ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಕಾರಿನ ಮೇಲೆ ಗುಂಡಿನ ದಾಳಿ: ಅಪಾಯದಿಂದ ಪಾರು

0
416

ಸನ್ಮಾರ್ಗ ವಾರ್ತೆ

ನವದೆಹಲಿ: ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ವೇಳೆ ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಕಾರಿನ ಮೇಲೆ ಗುಂಡು ಹರಿಸಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಯಾರಿಗೂ ಗಾಯವಾಗಿಲ್ಲ ಆದರೆ ಕಾರಿನ ಟೈರ್‌ಗಳು ಪಂಕ್ಚರ್ ಆಗಿವೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಅಲ್ ಹಮ್ದುಲಿಲ್ಲಾಹ್ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಅವರು ಬರೆದಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ ದೆಹಲಿ ಬಳಿಯ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಶೂಟರ್‌ಗಳು ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೈದರಾಬಾದ್ ಸಂಸದ ತಿಳಿಸಿದ್ದಾರೆ.

ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ವ್ಯಕ್ತಿಗಳು ನನ್ನ ವಾಹನದ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡುಗಳನ್ನು ಹಾರಿಸಿದರು ಒಟ್ಟು 3-4 ಜನರಿದ್ದರು ಎಂದು ಓವೈಸಿ ಹೇಳಿಕೆ ನೀಡಿದ್ದಾರೆ.

“ನನ್ನ ವಾಹನದ ಟೈರ್ (ಚಿತ್ರದಲ್ಲಿ) ಪಂಕ್ಚರ್ ಆಗಿದೆ, ನಾನು ಇನ್ನೊಂದು ವಾಹನದಲ್ಲಿ ಹೊರಟೆ” ಎಂದು ಅವರು ಬರೆದಿದ್ದಾರೆ. ಟ್ವೀಟ್ ಮಾಡಿರುವ ಫೋಟೋದಲ್ಲಿ ಅವರ ಬಿಳಿ SUV ನಲ್ಲಿ ಎರಡು ಗುಂಡು ಬಿದ್ದಿರುವ ರಂಧ್ರಗಳನ್ನು ಕಾಣಬಹುದು. ಮೂರನೇ ಬುಲೆಟ್ ಟೈರ್‌ಗೆ ತಗುಲಿದ ಪರಿಣಾಮ ಪಂಕ್ಚರ್ ಆಯಿತು ಎಂದು ತಿಳಿದು ಬಂದಿದೆ.