ಲೋಕಸಭಾ ಚುನಾವಣೆ; ನಾಲ್ಕು ಕ್ಷೇತ್ರಗಳಲ್ಲಿ ವೆಲ್ಫೇರ್ ಪಾರ್ಟಿ ಸ್ಪರ್ಧೆ

0
253

ಸನ್ಮಾರ್ಗ ವಾರ್ತೆ

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಥವಾ ಡಬ್ಲ್ಯೂಪಿಐ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ಉಳಿದ 539 ಕ್ಷೇತ್ರಗಳಲ್ಲಿ ಇಂಡಿಯಾ ಕೂಟವನ್ನು ಬೆಂಬಲಿಸುವುದಾಗಿ ಘೋಷಿಸಿದೆ. ಪಶ್ಚಿಮ ಬಂಗಾಳ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಡಬ್ಲ್ಯೂಪಿಐ ಸ್ಪರ್ಧಿಸಲಿದೆ.

ಪಶ್ಚಿಮ ಬಂಗಾಳದ ಮುರುಷಿದಾಬಾದ್ ಮತ್ತು ಜಂಗಿಪುರ, ಮಹಾರಾಷ್ಟ್ರದ ಧುಲೆ ಹಾಗೂ ಉತ್ತರಪ್ರದೇಶದ ದೋಮರಿಯಗಂಜ್ ಕ್ಷೇತ್ರಗಳಲ್ಲಿ ಡಬ್ಲ್ಯೂಪಿಐ ಸ್ಪರ್ಧಿಸಲಿದೆ ಎಂದು ರಾಷ್ಟ್ರ ಅಧ್ಯಕ್ಷ ಡಾಕ್ಟರ್ ಎಸ್ ಕ್ಯೂಆರ್ ಇಲ್ಯಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ

ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಜಾತ್ಯತೀತ ಮತಗಳು ಒಡೆಯದಂತೆ ತಡೆಯುವ ಗುರಿಯೊಂದಿಗೆ ಪಾರ್ಟಿ ಈ ನಿರ್ಧಾರವನ್ನು ಮಾಡಿದೆ ಮತ್ತು ಅತ್ಯಂತ ಕಡಿಮೆ ಸಂಖ್ಯೆಯ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ನಿರ್ಧರಿಸಿದೆ ಎಂದವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ನೀಡಿದ್ದ ಆಶ್ವಾಸನೆಯನ್ನೆ ಇನ್ನೂ ಈಡೇರಿಸಿಲ್ಲ. ವಿದೇಶದಿಂದ ಕಪ್ಪು ಹಣವನ್ನು ತಂದಿಲ್ಲ. ಡಿಮೋನಿಟೈಸೇಷನ್ ಮತ್ತು ಜಿಎಸ್‌ಟಿಯಿಂದಾಗಿ ಜನರ ಬದುಕನ್ನು ಅವರು ಮೂರಾಬಟ್ಟೆ ಮಾಡಿದ್ದಾರೆ. ಅತ್ಯಂತ ಅಸಮರ್ಪಕವಾಗಿ ಕೋವಿಡ್ ನಿಭಾಯಿಸಿದ್ದಾರೆ. ಬೆಲೆ ಏರಿಕೆಯನ್ನು ತಡೆಯುವುದಕ್ಕೂ ಅವರಿಗೆ ಸಾಧ್ಯವಾಗಿಲ್ಲ. ನಿರುದ್ಯೋಗವು ದಿನದಿಂದ ದಿನಕ್ಕೆ ವರ್ಧಿಸುತ್ತದೆ ಎಂದು ಅವರು ಹೇಳಿದ್ದಾರೆ