ಅಮೇರಿಕ: ಶಿಕ್ಷಕಿಗೆ ಗುಂಡು ಹಾರಿಸಿದ 1ನೇ ತರಗತಿ ವಿದ್ಯಾರ್ಥಿ

0
343

ಸನ್ಮಾರ್ಗ ವಾರ್ತೆ

ವರ್ಜಿನಿಯಾ: ಒಂದನೇ ತರಗತಿಯ ವಿದ್ಯಾರ್ಥಿ ತರಗತಿಯಲ್ಲೇ ತನ್ನ ಶಿಕ್ಷಕಿಗೆ ಗುಂಡು ಹೊಡೆದ ಆಘಾತಕಾರಿ ಘಟನೆ ಅಮೆರಿಕಾದ ವರ್ಜಿನಿಯಾದಲ್ಲಿ ನಡೆದಿದೆ. ಗುಂಡು ಆಕೆಯ ಕೈಗೆ ಸ್ಪರ್ಶಿಸಿ ಎದೆಯನ್ನು ನಾಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಘಟನೆಯಿಂದ ವಿದ್ಯಾರ್ಥಿ ಪೋಷಕರು ಮತ್ತು ಶಾಲಾ ಸಿಬ್ಬಂದಿ ಬೆಚ್ಚಿ ಬೀಳುವಂತಾಗಿದೆ. ಜನವರಿ 6ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತರಗತಿಗೆ ಪಾಠ ಮಾಡಲು ಬಂದ ಶಿಕ್ಷಕಿಗೆ ಯಾವುದೇ ಮುನ್ಸೂಚನೆ ನೀಡದೆ 6 ವರ್ಷದ ಬಾಲಕ ಗುಂಡು ಹಾರಿಸಿದ್ದಾನೆ.

ಈ ಬಾಲಕನ ತಾಯಿ ಬಂದೂಕು ಪರವಾನಿಗೆ ಪಡೆದಿದ್ದು ಬಾಲಕನ ಕೈಗೆ ಹೇಗೆ ಅದು ದೊರೆತಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮದ್ದುಗುಂಡು ತುಂಬಿದ ಬಂದೂಕು ಕೊಡುವುದಕ್ಕೆ ಅಮೆರಿಕಾದಲ್ಲಿ ನಿಷೇಧವಿದೆ. ಇಂತಹ ಅಪರಾಧವೆಸಗಿದ ಪೋಷಕರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಂತೂ ಒಂದನೇ ತರಗತಿಯ ವಿದ್ಯಾರ್ಥಿಗಳ ಕೈಗೆ ಬಂದೂಕು ಸಿಗುವುದು ಮತ್ತು ಶಿಕ್ಷಕರ ವಿರುದ್ಧವೇ ಅದನ್ನು ಪ್ರಯೋಗಿಸುವುದು ಭೀತಿಗೆ ಕಾರಣವಾಗಿದೆ ಮತ್ತು ಅಮೇರಿಕಾದ ಬಂದೂಕು ಪರವಾನಿಗೆ ನೀತಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.