ಕಾಂಗ್ರೆಸ್ ಗ್ಯಾರಂಟಿಯನ್ನು ಮತ್ತೊಮ್ಮೆ ಬಿಟ್ಟಿ ಭಾಗ್ಯ ಎಂದ ಪ್ರಹ್ಲಾದ್ ಜೋಶಿ

0
344

ಸನ್ಮಾರ್ಗ ವಾರ್ತೆ

ಬಡವರಿಗೆ ಆರ್ಥಿಕವಾಗಿ ನೆರವಾಗಲೆಂದು ಕಾಂಗ್ರೆಸ್‌ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಸಚಿವ ಪ್ರಲ್ಹಾದ್‌ ಜೋಶಿ ಮತ್ತೊಮ್ಮೆ ಹಂಗಿಸಿದ್ದಾರೆ. ಕರ್ನಾಟಕವೂ ಶ್ರೀಲಂಕಾ ಮತ್ತು ಕೇರಳ ಕಂಡಂತಹ ದುಃಸ್ಥಿತಿಗೆ ತಲುಪಲಿದೆ ಎಂದಿದ್ದಾರೆ.

ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕರೆದಿದ್ದಾರೆ.

“ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ನಾಡಿನ ಖಜಾನೆಯನ್ನು ಕಾಂಗ್ರೆಸ್ ಬರಿದು ಮಾಡುತ್ತಿದೆ. ಸ್ವಾತಂತ್ರ್ಯ ಬಂದ ಬಳಿಕ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ದೋಚುತ್ತಲೇ ಬಂದಿದೆ. ಈಗ ಭಾಗ್ಯದ ಹೆಸರಿನಲ್ಲಿ ಲೂಟಿ ಮಾಡುತ್ತಿದೆ” ಎಂದು ಹೇಳಿದ್ದಾರೆ.

“ದೇಶದ ನಾಗರಿಕರಿಗೆ ನಿಜವಾಗಿಯೂ ಬೇಕಾಗಿರುವುದು ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ. ಆದರೆ, ಇದಕ್ಕೆ ಪೂರಕ ಮೂಲ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಯಾವ ಯೋಜನೆಯೂ ಕಾಂಗ್ರೆಸ್ಸಿಗರಲ್ಲಿ ಇಲ್ಲ. ದೇಶದ ಅಭಿವೃದ್ಧಿಗಾಗಿ ಯಾವ ಯೋಚನೆ, ಯೋಜನೆಯೂ ಕಾಂಗ್ರೆಸ್ ಬಳಿ ಇಲ್ಲ. ಇಂಥವರ ಕೈಗೆ ಅಧಿಕಾರ ಹೋದರೆ ಜನರು ಅಧೋಗತಿ ತಲುಪುತ್ತಾರೆ” ಎಂದು ಟೀಕಿಸಿದ್ದಾರೆ.