ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.4: ರಾಜೀವ್ ಗಾಂಧಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪೇರರಿವಾಲನ್ ಬಿಡುಗಡೆಗೆ ತಮಿಳ್ನಾಡು ಸರಕಾರದ ಶಿಫಾರಸಿನಲ್ಲಿ ನಿರ್ಧಾರವನ್ನು ಮುಂದೂಡುತ್ತಿರುವ ರಾಜ್ಯಪಾಲರ ಕ್ರಮಕ್ಕೆ ಸುಪ್ರೀಂ ಕೋರ್ಟು ಅತೃಪ್ತಿ ಸೂಚಿಸಿದೆ.
ಸರಕಾರದ ಶಿಫಾರಸು ಪ್ರಕಾರ ಬಿಡುಗಡೆಗೆ ಆಗ್ರಹಿಸಿ ಪೇರರಿವಾಲನ್ ಸಲ್ಲಿಸಿದ ಅರ್ಜಿ ಮಂಗಳವಾರ ವಿಚಾರಣೆಗೆತ್ತಿಕೊಂಡ ಸುಪ್ರೀಂ ಕೋರ್ಟು ಎರಡು ವರ್ಷವಾಗಿಯೂ ರಾಜ್ಯಪಾಲರ ತೀರ್ಮಾನವಾಗದಿರುವುದಕ್ಕೆ ಕೋರ್ಟು ಅತೃಪ್ತಿ ವ್ಯಕ್ತಪಡಿಸಿದೆ. ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಲಾಗದು. ಆದರೆ, ಶಿಫಾರಸ್ಸಿಗೆ ಎರಡು ವರ್ಷ ಆಗಿಯೂ ತೀರ್ಮಾನವಾಗಿಲ್ಲ ಎನ್ನುವುದರಲ್ಲಿ ಅತೃಪ್ತಿಯಿದೆ ಎಂದು ಜಸ್ಟಿಸ್ ಎಲ್.ನಾಗೇಶ್ವರ ರಾವ್ರನ್ನೊಳಗೊಂಡ ಪೀಠ ತಿಳಿಸಿದೆ.
ದಯಾ ಅರ್ಜಿಯಲ್ಲಿ ಸಮಯಕ್ಜೆ ಸರಿಯಾಗಿ ತೀರ್ಮಾನ ಕೈಗೊಳ್ಳಬೇಕೆಂದು 2014ರ ಶತ್ರುಘ್ನ ಚೌಹಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟು ನೀಡಿದ ಆದೇಶವನ್ನು ಜಸ್ಟಿಸ್ ರಾವ್ ಉದ್ಧರಿಸಿದರು. ರಾಜೀವ್ ಗಾಂಧಿ ಹತ್ಯೆಯಲ್ಲಿ ಸಂಚು ಪರಿಶೀಲಿಸಿದ ಸಿಬಿಐಯ ತನಿಖಾ ವರದಿ ಸಿಗದೆ ಕ್ರಮಕೈಗೊಳ್ಳಲಾಗದು ಎಂದು ರಾಜ್ಯಪಾಲರು ನಿಲುವು ಹೊಂದಿದ್ದಾರೆ. ಇದನ್ನು ತಮಿಳ್ನಾಡು ಅಡಿಶನಲ್ ಅಡ್ವಕೇಟ್ ಜನರಲ್ ಕೋರ್ಟಿಗೆ ತಿಳಿಸಿದರು.
1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಪೇರರಿವಾಲನ್ಗೆ ಮರಣದಂಡೆ ಶಿಕ್ಷೆ ತೀರ್ಪು ನೀಡಲಾಗಿತ್ತು. 2014ರಲ್ಲಿ ಪೇರರಿವಾಲನ್ ಸಹಿತ ಆರೋಪಿಗಳ ಶಿಕ್ಷೆಯನ್ನು ಸುಪ್ರೀಂಕೋರ್ಟು ಜೀವಾವಧಿ ಶಿಕ್ಷೆಗಿಳಿಸಿತ್ತು. 2018ರಲ್ಲಿ ಈತನ ಸಹಿತ ಆರು ಮಂದಿಯ ಬಿಡುಗಡೆಗೆ ತಮಿಳ್ನಾಡು ಸರಕಾರ ತೀರ್ಮಾನಿಸಿತ್ತು. ಪ್ರಕರಣ ನವೆಂಬರ್ 23ಕ್ಕೆ ಪುನಃ ವಿಚಾರಣೆಗೆ ಬರಲಿದೆ.












