ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಕಸ ವಿಲೇವಾರಿ ತಡೆಗೆ ಆಗ್ರಹ: ಬಂಟ್ವಾಳ ಪುರಸಭೆ ಅಧ್ಯಕ್ಷರಿಗೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಮನವಿ

0
18

ಸನ್ಮಾರ್ಗ ವಾರ್ತೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಸಮೀಪದ ಸಾಲುಮರದ ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿರುವುದನ್ನು ತಡೆಗಟ್ಟಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಪಾಣೆಮಂಗಳೂರು ಶಾಖೆಯ ವತಿಯಿಂದ ಬಂಟ್ವಾಳ ಪುರಸಭೆ ಅಧ್ಯಕ್ಷರಾದ ಕೆ.ಬಿ. ತೀರ್ಥ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ, ಈ ಭಾಗದಲ್ಲಿ ನೈರ್ಮಲ್ಯ ಹದಗೆಟ್ಟು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ನಿಯೋಗವು ಪುರಸಭೆ ಅಧ್ಯಕ್ಷರ ಗಮನಕ್ಕೆ ತಂದಿತು.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಕೆ.ಬಿ. ತೀರ್ಥ ಪ್ರಸಾದ್ ಅವರು, “ಈ ಸಮಸ್ಯೆಯ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದ್ದು, ಸ್ಥಳಕ್ಕೆ ಮಣ್ಣು ಹಾಕಿ ‘ಟ್ರೀ ಪಾರ್ಕ್’ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಸದರಿ ಜಾಗವು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅನುದಾನ ಮೀಸಲಿಟ್ಟು ಟೆಂಡರ್ ಪ್ರಕ್ರಿಯೆ ನಡೆಸಬೇಕಾಗಿದ್ದು, ಕಾಮಗಾರಿ ಆರಂಭಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ” ಎಂದು ತಿಳಿಸಿದರು.

ಈ ವೇಳೆ, ಶಾಶ್ವತ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ಆ ಸ್ಥಳದಲ್ಲಿ ಹಸಿರು ಪರದೆಯನ್ನು (ಗ್ರೀನ್ ಮ್ಯಾಟ್) ಅಳವಡಿಸುವಂತೆ ಸಂಘಟನೆಯ ಪದಾಧಿಕಾರಿಗಳು ವಿನಂತಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧ್ಯಕ್ಷರು, ಆದಷ್ಟು ಬೇಗ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಇದರ ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಮುಝಮ್ಮಿಲ್, ಕಾರ್ಯದರ್ಶಿ ರಿಝ್ವಾನ್ ಅಝ್ಹರಿ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.