ರಾಜಕೀಯ ಮತ್ತು ಸಾಮಾಜಿಕ ನಾಯಕರನ್ನು ಕ್ಯಾಂಪಸ್ ಉತ್ಪಾದಿಸಬೇಕಿದೆ: ಎಸ್.ಐ.ಓ ರಾಜ್ಯ ಅಧ್ಯಕ್ಷ ನಿಹಾಲ್ ಕಿದಿಯೂರು ಸಂದರ್ಶನ

0
696

ಎಸ್.ಐ.ಓ. ಕರ್ನಾಟಕ ಘಟಕದ ನೂತನ ಅಧ್ಯಕ್ಷರಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ನಿಹಾಲ್ ಕಿದಿಯೂರು ಉಡುಪಿ  ಜಿಲ್ಲೆಯ ಹೂಡೆಯವರು. ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದು ದೆಹಲಿಯ ಇಸ್ಲಾಮಿಕ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಎಸ್‍ಐಓನ ಸದಸ್ಯರಾಗಿ ಚಟುವಟಿಕೆಯಲ್ಲಿರುವ ಇವರ ಜೊತೆ ಸನ್ಮಾರ್ಗ ಉಪಸಂಪಾದಕ ಸಲೀಮ್ ಬೋಳಂಗಡಿ  ನಡೆಸಿದ ಸಂದರ್ಶನ ಇಲ್ಲಿದೆ. -ಸಂ.

?ನಿಮ್ಮ ಮುಂದೆ ಎರಡು ವರ್ಷಗಳಿವೆ. ನೀವು ಹಮ್ಮಿ ಕೊಂಡಿರುವ ಯೋಜನೆಗಳು ಏನು?

√ ಅಲ್ಲಾಹನು ಮಹತ್ತರವಾದ ಜವಾಬ್ದಾರಿಯನ್ನು ನನಗೆ ನೀಡಿದ್ದಾನೆ. ಅಲ್ಲಾಹನಿಗೆ ಸರ್ವಸ್ತುತಿಗಳು. ಕಳೆದ 36 ವರ್ಷಗಳಿಂದ ಎಸ್.ಐ.ಓ.  ತನ್ನ ಕಾರ್ಯರಂಗದಲ್ಲಿ ಸಂಚರಿಸುತ್ತಿದೆ. ನಾನು ನನ್ನದೇ ಆದ ಕೆಲವು ಗುರಿ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಅದನ್ನು ಒಟ್ಟಿನಲ್ಲಿ ಹೇಳಬೇಕಾದರೆ ಎಸ್.ಐ.ಓ. ಕರ್ನಾಟಕದ ಎಲ್ಲ ವಿದ್ಯಾರ್ಥಿಗಳ ಒಂದು ಧ್ವನಿಯಾಗಬೇಕು. ಎಲ್ಲಾ ವಿದ್ಯಾರ್ಥಿಗಳ ಒಂದು ಪ್ಲಾಟ್‍ಫಾರಂ ಆಗಬೇಕು  ಎಂಬ ಗುರಿಯನ್ನು ಈ ಎರಡು ವರ್ಷಗಳಲ್ಲಿ ಈಡೇರಬೇಕೆಂಬ ಬಯಕೆ ಇದೆ. ಎಸ್.ಐ.ಓ. ಈಗಾಗಲೇ 36 ವರ್ಷಗಳಲ್ಲಿ 18 ಮೀಕಾತ್‍ಗಳನ್ನು ಕಂಡಿದೆ. ಎಸ್.ಐ.ಓ. ಒಂದು ಇಸ್ಲಾಮೀ ಸಂಘಟನೆಯಾಗಿದೆ. ಸಲಹಾ ಸಮಿತಿಯಿಂದ ಈ ಹುದ್ದೆಗೆ ಆಯ್ಕೆಯಾಗುತ್ತಾರೆ. ಶೂರಾದ (ಸಲಹಾ ಸಮಿತಿ) ನಿರ್ಣಯದ ಪ್ರಕಾರ ಈ ಹುದ್ದೆಗೆ ಆಯ್ಕೆಯಾಗುತ್ತಾರೆ. ಸ್ವಯಂ ಪ್ರಯತ್ನದಿಂದ ಆಯ್ಕೆಯಾಗುವಂತಹದ್ದಲ್ಲ.

?ಲಬೀದ್ ಶಾಫಿಯವರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೀವು ಮತ್ತು ಅವರು ಕರಾವಳಿ ಭಾಗದವರೇ. ಇದು ನಿಮ್ಮ  ಹೊಣೆಗಾರಿಕೆಯನ್ನು ಸುಲಭಗೊಳಿಸಲು ಸಹಾಯಕವಾಗುತ್ತದೆಯೆಂಬ ನಿರೀಕ್ಷೆಯಿದೆಯೇ?

√ ಖಂಡಿತವಾಗಿಯೂ ಅವರಿಂದ ಉತ್ತಮ ಮಾರ್ಗದರ್ಶನ ಸಿಗಬಹುದೆಂಬ ಶುಭ ನಿರೀಕ್ಷೆ ಯಿದ್ದೇ ಕಳೆದೆರಡು ವರ್ಷಗಳಿಗಿಂತ ಹಿಂದೆ  ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಯವರು ಉತ್ತಮ ರೀತಿಯಲ್ಲಿ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ.  ಆದ್ದರಿಂದ ಈ ಪ್ರದೇಶಗಳ ಬಗ್ಗೆ ಹೆಚ್ಚು ಅರಿವು ಜ್ಞಾನ, ಅನುಭವವಿರುವುದರಿಂದ ಅವರಿಂದ ಬಹಳಷ್ಟು ಸಹಾಯಕವಾಗಬಹುದು.

? ಈಗ ರಾಜ್ಯದಲ್ಲಿ ಯುವಜನಾಂಗದ ಪ್ರಮಾಣ ಎಷ್ಟಿದೆ? ಆ ಯುವ ಜನಾಂಗವನ್ನು ತಲುಪಲು ಯಾವ ಯಾವ ಕಾರ್ಯಯೋಜನೆ  ಯನ್ನು ಹಮ್ಮಿಕೊಂಡಿದ್ದೀರಿ?

√ ಕರ್ನಾಟಕದಲ್ಲಿ ಸುಮಾರು 6 ಕೋಟಿ ಜನಸಂಖ್ಯೆಯಿರಬಹುದು. ಅದರಲ್ಲಿ ಶೇಕಡಾ 50-60ರಷ್ಟು ಯುವ ಜನತೆಯಿದೆಯೆಂದು ಹೇಳ ಬಹುದು. ಯುವಜನಾಂಗವನ್ನು ತಲುಪುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾವು ನಡೆಸಿದ್ದೇವೆ. ಅದರಲ್ಲಿ ಸದನದಲ್ಲಿ ಶಿಕ್ಷಣ  ಪ್ರಾಥಮಿಕ ಶಿಕ್ಷಣವಿರಬಹುದು. ಉನ್ನತಮಟ್ಟದ ಶಿಕ್ಷಣವಿರಬಹುದು. ಅದರಲ್ಲಿ ನಮ್ಮ ಯುವಕರ ಪಾತ್ರವೇನು? ಅವರು ಹೇಗೆ  ಮುಂದುವರಿಯ ಬಹುದು. ನಮ್ಮ ಬೆಂಗಳೂರನ್ನು `ಇಂಜಿನಿಯರ್ ಸಿಟಿ’ ಎಂದು ಕರೆಯುತ್ತಾರೆ. ಆದರೂ ಅಲ್ಲಿ ನಿರುದ್ಯೋಗದ ಸಮಸ್ಯೆಯು ವ್ಯಾಪಕವಾಗಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಯೋಜನೆ ಯಲ್ಲಿದ್ದೇವೆ. ಅಲ್ಲದೆ ಇನ್ನಿತರ ವಿದ್ಯಾರ್ಥಿಗಳ ಇನ್ನಿತರ ಸಮಸ್ಯೆಗಳ  ಬಗ್ಗೆ ಅದು ಕ್ಯಾಂಪಸ್‍ಗಳಲ್ಲಿ ಆಗಿರಬಹುದು ಕ್ಯಾಂಪಸ್‍ಗಳನ್ನು ಹೊರತು ಪಡಿಸಿದ ಸಮಸ್ಯೆಗಳಾಗಿರಬಹುದು ಆ ಬಗ್ಗೆಯೂ ಗಮನಹರಿಸಬೇಕೆಂದಿದ್ದೇವೆ. ಮಾದಕ ವ್ಯಸನ ಡ್ರಗ್ಸ್ ಆಲ್ಕೋಹಾಲ್ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಇಳಿಯಲಿದ್ದೇವೆ. ಈ ಹೋರಾಟದಲ್ಲಿ  ನಮಗೆ ಯುವಕರಿಂದ ಸಹಕಾರ ದೊರೆಯಬಹುದೆಂಬ ಭರವಸೆ ಇದೆ.

?ಎಸ್.ಐ.ಓ. ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ತಾಲೂಕು, ಜಿಲ್ಲೆಗಳ ಚಟುವಟಿಕೆಯಲ್ಲಿದೆಯೇ? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

√ ಅಲ್ಲಾಹನ ಅನುಗ್ರಹದಿಂದ ಎಸ್‍ಐಓ 36 ವರ್ಷದಿಂದ ಚಟುವಟಿಕೆಯಲ್ಲಿವೆ. ಕ್ಯಾಂಪಸ್ ಅದರ ಮೊದಲ ಗುರಿಯಾಗಿದೆ. ದೊಡ್ಡ ದೊಡ್ಡ  ಕ್ಯಾಂಪಸ್‍ನಲ್ಲಿ ಚಟುವಟಿಕೆಯಲ್ಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಎಲ್ಲಾ ಕಡೆ ನಮ್ಮ ಶಾಖೆಗಳಿವೆ.   ಅಲ್ಲಿ ನಿರಂತರ ನಾವು ಕೆಲಸ ಮಾಡುತ್ತಿದ್ದೇವೆ. ಅದು ಬೇಸಿಕ್ ಆಗಿ ಮೊದಲ ಹಂತದಲ್ಲಿ ಕಾರ್ಯಾಚರಿಸುತ್ತೇವೆ. ಪ್ರವೇಶ ಶುಲ್ಕದ  ವಿಚಾರದಲ್ಲಿ ಉಪನ್ಯಾಸಕರ ನೇಮಕದ ಬಗ್ಗೆ ಅಲ್ಲಿನ ಲೈಬ್ರೇರಿಯ ಬಗ್ಗೆ ಮತ್ತು ಅಲ್ಲಿನ ಕಲಿಕಾ ರೀತಿ ಹೇಗಿದೆ ಎಂಬ ಕುರಿತು ನಾವು  ಗಮನಹರಿಸುತ್ತೇವೆ. ವಿಶೇಷವಾಗಿ ಹೇಳಬೇಕಾದರೆ ಯಾದ್‍ಗೀರ್‍ನಲ್ಲಿ ನಾವು ಎಜುಕೇಶನ್ ಮೂವ್‍ಮೆಂಟ್ ಒಂದನ್ನು ಪ್ರಾರಂಭಿಸಿದ್ದೇವೆ.  ಬೀದರ್ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತುಂಬಾ ಹಿಂದಿತ್ತು. ಅಲ್ಲಿ ಬೀದರ್ ಡೆವಲಪ್‍ಮೆಂಟ್ ಎಜುಕೇಶನ್ ಪ್ರೊಜೆಕ್ಟ್ ಎಂಬ  ಯೋಜನೆ ಹಾಕಿಕೊಂಡಿದ್ದೆವು. ನಾವು ಕ್ಯಾಂಪಸ್‍ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದೇವೆ. ಅಲ್ಲಿನ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸುತ್ತೇವೆ.  ಆಯಾ ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿ ನಾಯಕರನ್ನು ಸೃಷ್ಟಿಸಿ ರಾಜಕೀಯ ರಂಗಕ್ಕೆ ಇಳಿಯುವ ಯೋಜನೆಯೂ ನಮ್ಮಲ್ಲಿದೆ.

? ಈಗ ಯುವ ಸಮೂಹದ ನಡುವೆ ಕೋಮುವಾದವನ್ನು ಬಿತ್ತಲಾಗುತ್ತದೆ. ಇದರ ವಿರುದ್ಧ ಏನಾದರೂ ಯೋಜನೆ ಹಾಕಿಕೊಂಡಿದ್ದೀರಾ?

√ ಕೋಮುವಾದ ಪಸರಿಸಲು ಮುಖ್ಯ ಕಾರಣ ನಮ್ಮ ವಿಭಜನೆ ಮತ್ತು ವಿಂಗಡನೆ ಯಿಂದಾಗಿದೆ. ಮುಸ್ಲಿಮ್ ಮತ್ತು ಹಿಂದೂಗಳ  ಪ್ರತ್ಯೇಕತೆಯು ಕೋಮುವಾದದ ಪ್ರಾರಂಭವಾಗಿದೆ. ಈ ಎರಡೂ ಸಮುದಾಯದ ಯುವಕರು ಬೆರೆಯಬೇಕು. ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿಗಳೆಂಬ ನೆಲೆಯಲ್ಲಿ ಎಲ್ಲರೂ ಒಂದಾಗಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು. ಇದಕ್ಕಾಗಿಯೇ ಕಳೆದ ವರ್ಷ ನಾವು ಹಲವು ಧರ್ಮಗಳು  ಒಂದು ಭಾರತ ಎಂಬ ಅಭಿಯಾನವನ್ನೇ ಹಮ್ಮಿಕೊಂಡಿ ದ್ದೆವು. ಈ ಅಭಿಯಾನ ಕರ್ನಾಟಕ ರಾಜ್ಯದಾದ್ಯಂತ ನಡೆದ ಒಂದು ವರ್ಷದ  ಅಭಿಯಾನವಾಗಿತ್ತು. ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ. ಮತ್ತೆ ಧರ್ಮ ಧರ್ಮಗಳ ನಡುವೆ ಸಂವಾದಗಳು ನಡೆಯಬೇಕಾದ  ಅನಿವಾರ್ಯತೆ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನದ ಅಗತ್ಯವಿದೆ.

? ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಗಳಿಗೆ
ಚುನಾವಣೆ ನಡೆಯುತ್ತಿಲ್ಲವಲ್ಲ…?

√ ಹೌದು, ಕರ್ನಾಟಕದಲ್ಲಿ ವಿದ್ಯಾರ್ಥಿ ಯೂನಿಯನ್ ಚುನಾವಣೆಗಳಿಗೆ ನಿಷೇಧ ಹೇರ ಲಾಗಿದೆ. 2008ರಲ್ಲಿ ಲಿಂಗ್ಡೋ ಕಮಿಶನ್ ಒಂದು  ತೀರ್ಪು ನೀಡಿತ್ತು. ಅದರ ಪ್ರಕಾರ ಕಾಲೇಜಿನಲ್ಲಿ ಯೂನಿಯನ್ ಚುನಾವಣೆ ನಡೆಸ ಬೇಕು. ಅದು ಸರಕಾರದ ಪ್ರಮಾಣಿಕೃತವಾಗಿರ ಬೇಕು.  ನಾವು ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿದ್ದೆವು. ವಿದ್ಯಾರ್ಥಿಗಳ ನಡುವೆ ಚುನಾವಣೆ ನಡೆದರೆ ಸಮಾಜದ ಕುರಿತು ಅವರಲ್ಲಿ ಕಳಕಳಿ ಉಂಟಾಗು  ತ್ತದೆ. ರಾಜಕೀಯ ನಾಯಕರ ಕೆಲವು ನಡೆಯನ್ನು ನಾವು ಟೀಕಿಸುತ್ತೇವೆ. ಈ ನಿಟ್ಟಿನಲ್ಲಿ ಕ್ಯಾಂಪಸ್ ಗಳಿಂದ ಮಾದರಿ ನಾಯಕರು ಮೂಡಿ  ಬರಬೇಕಾಗಿದೆ.

? ಯುವ ಜನಾಂಗದ ಇಂದಿನ ತುರ್ತು ಅಗತ್ಯ ಏನು?

√ ಯುವಜನಾಂಗವು ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ ಶಿಕ್ಷಣ ಪಡೆಯುತ್ತಾರೆ ಆದರೆ ಅವರಿಗೆ ಸರಿಯಾದ ರೀತಿಯ ಉದ್ಯೋಗ ದೊರೆಯುತ್ತಿಲ್ಲ. ಅದಕ್ಕಾಗಿ ಅವರು ಬೇರೆ ಬೇರೆ ದಾರಿ ಹುಡುಕುವುದರಲ್ಲಿ ನಿರತರಾಗಿದ್ದಾರೆ. ನಂತರ  ಅವರು ಶರಬು, ಡ್ರಗ್ಸ್ ಮುಂತಾದ ಕೆಟ್ಟ ಚಟಗಳಿಗೆ ಬಲಿಯಾಗು ತ್ತಾರೆ. ಅದನ್ನು ಸರಿಪಡಿಸಬೇಕಾಗಿದೆ.
ಎರಡನೆಯದಾಗಿ ಮೌಲ್ಯವಾಗಿದೆ. ಮೌಲ್ಯದ ಕೊರತೆಯಿದೆ. ಮೌಲ್ಯದ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ನಾಗರಿಕರಾಗಿ ಬದಲಾ  ಗಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಶೈಕ್ಷಣಿಕ ಪದ್ಧತಿಯು ಈ ವಿಚಾರದಲ್ಲಿ ವಿಫಲವಾಗಿದೆ. ಮೊದಲನೆಯದಾಗಿ ಶಿಕ್ಷಣ  ಪಡೆದ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ಉದ್ಯೋಗ ಕೊಡುತ್ತಿಲ್ಲ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಿಲ್ಲ. ಆದ್ದರಿಂದ ಶಿಕ್ಷಣ  ರಂಗದಲ್ಲಿ ಸುಧಾರಣೆಯಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಸ್.ಐ.ಓ. ಒಂದು ಉತ್ತಮ ಪಾತ್ರವಹಿಸುತ್ತದೆ ಎಂಬ ಭರವಸೆಯನ್ನು  ನಾವು ಯುವಕರಿಗೆ ನೀಡುತ್ತಿದ್ದೇವೆ.

? ಎಲ್ಲ ರೀತಿಯ ಕಾನೂನುಗಳಿದ್ದೂ ಕ್ಯಾಂಪಸ್‍ಗಳಲ್ಲಿ ಚಟುವಟಿಕೆ ಹೆಚ್ಚಾಗುತ್ತಿದೆ. ಈ ಕುರಿತು ನಿಮ್ಮದೇನಾದರೂ ಯೋಜನೆಯಿದೆಯೇ?

√ ನೀವು ನಮ್ಮ ಕಾರ್ಯ ಚಟುವಟಿಕೆಗಳತ್ತ ಗಮನಹರಿಸಿದರೆ ಮಾದಕ ವ್ಯಸನ ವಿರೋಧಿ ದಿನ ಆಚರಿಸಿ ಹಲವು ಕಾರ್ಯಕ್ರಮಗಳನ್ನು  ನಡೆಸಿದ್ದೇವೆ ಅಂದರೆ ಕೇವಲ ಉಪದೇಶ ನೀಡಿ ಹೋದರೆ ಸಾಲದು. ಬದಲಾಗಿ ಅದನ್ನು ಕಾರ್ಯರೂಪಕ್ಕೆ ತರಬೇಕು. ನಾವು ಸೈಕಾಲಜಿ¸ಸ್ಟ್ ನ ಸಹಾಯವನ್ನು ಈ ಬಗ್ಗೆ ಪಡೆಯುತ್ತಿದ್ದೇವೆ.
ಹೆಲ್ಪ್‍ಲೈನ್‍ವೊಂದನ್ನು ಸಂಘಟಿಸಿದ್ದೇವೆ ಮತ್ತು ಮಾದಕ ವಿರೋಧಿ, ಕಿಯಾಸ್ಕ್ ಹಾಕುತ್ತಿದ್ದೇವೆ. ಅಲ್ಲಿ ಬಂದು ಜನರು ಮಾತಬಾಡಬಹುದು.  ಅಲ್ಲದೆ ಜಾಥಾ ನಡೆಸಿದ್ದೇವೆ. ಇತ್ತೀಚೆಗೆ ಮಂಗಳೂರಿನಲ್ಲಿ ಎಲ್.ಎಸ್.ಡಿ. ಎಂಬ ಡ್ರಗ್ ಬಂದ ಬಗ್ಗೆ ವರದಿಯಾಗಿತ್ತು. ಅದು ಜೀವಕ್ಕೆ ಬ ಹಳ ಹಾನಿಕಾರಕವಾದ್ದು. ಅದು ಬಹಳ ಸುಲಭವಾಗಿ ದೊರೆಯುತ್ತದೆ.

? ಎಸ್.ಐ.ಓ. ಜೊತೆ ಸೇರಿ ಕೆಲಸ ಮಾಡ ಬೇಕಾದರೆ ಸೇರುವವರಿಗೆ ಇರುವ ಅರ್ಹತೆಯೇನು?

√ ಒಂದು ಉತ್ತಮ ಸಮಾಜದ ನಿರ್ಮಾಣದ ಉದ್ದೇಶವಿರುವ ಯಾವ ವಿದ್ಯಾರ್ಥಿಯೂ ನಮ್ಮ ಜೊತೆ ಸೇರಬಹುದಾಗಿದೆ. ಒಟ್ಟಿನಲ್ಲಿ ಆತ ನಿಗೆ ಸಮಾಜದ ಬಗ್ಗೆ ಕಳಕಳಿ ಇರಬೇಕು. ನಮ್ಮ ಸಂವಿಧಾನಕ್ಕೆ ಬದ್ಧವಾಗಿ ಅದನ್ನು ಒಪ್ಪಿದರೆ ಆತನು ಸದಸ್ಯನಾಗಿ ಸಕ್ರಿಯನಾಗಬಹುದು.  ಅವನಿಗಿರುವ ಅರ್ಹತೆಯನುಸಾರ ಚಟುವಟಿಕೆ ಯಲ್ಲಿರಬಹುದು. ಮೂವತ್ತು ವರ್ಷದೊಳಗಿನ ಭಾರತೀಯ ನಾಗರಿಕನಿಗೆ ನಮ್ಮ ಜೊತೆ ಸೇರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಅಂತಹ ವಿದ್ಯಾರ್ಥಿಗಳಿಗೆ ಎಸ್.ಐ.ಓ. ಉತ್ತಮ ವೇದಿಕೆಯಾಗಿದೆ ಎಂದು ನಾವು ಅವರಿಗೆ  ಭರವಸೆ ನೀಡುತ್ತೇವೆ.

? ಅಧ್ಯಕ್ಷರೆಂಬ ನೆಲೆಯಲ್ಲಿ ವಿದ್ಯಾರ್ಥಿ ಯುವ ಜನರಿಗೆ ನಿಮ್ಮ ಸಂದೇಶಗಳೇನು?

√ ಈಗ ನಾವು ಜೀವಿಸುತ್ತಿರುವ 21ನೇ ಶತಮಾನದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ನಾವು ಯಾವ ವಿಭಾಗದಲ್ಲಿ ವಿದ್ಯಾ ಬ್ಯಾಸ ಮಾಡುತ್ತಿದ್ದೇವೊ ಅದರಲ್ಲಿ ಉನ್ನತ ಮಟ್ಟ ತಲುಪಲು ಪ್ರಯತ್ನಿಸಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಗೊಂಡು ಉನ್ನತ ಸ್ಥಾನಗಳಿಸಬೇಕು.  ಮತ್ತು ಅದು ಸಮಾಜಕ್ಕೆ ಪ್ರಯೋಜನಕಾರಿಗಯಾಗ ಬೇಕು. ನಾವು ಗಳಿಸಿದ ಶಿಕ್ಷಣದಿಂದ ಸಮಾಜಕ್ಕೆ ಪ್ರಯೋಜನವಾದರೆ ಅದು ಉತ್ತಮ  ಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ಅದು ಬೆಳೆದು ಉತ್ತಮ ಭಾರತದ ನಿರ್ಮಾಣಕ್ಕೆ ಹಾದಿಯಾಗುತ್ತದೆ.