ಪ್ರಶಾಂತ್-ಪವಾರ್ ಭೇಟಿ: 2024ರ ಚುನಾವಣೆಯನ್ನು ಬೊಟ್ಟು ಮಾಡಿದ ರಾಜಕೀಯ ವಿಶ್ಲೇಷಕರು!

0
498

ಸನ್ಮಾರ್ಗ ವಾರ್ತೆ

ಮುಂಬೈ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮುಂಬೈಯಲ್ಲಿ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್‌ರನ್ನು ಭೇಟಿಯಾಗಿದ್ದು ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಪವಾರ್‌ರ ದಕ್ಷಿಣ ಮುಂಬೈಯ ವಸತಿಯಲ್ಲಿ ಪ್ರಶಾಂತ್ ಅವರನ್ನು ಭೇಟಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯ ಮುಂಚೆ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಿ ಮೋದಿಯ ವಿರುದ್ಧ ಹೋರಾಟ ನಡೆಸುವ ಉದ್ದೇಶ ಈ ಭೇಟಿಯಲ್ಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳ್ನಾಡಿನ ಎಂಕೆ ಸ್ಟಾಲಿನ್‍ರ ಚುನವಣಾ ತಂತ್ರಕ್ಕೆ ಚುಕ್ಕಾಣಿ ಹಿಡಿದ ಪ್ರಶಾಂತ್ ಕಿಶೋರ್ ಇಬ್ಬರನ್ನು ಗೆಲುವಿಗೆ ಕೃತಜ್ಞತೆ ಹೇಳುವುದಕ್ಕೆ ಪವಾರ್‌ರನ್ನು ಭೇಟಿಯಾಗಿದ್ದಾರೆ ಎಂದು ಅಧಿಕೃತ ವಿವರಣೆ ನೀಡಲಾಗುತ್ತಿದೆ. ಇಬ್ಬರಿಗೂ ಬೆಂಬಲ ನೀಡಿದ ಎಲ್ಲ ನಾಯಕರಿಗೂ ಮುಂದಿನ ದಿನಗಳಲ್ಲಿ ಪ್ರಶಾಂತ್ ಕಿಶೋರ್ ಭೇಟಿಯಾಗಲಿದ್ದಾರೆ. ಆದರೆ, ಈ ಪ್ರಕ್ರಿಯೆ ಪ್ರತಿಪಕ್ಷದ ಒಗ್ಗಟ್ಟು ದೃಢಪಡಿಸುವುದಕ್ಕಾಗಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹುದೊಡ್ಡ ಸವಾಲು ಹಾಕಿದರೂ ಅದನ್ನು ಮೀರಿ ನಿಂತ ಮಮತಾ ಬ್ಯಾನರ್ಜಿಯನ್ನು ಎತ್ತಿ ತೋರಿಸಿ ಮೋದಿಯ ವಿರುದ್ಧ ಪ್ರಚಾರ ಆರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದು ಪ್ರಶಾಂತ್ ರಾಜಕೀಯ ನಾಯಕರನ್ನು ಭೇಟಿ ಮಾಡುವ ಉದ್ದೇಶ ಎಂದು ರಾಜಕೀಯ ವಿಶ್ಲೇಷಣೆಕಾರರು ಇದೀಗ ಹೇಳುತ್ತಿದ್ದಾರೆ. ಬಿಜೆಪಿ ಬಲವಾದ ಆಮಿಷದಿಂದ ಪಾರ್ಟಿ ಅಡಿಮೇಲಾಗುವ ಸ್ಥಿತಿಯಲ್ಲಿದ್ದ ಕಾಲದಲ್ಲಿ ನಂಬಿಗಸ್ತರನ್ನು ಸೇರಿಸಿಕೊಂಡು ತೃಣಮೂಲ ಕಾಂಗ್ರೆಸನ್ನು ಮರು ಸಂಘಟಿಸಿದ ಮಮತಾ ಪಶ್ಚಿಮ ಬಂಗಾಳದ ಹೊರಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸುವ ಸೂಚನೆಗಳನ್ನು ನೀಡಿದ್ದರು. ಈ ಕುರಿತು ಅವರು ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಅಂತಹ ಸುದ್ದಿಗಳನ್ನು ಅವರು ನಿರಾಕರಿಸಿಲ್ಲ.

ಲೋಕಸಭಾ ಚುನಾವಣೆಯ ಮೊದಲು, ಉತ್ತರ ಪ್ರದೇಶ ಸಹಿತ ವಿಧಾನಸಭೆ ಚುನಾವಣೆ ನಡೆಯಲಿದ್ದು ಬಿಜೆಪಿಯ ಎನ್‍ಡಿಎಗೆ ತಿರುಗೇಟು ನೀಡದಿದ್ದರೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷ ಕಹಿ ಉಣ್ಣಬೇಕಾದೀತು. ಇವೆಲ್ಲ ಮುಂದಿಟ್ಟು ಪ್ರತಿಪಕ್ಷ ಒಗ್ಗೂಡುವ ಸಾಧ್ಯತೆಗಳನ್ನು ಹುಡುಕಲಾಗುತ್ತಿದೆ.