ಸನ್ಮಾರ್ಗ ವಾರ್ತೆ
ಕೊಚ್ಚಿ: ಲಕ್ಷ ದ್ವೀಪದಲ್ಲಿ ಕೇಂದ್ರ ಸರಕಾರ ಇನ್ನಷ್ಟು ನಿಯಂತ್ರಣಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಶಾಲೆಗಳನ್ನು ಬಂದ್ ಮಾಡಿಸುತ್ತಿದೆ. ಏರ್ ಆಂಬುಲೆನ್ಸ್ ಖಾಸಗೀಕರಣಗೊಳಿಸಲು ತೀರ್ಮಾನಿಸಿದೆ. ಅಧ್ಯಾಪಕರು, ಸಿಬ್ಬಂದಿಗಳಿಲ್ಲ ಎಂದು ಶಾಲೆಗಳನ್ನು ಮುಚ್ಚಿಸಿ ಶಾಲೆಗಳ ವಿಲೀನ ಎಂದು ಹೇಳುತ್ತಿದೆ. ಈವರೆಗೆ ಹದಿನೈದು ಶಾಲೆಗಳನ್ನು ಬಂದ್ ಮಾಡಲಾಗಿದೆ. ಕಲ್ತಾನ್‍ನಲ್ಲಿ ನಾಲ್ಕು ಶಾಲೆಗಳಿಗೆ ಬೀಗ ಆಕಲಾಗಿದೆ. ಇತರ ಕೆಲವು ಶಾಲೆಗಳನ್ನು ಕೂಡ ಈ ರೀತಿ ಬಂದ್ ಮಾಡುವ ಯೋಜನೆ ಹಾಕಲಾಗಿದೆ ಎಂದು ದ್ವೀಪದಲ್ಲಿ ವಾಸಿಸುವರು ಹೇಳುತ್ತಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯಿರುವ ಪ್ರಫುಲ್ ಪಟೇಲ್ ಅಡ್ಮಿನಿಸ್ಟ್ರೇಟರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂತಹ ಅವಾಂತರಗಳು ಲಕ್ಷ ದ್ವೀಪದಲ್ಲಿ ನಡೆಯುತ್ತಿದೆ.
ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಲಕ್ಷದ್ವೀಪದಿಂದ ಕೊಚ್ಚಿಗೆ ರೋಗಿಗಳನ್ನು ಕರೆ ತರುವ ಏರ್ ಆಂಬುಲೆನ್ಸ್ ಗಳನ್ನು ಖಾಸಗೀಕರಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಭಾಗವಾಗಿ ಲಕ್ಷದ್ವೀಪ ಸರಕಾರ ಟೆಂಡರ್ ಕರೆದಿದೆ. ಈಗ ಎರಡು ಏರ್ ಆಂಬುಲೆನ್ಸ್ ಗಳು ಲಕ್ಷದ್ವೀಪದಿಂದ ಕೊಚ್ಚಿ ಮತ್ತು ಇತರ ಆಸ್ಪತ್ರೆಗಳಿಗೆ ಸರ್ವಿಸ್ ನಡೆಸುತ್ತಿದ್ದವು. ಇದನ್ನು ಇನ್ನು ಖಾಸಗಿ ಕಂಪನಿಗಳಿಗೆ ವಹಿಸಿ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಸೇವ್ ಲಕ್ಷ ದ್ವೀಪ್ ಅಭಿಯಾನವು ಸಾಮಾಜಿಕ ಜಲ ತಾಣಗಳಲ್ಲಿ ಆರಂಭಗೊಂಡಿದ್ದು, ಅಡ್ಮಿನಿಸ್ಟ್ರೇಟರ್ ಆಗಿರುವ ಪ್ರಫುಲ್ ಪಟೇಲ್ ರನ್ನು ಹಿಂದಕ್ಕೆ ಕರೆಸುವಂತೆ ರಾಷ್ಟ್ರಪತಿಯವರಿಗೆ ದ್ವೀಪದ ನಿವಾಸಿಗಳು ಪತ್ರ ಬರೆದಿದ್ದಾರೆ.












