ಸನ್ಮಾರ್ಗ ವಾರ್ತೆ
ಉಡುಪಿ: “ಸುಧೃಡ ಕುಟುಂಬ-ಸುಧೃಡ ಸಮಾಜ” ಎಂಬ ವಿಷಯದಲ್ಲಿ ಶುಕ್ರವಾರ ಉಡುಪಿಯ ದುರ್ಗಾ ಇಂಟರ್ನ್ಯಾಷನಲ್ ಹೊಟೇಲಿನಲ್ಲಿ ವಿಚಾರ ಸಂಕೀರ್ಣ ಆಯೋಜಿಸಲಾಗಿತ್ತು.
ವಿಚಾರ ಸಂಕೀರ್ಣನ್ನುದ್ದೇಶಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ ಎಸ್ ಮಾತನಾಡಿ, ಕುಟುಂಬಗಳು ಮಕ್ಕಳ ಬೆಳವಣಿಗೆಯ ಕೇಂದ್ರವಾಗಿದೆ. ಕುಟುಂಬವು ಪರಸ್ಪರ ಪ್ರೀತಿಸಲು, ಸ್ಪಂದಿಸಲು ಕಲಿಸುತ್ತದೆ. ನಮ್ಮ ಕುಟುಂಬವನ್ನು ಪರಸ್ಪರ ಗೌರಾವಾದರದಿಂದ ನೋಡಿಕೊಂಡರೆ ಸುಧೃಡ ಕುಟುಂಬ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಂತರ ಹಿರಿಯ ವಕೀಲರು ಮತ್ತು ಚೈಲ್ಡ್ ವೆಲ್ಫೇರ್ ಕಮಿಟಿಯ ಚಯರ್ ಮೆನ್ ರೋನಾಲ್ಡ್ ಫುರ್ಟಾಡೊ ಮಾತನಾಡಿ, ಸಾಮಾಜಿಕ ಸುಧಾರಣೆಗೆ ಕುಟುಂಬ ಅತೀ ಅಗತ್ಯ. ಭಾರತೀಯ ಸಮಾಜದಲ್ಲಿ ವಿಭಕ್ತ, ಅವಿಭಕ್ತ ಕುಟುಂಬಗಳಿವೆ. ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ಮೌಲ್ಯಗಳನ್ನು ಮರೆತಂತೆ ಭಾಸವಾಗುತ್ತದೆ. ಸುಧೃಡ ಕುಟುಂಬದಲ್ಲಿರುವ ಮಕ್ಕಳು ಹಿರಿಯರಿಂದ ಪ್ರೀತಿ, ವಿಶ್ವಾಸ ಪಡೆದು ಬಲಾಢ್ಯರಾಗಿ ಬೆಳೆಯುತ್ತಾರೆ. ಇತ್ತೀಚಿಗೆ ವಿಭಕ್ತ ಕುಟುಂಬದಲ್ಲಿ ಮಗುವಿಗೆ ಈ ಅವಕಾಶಗಳು ಕಡಿಮೆ.
ಅವಿಭಕ್ತ ಕುಟುಂಬದಲ್ಲಿ ಎಲ್ಲರೊಂದಿಗೆ ಮಕ್ಕಳು ಬೆರೆಯುವುದರಿಂದ ಅವರ ಜ್ಞಾನ ಹೆಚ್ಚಾಗುತ್ತದೆ. ಸಾಮಾಜಿಕ ಕುಟುಂಬಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ ಎಂದರು. ಮಗುವೊಂದು ಹುಟ್ಟಿದಾಗ ಅದಕ್ಕೆ ಮಾನವೀಯ ಗುಣ ಕೊಟ್ಟು ಬೆಳೆಸಬೇಕಾಗಿರುವುದರಿಂದ ಮಾನವ ಬೆಳವಣಿಗೆಗೆ ಕುಟುಂಬ ಅತೀ ಅಗತ್ಯವಾಗಿದೆ. ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಮಾತನಾಡಿ, ಸಮಾಜದ ಪ್ರಬಲ ಸಂಸ್ಥೆ ಕುಟುಂಬ. ಆದ್ದರಿಂದ ಕುರ್ಆನಿನಲ್ಲಿ ಕುಟುಂಬ ಸಂಬಂಧವನ್ನು ಹಾಳು ಮಾಡಬೇಡಿ ಎಂದು ಹೇಳಲಾಗಿದೆ. ಕುಟುಂಬ ಶಿಥಿಲವಾದರೆ ಸಮಾಜ ಹಾಳಾಗುತ್ತದೆ.
ಸಮಾಜದಲ್ಲಿರುವ ಒಳ್ಳೆಯ ವ್ಯಕ್ತಿಗಳ ಹಿಂದೆ ಒಂದೊಳ್ಳೆಯ ಕುಟುಂಬ ಇರುತ್ತದೆ. ಅದೇ ರೀತಿ ಕೆಟ್ಟ ವ್ಯಕ್ತಿಯ ಹಿಂದೆ ಕೆಟ್ಟ ಕುಟುಂಬ ಇರುತ್ತದೆ. ಕುಟುಂಬದಲ್ಲಿ ನಿಗೂಢತೆಗಳು ಇಲ್ಲದೆ ಪಾರದರ್ಶಕತೆ ಇದ್ದರೆ ಸುಧೃಡ ಕುಟುಂಬ ನಿರ್ಮಾಣ ಸಾಧ್ಯವಾಗುತ್ತದೆ. ಪತಿ-ಪತ್ನಿಯ ನಡುವೆ ಯಾವುದೇ ನಿಗೂಢತೆ ಇರಬಾರದು ಇದರಿಂದಾಗಿ ಸಂಬಂಧಗಳು ಸುಧಾರಿಸುತ್ತದೆ ಎಂದರು.
ಉಡುಪಿಯ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈಲೆಟ್ ಫೆಮಿನಾ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ಅಧ್ಯಕ್ಷರಾದ ನಿಸಾರ್ ಉಡುಪಿ ಪ್ರಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು. ವಜಿದಾ ಉಡುಪಿ ಧನ್ಯವಾದ ವಿತ್ತರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

















