ಶಕ್ತಿ ಯೋಜನೆ : ಸಿಎಂ ಸಿದ್ದರಾಮಯ್ಯರಿಗೆ ‘ಫ್ರೀ ಬಸ್‌ ಟಿಕೆಟ್‌’ನ ವಿಶೇಷ ಹಾರ ಅರ್ಪಿಸಿದ ಕಾನೂನು ವಿದ್ಯಾರ್ಥಿನಿ!

0
732

ಸನ್ಮಾರ್ಗ ವಾರ್ತೆ

ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬರು ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್‌ಗಳಿಂದ ತಯಾರಿಸಿದ್ದ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾಳೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೇಯಸ್ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಅವರು ಫ್ರೀ ಟಿಕೆಟ್ ಹಾರವನ್ನು ಅರ್ಪಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಹಾರ ಅರ್ಪಿಸುತ್ತಾ ಜಯಶ್ರೀ ಅವರು, “ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲ ಫ್ರೀ ಟಿಕೆಟ್‌ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ. ನಿಮಗೆ ಅರ್ಪಿಸುವುದಕ್ಕೆ ತಿಂಗಳುಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇವತ್ತು ಅರಸೀಕೆರೆಗೆ ಬರ್ತಾ ಇದ್ದೀರಿ ಅಂತ ಗೊತ್ತಾಯ್ತು. ಒಂದೇ ಉಸಿರಲ್ಲಿ ಹಾರ ಹಿಡ್ಕೊಂಡು ಓಡಿ ಬಂದಿದ್ದೇನೆ” ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯತೆ ಅರ್ಪಿಸಿ ಆಶೀರ್ವಾದ ಪಡೆದುಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಷ: ಇದು ಈ ಚುನಾವಣೆಯ ವಿಜಯ ಮಾಲೆಯೂ ಇರಬಹುದೇನೋ? ಎಂದು ಹೇಳಿದ್ದಾರೆ.

‘ಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪ ಮಾಡುವ ದಾರಿ ತಪ್ಪಿದ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು’ ಎಂದು ಹಾರೈಸಿದೆ ಎಂದು ಸಿಎಮ್ ಹೇಳಿದರು.