ಆಂದೋಲನದ ಹರಿಕಾರ ಶರ್ಫುದ್ದೀನ್ ಸಾಹಬ್

0
340

ರಿಯಾಝ್ ಅಹ್ಮದ್, ರೋಣ

ಮೊನ್ನೆ ಇಶಾ ನಮಾಝ್ ಬಳಿಕ ಜಾಮಿಯಾ ಮಸೀದಿ ರಹ್ಮತ್ ನಗರ ಬೆಂಗಳೂರು ಇದರ ಆಚೆ ಬಂದಾಗ ನಾನು ಕಂಡದ್ದು ಶರ್ಫುದ್ದೀನ್ ಸಾಹಬ್ ಅವರನ್ನು, ಸದಾ ಹಸನ್ಮುಖಿ ವ್ಯಕ್ತಿತ್ವದ ಆ ಚೇತನವನ್ನು ಇದೇ ಕೊನೆ ಬಾರಿಗೆ ಭೇಟಿಯಾಗುತ್ತಿರುವೆನೆಂದು ನಾನು ಕನಸ್ಸು ಮನಸ್ಸಿನಲ್ಲೊ ಊಹಿಸಿರಲಿಲ್ಲ.

ಬೆಂಗಳೂರಿಗೆ ಅವರು ಆಗಮಿಸಿದಾಗಲೆಲ್ಲ ಅವರನ್ನು ಕಂಡರೆ ಒಂದು ಬಗೆಯ ಸಂತೋಷ ನಮಗಾಗುತ್ತಿತ್ತು. ಎಲ್ಲರೊಂದಿಗೂ ಬೆರೆಯುವ ವ್ಯಕ್ತಿತ್ವ ಅವರದ್ದು, ದಿವಂಗತ ಶರ್ಫುದ್ದೀನ್ ಸಾಹಬ್ ನನ್ನೊಂದಿಗೆ ಮಾತುಗಿಳಿದಾಗಲೆಲ್ಲ ಪ್ರಥಮವಾಗಿ ಅವರು ವಿಚಾರಿಸುತ್ತಿದ್ದದ್ದು ಬೋರ್ಡ್ ಆಫ್ ಇಸ್ಲಾಮಿಕ್‌ನ ಕಾರ್ಯ ಚಟುವಟಿಕೆಗಳ ಕುರಿತು, ಉಡುಪಿಯಲ್ಲಿ ಬೋರ್ಡ್‌ನ ಕೆಲಸಗಳ ಕುರಿತು ಬಹಳ ಉತ್ಸಾಹ ಹಾಗೂ ಅಷ್ಟೇ ಕಾಳಜಿಯಿಂದ ಸವಿಸ್ತಾರವಾಗಿ ವಿವರಿಸುತ್ತಿದ್ದರು.

ಇಸ್ಲಾಮೀ ಆಂದೋಲನದೊಂದಿಗೆ ಅವರ ಸಂಬಂಧ ಬಹಳ ಗಾಢವಾಗಿತ್ತು. ಎಲೆಮರೆಯ ಕಾಯಿಯಂತೆ ಪರದೆಯ ಆಚೆ ಇದ್ದುಕೊಂಡೆ ಅವರು ಸಲ್ಲಿಸಿದ ಸೇವೆ ಜನರು ನಿಬ್ಬೆರಗಾಗುವಂತಿವೆ.

ಬೆಂಗಳೂರಿನಲ್ಲಿ ಅವರ ಮಗ ಜಮಾಅತಿನ ರಾಜ್ಯ ಕಾರ್ಯದರ್ಶಿ ಸಹೋದರ ಬಿಲಾಲ್ ಅವರ ಮನೆಯ ಪಕ್ಕದಲ್ಲಿಯೇ ನಾನು ವಾಸಿಸುತ್ತಿದ್ದೆ, ಅವರು ಊರಿನಿಂದ ಬಂದಾಗಲೆಲ್ಲ ನಮಗಾಗಿ ತಿಂಡಿ ತಿನಸುಗಳನ್ನು ತಂದು ಕೊಡುವುದು ಸಾಮಾನ್ಯವಾಗಿತ್ತು. ನಾನೊಮ್ಮೆ ಮುಜುಗರದಿಂದ ಅದನ್ನು ನಯವಾಗಿ ನಿರಾಕರಿಸಿದಾಗ ಅವರು ‘ಯಾಕೆ ನಮ್ಮ ಮನೆಗೆ ನಾನು ತರುವುದಿಲ್ಲವೇ ನಿಮ್ಮ ಮನೆ ಬೇರೆ ಹಾಗೂ ನನ್ನ ಮನೆ ಬೇರೆಯೇ? ಎಂದು ಮುಕ್ತ ಮನಸ್ಸಿನೊಂದಿಗೆ ಹೇಳಿದ ಅವರ ಮಾತು ಇಂದಿಗೂ ಮರೆಯಲಸಾಧ್ಯ,

ನಮಾಝಿನ ಸಮಯವಾದಾಗ ಅವರು ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನೇರವಾಗಿ ಅಲ್ಲಾಹನ ಮನೆಗೆ ಬಹಳ ಲವಲವೀಕೆಯಿಂದ ಧಾವಿಸುತ್ತಿದ್ದರು. ನಮಾಝಿನ ಸಂದರ್ಭದಲ್ಲಿ ಮಸೀದಿಯಲ್ಲಿ ನಾನು ಅವರನ್ನು ಹೆಚ್ಚಾಗಿ ಕಂಡದ್ದು ಪ್ರಥಮ ಸಾಲಿನಲ್ಲಿಯೇ… ಪವಿತ್ರ ಕುರ್‌ಆನ್ ಹಾಗೂ ಪ್ರವಾದಿ ಚರ್ಯೆಯನ್ನು ಅವರು ಬಹಳ ಆಳವಾಗಿ ಅಧ್ಯಯನ ನಡೆಸುತ್ತಿದ್ದರು. ಸನ್ಮಾರ್ಗ, ಅನುಪಮ ಪತ್ರಿಕೆಗಳನ್ನು ತಪ್ಪದೇ ಅವರು ಓದುತ್ತಿದ್ದರಲ್ಲದೇ ಯಾವುದಾದರೂ ವಿಶೇಷ ಲೇಖನವಿರುತ್ತಿದ್ದರೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದದ್ದು ಇಂದಿಗೂ ನನ್ನ ಸ್ಮೃತಿಪಟಲದಲ್ಲಿದೆ.

ಪ್ರಚಾರದ ಗೀಳು ಅವರಿಗಿರಲಿಲ್ಲ, ನಾನೊಮ್ಮೆ ಅವರೊಂದಿಗೆ ಮಾತಿಗಿಳಿದಾಗ ಅವರ ಗುಣಗಾನ ಮಾಡುತ್ತಿದ್ದ ಸಂದರ್ಭದಲ್ಲಿ ನಡುವೆ ತಕ್ಷಣ ಅವರು ಬೇರೆ ವಿಷಯವನ್ನು ಎಳೆದು ತಂದರು. ಇಸ್ಲಾಮೀ ಆಂದೋಲನದ ಅವರೋರ್ವ ಹರಿಕಾರರಾಗಿದ್ದರು. ಅಲ್ಲಾಹನು ಅವರ ಸೇವೆಯನ್ನು ಸ್ವೀಕರಿಸಿ ಸ್ವರ್ಗದ ಅತ್ಯುನ್ನತ ಸ್ಥಾನವನ್ನು ದಯಪಾಲಿಸಲಿ ಎಂಬ ಪ್ರಾರ್ಥನೆ.