✍️ ಇರ್ಷಾದ್ ವೇಣೂರು
ಕಾರ್ಯದರ್ಶಿ, ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ
ಪತ್ರಕರ್ತರು ಹಾಗೂ ಕಾರ್ಯದರ್ಶಿ, ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ
ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಅದರ ಭಾಗವಾಗಿ ಕರ್ನಾಟಕದಲ್ಲಿ ಕೂಡ ನಡೆಯುತ್ತಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ. ಸದ್ಯ ಆಕ್ಷೇಪಣೆ ಹಾಗೂ ನೋಟಿಸ್ಗೆ ಅಕ್ಟೋಬರ್ 22 ದಿನಾಂಕ ನಿಗದಿಪಡಿಸಲಾಗಿದೆ.
ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಹಾಗೂ ಮಾಧ್ಯಮಗಳಲ್ಲಿ ಮುಖಪುಟದಲ್ಲಿ ಕಾಣಿಸಿಕೊಂಡಿರುವ ಸುದ್ದಿ ಏನೆಂದರೆ, ‘ಫಾರಂ 7’. ಹೌದು, ಈ ಫಾರಂ ನಂಬರ್ 7 ಅನ್ನು ಬಳಸಿಕೊಂಡು ವಿಶೇಷವಾಗಿ ಮುಸ್ಲಿಮ್ ಸಮುದಾಯದ ಮತದಾರರ ವಿರುದ್ಧ ಷಡ್ಯಂತರ ಹೂಡಲಾಗಿದೆ. ಅಂದರೆ ಅವರ ಮತದಾನದ ಹಕ್ಕನ್ನು ವ್ಯವಸ್ಥಿತವಾಗಿ ಕಸಿಯುವ ಹುನ್ನಾರ ಮಾಡಲಾಗುತ್ತಿದೆ.
ಈ ಫಾರಂ 7 ಅಂದರೆ ಏನು?
ಫಾರಂ 7 (Form 7) ಎಂದರೆ ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ಒಬ್ಬ ವ್ಯಕ್ತಿಯ ಹೆಸರನ್ನು ತೆಗೆದುಹಾಕಲು (Deletion) ಅಥವಾ ಮತದಾರರ ಪಟ್ಟಿಯಲ್ಲಿರುವ ತಪ್ಪು/ಅರ್ಹತೆಯಿಲ್ಲದ ದಾಖಲೆಯ ಕುರಿತು ಆಕ್ಷೇಪಣೆ ಸಲ್ಲಿಸಲು ಬಳಸುವ ಚುನಾವಣಾ ಆಯೋಗದ ಅರ್ಜಿ. ಫಾರಂ 7 ಅರ್ಜಿಯು ACCEPT ಆದ ಬಳಿಕ FORM 10 ಆಗಿ ಕನ್ವರ್ಟ್ ಆಗುತ್ತದೆ. ಆದರೆ, ಹೆಚ್ಚಿನವರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಎಂಬುದು ಮಾತ್ರ ವಾಸ್ತವ.
ಫಾರಂ 7 ಅನ್ನು ಯಾವಾಗ ಬಳಸಬಹುದು?
1. ಮತದಾರರು ಮರಣ ಹೊಂದಿದ್ದರೆ
2. ವ್ಯಕ್ತಿ ಶಾಶ್ವತವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ
3. ಒಂದೇ ವ್ಯಕ್ತಿಯ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇದ್ದರೆ
4. ವ್ಯಕ್ತಿ ಆ ಕ್ಷೇತ್ರದ ಮತದಾರರಾಗಲು ಅರ್ಹರಾಗಿಲ್ಲದಿದ್ದರೆ ಮತದಾರರ ಪಟ್ಟಿಯಲ್ಲಿರುವ ಅರ್ಹತೆಯಿಲ್ಲದ ದಾಖಲೆಯ ವಿರುದ್ಧ ಆಕ್ಷೇಪಣೆ ಸಲ್ಲಿಸಬೇಕಾದರೆ.
ಮುಖ್ಯವಾಗಿ: ನಿಮ್ಮ ಸ್ವಂತ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಾದ ಸಂದರ್ಭದಲ್ಲೂ ಫಾರಂ 7 ಅನ್ನು ಬಳಸಬಹುದು.
ಮೇಲೆ ಹೇಳಿರುವ ನಾಲ್ಕನೇ ಅಂಶ: ವ್ಯಕ್ತಿ ಆ ಕ್ಷೇತ್ರದ ಮತದಾರರಾಗಲು ಅರ್ಹರಾಗಿಲ್ಲದಿದ್ದರೆ, ಮತದಾರರ ಪಟ್ಟಿಯಲ್ಲಿರುವ ಅರ್ಹತೆಯಿಲ್ಲದ ದಾಖಲೆಯ ವಿರುದ್ಧ ಆಕ್ಷೇಪಣೆ ಸಲ್ಲಿಸಬೇಕಾದರೆ – ಈಗ ಇದೇ ಅಂಶವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಮತಗಳನ್ನು ಡಿಲೀಟ್ ಮಾಡಲು ಎಲ್ಲೆಲ್ಲಿಯೋ ಕೂತು, ಯಾರು ಯಾರೋ ಅರ್ಜಿ ಹಾಕುತ್ತಿದ್ದಾರೆ. ಬಬಲೇಶ್ವರ ಕ್ಷೇತ್ರದ ತಿಕೋಟಾ ಪ್ರದೇಶದ ಬಿಎಲ್ಓ ಅವರ ಕುಟುಂಬದ 18 ಸದಸ್ಯರ ಹೆಸರು ಫಾರಂ 7ಗೆ ಅರ್ಜಿ ಸಲ್ಲಿಸಿದ್ದು ಗಮನಕ್ಕೆ ಬಂದಾಗ, ಈ ವಿಚಾರ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಸೋಲಿಡಾರಿಟಿ ಎಸ್ಐಆರ್ ತಂಡವು ಪತ್ತೆ ಹಚ್ಚಿದೆ. ಬಬಲೇಶ್ವರ, ಭಾಲ್ಕಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಫಾರಂ 7 ಅರ್ಜಿಯ ಬಗ್ಗೆ ಮಾಹಿತಿ ಕಲೆಹಾಕಿದೆ. ಕೂಡಲೇ ಹಲವು ಜನಪರ ಸಂಘಟನೆಗಳ ಗಮನಕ್ಕೆ ತಂದಿದೆ.
ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರು ಉಳಿಯುವುದು ಪ್ರಜಾಪ್ರಭುತ್ವದ ಅತ್ಯಂತ ಮೂಲಭೂತ ಹಕ್ಕು. ಒಂದು ಅರ್ಹ ಮತದಾರನ ಹೆಸರು ತಪ್ಪಾಗಿ ಅಳಿಸಲ್ಪಟ್ಟರೂ, ಅದರ ಪರಿಣಾಮ ಕೇವಲ ಆಡಳಿತಾತ್ಮಕ ದೋಷವಲ್ಲ; ಅದು ಆ ನಾಗರಿಕನ ಚುನಾವಣಾ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಚುನಾವಣಾ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಕರ್ನಾಟಕದಲ್ಲಿ ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ಕೂಡ, ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಅರ್ಹ ಮತದಾರರಿಗೆ ಮತದಾನದ ಹಕ್ಕನ್ನು ನೀಡುವುದೇ ಎಸ್ಐಆರ್ನ ಉದ್ದೇಶ ಎಂದು ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆ ಆರಂಭ ಮಾಡುವುದಕ್ಕೂ ಮುನ್ನ ಹೇಳಿಕೆ ನೀಡಿತ್ತು. ಆದರೆ, ಕರ್ನಾಟಕದಲ್ಲಿ ನಿರ್ದಿಷ್ಟವಾಗಿ ಹೇಳುವುದಾದರೆ ಮುಸ್ಲಿಮ್ ಮತದಾರರನ್ನು ಡಿಲೀಟ್ ಮಾಡಲು ಬೃಹತ್ ಪ್ರಮಾಣದಲ್ಲಿ ಹಲವಾರು ಕಡೆಗಳಲ್ಲಿ ವ್ಯವಸ್ಥಿತವಾಗಿ ಅರ್ಜಿ ಹಾಕಲಾಗುತ್ತಿದೆ.
ಕರ್ನಾಟಕದಲ್ಲಿ ಫಾರಂ 7ರ ಹೆಸರಿನಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿ ಆತಂಕ ಸೃಷ್ಟಿಯಾಗಬೇಕಿತ್ತು. ಚುನಾವಣಾ ಆಯೋಗ ಕೂಡಲೇ ಪೊಲೀಸರಿಗೆ ದೂರು ನೀಡಿ, ಕ್ರಿಮಿನಲ್ಗಳನ್ನು ಇಷ್ಟು ಹೊತ್ತಿಗೆ ಜೈಲಿನಲ್ಲಿ ಇರಿಸಬೇಕಿತ್ತು. ಆದರೆ, ಅವರ ಕಡೆಯಿಂದ ಒಂದು ದೂರು ಕೂಡ ದಾಖಲಾಗಿಲ್ಲ!!! ಹಾಗಾದರೆ, ಇದರ ಅರ್ಥ ಏನು ಎಂಬುದನ್ನು ಚುನಾವಣಾ ಆಯೋಗದ ಅಧಿಕಾರಿಗಳೇ ಉತ್ತರಿಸಬೇಕಿದೆ.
ಬೆಳಗಾವಿ ಉತ್ತರ ಮತ್ತು ಬೀದರ್ನ ಭಾಲ್ಕಿ ವಿಧಾನಸಭಾ ಕ್ಷೇತ್ರಗಳ ಅರ್ಹ ಮುಸ್ಲಿಂ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಸಲ್ಲಿಸಲಾಗಿರುವ ಅಕ್ರಮ ಅರ್ಜಿಗಳಲ್ಲಿ ಹೊರರಾಜ್ಯಗಳ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆಯಾದರೂ, ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಹೇಳಿಕೆ ಬಂದಿಲ್ಲ.
ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ 2,500 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ರಾಷ್ಟ್ರೀಯ ಪಕ್ಷವೊಂದರ ಕರ್ನಾಟಕ ರಾಜ್ಯಾಧ್ಯಕ್ಷರು ಬಹಿರಂಗಪಡಿಸಿದ್ದಾರೆ. ಆದರೂ ಚುನಾವಣಾ ಆಯೋಗವು ಈವರೆಗೆ ಉತ್ತರ ನೀಡಿಲ್ಲ. ಅಥವಾ ಈ ಆರೋಪಗಳ ಬಗ್ಗೆ ಪ್ರಕಟಣೆ ಕೂಡ ನೀಡಿಲ್ಲ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ಅಥವಾ ನಕಲಿ ನಮೂನೆಯನ್ನು ಸಲ್ಲಿಸಿದರೆ, ಅವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಫಾರಂ 7 ನಮೂನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆಯಾದರೂ, ಆಯೋಗದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಚುನಾವಣಾ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆದುಹಾಕುವ ಕುರಿತು ಫಾರ್ಮ್-7 ಮೂಲಕ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಗೆ ನಿರ್ದಿಷ್ಟ ನಿಯಮಗಳಿವೆ. ಆದರೆ, ಈ ಪ್ರಕರಣದಲ್ಲಿ ಕೆಲವೇ ವ್ಯಕ್ತಿಗಳಿಂದ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಈ ಮೊದಲು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಆಯಾ ಮತಗಟ್ಟೆಯ ಮತದಾರರೇ ಅರ್ಜಿ ಸಲ್ಲಿಸಬೇಕಿತ್ತು. 2024ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ತಂದ ಪರಿಣಾಮ, ಆಯಾ ಕ್ಷೇತ್ರದ ಮತದಾರರೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಬೆಳಗಾವಿ ಉತ್ತರ ಕ್ಷೇತ್ರ, ಚಿಕ್ಕಮಗಳೂರಿನ ಮೂಡಿಗೆರೆ, ಬಬಲೇಶ್ವರ ಕ್ಷೇತ್ರ ಸೇರಿದಂತೆ ಹೀಗೆ ಅರ್ಜಿ ಸಲ್ಲಿಸಿದವರಿಗೆ ಮತಗಟ್ಟೆಯ ವಿಳಾಸವೇ ಗೊತ್ತಿಲ್ಲ. ಹೀಗಿದ್ದೂ ಅರ್ಹರ ಡಿಲೀಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಚುನಾವಣಾ ಆಯೋಗವಲ್ಲದೆ ಇನ್ಯಾರು?
ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ ಇಂಡಿಯನ್ ಎಕ್ಸ್ಪ್ರೆಸ್ನ ಪತ್ರಕರ್ತೆ ರಿತಿಕಾ ಚೋಪ್ರಾ ರವರ ತನಿಖಾ ವರದಿಯಿಂದ ದೇಶದ ಜನರ ಮುಂದೆ ಸತ್ಯ ಬಯಲಾಗಿದೆ. ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಸತ್ಯದ ಮೇಲೆ ಸುಳ್ಳಿನ ಗೋಪುರ ಕಟ್ಟಲು ಹೊರಟು ಸಿಕ್ಕಿಬಿದ್ದಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಕೇವಲ ಫಾರಂ 7 ಮಾತ್ರವಲ್ಲದೇ ಎಲ್ಲವೂ ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬುದು ಈಗ ಜಗಜ್ಜಾಹೀರಾಗಿದೆ. ಹೀಗಾಗಿ, ಮತದಾನದ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಮುನ್ನ ನಾಗರಿಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇಂದು ನಮಗೆ ಬಂದೊದಗಿದೆ. ಈ ವಾಸ್ತವವನ್ನು ಪಕ್ಷಾತೀತವಾಗಿ ನಾವೆಲ್ಲರೂ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಮತದಾರರ ಪಟ್ಟಿಯು ಯಾವುದೇ ಪಕ್ಷದ ಆಸ್ತಿ ಅಲ್ಲ. ಅದು ಭಾರತದ ಪ್ರಜಾಪ್ರಭುತ್ವದ ಸಾರ್ವಜನಿಕ ದಾಖಲೆ. ಆ ಪಟ್ಟಿಯಲ್ಲಿ ಯಾರ ಹೆಸರು ಇರಬೇಕು, ಯಾರ ಹೆಸರು ಇರಬಾರದು ಎಂಬ ನಿರ್ಧಾರವು ಕಾನೂನು, ಸಾಕ್ಷ್ಯ ಮತ್ತು ಪಾರದರ್ಶಕ ಪರಿಶೀಲನೆಯ ಆಧಾರದ ಮೇಲೆ ಮಾತ್ರ ನಡೆಯಬೇಕು. ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಸಾಮಾಜಿಕ ಪೂರ್ವಾಗ್ರಹದ ಆಧಾರದ ಮೇಲೆ ಅಲ್ಲ.
ಫಾರಂ-7 ನಿಜವಾದ ಅಕ್ರಮಗಳನ್ನು ಸರಿಪಡಿಸುವ ಕಾನೂನುಬದ್ಧ ಸಾಧನವಾಗಿದ್ದರೆ ಅದನ್ನು ಬಳಸಬೇಕು. ಆದರೆ ಅದೇ ಫಾರಂ-7 ಅರ್ಹ ಮತದಾರರನ್ನು ಗುರಿಯಾಗಿಸುವ ಸಾಧನವಾಗಿ ಬಳಸಲ್ಪಡುತ್ತಿರುವುದು ವ್ಯವಸ್ಥಿತ ಷಡ್ಯಂತ್ರವಲ್ಲದೇ ಇನ್ನೇನು? ಸಾರ್ವಜನಿಕರ ಎಲ್ಲ ಅನುಮಾನವನ್ನು ನಿವಾರಿಸುವ ಹೊಣೆ ಚುನಾವಣಾ ಆಯೋಗದ ಮೇಲಿದೆ. ಒಬ್ಬ ಅರ್ಹ ನಾಗರಿಕನ ಮತವೂ ಅಮೂಲ್ಯ. ಒಂದು ತಪ್ಪು/ನಕಲಿ ಫಾರಂ-7 ಕೂಡ ಒಬ್ಬ ನಾಗರಿಕನ ಪ್ರಜಾಪ್ರಭುತ್ವದ ಹಕ್ಕಿಗೆ ಧಕ್ಕೆ ತರಬಹುದು.
ಆದ್ದರಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಫಾರಂ-7 ಆಕ್ಷೇಪಣೆಗಳ ಬಗ್ಗೆ ಸ್ವತಂತ್ರ, ಪಾರದರ್ಶಕ ಮತ್ತು ಕ್ಷೇತ್ರವಾರು ಪರಿಶೀಲನೆ ನಡೆಯಬೇಕು. ಯಾವುದೇ ಸಮುದಾಯದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಚುನಾವಣಾ ಆಯೋಗವು ದೃಢವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯ ಶುದ್ಧತೆ ಎಷ್ಟು ಮುಖ್ಯವೋ, ಮತದಾರನ ಹಕ್ಕಿನ ರಕ್ಷಣೆಯೂ ಅಷ್ಟೇ ಮುಖ್ಯ. ಅಲ್ಲದೇ ಚುಣಾವಣಾ ಆಯೋಗದ ಪಾರದರ್ಶಕತೆ, ಆಯೋಗದ ಮೇಲೆ ಜನರಿಗೆ ಭರವಸೆ/ನಂಬಿಕೆಯೂ ಅಷ್ಟೇ ಮುಖ್ಯ. ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ.












