ಮುಸ್ಲಿಮ್ ಸಮುದಾಯದ ಆದ್ಯತೆ ಏನಾಗಬೇಕು?

0
269

ಸನ್ಮಾರ್ಗ ಸಂಪಾದಕೀಯ

ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಮ್ ಕಾಂಗ್ರೆಸ್ ಪಕ್ಷದಿಂದ ನಿರ್ಗಮಿಸುವ ಸೂಚನೆ ನೀಡಿದ ಬೆನ್ನಿಗೇ ಮುಸ್ಲಿಮ್ ಸಮುದಾಯದ ಧರ್ಮಗುರುಗಳು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಜಂಟಿ ಹೇಳಿಕೆ ನೀಡಿದ್ದಾರೆ. ಇಡೀ ಪತ್ರಿಕಾಗೋಷ್ಠಿಯ ಗುರಿ ಕಾಂಗ್ರೆಸ್ ಪಕ್ಷ. ‘ರಾಜಕೀಯವಾಗಿ ಮುಸ್ಲಿಮ್ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಪದೇ ಪದೇ ಅನ್ಯಾಯ ಮಾಡುತ್ತಿದೆ, ಇದು ಮುಂದುವರಿದರೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ…’ ಎಂಬುದು ಒಟ್ಟು ಹೇಳಿಕೆಯ ಸಾರಾಂಶ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸ್ಥಾನ ಮುಸ್ಲಿಮ್ ಸಮುದಾಯಕ್ಕೆ ಮೀಸಲಿಡದೇ ಕಾಂಗ್ರೆಸ್ ಪಕ್ಷ ತಪ್ಪು ಮಾಡಿದೆ ಎಂಬುದು ಇನ್ನೊಂದು ಬಲವಾದ ವಾದ. ಈ ಪತ್ರಿಕಾಗೋಷ್ಠಿಯಲ್ಲಿ ಜಮೀಯತುಲ್ ಉಲೆಮಾಯೆ ಹಿಂದ್‌ನ ರಾಜ್ಯಾಧ್ಯಕ್ಷರು, ನಾಸಿಹ್ ಫೌಂಡೇಶನ್‌ನ ಅಧ್ಯಕ್ಷರು, ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷರು, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಮಾಜಿ ರಾಜ್ಯಾಧ್ಯಕ್ಷರೂ ಸೇರಿದಂತೆ ಮುಸ್ಲಿಮ್ ಸಮುದಾಯದ ಧಾರ್ಮಿಕ ಸಂಘಟನೆಗಳ ಮೌಲಾನಾಗಳು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತನಗೆ ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನ ದೊರಕಬೇಕಿತ್ತು ಎಂದು ಸಿ.ಎಂ. ಇಬ್ರಾಹೀಮ್ ಹೇಳಿಕೊಂಡಿರುವುದನ್ನು ಮತ್ತು ಮುಸ್ಲಿಮರಿಗೆ ಪರಿಷತ್ ವಿರೋಧ ಪಕ್ಷದ ಸ್ಥಾನ ಮೀಸಲಿಡಬೇಕಿತ್ತು ಎಂದು ಈ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿರುವುದನ್ನೂ ಕಾಕತಾಳೀಯ ಎಂದು ಹೇಳುವ ಹಾಗಿಲ್ಲ. ಕಾಂಗ್ರೆಸ್‌ನಿಂದ ಸಿ.ಎಂ. ಇಬ್ರಾಹೀಮ್‌ರ ನಿರ್ಗಮನದ ಹಿನ್ನೆಲೆಯಲ್ಲಿಯೇ ಈ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂಬುದಕ್ಕೆ ಆಧಾರವೇ ಈ ಒತ್ತಾಯ. ಅಂದಹಾಗೆ, ಓರ್ವ ರಾಜಕಾರಣಿ ಎಂಬ ನೆಲೆಯಲ್ಲಿ ಸಿ.ಎಂ. ಇಬ್ರಾಹೀಮ್ ಸಾಕಷ್ಟನ್ನು ಅನುಭವಿಸಿದ್ದಾರೆ. ಕೇಂದ್ರದ ವಿಮಾನ ಯಾನ ಸಚಿವರಾಗಿ, ಪ್ರವಾಸೋದ್ಯಮ ಸಚಿವರಾಗಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದ ಅವರು, ಜನತಾ ದಳದ ಅಧ್ಯಕ್ಷರೂ ಆದರು ಮತ್ತು ನಿರ್ಗಮಿಸುವ ವೇಳೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರೂ ಆಗಿದ್ದರು. ಆದ್ದರಿಂದಲೇ,

ಈ ಪತ್ರಿಕಾಗೋಷ್ಠಿ ಕರೆಯಲಾದ ಸಂದರ್ಭ ಮತ್ತು ಅದರಲ್ಲಿ ಎತ್ತಲಾದ ಪ್ರಶ್ನೆಗಳು ಎಷ್ಟು ಪ್ರಾಮಾಣಿಕ ಎಂಬ ಪ್ರಶ್ನೆ ಉದ್ಭವಿಸುವುದರ ಜೊತೆಗೇ ನಿಜಕ್ಕೂ ಮುಸ್ಲಿಮ್ ಸಮುದಾಯವನ್ನು ಕಾಂಗ್ರೆಸ್ ಪಿತ್ರಾರ್ಜಿತ ಆಸ್ತಿಯಂತೆ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅಷ್ಟಕ್ಕೂ, ಈ ಪ್ರಶ್ನೆ ಸಿ.ಎಂ.ಇಬ್ರಾಹೀಮ್ ಕಾಂಗ್ರೆಸ್‌ನಲ್ಲಿ ಇರುವಾಗಲೂ ಇತ್ತು. ಅವರು ನಿರ್ಗಮಿಸಿದ ಬಳಿಕವೂ ಅದು ಉಳಿದುಕೊಳ್ಳಲಿದೆ. ಮಾತ್ರವಲ್ಲ, ಸಿ.ಎಂ. ಇಬ್ರಾಹೀಮರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನಮಾನ ಸಿಕ್ಕಿರುತ್ತಿದ್ದರೆ ಅವರು ಕಾಂಗ್ರೆಸ್‌ನಿಂದ ನಿರ್ಗಮಿಸುತ್ತಿದ್ದರೇ ಮತ್ತು ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಎಂಬ ಮಾತನ್ನು ಆಡುತ್ತಿದ್ದರೇ ಎಂಬ ಸಂದೇಹವೂ ಎದುರಾಗುತ್ತದೆ. ಮುಸ್ಲಿಮ್ ರಾಜಕಾರಣಿಗಳು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಸಮುದಾಯದ ಮಹತ್ವಾಕಾಂಕ್ಷೆಯಾಗಿ ಬಿಂಬಿಸುತ್ತಿದ್ದಾರೆಯೇ ಮತ್ತು ಮುಸ್ಲಿಮ್ ಸಮುದಾಯವೂ ಅದನ್ನೇ ನಂಬಿಕೊಂಡು ಮೋಸ ಹೋಗುತ್ತಿದೆಯೇ ಎಂಬುದು ಒಂದು ಕಡೆಯಾದರೆ, ಸದ್ಯ ಮುಸ್ಲಿಮ್ ಸಮುದಾಯದ ಆದ್ಯತೆಗಳು ಏನಿರಬೇಕು ಎಂಬ ವಿವೇಚನೆಯೂ ಮುಖ್ಯವಾಗುತ್ತದೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಸರ್ಕಾರ ಅಂದಮೇಲೆ ಅದು ಜನರಿಗೆ ಉತ್ತರದಾಯಿಯೇ ಹೊರತು ಕೇವಲ ಪಕ್ಷಕ್ಕಲ್ಲ. ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರವಿದೆ. ಈ ಸರ್ಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿ ಇಲ್ಲ. ಕೇವಲ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸಂಬಂಧಿಸಿದ ಹಜ್ಜ್ ಖಾತೆಗೂ ಓರ್ವ ಮುಸ್ಲಿಮ್ ವ್ಯಕ್ತಿಯನ್ನು ನೇಮಿಸಿಲ್ಲ. ರಾಜ್ಯದಲ್ಲಿ ಒಂದು ಕೋಟಿಯಷ್ಟಿರುವ ಮುಸ್ಲಿಮ್ ಸಮುದಾಯದ ವ್ಯಕ್ತಿಯ ಬದಲು ಶಶಿಕಲಾ ಜೊಲ್ಲೆಯವರನ್ನು ಹಜ್ಜ್ ಖಾತೆಗೆ ನೇಮಿಸಿರುವುದೇ ಈ ಸರ್ಕಾರದ ಪರಮ ಅನ್ಯಾಯವನ್ನು ಸೂಚಿಸುತ್ತದೆ. ಅಲ್ಲದೇ ವಕ್ಫ್ ಖಾತೆಯೂ ಅವರ ಸುಪರ್ದಿಯಲ್ಲಿದೆ. ವಕ್ಫ್‌ನ ಆಸ್ತಿ ಸಂಪೂರ್ಣವಾಗಿ ಮುಸ್ಲಿಮ್ ಸಮುದಾಯದ ಸೊತ್ತು. ಈ ಸೊತ್ತು ರಾಜ್ಯದಲ್ಲಿ ಎಷ್ಟು ಅಗಾಧ ಪ್ರಮಾಣದಲ್ಲಿ ಇದೆಯೆಂದರೆ, ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಅನುದಾನಗಳ ಅಗತ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ವಕ್ಫ್ ಆಸ್ತಿಗಳ ಬಗ್ಗೆ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವರದಿ ತಯಾರಾಗಿದ್ದು, ಸರ್ಕಾರಕ್ಕೂ ಸಲ್ಲಿಕೆಯಾಗಿದೆ. ಆ ಬಳಿಕ ಈ ವರದಿ ಸುಪ್ರೀಮ್ ಕೋರ್ಟ್‌ವರೆಗೂ ಹೋಗಿದ್ದು, ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ವೇಳೆ ವಿಧಾನ ಸಭೆಯಲ್ಲಿ ಸಾಂಕೇತಿಕವಾಗಿ ಮಂಡನೆಯೂ ಆಗಿದೆ. ಅಂದಹಾಗೆ,

ಆ ವರದಿಯಲ್ಲಿರುವ ಮಾಹಿತಿಗಳ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇರಲಿ, ಮುಸ್ಲಿಮ್ ಸಮುದಾಯದ ಪಾಲಿಗೆ ಬಹುದೊಡ್ಡ ನಿಧಿಯಾಗಿರುವ ವಕ್ಫ್ ಆಸ್ತಿಯನ್ನು ಪದಭಾರೆಯಿಂದ ಮುಕ್ತಗೊಳಿಸಿ ಸಮುದಾಯಕ್ಕೆ ಮರಳಿಸುವ ಕುರಿತಂತೆ ಸರ್ಕಾರದ ಮೇಲೆ ಮುಸ್ಲಿಮ್ ಸಮುದಾಯದಿಂದ ಯಾಕೆ ಸಂಘಟಿತ ಒತ್ತಾಯ ನಡೆಯುತ್ತಿಲ್ಲ? ಮುಸ್ಲಿಮ್ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನೀಡಬೇಕಾದ ಮಹತ್ವ ನೀಡುತ್ತಿಲ್ಲ ಎಂದು ದೂರುತ್ತಾ ಸಾಗುವುದಕ್ಕಿಂತ ಈಗ ಅಧಿಕಾರದಲ್ಲಿರುವ ಸರ್ಕಾರದಿಂದ ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ಯಾಕೆ ಒತ್ತಡ ಹೇರಿ ದಕ್ಕಿಸಿಕೊಳ್ಳುತ್ತಿಲ್ಲ? ಬೊಮ್ಮಾಯಿ ಸರ್ಕಾರ 6 ಕೋಟಿ ಕನ್ನಡಿಗರಿಗೆ ಸಂಬಂಧಿಸಿದ್ದಾರೆಯೇ ಹೊರತು ಬಿಜೆಪಿಗೋ ನಿರ್ದಿಷ್ಟ ಧರ್ಮಕ್ಕೋ ಸಂಬಂಧಿಸಿದ್ದಲ್ಲ. ಈ ಸರ್ಕಾರದೊಂದಿಗೆ ತಮ್ಮ ಅಭಿವೃದ್ಧಿಗೆ ಬೇಕಾದುದನ್ನು ಕೇಳುವ ಮತ್ತು ಅದಕ್ಕಾಗಿ ಪಟ್ಟು ಹಿಡಿದು ಒತ್ತಾಯಿಸುವ ಸರ್ವ ಹಕ್ಕೂ ಮುಸ್ಲಿಮ್ ಸಮುದಾಯಕ್ಕೆ ಇದೆ. ಸರ್ಕಾರ ಯಾವುದೇ ಇರಲಿ ಲಿಂಗಾಯಿತ, ಕುರುಬ, ಬ್ರಾಹ್ಮಣ ಇತ್ಯಾದಿ ಸಮುದಾಯಗಳು ಹೇಗೆ ತಮ್ಮ ಹಿತಾಸಕ್ತಿಯನ್ನು ಮುಂದಿಟ್ಟು ಒತ್ತಡ ಹೇರುತ್ತದೆಯೋ ಆ ಬಗೆಯ ಒತ್ತಡ ಮುಸ್ಲಿಮ್ ಸಮುದಾಯದಿಂದ ಯಾಕೆ ವ್ಯಕ್ತವಾಗುತ್ತಿಲ್ಲ? ಸಿ.ಎಂ. ಇಬ್ರಾಹೀಮ್ ನಿರ್ಗಮಿಸುವಾಗ ಪತ್ರಿಕಾಗೋಷ್ಠಿಯನ್ನು ಕರೆಯುವ ಸಮುದಾಯದ ಸಂಘಟನೆಗಳು ಇದೇ ಉತ್ಸಾಹದಿಂದ ವಕ್ಫ್ ಆಸ್ತಿಯನ್ನು ಸಮುದಾಯಕ್ಕೆ ಮರಳಿಸುವ ಬೇಡಿಕೆಯೊಂದಿಗೆ ಪತ್ರಿಕಾಗೋಷ್ಠಿಯನ್ನು ಕರೆಯಬಹುದಿತ್ತಲ್ಲವೇ? ವಕ್ಫ್ ಬೋರ್ಡ್ನ ಅಧ್ಯಕ್ಷ ಶಾಫಿ ಸಅದಿಯವರನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಚಳವಳಿ ರೂಪದ ಅಭಿಯಾನ ಕೈಗೊಳ್ಳಬಹುದಿತ್ತಲ್ಲವೇ? ಉಡುಪಿಯಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರ ಸ್ಕಾರ್ಫ್ ವಿವಾದಕ್ಕೆ ಒಳಗಾಗಿದೆ. ಅವರ ಶಿಕ್ಷಣವೇ ಮೊಟಕುಗೊಳ್ಳುವ ಹಂತದಲ್ಲಿದೆ. ಈ ಬೆಳವಣಿಗೆ ಅಂತಾರಾಷ್ಟ್ರೀಯವಾಗಿಯೂ ಸುದ್ದಿಗೀಡಾಗಿದೆ. ಕಾಂಗ್ರೆಸ್‌ನಿಂದ ರಾಜಕೀಯವಾಗಿ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಲು ಕರೆದ ಪತ್ರಿಕಾಗೋಷ್ಠಿಯಂತೆ ಈ ಸರ್ಕಾರದಿಂದ ಆಗುವ ಅನ್ಯಾಯದ ಬಗ್ಗೆಯೂ ಸಾರ್ವಜನಿಕ ಗಮನ ಸೆಳೆಯುವಂಥ ಪತ್ರಿಕಾಗೋಷ್ಠಿ ನಡೆಯಬಹುದಿತ್ತಲ್ಲವೇ? ಯಾಕೆ ಮುಸ್ಲಿಮ್ ಸಮುದಾಯದ ಬೇಡಿಕೆಗಳನ್ನು ಮಂಡಿಸುವುದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೆ ಕಾಯಬೇಕು? ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂದು ದೂರುತ್ತಾ ಸಾಗುವುದಕ್ಕಿಂತ ಇರುವ ಸರ್ಕಾರದ ಮೇಲೆ ಒತ್ತಡ ಹೇರಿ ಅಭಿವೃದ್ಧಿ ಯೋಜನೆಯನ್ನು ಪಡಕೊಳ್ಳುವಂತಹ ಸಂಘಟಿತ ತಂತ್ರವನ್ನೇಕೆ ಮುಸ್ಲಿಮ್ ಸಮುದಾಯ ಅಳವಡಿಸಿಕೊಳ್ಳುತ್ತಿಲ್ಲ?

ಕಾಂಗ್ರೆಸ್ ಒಂದು ರಾಜಕೀಯ ಪಕ್ಷ‌. ಬಿಜೆಪಿಯೊಂದಿಗೆ ಅದನ್ನು ಹೋಲಿಸುವುದು ತಪ್ಪೇ ಆಗಿ ದ್ದರೂ ಒಂದು ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ಅದಕ್ಕೆ ಅದರದ್ದೇ ಆದ ಇತಿಮಿತಿಗಳಿವೆ. ಬಿಜೆಪಿಯ ಧ್ರುವೀಕರಣ ರಾಜಕಾರಣವೂ ಅದರ ನೀತಿ ನಿರೂಪಣೆಯ ಮೇಲೆ ಪರಿಣಾಮ ಬೀರುತ್ತಿದೆ. ಮುಸ್ಲಿಮರ ಅಭಿವೃದ್ಧಿಯ ಬಗ್ಗೆ ನೀಡುವ ಒಂದೇ ಒಂದು ಹೇಳಿಕೆಯೂ ಅದಕ್ಕೆ ಮುಳುವಾಗುವ ವಾತಾವರಣವನ್ನು ಬಿಜೆಪಿ ನಿರ್ಮಿಸಿ ಬಿಟ್ಟಿದೆ. ಆದ್ದರಿಂದ ಕಾಂಗ್ರೆಸನ್ನು ದೂರುತ್ತಾ ಮತ್ತು ಅದರ ನೆರಳಿನಲ್ಲಿ ನಮ್ಮ ಅಭಿವೃದ್ಧಿ ಎಂದು ಸುಖ ಪಡುತ್ತಾ ಸಾಗುವುದಕ್ಕಿಂತ ಸರ್ಕಾರ ಯಾವ ಪಕ್ಷದ್ದೇ ಇರಲಿ, ಒತ್ತಡ ಹೇರಿ ನಮ್ಮ ಹಕ್ಕನ್ನು ಪಡಕೊಂಡೇ ತೀರುತ್ತೇವೆ ಎಂಬ ಗಟ್ಟಿ ನಿರ್ಧಾರವು ಮುಸ್ಲಿಮ್ ಸಮುದಾಯದ್ದಾಗಿರಬೇಕು. ಇದಕ್ಕಾಗಿ ಪತ್ರಿಕಾಗೋಷ್ಠಿಗಳ ಮೇಲೆ ಪತ್ರಿಕಾಗೋಷ್ಠಿ ನಡೆಯಬೇಕು. ಹೇಳಿಕೆಗಳ ಮೇಲೆ ಹೇಳಿಕೆಗಳು ಬರಬೇಕು. ಚಳವಳಿ, ಪ್ರತಿಭಟನೆ ನಿರಂತರ ನಡೆಯಬೇಕು. ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಇದಕ್ಕಾಗಿ ಏಕವೇದಿಕೆಯನ್ನು ರಚಿಸಿಕೊಂಡರೆ ಇನ್ನೂ ಉತ್ತಮ. ಇನ್ನೊಮ್ಮೆ ಹೇಳುತ್ತೇನೆ,

ಸಿ.ಎಂ. ಇಬ್ರಾಹೀಮ್‌ರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಒದಗಿಸಿ ಕೊಡುವುದು ಈ ಸಮುದಾಯದ ಆದ್ಯತೆಯಾಗಬಾರದು. ಅಷ್ಟೇ.