ತೇಜಸ್ವಿ ಸೂರ್ಯ ನಾಮಪತ್ರ ಸಮಾವೇಶದ ವೇಳೆ ‘ಪ್ರೀತಿಯಿಂದ ದ್ವೇಷವನ್ನು ಪಂಚರ್ ಮಾಡಿ’ ಬ್ಯಾನರ್ ಪ್ರದರ್ಶಿಸಿದ ಸಾಮಾಜಿಕ ಕಾರ್ಯಕರ್ತರು

0
504

ಸನ್ಮಾರ್ಗ ವಾರ್ತೆ

ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ‘ಪ್ರೀತಿಯಿಂದ ದ್ವೇಷವನ್ನು ಪಂಚರ್ ಮಾಡಿ’ ಎಂದು ಸಾಮಾಜಿಕ ಕಾರ್ಯಕರ್ತರ ತಂಡವೊಂದು ಬ್ಯಾನ‌ರ್ ಪ್ರದರ್ಶನ ಮಾಡಿದ ಬೆಳವಣಿಗೆ ಬೆಂಗಳೂರಿನ ಜಯನಗರದಲ್ಲಿ ಇಂದು ನಡೆದಿದೆ.

ಬ್ಯಾನರ್ ಪ್ರದರ್ಶನದ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ತೇಜಸ್ವಿ ಸೂರ್ಯ ಬೆಂಬಲಿಗರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

ಗುರುವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಯನಗರದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ವಿಪಕ್ಷದ ನಾಯಕ ಆರ್ ಅಶೋಕ್‌, ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಈ ವೇಳೆ ಸಾಮಾಜಿಕ ಕಾಯಕರ್ತ ವಿನಯ್ ಕುಮಾರ್ ಅವರ ನೇತೃತ್ವದ ಐದರಿಂದ ಆರು ಜನರಿದ್ದ ತಂಡವೊಂದು ಸ್ಥಳಕ್ಕೆ ಆಗಮಿಸಿ, ಬ್ಯಾನರ್‌ ಪ್ರದರ್ಶನ ಮಾಡಿತು. ಬ್ಯಾನ‌ರ್‌ನಲ್ಲಿ ‘ಪ್ರೀತಿಯಿಂದ ದ್ವೇಷವನ್ನು ಪಂಚ‌ರ್ ಮಾಡಿ(Puncture Hate With Love)‘ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿತ್ತು. ಈ ಬ್ಯಾನರ್ ಪ್ರದರ್ಶನ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಮಾದ್ಯಮದ ಜೊತೆಗೆ ಮಾತನಾಡಿದ ತಂಡದ ಸದಸ್ಯ ವಿನಯ್ ಕುಮಾರ್, “ದೇಶದಲ್ಲಿ ಇರುವ ಕೋಮುವಾದ ವಿರೋಧಿಸಿ ಬ್ಯಾನ‌ರ್ ಪ್ರದರ್ಶನ ಮಾಡಿದ್ದೇವೆ. ತೇಜಸ್ವಿ ಸೂರ್ಯ ಬಂಧುತ್ವ ಬೆಳೆಸುವ ಕೆಲಸ ಮಾಡಬೇಕು. ಇತ್ತೀಚೆಗೆ ನಗರ್ತಪೇಟೆಯ ಘಟನೆಯಲ್ಲೂ ಕೂಡ ಅವರು ದ್ವೇಷ ಹರಡುವ ಕೆಲಸ ಮಾಡುವ ಮೂಲಕ ಬೆಂಗಳೂರಿಗೆ ಕಳಂಕ ತಂದಿದ್ದರು. ಅಲ್ಲದೇ, ವಿವಾದಾತ್ಮಕ ಹೇಳಿಕೆಗಳನ್ನು ಕೂಡ ನೀಡುತ್ತಿದ್ದಾರೆ. ನೀವು ಜನಪ್ರತಿನಿಧಿಯಾಗಿ ತಪ್ಪು ಮಾಡುತ್ತಾ ಇದ್ದೀರಿ ಎಂಬುದನ್ನು ನೆನೆಪಿಸಲು ನಮ್ಮ ಕರ್ತವ್ಯ ಮಾಡಿದ್ದೇವೆ” ಎಂದು ತಿಳಿಸಿದರು.

“ಜನರಲ್ಲಿ ದ್ವೇಷ ಭಾವನೆ ಹುಟ್ಟುವಂತೆ ಮಾಡಬಾರದು. ಅದಕ್ಕೆ ಪ್ರೀತಿ ಬೆಳೆಯಲಿ ದ್ವೇಷ ಬೇಡ ಎಂದು ಬ್ಯಾನ‌ರ್ ಪ್ರದರ್ಶನ ಮಾಡಿದ್ದೇವೆ. ನಮಗೆ ವೈಯಕ್ತಿಕವಾಗಿ ಅವರ ಮೇಲೆ ಸಿಟ್ಟಿಲ್ಲ. ಸಮಾಜದ ಸೌಹಾರ್ದ ಹಾಗೂ ಶಾಂತಿ ಕದಡಿಸುವ ಹೇಳಿಕೆ ಕೊಡಬಾರದು. ಅದರ ಅಗತ್ಯ ನಮ್ಮಂತಹ ಜನಸಾಮಾನ್ಯರಿಗಿಲ್ಲ. ಅದನ್ನು ತಿಳಿಸಲು ನಮ್ಮ ಶ್ರಮ” ಎಂದು  ಹೇಳಿದರು.

ಸಾಮಾಜಿಕ ಕಾರ್ಯಕರ್ತರ ತಂಡದಲ್ಲಿ ಗೀತಾ, ಮಾಧುರಿ ಸೇರಿದಂತೆ ಹಲವರು ಭಾಗವಹಿಸಿದ್ದರು.