ಕರ್ತವ್ಯ ಮರೆಯಬಾರದ ವಿದ್ವಾಂಸರು; ಅಬೂ ಹನೀಫಾ, ಸುಫಿಯಾನುಸ್ಸೂರಿ, ಇಮಾಮ್ ಹಂಬಲ್‌ರ ಇತಿಹಾಸ ಗೊತ್ತೇ?

0
144

ಸನ್ಮಾರ್ಗ ವಾರ್ತೆ

✍️ ಪಿ.ಕೆ. ಜಮಾಲ್

ಧಾರ್ಮಿಕ ವಿದ್ವಾಂಸರಿಗೆ ಸಮುದಾಯಕ್ಕೆ ನೇತೃತ್ವ ನೀಡುವ ಹೊಣೆಗಾರಿಕೆಯಿದೆ. ಪ್ರವಾದಿಯವರಿಗೆ(ಸ) ವಹಿಸಲ್ಪಟ್ಟ ಜವಾಬ್ದಾರಿಯನ್ನು ಮುಂದುವರೆಸುವ ಹೊಣೆಯು ಹೆಚ್ಚಾಗಿ ಅಂತಹವರ ಮೇಲೆಯಿದೆ. ಅವರು ಸಮುದಾಯಕ್ಕೆ ಮಾರ್ಗದರ್ಶನ ನೀಡಬೇಕಾದವರು.

ವಿದ್ವಾಂಸರ ಸ್ಥಾನಮಾನದ ಬಗ್ಗೆ ಹೇಳುತ್ತಾ ಪ್ರವಾದಿಯವರು(ಸ) ಹೇಳಿರುವರು: “ನಿಜವಾಗಿಯೂ ಪಂಡಿತರು ಪ್ರವಾದಿಗಳ  ವಾರೀಸುದಾರರಾಗಿದ್ದಾರೆ. ಪ್ರವಾದಿಗಳು ತಮ್ಮ ವಾರೀಸುದಾರರಿಗೆ ದಿನಾರ್ ದಿರ್ಹಮ್ ಅನ್ನು ಬಿಟ್ಟು ಹೋಗಿಲ್ಲ. ಅವರು ತಮ್ಮ ಉತ್ತರಾಧಿಕಾರಿಗಳಿಗೆ ಬಿಟ್ಟು ಹೋಗಿರುವುದು ಜ್ಞಾನವಾಗಿದೆ. ಅವನ್ನು ಸ್ವೀಕರಿಸಿದವರಿಗೆ ಅದೃಷ್ಟ ದೊರೆತಿದೆ” ಅಬೂದರ್ದಾ ಎಂದು ನಿವೇದಿಸಿದ್ದಾರೆ. (ಅಹ್ಮದ್‌ ವ ಅಸ್ವಹಾಬುಸ್ಸುನನ್)

“ಅನಂತರ ನಾವು ನಮ್ಮ ದಾಸರಲ್ಲಿ ಆಯ್ದು ಕೊಂಡವರನ್ನು ಈ ಗ್ರಂಥದ ಉತ್ತರಾಧಿಕಾರಿಗಳಾಗಿ ಮಾಡಿದೆವು” (ಫಾತಿರ್- 32) ಎಂಬ ಸೂಕ್ತದ ವಿವರಣೆಯಾಗಿ ಈ ಪ್ರವಾದಿ ವಚನವನ್ನು ಉಲ್ಲೇಖಿಸಲಾಗಿದೆ.

ಪ್ರವಾದಿಗಳು ತಮ್ಮ ಜೀವನ ಕಾಲದಲ್ಲಿ ತಮ್ಮ ಜವಾಬ್ದಾರಿಗಳನ್ನು ಸುಂದರವಾಗಿ ನಿರ್ವಹಿಸಿದ್ದಾರೆ. ಪ್ರವಾದಿಗಳ ಕಾಲಾನಂತರ  ವಿದ್ವಾಂಸರು ಧರ್ಮ ಮತ್ತು ಶರೀಅತ್‌ನ ಧ್ವಜವಾಹಕರಾಗಿದ್ದಾರೆ. ಹೊಣೆಗಾರಿಕೆಯ ನಿರ್ವಹಣೆ ಸುಲಭದ ಕೆಲಸವಲ್ಲ. ಅಪಾಯಗಳು ಮತ್ತು ಬೆದರಿಕೆಗಳ ಕಠಿಣ ಹಾದಿಗಳನ್ನು ವಿದ್ವಾಂಸರು ದಾಟಬೇಕಾಗುತ್ತದೆ. ದೇವನ ಅನೇಕ ಕಾನೂನುಗಳು ಅಧಿಕಾರಿ ವರ್ಗಕ್ಕೆ ಅರೋಚಕವಾಗಿರುತ್ತದೆ. ತಮಗೆ ಹಿತದಲ್ಲದ ಚಟುವಟಿಕೆಗಳಲ್ಲಿ ತೊಡಗುವವರನ್ನು ಅಧಿಕಾರದ ಬಲದಿಂದ ಹತ್ತಿಕ್ಕಲು ಶ್ರಮಿಸುವುದು ಸ್ವಾಭಾವಿಕ. ಅಂತಹ ಸಂದರ್ಭಗಳಲ್ಲಿ ನಮ್ಮ ನಿಲುವು ಹೇಗಿರಬೇಕು ಎಂಬುದರ ಕುರಿತು ಪವಿತ್ರ ಕುರ್‌ಆನ್ ಬೆಳಕು ಚೆಲ್ಲುತ್ತದೆ- “ನೀವು  ಜನರನ್ನು ಭಯ ಪಡಬೇಡಿರಿ ಮತ್ತು ನನ್ನನ್ನು ಭಯಪಡಿರಿ. ನನ್ನ ಸೂಕ್ತಗಳನ್ನು ಅಲ್ಪ ಪ್ರತಿಫಲ ಪಡೆದು ಮಾರಾಟ ಮಾಡುವುದನ್ನು  ಬಿಟ್ಟು ಬಿಡಿ.” (ಅಲ್‌ ಮಾಇದಃ 44)

ತಮ್ಮ ಭೌತಿಕ ಹಿತಾಸಕ್ತಿಯನ್ನು ರಕ್ಷಿಸಲು ದೇವನ ಸೂಕ್ತಗಳನ್ನು ಮಾರಾಟ ಮಾಡಬಾರದೆಂಬ ಕಟ್ಟುನಿಟ್ಟಿನ ಸೂಚನೆಯು ಅಂತಹ  ನಿಲುವು ತಳೆಯುವ ಮುಸ್ಲಿಮ್ ಸಮುದಾಯಕ್ಕೆ ಅನ್ವಯಿಸುತ್ತದೆ. ಹಿಂದಿನ ಗ್ರಂಥದವರಿಗೆ ನೀಡಿರುವ ಆದೇಶವನ್ನು ಕುರ್‌ಆನ್ ವಿವರಿಸುತ್ತದೆ. ಮಾತ್ರವಲ್ಲ ದೇವನ ಆಜ್ಞೆಗಳಿಗೆ ಬೆಲೆ ನೀಡದ ಆ ಸಮೂಹದ ಅಹಂಕಾರ ಮನೋಭಾವವನ್ನು ಕುರ್‌ಆನ್ ಬಹಿರಂಗಪಡಿಸುತ್ತದೆ:

“ಓ ಗ್ರಂಥದವರೇ, ನೀವು ಗ್ರಂಥದ ಬೋಧನೆಗಳನ್ನು ಜನರಿಗೆ ಪ್ರಸಾರ ಮಾಡಬೇಕಾದೀತು ಮತ್ತು ಅವುಗಳನ್ನು ಅಡಗಿಸಬಾರದು  ಎಂಬ ಕರಾರನ್ನು ಪಡೆದ ಸಂದರ್ಭವನ್ನು ಅವರಿಗೆ ನೆನಪಿಸಿಕೊಡಿರಿ. ಆದರೆ ಅವರು ಗ್ರಂಥವನ್ನು ಕಡೆಗಣಿಸಿದರು ಮತ್ತು ಅದನ್ನು ಅಲ್ಪ  ಬೆಲೆಗೆ ಮಾರಿದರು. ಇವರೆಂತಹ ಕೆಟ್ಟ ವ್ಯವಹಾರ ಮಾಡುತ್ತಿದ್ದಾರೆ (ಅಲೆ ಇಮ್ರಾನ್: 187)!”

“ನಾವು ಅವತೀರ್ಣಗೊಳಿಸಿದ ಸುವ್ಯಕ್ತ  ದೃಷ್ಟಾಂತಗಳನ್ನೂ, ಮಾರ್ಗದರ್ಶನಗಳನ್ನೂ-ನಾವು ಅವುಗಳನ್ನು ಸಮಸ್ತ ಮಾನವರಿಗಾಗಿ ನಮ್ಮ ಗ್ರಂಥದಲ್ಲಿ ವಿವರಿಸಿದ ಬಳಿಕವೂ-  ಯಾರು ಮರೆಮಾಚುತ್ತಾರೋ, ಅವರನ್ನು ಅಲ್ಲಾಹನು ಶಪಿಸುತ್ತಾನೆ ಮತ್ತು ಶಪಿಸುವವರೆಲ್ಲರೂ ಅವರನ್ನು ಅಭಿಶಪಿಸುತ್ತಾರೆ.”  (ಅಲ್‌ಬಕರ- 159)

ಹಿಂದಿನ ಗ್ರಂಥದವರ ಹೀನ ಪ್ರವೃತ್ತಿಯನ್ನು ಸೂಕ್ತದಲ್ಲಿ ಪ್ರತಿಪಾದಿಸಲಾಗಿದೆಯಾದರೂ ಈ ಸೂಕ್ತವು ಪ್ರಸ್ತುತ  ಎಲ್ಲರಿಗೂ ಅನ್ವಯವಾಗುತ್ತದೆಂದು ಇಮಾಮ್ ಇಬ್ನು ಜರೀರ್ ಅತ್ವಬರಿ ಸ್ಪಷ್ಟಪಡಿಸುತ್ತಾರೆ. ದೇವನ ಸೂಕ್ತವನ್ನು ಅಡಗಿಸಿಡುವ  ಎಲ್ಲರಿಗೂ ಇದು ಅನ್ವಯಿಸುತ್ತದೆಂದು ತಫ್ಸೀರುಲ್ ಮನಾರ್ ಕೂಡಾ ಹೇಳುತ್ತದೆ.

ಆಡಳಿತಗಾರರ ವಿರುದ್ಧ ದಿಟ್ಟ ನಿಲುವು ತಳೆದ ಪ್ರಾಚೀನ ವಿದ್ವಾಂಸರು ಮತ್ತು ಇಮಾಮರ ಕುರಿತು ನಾವು ತಿಳಿದುಕೊಳ್ಳಬೇಕು.

ಇಮಾಮ್ ಅಬೂ ಹನೀಫ
ಅಬೂ ಜಅï‌ಫರಲ್ ಮನ್ಸೂರ್ ಆಳ್ವಿಕೆಯ ಕಾಲದಲ್ಲಿ ಮುಖ್ಯ ನ್ಯಾಯಾಧೀಶರ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ ಇಮಾಮ್  ಅಬೂ ಹನೀಫರನ್ನು ತೀವ್ರ ಶಿಕ್ಷೆಗೆ ಒಳಪಡಿಸಲಾಯಿತು. ಮನ್ಸೂರ್‌ಗೆ ಅವರು ನೀಡಿದ ಉತ್ತರ ಹೀಗಿದೆ; “ನಿಮ್ಮ ಮತ್ತು ನಿಮ್ಮ ಪುತ್ರರ  ಮತ್ತು ನಿಮ್ಮ ಸೇನಾ ಮುಖ್ಯಸ್ಥರ ವಿರುದ್ಧ ತೀರ್ಪು ನೀಡಬಲ್ಲ ಸಾಮರ್ಥ್ಯವಿರುವವರು ಈ ಸ್ಥಾನಕ್ಕೆ ಹೆಚ್ಚು ಯೋಗ್ಯ.”

ಮಾಲಿಕಬ್ನು ಅನಸ್
ತನ್ನ ಅಧಿಕಾರಕ್ಕೆ ಅಪಾಯವನ್ನುಂಟು ಮಾಡುವ ಹದೀಸ್‌ಗಳನ್ನು ಉಲ್ಲೇಖಿಸುವುದನ್ನು ಆಡಳಿತಾಧಿಕಾರಿಯಾದ ಮನ್ಸೂರ್ ಅಹ್ಮದ್  ನಿಷೇಧಿಸಿದನು. ತೀವ್ರ ಚಿತ್ರಹಿಂಸೆ ಮತ್ತು ಅವಮಾನಕ್ಕೆ ಒಳಗಾದರೂ ಅವರು ಶರಣಾಗಲಿಲ್ಲ. ಹದೀಸನ್ನು ಉಲ್ಲೇಖಿಸಿದರು. ಅದು ಮನ್ಸೂರ್‌ನನ್ನು ಕೋಪಗೊಳಿಸಿತು.

ಸುಫ್‌ಯಾನುಸ್ಸೂರಿ
ವೈಯಕ್ತಿಕವಾದ ಅಗತ್ಯಗಳನ್ನು ಮುಂದಿಟ್ಟರೆ ಅದನ್ನು ಪೂರೈಸುತ್ತೇನೆಂದು ಹೇಳಿದ ಆಡಳಿತಗಾರ ಮನ್ಸೂರ್‌ನ ವಾಗ್ದಾನವನ್ನು ಸುಫ್‌ಯಾನುಸ್ಸೂರಿ ನಿರಾಕರಿಸಿದರು. ನಂತರ ಹೀಗೆ ಬರೆದರು: “ಮನ್ಸೂರ್, ನಿಮ್ಮ ಅಕ್ರಮ, ಅನ್ಯಾಯವನ್ನು ಕೊನೆಗೊಳಿಸಬೇಕು. ಜನರ ಸೊತ್ತುಗಳನ್ನು ಕಬಳಿಸಿ ನೀವು ಸುಖ ಜೀವನ ನಡೆಸುತ್ತಿರುವಿರಲ್ಲವೇ?” ಮಹ್ದಿಯೊಂದಿಗೂ ಸುಫ್‌ಯಾನುಸ್ಸೂರಿಯವರ ನಿಲುವು ಇದೇ ಆಗಿತ್ತು. ದೇಶದಿಂದ ಅವರನ್ನು ಹೊರ ಹಾಕಲಾಯಿತು. ತನ್ನ ಈ ದೃಢ ನಿಲುವಿನ ಕುರಿತು ಸುಫ್‌ಯಾನುಸ್ಸೂರಿಯವರು ಹೇಳುತ್ತಾರೆ: “ವಿದ್ವಾಂಸರು ಧರ್ಮದ ವೈದ್ಯರಾಗಿದ್ದಾರೆ. ದಿರ್ಹಮ್ ಎಂಬುದು ಧರ್ಮವನ್ನು ಕಾಡುವ ರೋಗ. ವೈದ್ಯರು ರೋಗವನ್ನು  ತಮ್ಮಲ್ಲಿಗೆ ತಂದುಕೊಂಡರೆ ರೋಗಿಗಳಾದ ಇತರರನ್ನು ಚಿಕಿತ್ಸೆ ಮಾಡಲು ಆತನಿಗೆ ಯಾವಾಗ ಸಮಯ ದೊರೆತೀತು?

ಅಹ್ಮದುಬ್ನು ಹಂಬಲ್
ಮಅï‌ಮೂನ್ ವಾಸಿಖ್ ಮುಅï‌ತಸಿಂ ಎಂಬ ಆಡಳಿತಗಾರನ ಕುರ್‌ಆನಿನ ಕುರಿತ ತಪ್ಪಾದ ನಂಬಿಕೆಗಳಿಗೆ ಬೆಂಬಲ ನೀಡದ್ದಕ್ಕೆ ಇಮಾಮ್  ಹಂಬಲ್‌ರು ಹಲವು ವರ್ಷ ಜೈಲಿನಲ್ಲಿರಬೇಕಾಯಿತು. ಸಾವಿರ ಚಾಟಿಯೇಟು ಅವರಿಗೆ ನೀಡಿದ ಶಿಕ್ಷೆಯಾಗಿತ್ತು. ಶಿಕ್ಷಕ ವೃತ್ತಿಯಿಂದ ಅವರನ್ನು ಅಮಾನತುಗೊಳಿಸಲಾಯಿತು. ಆದರೆ ಆಡಳಿತಾರರಿಗೆ ಅವರನ್ನು ಕೊಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಉಲಮಾಉದ್ದುನ್ಯಾ, `ಭ್ರಷ್ಟ ವಿದ್ವಾಂಸರು; ಸುಲ್ತಾನರ ವಿದ್ವಾಂಸರು, ಆಸ್ಥಾನ ವಿದ್ವಾಂಸರು ಎಂದು ಗುರುತಿಸಲ್ಪಡುವ ವಿದ್ವಾಂಸರನ್ನು  ಉಲ್ಲೇಖಿಸಿ, ಜನಸಾಮಾನ್ಯರು ಅವರು ಮರಳು ಮಾತಿಗೆ ಬಲಿ ಬೀಳಬಾರದೆಂದು ಇಮಾಮ್ ಗಝ್ಝಾಲಿ ಜನರನ್ನು ಜಾಗೃತಗೊಳಿಸಿದ್ದರು. ಇದು ಆಡಳಿತಗಾರರು ಮತ್ತು ವಿದ್ವಾಂಸರ ನಡುವಿನ ಸಂಬಂಧವನ್ನು ಕಡಿದುಕೊಳ್ಳುವ ಕರೆಯಲ್ಲ. ಕುರ್‌ಆನ್  ಮತ್ತು ಸುನ್ನತ್ ಅನ್ನು ಅಧ್ಯಯನ ಮಾಡಿದವರು. ಎಡೆಬಿಡಂಗಿತನವನ್ನು ತೋರಿಸಬಾರದು ಎಂಬುದು ಉದ್ದೇಶವಾಗಿತ್ತು.

ಪ್ರವಾದಿ(ಸ)ರು  ಹೇಳಿದರು: “ಈ ಧರ್ಮದಲ್ಲಿ ಅಲ್ಲಾಹನು ತಲೆಮಾರುಗಳನ್ನು ಪುನರುತ್ಥಾನದ ದಿನದವರೆಗೂ ಸೃಷ್ಟಿಸುತ್ತಲೇ ಇರುತ್ತಾನೆ. ಅಲ್ಲಾಹನು ತನಗೆ ವಿಧೇಯತೆಯ ಮಾರ್ಗದಲ್ಲಿ ಅವರನ್ನು ಬಳಸುತ್ತಲೇ ಇರುತ್ತಾನೆ.”

ಅಬೂಹುರೈರ(ರ)ರಿಂದ ವರದಿ: ಪ್ರವಾದಿ(ಸ)ರು ಹೇಳಿದರು: “ಆಡಳಿತಗಾರರ ಬಾಗಿಲಿಗೆ ಹೋಗುವವರು ವಿಪತ್ತುಗಳಿಂದ  ಪರೀಕ್ಷಿಸಲ್ಪಡುತ್ತಾರೆ. ಫಿತ್ನಗಳಿಗೆ ಒಳಗಾಗುತ್ತಾರೆ. ಆಡಳಿತಗಾರರಿಗೆ ನಿಕಟವಾದಂತೆ ಅಲ್ಲಾಹನಿಂದ ದೂರವಾಗುತ್ತಾರೆ.” (ಅಬೂದಾವೂದ್, ಬೈಹಕಿ)

ಅಬೂ ಹುರೈರರಿಂದ ವರದಿ. ಪ್ರವಾದಿ(ಸ) ಹೇಳಿದರು: “ನರಕದಲ್ಲಿ ದಿನಕ್ಕೆ 70 ಬಾರಿಯಾದರೂ ಅಲ್ಲಾಹನಿಂದ ಅಭಯ ಕೇಳಬೇಕಾದ ಒಂದು ಸ್ಥಳವಿದೆ. ಪ್ರದರ್ಶನದ ಹಂಬಲದಿಂದ ಕೆಲಸ ನಿರ್ವಹಿಸುವ ಕುರ್‌ಆನ್‌ನ ವಾಹಕರಿಗೆ ಸಿದ್ಧಪಡಿಸಿದ ಸ್ಥಳವದು. ಅಲ್ಲಾಹನಿಗೆ ಸೃಷ್ಟಿಗಳಲ್ಲಿ ಅತ್ಯಂತ ದ್ವೇಷವು ಅಧಿಕಾರಿಗಳನ್ನು ಮೆಚ್ಚಿಸುವ ವಿದ್ವಾಂಸರೊಂದಿಗಾಗಿದೆ.” (ಇಬ್ನು ಅದಿಯ್ಯ್)

ಇಬ್ನು ಅಬ್ಬಾಸ್(ರ) ನಿರೂಪಿಸಿದ್ದಾರೆ. ಪ್ರವಾದಿ(ಸ)ರು ಹೇಳಿದರು, “ನನ್ನ ಸಮುದಾಯದ ಕೆಲವರು ಧರ್ಮದ ವಿಷಯದಲ್ಲಿ  ಪಾರಂಗತರಾಗುತ್ತಾರೆ. ಅವರು ಕುರ್‌ಆನ್ ಪಾರಾಯಣ ಮಾಡುತ್ತಾರೆ. ನಾವು ಆಡಳಿತಗಾರರನ್ನು ನಮ್ಮ ಲೌಕಿಕ ಕಾರಣಕ್ಕೆ ಸಂಪರ್ಕಿಸುತ್ತೇವೆ ಮತ್ತು ನಮ್ಮ ಧರ್ಮದ ವಿಷಯದಲ್ಲಿ ಅವರಿಂದ ದೂರವಿರುತ್ತೇವೆ ಎಂದು ವಾದಿಸುವವರಿದ್ದಾರೆ. ಆದರೆ ಹಾಗೆ  ನಡೆಯಲು ಸಾಧ್ಯವಿಲ್ಲ. ಮುಳ್ಳಿನ ಮರದಿಂದ ಮುಳ್ಳಲ್ಲದೆ ಬೇರೇನು ಸಿಗಬಹುದು? ಅದೇ ರೀತಿ ಆಡಳಿತಗಾರರೊಂದಿಗಿನ ನಿಕಟತೆಯು ಅಪರಾಧ ಮತ್ತು ಲೋಪವನ್ನು ವರ್ಧೀಸುತ್ತದೆ. (ಇಬ್ನು ಮಾಜಃ)

ಪ್ರವಾದಿಯವರು(ಸ) ಹೇಳಿದರು: “ನನ್ನ ಕಾಲಾನಂತರ ಕೆಲವು ಆಡಳಿತಗಾರರು ಇರುತ್ತಾರೆ. ಅವರ ಬಳಿ ಹೋಗಿ ಸುಳ್ಳನ್ನೆಲ್ಲಾ  ಸತ್ಯವೆಂದು ತಿಳಿದುಕೊಂಡು ಅವರ ಅಕ್ರಮಗಳಿಗೆ ಬೆಂಬಲ ನೀಡಿ ಸಹಾಯ ಮಾಡುವವರು ನಮ್ಮವನಲ್ಲ. ನಾನು ಅವರಿಗೆ ಸೇರಿದವನೂ ಅಲ್ಲ. ಅವರು ಹೌಲುಲ್ ಕೌಸರ್‌ನ ಬಳಿಯೂ ತಲುಪುವುದಿಲ್ಲ. ಅಂತಹ ಆಡಳಿತಗಾರರ ಬಳಿಗೆ ಹೋಗದೆ, ಅವರ ಸುಳ್ಳುಗಳನ್ನು ನಿರಾಕರಿಸಿ, ಅವರ ಅಕ್ರಮಗಳನ್ನೂ ಬೆಂಬಲಿಸದೆ ಇರುವ ವಿದ್ವಾಂಸರು ನನಗೆ ಸೇರಿದವರು. ನಾನು ಅವರಿಗೆ ಸೇರಿದವನು. ಅವರು ನನ್ನೊಂದಿಗೆ ಹೌಲುಲ್ ಕೌಸರ್ ಪ್ರವೇಶಿಸುತ್ತಾರೆ.” (ತಿರ್ಮಿದಿ, ಹಾಕಿಮ್, ನಸಾಈ)

ಅನಸ್ ಇಬ್ನು ಮಾಲಿಕ್‌ರಿಂದ ವರದಿಯಾಗಿದೆ: ಪ್ರವಾದಿವರ್ಯರು(ಸ) ಹೇಳಿದರು, “ವಿದ್ವಾಂಸರು ಅಲ್ಲಾಹನ ದಾಸರ ವ್ಯವಹಾರಗಳನ್ನು ನೋಡಿಕೊಳ್ಳುವ ಪ್ರವಾದಿಗಳ ಕಾರ್ಯದರ್ಶಿಗಳು. ಅವರು ಆಡಳಿತಗಾರ ರೊಂದಿಗೆ ಬೆರೆತು ತಮ್ಮ ಕರ್ತವ್ಯವನ್ನು ಮರೆಯಬಾರದು. ಹಾಗೆ ಮಾಡಿದರೆ ಅವರು ಪ್ರವಾದಿಗಳನ್ನು ವಂಚಿಸಿದಂತಾಗುತ್ತದೆ. ಆದ್ದರಿಂದ ಅಲ್ಲಾಹನನ್ನು ಭಯಪಡಿರಿ. ಅವರಿಂದ ದೂರವಿರಿ.”