ಹಾಥರಸ್: ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮ ಕೈಗೊಂಡಿಲ್ಲವೇಕೆ?- ಯುಪಿ ಸರಕಾರಕ್ಕೆ ಹೈಕೋರ್ಟ್ ಸವಾಲು

0
467

ಸನ್ಮಾರ್ಗ ವಾರ್ತೆ

ಲಕ್ನೋ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ದಲಿತ ಯುವತಿಯ ಅಂತ್ಯಸಂಸ್ಕಾರವನ್ನು ಹೆತ್ತವರ ಅನುಮತಿಯಿಲ್ಲದೆ ದಹಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಯು.ಪಿ ಸರಕಾರವನ್ನು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದೆ.

ಈ ವಿಚಾರದಲ್ಲಿ ನವೆಂಬರ್ 25ರೊಳಗಾಗಿ ತೀರ್ಮಾನ ತಿಳಿಸುತ್ತೇವೆ ಎಂದು ಉತ್ತರ ಪ್ರದೇಶ ಸರಕಾರ ಉತ್ತರಿಸಿದೆ. ಹಾಥರಸ್ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸುವ ವೇಳೆಗೆ ಹೈಕೋರ್ಟ್ ಈ ಪ್ರಶ್ನೆ ಸರಕಾರದ ಮುಂದಿಟ್ಟಿದೆ.

ಪ್ರಕರಣದ ತನಿಖೆಯ ವಿವರಗಳನ್ನು ಮುಂದಿನ ಬಾರಿ ವ್ಯಕ್ತಪಡಿಸಬೇಕೆಂದು ನ್ಯಾಯಾಲಯದ ಲಕ್ನೋ ಪೀಠ ಸಿ.ಬಿ.ಐಯೊಂದಿಗೆ ವಿನಂತಿಸಿದೆ. ಸುಪ್ರೀಂ ಕೋರ್ಟ್‌ ಮೇಲ್ನೋಟದ ನಿರ್ದೇಶನದೊಂದಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹಾಥರಸ್ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಯುವತಿ ಕಳೆದ ಸೆಪ್ಟೆಂಬರ್ 29ರಂದು ರಾತ್ರಿ ದೆಹಲಿಯ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಳು.

ಅದೇ ದಿನ ಮಧ್ಯರಾತ್ರಿ ಮೃತದೇಹ ಯುವತಿಯ ಗ್ರಾಮಕ್ಕೆ ತಲುಪಿಸಿ ಕುಟುಂಬದ ವಿರೋಧವನ್ನೂ ಕಡೆಗಣಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತದೇಹ ಸಂಸ್ಕರಿಸಲು ಜಿಲ್ಲಾ‌ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅನುಮತಿ ನೀಡಿದ್ದರು. ಪ್ರವೀಣ್ ಕುಮಾರ್‌ನನ್ನು ತನ್ನ ಸ್ಥಾನದಲ್ಲಿರಿಸಿ ತನಿಖೆ ನಡೆಸುವುದು ಸೂಕ್ತವಲ್ಲವೆಂದು ನ್ಯಾಯಾಲಯ ಈ ಹಿಂದೆಯೇ ಸರಕಾರಕ್ಕೆ ಸೂಚಿಸಿತ್ತು.

ಆದರೆ, ಪ್ರವೀಣ್ ಕುಮಾರ್‌ರನ್ನು ವರ್ಗಾವಣೆಗೊಳಿಸಲು ಸರಕಾರ ತಯಾರಿರಲಿಲ್ಲ. ಈ ಕುರಿತು ಅಲಹಾಬಾದ್ ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಹಿಂದೆ ಪ್ರಕರಣದ ತನಿಖೆಯನ್ನು ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದ ಎಸ್.ಪಿಯನ್ನು ರಾಜ್ಯ ಸರಕಾರ ಅಮಾನತುಗೊಳಿಸಿತ್ತು.