ಐಪಿಎಸ್ ಅಧಿಕಾರಿಯ ಫೋನ್ ಕದ್ದಾಲಿಕೆ: ಛತ್ತಿಸ್ಗಡ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟು

0
450

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ,ನ.5: ಹಿರಿಯ ಐಪಿಎಸ್ ಅಧಿಕಾರಿಯ ಫೋನ್ ಸೋರಿಕೆ ಮಾಡಿದ ಛತ್ತಿಸ್ಗಡ್ ಸರಕಾರವನ್ನು ಸುಪ್ರೀಂಕೋರ್ಟು ತೀಕ್ಷಣವಾಗಿ ತರಾಟೆಗೆತ್ತಿಕೊಂಡಿದ್ದು ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದೆ.
ಯಾರಿಗೂ ಇಲ್ಲಿ ಖಾಸಗಿತನವಿಲ್ಲವೇ ಎಂದು ಕೇಳಿದ ಕೋರ್ಟ್ ವ್ಯಕ್ತಿಯ ಖಾಸಗಿತನದಲ್ಲಿ ಕನ್ನ ಕೊರೆಯುವುದು ಸರಿಯಲ್ಲ ಎಂದು ಜಸ್ಟೀಸ್ ಅರುಣ್ ಮಿಶ್ರ, ಇಂದಿರಾ ಬ್ಯಾನರ್ಜಿ ಪೀಠ ಹೇಳಿದೆ.

ಫೋನ್ ಕದ್ದಾಲಿಕೆಗೆ ಯಾರು ಆದೇಶ ಹೊರಡಿಸಿದ್ದು. ಅದರ ಅಗತ್ಯ ಏನಿತ್ತು ಎಂದು ವಿವರವಾದ ಅಫಿದಾವಿತ್ ಸಲ್ಲಿಸಲು ಸರಕಾರಕ್ಕೆ ಕೋರ್ಟು ಆದೇಶಿಸಿದೆ. ಮುಖ್ಯಮಂತ್ರಿ ಭೂಪೇಶ ಬಘೇಲರ ಹೆಸರನ್ನು ವಿಷಯದಲ್ಲಿ ತಂದು ಘಟನೆಯನ್ನು ರಾಜಕೀಯಗೊಳಿಸಬೇಡಿ ಎಂದು ಅರ್ಜಿದಾರ ಐಪಿಎಸ್ ಅಧಿಕಾರಿ ಮುಖೇಶ್ ಗುಪ್ತರಿಗೆ ಕೋರ್ಟು ಹೇಳಿತು.

ಗುಪ್ತ ಮತ್ತು ಕುಟುಂಬದವರ ಫೋನ್ ಕದ್ದಾಲಿಕೆಯನ್ನು ಸರಕಾರ ನಿಲ್ಲಿಸಬೇಕೆಂದು ಕೋರ್ಟು ಅಕ್ಟೋಬರ್ 25ಕ್ಕೆ ಆದೇಶಿಸಿತ್ತು. ಗುಪ್ತರ ಬಂಧನಕ್ಕೆ ತಡೆಯಾಜ್ಞೆಯನ್ನೂ ನೀಡಿತ್ತು. ವಿದೇಶಿ ದೇಣಿಗೆ ನಿಯಂತ್ರಣ ಕಾನೂನು ಉಲ್ಲಂಘನೆ ಗುಪ್ತರ ವಿರುದ್ಧ ಕೇಸು ದಾಖಲಾಗಿದೆ.