ಕಾಶ್ಮೀರ: ಯೂಸುಫ್ ತರಿಗಾಮಿಯವರನ್ನು ಭೇಟಿಯಾದ ಯೆಚೂರಿ

0
423

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.30: ಸುಪ್ರೀಂಕೋರ್ಟಿನ ನಿರ್ದೇಶನದಂತೆ ಜಮ್ಮು-ಕಾಶ್ಮೀರಕ್ಕೆ ತೆರಳಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕಾಶ್ಮೀರದ ಸಿಪಿಎಂ ಹಿರಿಯ ನಾಯಕ, ಮಾಜಿ ಶಾಸಕ ಮುಹಮ್ಮದ ಯೂಸುಫ್ ತರಿಗಾಮಿಯವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗೆ ಹೋದ ಮೊದಲ ರಾಜಕೀಯ ನಾಯಕ ಯೆಚೂರಿ ಆಗಿದ್ದಾರೆ.

ಅನಾರೋಗ್ಯದಲ್ಲಿರುವ ತರಿಗಾಮಿ ಭೇಟಿಗೆ ಅವರು ಆಗಸ್ಟ್ ಒಂಬತ್ತರಂದು ಶ್ರೀನಗರಕ್ಕೆ ತೆರಳಿದ್ದರು. ಆದರೆ ವಿಮಾನ ನಿಲ್ದಾಣದಿಂದಲೇ ಅವರನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ನಂತರ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ತರಿಗಾಮಿಯವರನ್ನು ಭೇಟಿಯಾಗಲು ಸುಪ್ರೀಂಕೋರ್ಟು ಅನುಮತಿ ನೀಡಿತ್ತು. ತರಿಗಾಮಿಯವರ ವಸತಿ ಗೃಹಕ್ಕೆ ಅವರನ್ನು ಏಳು ವಾಹನಗಳ ಬೆಂಗಾವಲಿನೊಂದಿಗೆ ಕರೆದುಕೊಂಡು ಹೋಗಲಾಗಿದೆ. ಯೆಚೂರಿ ಇಂದು ದಿಲ್ಲಿಗೆ ಮರಳಲಿದ್ದಾರೆ.

ತಂದೆ-ತಾಯಿಯರನ್ನು ಭೇಟಿಯಾಗಲು ಸುಪ್ರೀಂಕೋರ್ಟಿನ ಅನುಮತಿ ಪಡೆದು ಜಾಮಿಅ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿ ಮುಹಮ್ಮದ್ ಆಲಂ ಸಈದ್ ಕೂಡ ಶ್ರೀನಗರಕ್ಕೆ ತಲುಪಿದ್ದಾರೆ.