ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಸಿರಾಜುಲ್ ಹಸನ್ ನಿಧನ: ದೇಶ ಬಾಂಧವರೊಂದಿಗಿನ ಸಂಪರ್ಕದಲ್ಲಿ ಕ್ರಾಂತಿ ತಂದ ನಾಯಕ

0
1630

ಸನ್ಮಾರ್ಗ ವಾರ್ತೆ

ರಾಯಚೂರು, ಎ. 2- ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಸಿರಾಜುಲ್ ಹಸನ್ ಇವತ್ತು ( ಏಪ್ರಿಲ್ 2) ಸಂಜೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

1958 ರಿಂದ 1983 ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ನ ರಾಜ್ಯಾಧ್ಯಕ್ಷರಾಗಿದ್ದ ಅವರು 1983 ರಿಂದ 1992 ರವರೆಗೆ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ 1992 ರಿಂದ 2004ರವರೆಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ರಾಯಚೂರಿನ ಜವಲಗೆರೆ ಎಂಬಲ್ಲಿ ಜಮೀನ್ದಾರರ ಮಗನಾಗಿ 1933 ಮಾರ್ಚ್ ಮೂರರಂದು ಜನಿಸಿದ ಸಿರಾಜುಲ್ ಹಸನ್ ಅವರಿಗೆ ರಾಯಚೂರಿನ ಮುಹಮ್ಮದ್ ಜಾಫರ್ ಮನಿಯಾರ್ ಅವರ ಮುಖಾಂತರ ಜಮಾಅತೆ-ಇಸ್ಲಾಮಿ ಹಿಂದ್ ನ ಪರಿಚಯವಾಗಿತ್ತು. ಅವರು ದೇಶ ಬಾಂಧವರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ವಿಷಯದಲ್ಲಿ ಮಾದರೀ ಪರಂಪರೆಯೊಂದನ್ನು ಹುಟ್ಟುಹಾಕಿದರು. ಸ್ವಾಮೀಜಿಗಳು ಮತ್ತು ಕೈಸ್ತ ಧರ್ಮ ಗುರುಗಳೊಂದಿಗೆ ಅವರಿಗೆ ಬಹಳ ಆತ್ಮೀಯ ಸಂಪರ್ಕ ಇತ್ತು. ಮಾತ್ರವಲ್ಲ ಒಮ್ಮೆ ಯಾರನ್ನಾದರೂ ಭೇಟಿಯಾದರೆ ಮತ್ತೆ ಅವರ ಹೆಸರಿನೊಂದಿಗೆ ಗುರುತಿಸುವ ವಿಶಿಷ್ಟ ನೆನಪು ಶಕ್ತಿ ಇತ್ತು. ಅವರು ತಮ್ಮ ಅವಧಿಯಲ್ಲಿ ಸದಾ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.

ಸಾಮಾನ್ಯವಾಗಿ ಬೆಳಿಗ್ಗೆ ನಾಲ್ಕು ಗಂಟೆಗೆ ಅವರ ದಿನಚರಿ ಆರಂಭವಾಗುತ್ತಿತ್ತು. ತಹಜ್ಜುದ್ ನಮಾಝ್ ಮಾಡಿದ ಬಳಿಕ ಅವರು ತನ್ನ ಕಾರ್ಯಕರ್ತರಿಗೆ ಪೋಸ್ಟ್ ಕಾರ್ಡುಗಳನ್ನು ಬರೆಯುವ ರೂಢಿಯನ್ನು ಇಟ್ಟುಕೊಂಡಿದ್ದರು. ಮೂಲಕ ಮೊಬೈಲ್ ಇಲ್ಲದ ಹಿಂದಿನ ಕಾಲದಲ್ಲಿ ಇದು ಅವರ ಸಂಪರ್ಕ ಸಾಧನವಾಗಿತ್ತು. ಕಾರ್ಯಕರ್ತರೊಂದಿಗೆ ಪ್ರತ್ಯ ಪ್ರತ್ಯೇಕವಾಗಿ ಸಂಪರ್ಕವನ್ನು ಇಟ್ಟುಕೊಳ್ಳುವ ರೀತಿಯನ್ನು ಅವರು ಅನುಸರಿಸಿದ್ದರು. ಕಾರ್ಯಕರ್ತರು ನೇರವಾಗಿ ಅವರೊಂದಿಗೆ ಪೋಸ್ಟ್ ಕಾರ್ಡಿನಲ್ಲಿ ಸಂಪರ್ಕಿಸಬಹುದಿತ್ತು. ಕಾರ್ಯಕರ್ತರ ಪ್ರಶ್ನೆಗಳಿಗೆ ಅವರು ಕಾರ್ಡಿನ ಮೂಲಕ ಉತ್ತರಿಸುತ್ತಿದ್ದರು.

ಅವರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಉತ್ತಮ ಸಂಬಂಧ ಇತ್ತು. ಈ ಭಾಗದ ವಿವಿಧ ಪ್ರದೇಶಗಳಿಗೆ ಅವರು ಆಗಾಗ ಭೇಟಿ ಕೊಟ್ಟು ಜಮಾಅತ್ ನ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದರು. ಅವರು ಸನ್ಮಾರ್ಗ ಪತ್ರಿಕೆ, ಅನುಪಮ ಮತ್ತು ಇಸ್ಮಿಕ ಗಳ ಕುರಿತಂತೆ ಬಹಳ ಅಭಿಮಾನ ಪಟ್ಟುಕೊಂಡಿದ್ದರು. ಅದರ ಅಭಿವೃದ್ಧಿಗಾಗಿ ಗಮನಹರಿಸಿದರು.

ಅವರು ಸ್ನಾನಗೃಹದಲ್ಲಿ ಬಿದ್ದು ವಾರಗಳ ಹಿಂದೆ ಆಸ್ಪತ್ರೆ ಸೇರಿದ್ದರು. ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಆ ಬಳಿಕ ಮೂರು ದಿನಗಳ ಹಿಂದೆ ಅವರನ್ನು ಮನೆಗೆ ಕರೆತರಲಾಗಿತ್ತು.

ಅವರು ಐದು ಗಂಡು ಮತ್ತು ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ. ಅವರ ಪತ್ನಿ ಮತ್ತು ಓರ್ವ ಪುತ್ರ ಈ ಮೊದಲೇ ನಿಧನರಾಗಿದ್ದಾರೆ. ಅವರ ಓರ್ವ ಮಗ ವೈದ್ಯರಾಗಿದ್ದು, ಇನ್ನೋರ್ವ ಮಗ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಆಗಿ ನಿವೃತ್ತರಾಗಿದ್ದಾರೆ. ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.