ದೇಶದ ಪ್ರಧಾನಿ ಮುತ್ಸದ್ದಿಯಾಗಿರಬೇಡವೇ?

0
249

ಸನ್ಮಾರ್ಗ ವಾರ್ತೆ

ಅಬೂ ಅನೀಸ್, ಕಲ್ಲಾಪು

ನಾಯಕತ್ವದೊಂದಿಗೆ ಮುತ್ಸದ್ದಿತನವು ಮೈ ಗೂಡಿಕೊಂಡಿರಬೇಕು. ಆದರೆ ಈ ಗುಣಗಳು ಶೂನ್ಯವಾಗಿರುವಂತಹ ಒಂದು ವ್ಯಕ್ತಿತ್ವವನ್ನು  ಅನ್ವೇಷಣೆ ಮಾಡಿ ಆಯ್ಕೆ ಮಾಡಿದಂತಾಗಬಾರದು. 2002ರ ಗುಜರಾತ್ ಗಲಭೆಯ ವೇಳೆ ಅಲ್ಲಿನ ಹೇಯ ದೌರ್ಜನ್ಯಗಳನ್ನು ಕಂಡು  ಮಮ್ಮಲ ಮರಗಿದ ಅಂದಿನ ಪ್ರಧಾನಮಂತ್ರಿ ಅಟಲ ಬಿಹಾರಿ ವಾಜಪೇಯಿಯವರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ, `ನೀವು ರಾಜ ಧರ್ಮವನ್ನು ಪಾಲಿಸಿ’ ಎಂದಿದ್ದರು. ನಾನು ಅದನ್ನೇ ಮಾಡುತ್ತಿದ್ದೇನೆ ಎಂದಾಗಿತ್ತು ಮೋದಿಯವರ ಉತ್ತರ.

ದುಃಖ ಸತ್ಯವೇನೆಂದರೆ ಗುಜರಾತ್ ಹೊತ್ತಿ ಉರಿಯುತ್ತಿತ್ತು. ನರೋಡ ಪಾಟಿಯಾದಲ್ಲಿ ಒಂದೇ ಕೋಮಿನ ನೂರು ಜನರನ್ನು ಕೊಂದು,  ಪಾಳು ಬಾವಿಗೆ ಎಸೆಯಲಾಗಿತ್ತು. ಗುಲ್ಬರ್ಗ ಸೊಸೈಟಿ ಅಗ್ನಿಕಾಂಡದಲ್ಲಿ ಮಾಜಿ ಕಾಂಗ್ರೆಸ್ ಎಂ.ಪಿ. ಎಹ್‌ಸಾನ್ ಜಾಫ್ರಿ ಸಹಿತ ಸುಮಾರು 60 ಜನ ರನ್ನು ಜೀವಂತವಾಗಿ ಅಗ್ನಿಗಾಹುತಿ ಮಾಡಲಾಗಿತ್ತು. ಮಾತ್ರವಲ್ಲ ಬಿಲ್ಕೀಸ್ ಬಾನುವಿನ ಹರೆಯದ ಹೆಣ್ಮಗಳು ಮತ್ತು ಆಕೆಯ ಕುಟುಂಬದವರನ್ನು ಕೊಂದ ಹೇಯ ಘಟನೆಗಳು ನಡೆದಿದ್ದುವು. ಈ ಕರಾಳತೆಯನ್ನು ಬೊಟ್ಟುಮಾಡಿಕೊಂಡು ಮಾಜಿ ಪ್ರಧಾನಿ ವಾಜಪೇಯಿಯವರು ತನ್ನ ಮುತ್ಸದ್ದಿತನವನ್ನು ಪ್ರದರ್ಶಿಸಿದ್ದರು. ಅವರ ಸಲಹೆಗೆ ಮೋದಿ ತಾನು ರಾಜ ಧರ್ಮವನ್ನು ಪಾಲಿಸುತ್ತಿದ್ದೇನೆ ಎಂಬ ಅಭೂತಪೂರ್ವ ಸುಳ್ಳನ್ನು ಹೇಳಿ ನುಣುಚಿಕೊಂಡರು.

ಆದರೂ ಮೋದಿಯ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ವಾಜಪೇಯಿಯವರು ಗುಜರಾತ್ ಸಿಎಮ್ ಬದಲಾಗಬೇಕೆಂದು ಬಲವಾಗಿ ಬಯಸಿದ್ದರು. ದೆಹಲಿಗೆ ಮರಳಿದ ಪ್ರಧಾನಿ ಈ ಬದಲಾವಣೆಯ ಬಗ್ಗೆ ಪ್ರಸ್ತಾಪವೆತ್ತಿದರು. ಆದರೆ ಅಂದಿನ ಉಪಪ್ರಧಾನಿ ಮತ್ತು ಗೃಹಮಂತ್ರಿಗಳಾಗಿದ್ದ ಎಲ್.ಕೆ. ಅಡ್ವಾಣಿ, ಅರುಣ್ ಜೇಟ್ಲಿ ಮತ್ತು ಇನ್ನಿತರ ತೀವ್ರವಾದಿ ನಾಯಕರಿಗೆ ವಾಜಪೇಯಿಯ ನಿಲುವು  ಸರಿ ಕಾಣಲಿಲ್ಲ. ಅವರು ನಿಕಟ ಭವಿಷ್ಯದಲ್ಲೇ ಗೋವಾದಲ್ಲಿ ನಡೆದಿದ್ದ ಬಿಜೆಪಿ ಪಾರ್ಲಿಮೆಂಟರಿ ಸಭೆಯಲ್ಲಿ ವಾಜಪೇಯಿಯವರ  ಇಂಗಿತವು ಮುನ್ನಲೆಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದರು.

 ಅಂತೂ 2014 ರಿಂದ ದೇಶದಲ್ಲಿ ಸುಳ್ಳು ಹೇಳುವ ಪರಂಪರೆಯನ್ನು ನೆಚ್ಚಿಕೊಂಡಂತೆ ಸ್ಥಿತಿಗತಿಗಳು ಸಾಕ್ಷಿ ಹೇಳುತ್ತಿವೆ. ವಿದೇಶಿ ಕಪ್ಪು  ಹಣವನ್ನು ತರಿಸಿ ದೇಶವಾಸಿಗಳ ತಿಜೋರಿಗಳಲ್ಲಿ 15 ಲಕ್ಷ ರೂಪಾಯಿಗಳ ಹಾಕುವ ಅದ್ಭುತ ಸುದ್ದಿಯನ್ನು ಚುನಾವಣಾ ಸಭೆಗಳಲ್ಲಿ ಪ್ರಧಾನಿ ಘೋಷಿಸಿದ್ದರು. ನಂತರ ದಿನಗಳಲ್ಲಿ ರಿಪಬ್ಲಿಕ್ ಟಿವಿಯ ಆ್ಯಂಕರ್ ಅರ್ನಾಬ್ ಗೋಸ್ವಾಮಿ ಈ ಕುರಿತು ವಿಚಾರಿಸಿದಾಗ ಪ್ರಧಾನಿ ಪೀಠಕ್ಕೆ ಶೋಭಿತವಲ್ಲದ ಉತ್ತರ ನೀಡಿದರು. ವಿರೋಧ ಪಕ್ಷಗಳು ಅದನ್ನು ಹೇಳುತ್ತಾ ತಿರುಗಲಿ ಎಂದಾಗಿತ್ತು ಪ್ರಧಾನಿಯ ಉತ್ತರ. ಇದೇ ಮಾತನ್ನು ಮುಂದುಕ್ಕೆ ಎಬಿಪಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಂದಿನ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚುನಾವಣೆಯಲ್ಲಿ ಜನರನ್ನು ಮರಳು ಮಾಡೋಕೆ ಸುಮ್ಮನೆ ಹೇಳಿದ್ದು, ಅದು ಎಲೆಕ್ಷನ್ ಜುಮ್ಲಾ ಎಂದಿದ್ದರು.

ಇಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಜನರ ಆಶೋತ್ತರಗಳಿಗೆ ಬೆಲೆ ಕೊಡದೆ ಸುಳ್ಳು ಆಶ್ವಾಸನೆಗಳಿಂದ ಜನರ ಮತ ಪಡೆದು ಅಧಿಕಾರ ಗಿಟ್ಟಿಸುವ ಈ ನೀತಿಯಲ್ಲಿ ರಾಜಕೀಯ ಚಾಣಾಕ್ಷತೆ ಎಂದು ಹೊಗಳುವವರೂ ಇದ್ದಾರೆ. ಈ ಕುರಿತು ಕರ್ನಾಟಕ ಅಸೆಂಬ್ಲಿಯಲ್ಲಿ  ಆಡಳಿತ ಪಕ್ಷವು ಧ್ವನಿಯೆತ್ತಿದಾಗ ಪ್ರಧಾನಿಯ ಈ ಆಶ್ವಾಸನೆಗೆ ಪುರಾವೆ ಕೊಡಿ ಎಂದಾಗಿತ್ತು ಬಿಜೆಪಿ ಶಾಸಕರುಗಳ ಮರು ನುಡಿ. ಸತ್ಯವನ್ನು ಸುಳು ಮಾಡುವ ಸುಳ್ಳನ್ನು ಸತ್ಯವೆಂದು ಸುಳ್ಳು ಹೇಳುವ ಈ ರಾಜಕೀಯ ಜಾಡು 2014ರ ನಂತರ ಬಂದಿರುವ ಕುಹಕತನವಾಗಿವೆ.

ಇದಕ್ಕಿರುವ ರಾಜಕೀಯ ಯೋಗ್ಯತೆ ಸಂವಿಧಾನ ವಿರೋಧಿ ಹೇಳಿಕೆಗಳು, ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ಕಿಡಿಗೇಡಿ ಸುಳ್ಳು  ಘೋಷಣೆಗಳು ಮಾತ್ರವಾಗಿದೆ. ನಾಗರಿಕ ಸಮಾಜದಲ್ಲಿ ಇಂತಹ ಕಿಡಿಗೇಡಿ ಹೇಳಿಕೆಗಳ ಮೂಲಕ ಜನಮನವನ್ನು ಒಡೆದು ಗಲಭೆ  ದೊಂಬಿಗಳನ್ನು ಹುಟ್ಟು ಹಾಕುವ ವಿಘ್ನ ಸಂತ್ತೋಷಿಗಳ ಕೂಟವು ಇದೀಗ ಜೀವ ಹಿಡಿದಿದೆ. ದಂಗಾಯಿಗಳು, ಕೆಲವು ದಿನ ಪತ್ರಿಕೆಗಳು, ಕೆಲವು ಟಿವಿ ಚಾನೆಲ್‌ಗಳು ಕೂಡಾ ಜನಮನವನ್ನು ಒಡೆದು ದ್ವೇಷವನ್ನು ಉದ್ದೀಪನಗೊಳಿಸುವ ಕಾಯಕದಲ್ಲಿ ಮಗ್ನವಾಗಿವೆ.

ದೇಶಭಕ್ತಿ, ರಾಷ್ಟ್ರೀಯತೆ ಮತ್ತು ಪ್ರಾಕ್ತನ ಸಂಸ್ಕೃತಿಯ ಪುನರುತ್ಥಾನದ ಹಣೆಪಟ್ಟಿಯಲ್ಲಿ ಈ ಅನಾಹುತಗಳಿಗೆ ಜೀವ ತುಂಬಲಾಗುತ್ತಿದೆ.  ಗಲಭೆಗಳ ಸಮಯದಲ್ಲಿ ಕಾನೂನು ಕಟ್ಟಳೆ, ಶಿಷ್ಟಾಚಾರಗಳನ್ನು ಉಲ್ಲಂಘಿಸಿಕೊಂಡು ದಂಗಾಯಿಗಳಾಗುವ ಕೆಲವೇ ಮಂದಿ ಯುವ ಸಮೂಹಕ್ಕೆ ಭಾವುಕ ಹೆಸರುಗಳನ್ನಿಟ್ಟು ಕ್ರಿಮಿನಿಲ್‌ಗಳನ್ನಾಗಿಸಲಾಗುತ್ತದೆ. ತನ್ಮೂಲಕ ದೇಶಭಕ್ತಿಯ ಭಾವನೆಗಳಲ್ಲಿ ಯುವಕರನ್ನು  ವೈಚಾರಿಕ ಶೋಷಣೆಗೆ ಬಲಿ ನೀಡಿದ ನಿಗೂಢ ಶಕ್ತಿಗಳು ತೆರೆಮರೆಯಲ್ಲಿ ಸಕ್ರೀಯವಾಗಿವೆ. ದಲಿತ ಒಬಿಸಿ ಬುಡಕಟ್ಟು ಜನಾಂಗವು ಬಲಿ ಪಶುಗಳಾಗುತ್ತಿವೆ.

ಬಾಬರಿ ಮಸೀದಿ ಧ್ವಂಸದ ಖಳನಾಯಕ ಕಲ್ಯಾಣ್ ಸಿಂಗ್‌ರಂತೆ ನರೇಂದ್ರ ಮೋದಿ ಕೂಡ ಹಿಂದುಳಿದ ವರ್ಗದವರಾಗಿದ್ದಾರೆ. ಈ ರೀತಿ  ದಲಿತ ವಂಶದ ಕಲ್ಯಾಣ್ ಸಿಂಗ್ ಮತ್ತು ಹಿಂದುಳಿದ ವರ್ಗದ ನರೇಂದ್ರ ಮೋದಿ ಚರಿತ್ರೆ ಯುದ್ದಕ್ಕೂ ಖಳನಾಯಕರಾಗಿ ಗುರುತಿಸಿಕೊಳ್ಳಲಿದ್ದಾರೆ. ಈ ಧ್ವಂಸ ಕೃತ್ಯದ ಹಿಂದಿರುವ ರೂವಾರಿಗಳು ಮುಗ್ಧ ನಿರಪರಾಧಿಗಳಾಗಲಿದ್ದಾರೆ.

ದೇಶದ ಪ್ರಾಕ್ತನ ಸಂಸ್ಕೃತಿಯನ್ನು ಕೆದಕಿ ನೋಡಿದರೆ ದೇಶದ ಮೂಲನಿವಾಸಿಗಳಾದ ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರನ್ನು ಮತ ಸಂಸ್ಕೃತಿಯ ಹೆಸರಲ್ಲಿ ದೌರ್ಜನ್ಯ ಒಳಗಾಗಿಸಿದವವರಾರು? ದಸ್ಯು, ರಾಕ್ಷಸರು ಎಂಬ ನಿಂದ್ಯಮಾತುಗಳಿಂದ  ಜರೆದು ದಬಾಯಿಸಿದವರಾರು? ಅವರನ್ನು ಹಿಂಸಾತ್ಮಕವಾಗಿ ತುಳಿದು ನಾಗರಿಕ ಸವಲತ್ತುಗಳಿಂದ, ಶೈಕ್ಷಣಿಕ ಹಕ್ಕು ಬಾಧ್ಯತೆಗಳಿಂದ ದೂರವಿಟ್ಟು ವಂಚಿಸಿದವರಾರು? ಈ ದೇಶದ ಮುಸ್ಲಿಮರೂ ಕ್ರೈಸ್ತರೂ ಅಲ್ಲ. ದೇಶದ ಸವರ್ಣೀಯ ವರ್ಗವೆಂಬುದು ಸರ್ವವೇದ್ಯ. ಈ ಮುಗ್ಧ ವಿಭಾಗಗಳ ವಿರುದ್ಧ ಮತೀಯ ಭಾವನೆಗಳನ್ನು ಕೆರಳಿಸಿಕೊಂಡು ಹಿಂದೂ ಧರ್ಮ ಗಂಡಾಂತರದಲ್ಲಿದೆ ಎಂಬ ಪೊಳ್ಳು ಪುಕಾರಿನೊಂದಿಗೆ ತಮ್ಮ ಅನುಕೂಲದಂತೆ ಮಾಡಬಹುದೆಂದು ಮೇಲ್ವರ್ಗ ಬಲವಾಗಿ ನಂಬಿದೆ. ಇದಕ್ಕಾಗಿ ಸರಕಾರಿ ಬೆಂಬಲಿತ ದೃಶ್ಯ ಮಾಧ್ಯಮಗಳನ್ನು ದ್ವೇಷ ಭಾಷಣಗಳ ಮೂಲಕ ಹಸಿ ಹಸಿ ಸುಳ್ಳನ್ನೂ ಪ್ರಚಾರ ಮಾಡಲಾಗುತ್ತಿದೆ.

ಇದೀಗ ಮಣಿಪುರದಲ್ಲಿ ಭುಗಿಲೆದ್ದಿರುವ ಜನಾಂಗೀಯ ದಂಗೆ ಈ ಅಧ್ಯಾಯದ ಒಂದು ಭಾಗವಾಗಿದೆ. ಬಹುಸಂಖ್ಯಾತ ಮೈಥಿಗಳ ಮತ್ತು ಕುಕಿಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟ ನೂರಾರು ಜೀವಹಾನಿ, ಡಜನ್ ಗಟ್ಟಲೆ ಆರಾಧನಾಲಯಗಳ ಧ್ವಂಸ,  ಮಹಿಳೆಯರ ಮಾನಭಂಗ, ರೇಪ್ ಪ್ರಕರಣಗಳು- ರಾಜ್ಯ ಮತ್ತು ಕೇಂದ್ರ ಸರಕಾರದ ತಾರತಮ್ಯ ನೀತಿಯೇ ಈ ಘೋರ ಅನಾಹುತಗಳಿಗೆ ಕಾರಣವೆನ್ನಲಾಗುತ್ತಿದೆ. ಉಭಯ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಮೈಥಿಯರಿಗಿಂತ  ಕುಕಿಗಳ ಸಂಖ್ಯೆ ಅಧಿಕವಾಗಿವೆ. 2002ರ ಗುಜರಾತ್ ದಂಗೆ, 2021ರ ದೆಹಲಿಯ ಗಲಭೆಯಲ್ಲಿ ಮೃತ್ಯುಗೀಡಾದವರಲ್ಲಿ
ಅಲ್ಪಸಂಖ್ಯಾತರ ಸಂಖ್ಯೆಯೇ ಜಾಸ್ತಿ.

ಈ ಗಲಭೆಗಳ ಹಿನ್ನೆಲೆಯಲ್ಲಿರುವ ಮನೋಗತಿಗಳೇನು? ಸೇನಾ ಕಾರ್ಯಾಚರಣೆಯ ಮೂಲಕ ಕಂಡಲ್ಲಿ ಗುಂಡು ಎಂದು ಕರ್ಫ್ಯೂ ವಿಧಿಸಿದ್ದರೆ ಗಲಭೆಯನ್ನು ಶೀಘ್ರದಲ್ಲೇ ನಿಯಂತ್ರಿಸಬಹುದಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಆಡಳಿತ ರೂಢರ ಉದ್ದೇಶವು ಇನ್ನೇನೋ ಇರಬಹುದೆಂದು ಪರಿಸ್ಥಿತಿ ತಿಳಿ ಹೇಳುತ್ತಿದೆ. ರಾಜ್ಯ ಸರಕಾರವು ಒಂದು ವಿಭಾಗವನ್ನು ತುಷ್ಟೀಕರಿಸುವುದರಲ್ಲಿ ಒಲವು ತೋರಿಸಿದರೆ ಗಲಭೆ ಶೀಘ್ರದಲ್ಲೇ ಹತೋಟಿಗೆ ಬರುವುದು ದುಸ್ತರ.

ರಾಜ್ಯ ಸರಕಾರದ ವೈಫಲ್ಯವನ್ನು ಮುಂದಿಟ್ಟು ಮುಖ್ಯಮಂತ್ರಿಗೆ  ರಾಜಿನಾಮೆ ಕೊಡಬಹುದಾಗಿತ್ತು ಅಥವಾ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದಾಗಿತ್ತು. ಆದರೆ ಇದರಲ್ಲಿ ನಿಗೂಢವಾಗಿರುವುದು ವೈಯಕ್ತಿಕ ಪ್ರತಿಷ್ಠೆ ಎನ್ನಲಾಗುತ್ತಿದೆ. ಗುಜರಾತ್ ದಂಗೆಗಾಗಿ ಮೋದಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿರಲಿಲ್ಲ. ಮಣಿಪುರದ ಮುಖ್ಯಮಂತ್ರಿ  ಬಿರೇನ್ ಸಿಂಗ್ ರಾಜಿನಾಮೆ ನೀಡಿದರೆ ಅದು ಮೋದಿ ಕೀರ್ತಿಗೆ ಕುಂದಲ್ಲವೇ?

ಅರವಿಂದ್ ಕೇಜ್ರಿವಾಲ್ ಹೇಳಿದಂತೆ ಸಾಕಷ್ಟು ಶೈಕ್ಷಣಿಕ ಹಿನ್ನೆಲೆಯಿಲ್ಲದವರು ದೇಶದ ಉನ್ನತ ಹುದ್ದೆಯಲ್ಲಿದ್ದರೆ ಏನಾದೀತು, ಅವೆಲ್ಲವೂ ಈ ದೇಶದಲ್ಲಿ ನಡೆಯುತ್ತಾ ಇವೆ. ರೂ. 1000/- ಮತ್ತು ರೂ. 500/-ರ ನೋಟ್‌ಗಳ ಅಮಾನ್ಯೀಕರಣ ರೈತ ವಿರೋಧಿ ಕಾನೂನು,  ಮಹಿಳಾ ಫಹಿಲ್ವಾನರ ಮೇಲೆ ನಡೆದಿರುವ ಲೈಂಗಿಕ ಅತಿರೇಕಗಳ ಬಗ್ಗೆ ತನಿಖೆ ವಿಚಾರದಲ್ಲಿ ನಿರ್ಲಕ್ಷ್ಯ, ಅದಾನಿ ಉದ್ದಿಮೆಗೆ ರೂ. 20  ಸಾವಿರ ಕೋಟಿ ಒದಗಿಸಿದ ಬಗ್ಗೆ ಮೌನವಹಿಸಿರುವ ಪ್ರಧಾನಿಯ ನಿಲುವು, ಮಣಿಪುರದಲ್ಲಿ 3 ತಿಂಗಳಿಂದಲೂ ನಡೆಯುತ್ತಿರುವ  ಗಲಭೆಯ ಬಗ್ಗೆ ಮೌನಿಯಾಗಿರುವ ಪ್ರಧಾನಿಯ ನಿಲುವು ಇವೆಲ್ಲವೂ ಇದಕ್ಕೆ ಸಾಕ್ಷ್ಯ ನೀಡುತ್ತಿದೆ.

2015ರಲ್ಲಿ ಉ.ಪ್ರ. ದ ದಾದ್ರಿಯಲ್ಲಿ ಅಖ್ಲಾಕ್ ಫ್ರಿಜ್‌ನಲ್ಲಿ ದನದ ಮಾಂಸ ಇರಿಸಿದ್ದಾನೆ ಎಂಬ ಆರೋಪ ಹೊರಿಸಿ ಕೊಲೆ ಮಾಡಿದರು. ಒಂದರ ಮೇಲೆ ಇನ್ನೊಂದರAತೆ ರಾಜಸ್ಥಾನದಲ್ಲಿ ಪೆಹ್ಲೂಖಾನ್, ಜುನೈದ್, ತಬ್ರೇಜ್, ಕಾಶ್ಮೀರದ ಕಟ್‌ವಾದಲ್ಲಿ ಆಸೀಫಾ ಎಂಬ 8  ವರ್ಷದ ಬಾಲೆಯ ಮೇಲೆ ಅರ್ಚಕನ ಅತ್ಯಾಚಾರ. ಈ ಅತ್ಯಾಚಾರಗಳ ನಂತರ ಹರ್ಷೋಲ್ಲಾಸವನ್ನು ಪ್ರಕಟಿಸುವ ಫ್ಯಾಸಿಸ್ಟ್ ಮನೋಭಾವ. ಇದಲ್ಲದೇ ದೇಶದ ವನಿತೆಯರ ಮೇಲೆ ನಡೆದಿರುವ ಸರಣಿ ಅತ್ಯಾಚಾರ, ಸಂತ್ರಸ್ತರನ್ನು ಅಗ್ನಿಗರ್ಪಿಸುವ ಕಿರಾರ್ತತೆ. ಈ ಅಪರಾಧಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆಯಾಗಿದೆ?

ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಸನಾತನ ಪದ್ಧತಿಯಂತೆ ಅಭಿನಂದನೆ ಪುರಸ್ಕಾರ ಪ್ರಶಸ್ತಿ  ನೀಡಿ ಗೌರವಿಸುವ ಪರಿಯು ಏನನ್ನು ಸೂಚಿಸುತ್ತದೆ? ಪ್ರಧಾನ ಮಂತ್ರಿಗಳು ಈ ಹೇಯ ನರಮೇಧದ ಬಗ್ಗೆ ಎಂದಾದರೂ ಎಚ್ಚರಿಕೆಯ  ಹೇಳಿಕೆ ನೀಡಿದ ಪುರಾವೆ ಇದೆಯೇ? ಇದು ಪ್ರಧಾನಿ ಪಟ್ಟದ ಮುತ್ಸದ್ದಿತನವೇ?