300 ವರ್ಷ ಹಳೆಯ ಎರಡು ಮಸೀದಿ ಮೇಲೆ ಕಣ್ಣಿಟ್ಟ ಸೇವ್ ಫೌಂಡೇಶನ್: ಕಾನೂನು ಹೋರಾಟಕ್ಕಿಳಿದ ಜಮಾಅತೆ ಇಸ್ಲಾಮಿ ಹಿಂದ್

0
318

ಸನ್ಮಾರ್ಗ ವಾರ್ತೆ

ದೆಹಲಿಯ ರೈಲ್ವೆ ಸ್ಟೇಷನ್ ನ ಹತ್ತಿರ ಮತ್ತು ಪಹಾರ್ ಗಂಜ್ ಡಿವಿಜನಲ್ ರೈಲ್ವೆ ಮ್ಯಾನೇಜರ್ ಕಚೇರಿ ಹತ್ತಿರ ಇರುವ ಎರಡು ಮಸೀದಿಗಳನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದ್ದು ಮುಂದಿನ ಡಿಸೆಂಬರ್ ತಿಂಗಳಲ್ಲಿ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಕೋರ್ಟ್ ಹೇಳಿದೆ.

ಇಲ್ಲಿನ ಮಸ್ಜಿದ್ ಗರೀಬ್ ಷಾ ಬಹಳ ಪ್ರಮುಖ ಮತ್ತು ಪರಿಚಿತ ಮಸೀದಿಯಾಗಿದ್ದು ಸೇವ್ ಇಂಡಿಯಾ ಫೌಂಡೇಶನ್ ಎಂಬ ಹಿಂದೂ ತೀವ್ರವಾದಿ ಸಂಘಟನೆ ಈ ಅರ್ಜಿ ಸಲ್ಲಿಸಿದೆ.

ಎರಡು ಮಸೀದಿಗಳು ದೆಹಲಿ ವಕ್ಫ್ ಬೋರ್ಡ್ ನ ಅಧೀನದಲ್ಲಿವೆ. ಆದರೆ ಇದು ಈ ದೂರುದಾರರ ಸಂಚಾಗಿದ್ದು ಈ ಎರಡೂ ಮಸೀದಿಗಳು ರೈಲ್ವೆ ಇಲಾಖೆಯ ಅದೀನದಲ್ಲಿದ್ದು ಅದನ್ನು ತೆರವುಗೊಳಿಸುವಂತೆ ಕೋರ್ಟ್ ನಿಂದ ಆದೇಶ ತರುವುದು ಅವರ ಉದ್ದೇಶ ಎಂದು ಜಮಾಅತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ಇನಾಮುರಹಮಾನ್ ಖಾನ್ ಹೇಳಿದ್ದಾರೆ. ವಖ್ಫ್ ವಿಷಯಗಳನ್ನು ನೋಡಿಕೊಳ್ಳುವ ಹೊಣೆಗಾರಿಕೆಯು ಇವರ ಮೇಲಿದೆ.

ಸೇವ್ ಇಂಡಿಯಾ ಫೌಂಡೇಶನ್ ತಪ್ಪು ದಾರಿಗೆಳೆಯುವ ಅರ್ಜಿ ಹಾಕಿದ್ದು ರೈಲ್ವೆ ಇಲಾಖೆಯನ್ನು ಮತ್ತು ರೈಲ್ವೆ ಸಚಿವಾಲಯವನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ಪ್ರತಿವಾದಿಗಳಾಗಿ ದಾಖಲು ಮಾಡಿದೆ. ನಿಜವಾಗಿ ರೈಲ್ವೆ ಇಲಾಖೆ ಮತ್ತು ರೈಲ್ವೆ ಸಚಿವಾಲಯಕ್ಕೆ ಇದರಲ್ಲಿ ಯಾವುದೇ ಪಾತ್ರ ಇಲ್ಲ. ಇದು ಸೇವ್ ಇಂಡಿಯಾ ಫೌಂಡೇಶನ್ ಮತ್ತು ವಖ್ಫ್ ಬೋರ್ಡ್ ನಡುವಿನ ವಿವಾದವಾಗಿದೆ ಮತ್ತು ಇದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಈನಾಮು ರಹಮಾನ್ ಖಾನ್ ಹೇಳಿದ್ದಾರೆ.

ಎರಡೂ ಮಸೀದಿಯನ್ನು ಕಾನೂನು ಬಾಹಿರವಾಗಿ ರೈಲ್ವೆ ಭೂಮಿಯಲ್ಲಿ ಸ್ಥಾಪಿಸಲಾಗಿದೆ ಎಂದು ಫೌಂಡೇಶನ್ ಹೇಳುತ್ತದೆ. ಆದರೆ ಇದು ವಖ್ಫ್ ಅಧೀನದಲ್ಲಿರುವ ಮಸೀದಿಗಳಾಗಿವೆ. 300 ವರ್ಷಗಳ ಹಿಂದಿನ ಮಸೀದಿಗಳು ಇವಾಗಿದ್ದು ದೆಹಲಿಯ ರೈಲ್ವೆ ನಿಲ್ದಾಣ ಸ್ಥಾಪನೆ ಆಗುವುದಕ್ಕಿಂತ ಎಷ್ಟೋ ವರ್ಷಗಳ ಮೊದಲು ಈ ಮಸೀದಿಗಳು ಅಸ್ತಿತ್ವಕ್ಕೆ ಬಂದಿವೆ ಎಂದವರು ಹೇಳಿದ್ದಾರೆ.