ಹಿಜಾಬ್ ವಿವಾದದ ಬಗ್ಗೆ ಮೊದಲು ಮಾತುಕತೆ ನಡೆಸಿದ್ದೇ ನಾನು ಎಂದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ‌ಅದಿ

0
383

ಸನ್ಮಾರ್ಗ ವಾರ್ತೆ

ಮಂಗಳೂರು: ಸದ್ಯ ದೇಶಾದ್ಯಂತ ಚರ್ಚೆಯಲ್ಲಿರುವ ಹಾಗೂ ಕರ್ನಾಟಕ ಹೈ ಕೋರ್ಟ್ ನ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದರೂ ಹಿಜಾಬ್ ವಿವಾದ ದಿನಕ್ಕೊಂದು ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ವಿಚಾರಣೆಯ ಮೊದಲ ದಿನವೇ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದ ಬಳಿಕ ಹಲವಾರು ಗೊಂದಲ ಉಂಟು ಮಾಡಿದ್ದಂತೂ ಸತ್ಯ.

ಈಗ ಇದೇ ವಿವಾದಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ‌ಅದಿ, ಆರಂಭದಲ್ಲಿ ಹಿಜಾಬ್ ವಿವಾದ ಬಂದಾಗ ಮಾತಾಡಿದ್ದೇ ವಕ್ಫ್‌ ಮಂಡಳಿ. ಅಲ್ಲದೇ ನಾನು ಶಾಸಕ ರಘುಪತಿ ಭಟ್ ಜೊತೆಗೆ ಮಾತನಾಡಿದ್ದೇ. ಆರು ಮಂದಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಅವಕಾಶ ಕೊಡಿ ಎಂದು ನಾನೇ ಪ್ರಾಂಶುಪಾಲರಿಗೆ ಹೇಳಿದ್ದೆ. ಹೆಣ್ಮಕ್ಕಳಿಗೆ ನಾನು ಬುದ್ದಿಮಾತು ಕೂಡ ಹೇಳಿದ್ದೆ. ವಿದ್ಯಾಸಂಸ್ಥೆಗಳಲ್ಲಿ ಕೋಮುವಾದದ ಬಣ್ಣ ಕಾಣಿಸಿಕೊಂಡಿರುವುದು ದುರಂತ ಎಂದು ಹೇಳಿದ್ದಾರೆ.

ಸಾಮಾಜಿಕ ಶಾಂತಿ ಕದಡುವ ಶಕ್ತಿಗಳಿಗೆ ಶಿಕ್ಷೆ ನೀಡಬೇಕಾಗಿದೆ. ಇನ್ನು ಈ ವಿವಾದದ ಕುರಿತು ಶಿಕ್ಷಣ ಸಚಿವರ ಜೊತೆಗೆ ಮಾತನಾಡಿದ್ದೀನಿ. ಇದೊಂದು ಶರೀಯತ್ತ್ ವ್ಯವಸ್ಥೆ ಆಗಿದೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ನಾನು ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಹೇಳಿದ್ದೆ. ಆ ಹಕ್ಕನ್ನು ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೀನಿ. ನಾನು ವಕ್ಫ್ ಅಧ್ಯಕ್ಷನ ವ್ಯಾಪ್ತಿಯಲ್ಲಿ ಬರುವ ಅಧಿಕಾರವನ್ನು ಉಪಯೋಗಿಸಿಕೊಂಡು ಈ ವಿವಾದ ತಣಿಸಲು ಪ್ರಯತ್ನ ಮಾಡಿದ್ದೀನಿ. ಕೆಲವರು ನನ್ನ ಈ ಹಿಂದಿನ ಹೇಳಿಕೆಯನ್ನು ತಿರುಚಿ ವೈರಲ್ ಮಾಡ್ತಿದ್ದಾರೆ. ಅದಕ್ಕೆ ನಾನು ಉತ್ತರ ಕೊಡುತ್ತಾ ಕೂತರೆ ವಕ್ಫ್ ಕೆಲಸವನ್ನು ನನಗೆ ಮಾಡಲು ಆಗಲ್ಲ. ಸಾಮರಸ್ಯಕ್ಕೆ ಧಕ್ಕೆ ತರಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಫಿ ಸ‌ಅದಿ ಹೇಳಿದ್ದಾರೆ.

ಇದೇ ವೇಳೆ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮಾತನಾಡಿರುವ ಅವರು, ವಕ್ಫ್ ಆಸ್ತಿಯನ್ನು ಯಾರೇ ಕಬಳಿಕೆ ಮಾಡಲಿ, ಅಂತಹವರ ವಿರುದ್ಧ ನಾವು ಕಾನೂನು ಅಸ್ತ್ರ ಪ್ರಯೋಗ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ವಕ್ಫ್ ಆಸ್ತಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಸಿಗಬೇಕಾದದ್ದು ಎಂದು ಹೇಳಿದ್ದಾರೆ.