಭಯೋತ್ಪಾದನೆಯ ಧರ್ಮ ಅಲ್ಲ ಎಂಬ ಕೃತಿ ಬರೆದರು. ಪ್ರವಾದಿ ಮುಹಮ್ಮದ್ ಜಗತ್ತಿನ ಎಲ್ಲಾ ಭಯೋತ್ಪಾದನೆಯನ್ನು ಅಳಿಸಿ ಶಾಂತಿಯನ್ನು ಪ್ರತಿಪಾದಿಸಲು ಬಂದವರು ಎಂದು ಘಂಟಾಘೋಷವಾಗಿ ಸಾರುತ್ತಿದ್ದಾರೆ. ಅವರ ಕೃತಿಯನ್ನು ಶಾಂತಿ ಪ್ರಕಾಶನ ಕನ್ನಡದಲ್ಲಿ ಮುದ್ರಿಸಿದೆ. ಅವರ ವಿಡಿಯೋ ಯೂಟ್ಯೂಬ್ ನಲ್ಲಿ ಇದೆ.

ಇಲ್ಲಿ ಈ 3 ಉದಾಹರಣೆಯನ್ನು ಯಾಕೆ ಕೊಟ್ಡಿದ್ದೇನೆಂದರೆ ಪ್ರವಾದಿ ಮುಹಮ್ಮದ್ ರವರ ಮೇಲಿನ ಎಲ್ಲಾ ಆರೋಪಗಳು ನಿರಾಧಾರ, ಅಧ್ಯಯನದ ಕೊರತೆ, ತಪ್ಪು ಗ್ರಹಿಕೆ, ಪೂರ್ವಗ್ರಹ ಪೀಡಿತದಿಂದ ಬಂದವುಗಳಾಗಿವೆ. ಅಥವಾ ಜಾಗತಿಕ ರಾಜಕೀಯದ ದುರುದ್ದೇಶದ ಫಲವಾಗಿದೆ.

ಪ್ರವಾದಿ ಮುಹಮ್ಮದ್ ರನ್ನು ನಿಂದಿಸುವ ಪ್ರತಿಯೊಬ್ಬ ವ್ಯಕ್ತಿ ಅವರನ್ನು ನಿಸ್ವಾರ್ಥ ನಿಷ್ಕಳಂಕವಾಗಿ ಅಧ್ಯಯನ ನಡೆಸಿದರೆ ಅವನು ಸ್ವತಃ ತನ್ನನ್ನೇ ನಿಂದಿಸುತ್ತಿದ್ದಾನೆ ಎಂಬುದು ಅವನಿಗೆ ಮನವರಿಕೆ ಆಗದಿರಲಾರದು.

[ಪ್ರವಾದಿ ಮುಹಮ್ಮದ್ ಆಯಿಷಾರನ್ನು ಯಾಕೆ ವಿವಾಹ ಆದರು? ಅದರ ಉದ್ದೇಶ ಏನು? ಅದರ ಹಿನ್ನೆಲೆ, ವಾಸ್ತವಿಕತೆ ಏನು? ಮುಂದಿನ ಭಾಗದಲ್ಲಿ]