ಸನ್ಮಾರ್ಗ ವಾರ್ತೆ
ನವದೆಹಲಿ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ ಹಲವರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವುದಕ್ಕೆ ಜಮಾಅತೆ ಇಸ್ಲಾಮೀ ಹಿಂದ್ (JIH) ತೀವ್ರ ದುಃಖ ವ್ಯಕ್ತಪಡಿಸಿದೆ. ಮೃತರ ಕುಟುಂಬಗಳಿಗೆ ಸಂಘಟನೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಮಾಅತೆ ಇಸ್ಲಾಮೀ ಹಿಂದ್ನ ಉಪಾಧ್ಯಕ್ಷ ಪ್ರೊ. ಸಲೀಮ್ ಇಂಜಿನಿಯರ್ ಅವರು, “ಕೋಲ್ಕತ್ತಾದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಹಲವರು ಪ್ರಾಣ ಕಳೆದುಕೊಂಡಿರುವುದು ನಮಗೆ ತೀವ್ರ ದುಃಖವನ್ನುಂಟುಮಾಡಿದೆ. ಮೃತರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಅಮಾಯಕ ಜೀವಗಳು ಬಲಿಯಾಗಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ. ಜನರ ಸುರಕ್ಷತೆಗಾಗಿ ಕೈಗೊಂಡಿದ್ದ ವ್ಯವಸ್ಥೆಗಳ ಕುರಿತು ಗಂಭೀರವಾಗಿ ಆತ್ಮಾವಲೋಕನ ನಡೆಸುವ ಅಗತ್ಯವಿದೆ” ಎಂದು ಹೇಳಿದರು.
ದುರಂತಕ್ಕೆ ಕಾರಣಗಳನ್ನು ಪತ್ತೆಹಚ್ಚಿ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, “ಈ ದುರಂತಕ್ಕೆ ಕಾರಣವಾದ ಸನ್ನಿವೇಶಗಳನ್ನು ಪತ್ತೆಹಚ್ಚಲು, ಜನಸಂದಣಿ ನಿಯಂತ್ರಣ ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿನ ಲೋಪಗಳನ್ನು ಗುರುತಿಸಲು ಹಾಗೂ ನಿರ್ಲಕ್ಷ್ಯ ಸಾಬೀತಾದಲ್ಲಿ ಸಂಬಂಧಪಟ್ಟವರ ಹೊಣೆಗಾರಿಕೆಯನ್ನು ನಿಗದಿಪಡಿಸಲು ಉನ್ನತ ಮಟ್ಟದ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ತನಿಖೆಯ ವರದಿಯು ಕೇವಲ ಅಧಿಕೃತ ದಾಖಲೆಗಳಿಗೆ ಸೀಮಿತವಾಗದೆ, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಸ್ಪಷ್ಟವಾದ ಸುಧಾರಣಾ ಕ್ರಮಗಳಿಗೆ ಕಾರಣವಾಗಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಹಿಸಿಕೊಂಡು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಕಾಲ್ತುಳಿತ ದುರಂತವು ಜನಸಂದಣಿ ನಿರ್ವಹಣೆಯಲ್ಲಿ ಸೂಕ್ತ ಯೋಜನೆ, ಸಮರ್ಪಕ ನಿಯಂತ್ರಣ ವ್ಯವಸ್ಥೆ, ಸ್ಪಷ್ಟ ಸಂವಹನ ಹಾಗೂ ಆಡಳಿತ, ಪೊಲೀಸ್ ಇಲಾಖೆ, ತುರ್ತು ಸೇವೆಗಳು ಮತ್ತು ಕಾರ್ಯಕ್ರಮದ ಆಯೋಜಕರ ನಡುವಿನ ಪರಿಣಾಮಕಾರಿ ಸಮನ್ವಯದ ತುರ್ತು ಅಗತ್ಯವನ್ನು ಎತ್ತಿ ತೋರಿಸಿದೆ. ಜನದಟ್ಟಣೆ, ಪ್ರತಿಕೂಲ ಹವಾಮಾನ ಮತ್ತು ಗೊಂದಲದ ಪರಿಸ್ಥಿತಿಗಳು, ಮುನ್ನೆಚ್ಚರಿಕಾ ಕ್ರಮಗಳ ಕೊರತೆಯಿದ್ದಾಗ, ಸಾರ್ವಜನಿಕ ಸಮಾರಂಭವೊಂದನ್ನು ಕ್ಷಣಾರ್ಧದಲ್ಲಿ ದುರಂತವಾಗಿ ಪರಿವರ್ತನೆಯಾಗುತ್ತದೆ.
ದುರಂತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸೂಕ್ತ ನೆರವು ಒದಗಿಸುವುದರ ಜೊತೆಗೆ ಸೂಕ್ತ ಕ್ರಮ ವಹಿಸುವುದು ಅತ್ಯಗತ್ಯ ಎಂದು ಪ್ರೊ. ಸಲೀಮ್ ಇಂಜಿನಿಯರ್ ಒತ್ತಿಹೇಳಿದರು.
“ಗಾಯಾಳುಗಳಿಗೆ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನ್ಯಾಯಸಮ್ಮತ ಪರಿಹಾರ ಹಾಗೂ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಬೇಕು. ವಿಶ್ವಾಸಾರ್ಹ ತನಿಖೆಯ ಮೂಲಕ ಸತ್ಯಾಂಶಗಳನ್ನು ಬಹಿರಂಗಪಡಿಸಿ, ನಿರ್ಲಕ್ಷ್ಯ ಸಾಬೀತಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.
ಇಂತಹ ದುರಂತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಯ ಯೋಜನೆ, ಜವಾಬ್ದಾರಿಯುತ ಆಡಳಿತ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮಾನವ ಜೀವ ಹಾಗೂ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವ ದೃಢ ಬದ್ಧತೆ ಅತ್ಯಗತ್ಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಭಿಪ್ರಾಯಪಟ್ಟಿದೆ.












