ಪರಿಸ್ಥಿತಿ, ಮನಸ್ಥಿತಿಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ…

0
83

ಲೇಖನ: ಖದೀಜ ನುಸ್ರತ್

ಆತ್ಮ ಹತ್ಯೆಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ ವರ್ಷ ಜಗತ್ತಿನಲ್ಲಿ ಏಳು ಲಕ್ಷಕ್ಕಿಂತಲೂ ಅಧಿಕ ಜನರು ಆತ್ಮಹತ್ಯೆ ಮಾಡುತ್ತಾರೆ. ಭಾರತದಲ್ಲಿ ಕೂಡಾ ವರ್ಷಕ್ಕೆ ಸುಮಾರು ಎರಡು ಲಕ್ಷ ಜನರು ಆತ್ಮಹತ್ಯೆ ಮಾಡುತ್ತಾರೆ. ಪ್ರತಿವರ್ಷ ಆತ್ಮಹತ್ಯೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಆತ್ಮಹತ್ಯೆ ಮಾಡಲು ಪ್ರಯತ್ನಿಸುವವರ ಹಾಗೂ ಆಲೋಚಿಸುವವರ ಸಂಖ್ಯೆಯು ಇದಕ್ಕಿಂತಲೂ ಅಧಿಕವೆಂದು ವರದಿಗಳು ತಿಳಿಸುತ್ತದೆ. ಆತ್ಮ ಹತ್ಯೆ ಎಂಬುದು ವೇದನಾಯುಕ್ತ ಹಾಗೂ ಧಾರುಣವಾದ ಒಂದು ಕೃತ್ಯವಾಗಿದೆ. ಇಂದು ಜೀವನದಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥ, ಜಿಗುಪ್ಸೆ, ಭಯ, ನಿರಾಶೆ, ಸಾಲ, ಆರ್ಥಿಕ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಕೃಷಿನಾಶ, ನಿರುದ್ಯೋಗ, ಭಯಾನಕ ರೋಗ, ಒಂಟಿತನ, ಒತ್ತಡ, ಗೊಂದಲ, ರಾಗಿಂಗ್‌ಗಳು ಆತ್ಮ ಹತ್ಯೆಗೆ ಕಾರಣವೆಂದು ತಜ್ಞ ವೈದ್ಯರು ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳ ಅತಿಯಾದ ಚಟ, ಸಮಾಜದಲ್ಲಿ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ ಚಟ ಹಾಗೂ ಇನ್ನಿತರ ಅಪಾಯಕಾರಿಯಾದ ಮಾದಕ ಪದಾರ್ಥಗಳ ಅನಿಯಂತ್ರಿತ ಉಪಯೋಗಗಳು ಮಾನಸಿಕ ರೋಗಗಳಿಗೆ ಕಾರಣವಾಗಿರುತ್ತದೆ. ಅದಲ್ಲದೇ ಹೆಚ್ಚುತ್ತಿರುವ ಆನ್‌ಲೈನ್ ಬ್ಲಾಕ್‌ಮೇಲ್ ಮತ್ತು ವೀಡಿಯೊ ಗೇಂಗಳು, ಮಕ್ಕಳಲ್ಲಿ ಜಿಗುಪ್ಸೆ, ಭಯ, ನಿರಾಶೆ, ಉದ್ವೇಗ ಉಂಟುಮಾಡುತ್ತವೆ. ಕುಟುಂಬ ಕಲಹಗಳು, ವರದಕ್ಷಿಣೆ ಕಿರುಕುಳ ಮತ್ತು ಸಂಬಂಧಿಕರ ಮನ ನೋಯುವ ಚುಚ್ಚು ಮಾತುಗಳು ಕೂಡಾ ಮಾನಸಿಕ ಸಂಘರ್ಷ ಹೆಚ್ಚಾಗಲು ಪ್ರಮುಖ ಪಾತ್ರ ವಹಿಸುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಲು ಮತ್ತು ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲು ಅರಿಯದಿರುವುದು ಇತ್ಯಾದಿಗಳೆಲ್ಲವೂ ಆತ್ಮಹತ್ಯೆಗೆ ಕಾರಣವಾಗಿರುತ್ತದೆ.

ನಮ್ಮ ಸಮಾಜದಲ್ಲಿ ಮಾನಸಿಕ ರೋಗವನ್ನು ಒಂದು ಕೆಟ್ಟ ರೋಗವಾಗಿ ಪರಿಗಣಿಸಿ ಕೆಟ್ಟ ದೃಷ್ಟಿಯಿಂದ ಜನರು ನೊಡುವುದನ್ನು ನಾವು ಕಾಣುತ್ತೇವೆ. ಆದ್ದರಿಂದ ಮಾನಸಿಕ ಅಸ್ವಸ್ಥರಾದಾಗ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಹೆಚ್ಚಿನವರು ಮುಂದೆ ಬರುವುದಿಲ್ಲ. ಹೆಚ್ಚಿನವರು ಈ ರೋಗವನ್ನು ಅರ್ಥಮಾಡುವುದಿಲ್ಲ. ಅದಲ್ಲದೇ ಇಂದು ನಮ್ಮಲ್ಲಿರುವ ಸಮಸ್ಯೆಗಳನ್ನು ಅಡಗಿಸುವ ಮತ್ತು ಜನರ ಮುಂದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಾನು ಸಂತೊಷವಾಗಿದ್ದೇನೆಂದು ತೋರಿಸುವಂತಹ ಒಂದು ಮನೋಭಾವ ಹೆಚ್ಚುತ್ತಿದೆ. ಆದ್ದರಿಂದ ನಮ್ಮ ನಿಕಟ ಬಂಧುಗಳಿಗೆ ಕೂಡಾ ನಾವು ಮಾನಸಿಕವಾಗಿ ಕಷ್ಟವನ್ನನುಭವಿಸುತ್ತಿದ್ದೇವೆಂದು ತಿಳಿಯುವುದಿಲ್ಲ. ಸೂಕ್ತ ಸಮಯದಲ್ಲಿ ಪರಿಣತ ವೈದ್ಯರ ಸರಿಯಾದ ಸಲಹೆಯನ್ನು ಪಡೆದು ಔಷಧಿಯನ್ನು ತೆಗೆದುಕೊಳ್ಳದಿದ್ದರೆ ಕಾಲಕ್ರಮೇಣ ರೋಗ ಉಲ್ಬಣಗೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಆತ್ಮಹತ್ಯೆ ಮಾಡಲು ಶ್ರಮಿಸಿ ವಿಫಲರಾದವರೊಂದಿಗೆ ಸಮೀಕ್ಷೆ ನಡೆಸಿದಾಗ ಹೆಚ್ಚಿನವರು ಹೇಳುವುದು ನಮ್ಮೊಂದಿಗೆ ಯಾರಾದರೂ ನಮ್ಮ ಸಮಸ್ಯೆಯ ಬಗ್ಗೆ ಹಾಗೂ ಅದರ ಪರಿಹಾರದ ಬಗ್ಗೆ ಮಾತನಾಡುತ್ತಿದ್ದರೆ ಎಂದು ಭಾವಿಸುತ್ತಾರೆ. ತಮ್ಮ ಮನಸ್ಸಿನ ಭಾವನೆ, ನೋವು, ದುಃಖ, ಸಮಸ್ಯೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲದಿರುವುದು ಆತ್ಮಹತ್ಯೆಗೆ ಒಂದು ಕಾರಣವಾಗಿರುತ್ತದೆ. 50% ಗಿಂತಲೂ ಹೆಚ್ಚಿನ ಆತ್ಮಹತ್ಯೆಗೆ ಕಾರಣ ಮಾನಸಿಕ ರೋಗಗಳಾಗಿರುತ್ತದೆ.

“ನಿಮ್ಮನ್ನು ನೀವೇ ವಧಿಸಿಕೊಳ್ಳಬೇಡಿರಿ. ಅಲ್ಲಾಹನು ನಿಮ್ಮ ಮೇಲೆ ಕೃಪೆಯುಳ್ಳವನೆಂದು ಖಾತ್ರಿಯಾಗಿ ನಂಬಿರಿ.” (ಪವಿತ್ರ ಕುರ್ ಆನ್ 4:29)

ಮಾನವನ ಇಹಲೋಕ ಜೀವನವೆಂಬ ಸಂವಿಧಾನದಲ್ಲಿ ಸುಖ, ದುಃಖ, ಸಂತೋಷ, ನೋವು, ಕಷ್ಟ, ನಷ್ಟ, ಸಮಸ್ಯೆ ಇತ್ಯಾದಿಗಳೆಲ್ಲವೂ ಇದೆ. ನಾವು ಜೀವನದಲ್ಲಿ ಸಂತೋಷ, ವಿಜಯ, ಲಾಭವನ್ನು ಮಾತ್ರ ಆಗ್ರಹಿಸುವವವರಾಗಿದ್ದರೆ ನಮಗೆ ಜೀವನ ನಡೆಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಮಾನಸಿಕ ಸಂಘರ್ಷವನ್ನು ಅನುಭವಿಸುವ ಬೇರೆ ಬೇರೆ ರೀತಿಯ ಸಂದರ್ಭವನ್ನು ಎದುರಿಸಲೇಬೇಕಾಗುತ್ತದೆ. ಸುಖ ದುಃಖ ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ. ಎಲ್ಲಾ ಸಂದರ್ಭಗಳೂ ನಮ್ಮಿಂದ ಕಳೆದು ಹೋಗುತ್ತದೆ. ಪರಲೋಕದ ಮೇಲಿನ ಹಾಗು ವಿಧಿಯ ಮೇಲಿನ ವಿಶ್ವಾಸವು ನಮಗೆ ಆಶ್ವಾಸನೆ ನೀಡಬೇಕು. ನಾವು ಅನುಭವಿಸುವ ಎಲ್ಲಾ ಕಷ್ಟಗಳಿಗೆ ಪರಲೋಕದಲ್ಲಿ ಉತ್ತಮ ಪ್ರತಿಫಲ ಸಿಗಲಿದೆಯೆಂಬ ದೃಢವಿಶ್ವಾಸವಿರಬೇಕು. ನಮಗೆ ಸಿಗುವುದು, ಸಿಗದಿರುವುದು, ಲಾಭ, ನಷ್ಟ ಎಲ್ಲವೂ ಅಲ್ಲಾಹನ ತೀರ್ಮಾನದಂತೆ ನಡೆಯುವುದು ಎಂಬ ವಿಧಿ ವಿಶ್ವಾಸವಿರಬೇಕು.

ಕುಟುಂಬದೊಂದಿಗೆ ಸಂಬಂಧಿಕರನ್ನು, ಸ್ನೇಹಿತರನ್ನು ಪರಸ್ಪರ ಭೇಟಿಯಾಗುವ ಸುಖ ದುಃಖಗಳನ್ನು ಹಂಚಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿರಿ. ಮಕ್ಕಳಿಗೆ ಮನೆಯಿಂದ ಹೊರಗೆ ಹೋಗಿ ಸೂರ್ಯ, ಚಂದ್ರ, ಮಳೆ, ಚಳಿ, ಬೆಳದಿಂಗಳು, ಮಣ್ಣು, ನದಿ, ಸಮುದ್ರದ ಕಿನಾರೆ, ಗುಡ್ಡಗಾಡು ಹೀಗೆ ಹಚ್ಚಹಸುರಾದ ಪ್ರಕೃತಿ ಸೌಂದರ್ಯದೊಂದಿಗೆ ಸಮಯ ಕಳೆಯಲು ಬಿಡಿರಿ. ಶೂಟಿಂಗ್, ವಾರ್ ಗೇಮ್ಸ್, ಬ್ಲೂ ವೇಲ್ಸ್ , ಪಬ್ಜಿಯಂತಹ ಆನ್ ಲೈನ್ ಗೇಂ ಗಳಿಂದ ಸದಾ ದೂರವಿರುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಆನ್ಲೈನ್ ವೀಡಿಯೊ ಗೇಂ ಆಡುವ ಮಕ್ಕಳ ಚಲನ ವಲನಗಳ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸದಾ ಜಾಗರೂಕರಾಗಿರಬೇಕು. ಅವರಿಗೆ ಈಜು, ಸೈಕಲ್ ಸವಾರಿ, ಕರಾಟೆ, ಕಾಲ್ಚೆಂಡು, ಕ್ರಿಕೆಟ್, ಕಬಡ್ಡಿಯಂತಹ ಹೊರಾಂಗಣ ದೈಹಿಕ ಆಟಗಳನ್ನು ಆಡಲು ಮತ್ತು ಅತ್ಯುತ್ತಮ ಮೌಲ್ಯಾಧಾರಿತ ಪುಸ್ತಕಗಳನ್ನು ಓದಲು ಪ್ರೋತ್ಸಾಹ ನೀಡಬೇಕು.

ನಮ್ಮನ್ನು ಹಾಗೂ ಇನ್ನೊಬ್ಬರನ್ನು ಸಂತೋಷಪಡಿಸುವ, ಶಾಂತಿ, ಸಮಾಧಾನ, ಸಮೃದ್ಧಿ, ಸುಖ, ಸಂತೃಪ್ತವಾಗಿ ಜೀವನ ನಡೆಸುವಂತಹ ವಾತಾವರಣವನ್ನು ನಾವೇ ಉಂಟು ಮಾಡಬೇಕು. ನಿಮ್ಮ ಮಾತು ಕೃತಿಗಳು ಇನ್ನೊಬ್ಬರಿಗೆ ಸಾಂತ್ವನ ನೀಡಲಿ. ಇನ್ನೊಬ್ಬರ ನೋವು, ಕಷ್ಟ, ಸಮಸ್ಯೆಗಳನ್ನು ಅರ್ಥಮಾಡುವ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವವರು ವಿರಳವಾಗುತ್ತಿರುವುದೇ ಮಾನಸಿಕ ರೋಗಗಳು ಹೆಚ್ಚಾಗಲು ಕಾರಣ. ನಿಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಇನ್ನೊಬ್ಬರೊಂದಿಗೆ ಹೇಳಲು ಇಷ್ಟವಿಲ್ಲದಿದ್ದರೆ ಸಮಸ್ಯೆಗಳನ್ನು ಪರಿಹರಿಸಲು ಬೇಕಾದಂತಹ ಅಸಂಖ್ಯಾತ ವೀಡಿಯೋಗಳು, ಬರಹಗಳು, ಸೂಕ್ತ ತಜ್ಞರ ಸಲಹೆಗಳು ಸಾಮಾಜಿಕ ತಾಣಗಳಲ್ಲಿ ಲಭ್ಯವಾಗಿರುತ್ತದೆ.

ಶರೀರವನ್ನು ಯಾವ ರೀತಿ ಆಹಾರ, ವಸ್ತ್ರ, ಸ್ನಾನ ಮಾಡಿ ಉತ್ತಮವಾಗಿರಿಸುತ್ತೇವೆಯೋ ಮನಸ್ಸನ್ನು ಕೂಡಾ ಉತ್ತಮ ಚಿಂತನೆ, ಭಾವನೆಗಳಿಂದ ಆನಂದ, ಸಂತೋಷ, ಹರ್ಷೋಲ್ಲಾಸಗೊಳಿಸಬೇಕು. ಇಲ್ಲದಿದ್ದರೆ ಅದು ನಿರಾಶೆ, ದುಃಖವನ್ನು ಅನುಭವಿಸುವುದು. ಯಾವುದೇ ಕಾರಣಗಳಿಲ್ಲದೆ ನಿರಾಶರಾಗುವುದು, ದುಃಖಿತರಾಗುವುದು ಆಧುನಿಕ ಕಾಲದಲ್ಲಿ ಕಂಡು ಬರುವ ಒಂದು ರೀತಿಯ ಮಾನಸಿಕ ರೋಗದ ಲಕ್ಷಣವಾಗಿದೆ. ಅಂತಹವರನ್ನು ನಿನಗೇನು ಕಡಿಮೆಯಿದೆ ಎಂಬ ಚುಚ್ಚು ಮಾತಿನಿಂದ ವಿಮರ್ಷಿಸಬೇಡಿರಿ. ತಜ್ಞರಿಂದ ಕೌನ್ಸಿಲಿಂಗ್ ಪಡೆಯಲು ಸಹಾಯಮಾಡಿರಿ. ನಮ್ಮ ಸಂಬಂಧಿಕರ, ಸ್ನೇಹಿತರ ಒಡನಾಟದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಗಾಢವಾಗಿ ಆಲೋಚಿಸುವುದು, ನಿದ್ರಾಹೀನತೆ, ಯಾವುದೇ ಕೆಲಸದಲ್ಲಿ ಉತ್ಸಾಹವಿಲ್ಲದಿರುವುದು, ಆಹಾರ ಸೇವಿಸದಿರುವುದು, ಏಕಾಗ್ರತೆ ಇಲ್ಲದಿರುವುದು, ಕೋಪ ಬರುವುದು, ಸ್ನಾನ ಮಾಡದಿರುವುದು, ನಾನು ಜೀವಿಸಿ ಪ್ರಯೊಜನವಿಲ್ಲವೆಂಬ ಮಾತನ್ನು ಪದೇ ಪದೇ ಹೇಳುವುದು, ಮರಣ ಹಾಗೂ ಆತ್ಮಹತ್ಯೆಯ ಕುರಿತು ಹೆಚ್ಚು ಮಾತನಾಡುವುದು ಇತ್ಯಾದಿ ಲಕ್ಷಣಗಳು ಕಂಡು ಬಂದಾಗ ಸೂಕ್ತ ಚಿಕಿತ್ಸೆ ನೀಡಬೇಕು. ಮೊಬೈಲ್ ಚಟ, ಮಾದಕ ಪದಾರ್ಥಗಳ ಅಥವಾ ಇನ್ನಾವುದೇ ರೀತಿಯ ಚಟಗಳಿಗೆ ತಕ್ಷಣ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಪಡೆಯಬೇಕು. ನಿಮ್ಮ ಕೌಟುಂಬಿಕ, ಆರ್ಥಿಕ ಅಥವಾ ಇನ್ನಾವುದೇ ರೀತಿಯ ಸಮಸ್ಯೆಗಳಿಗೆ ತಜ್ಞರಿಂದ ಉಪದೇಶ, ಪರಿಹಾರ ಮತ್ತು ಸಲಹೆಯನ್ನು ಪಡೆಯಿರಿ.

ಆತ್ಮಹತ್ಯೆಯೊಂದಿಗೆ ಎಲ್ಲ ಸಮಸ್ಯೆಗಳು ಅಂತ್ಯಗೊಳ್ಳುವುದಿಲ್ಲ. ಅದು ಶಿಕ್ಷೆಯ ಆರಂಭವಾಗಿದೆ. ಜೀವನ ಎಂಬುದು ಸೃಷ್ಠಿಕರ್ತನು ನೀಡಿದ ಒಂದು ಅನುಗ್ರಹವಾಗಿದೆ. ಜೀವನ ಮತ್ತು ಮರಣದ ಅಧಿಕಾರ ಸೃಷ್ಠಿಕರ್ತನ ಕೈಯಲ್ಲಿದೆ. ಜೀವನವನ್ನು ಕೊನೆಗೊಳಿಸಿ ಆತ್ಮ ಹತ್ಯೆ ಮಾಡುವುದು ಒಂದು ದೊಡ್ಡ ಅಪರಾಧವಾಗಿದೆ. ಆತ್ಮಹತ್ಯೆಯಲ್ಲ ಮರಣವನ್ನು ಅಪೇಕ್ಷಿಸುವುದು ಕೂಡಾ ತಪ್ಪಾಗಿದೆ. ಜೀವನವೆಂಬುದು ಅತ್ಯಮೂಲ್ಯವಾದುದು. ತಮ್ಮ ಅಥವಾ ತಮ್ಮ ಪ್ರೀತಿ ಪಾತ್ರರ ಜೀವ ಉಳಿಸಲು ಎಷ್ಟೋ ಜನರು ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾ ನೋವನ್ನು ಅನುಭವಿಸುತ್ತ ಶುಭ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಸಣ್ಣ ಸಣ್ಣ ಕಾರಣಕ್ಕಾಗಿ ಜೀವನವನ್ನು ಕೊನೆಗೊಳಿಸುವ ತೀರ್ಮಾನ ಮಾಡಬೇಡಿರಿ.

ಪ್ರವಾದಿ ಮುಹಮ್ಮದ್(ಸ)ಹೇಳಿದರು: ನಿಮ್ಮ ಪೈಕಿ ಯಾರೂ ತನಗೊದಗುವ ಯಾವುದೇ ದೈಹಿಕ ಅಥವಾ ಆರ್ಥಿಕ ನಷ್ಟದ ಕಾರಣ ಮರಣವನ್ನು ಅಪೇಕ್ಷಿಸಬಾರದು. ಒಂದು ವೇಳೆ ಮರಣವನ್ನು ಅಪೇಕ್ಷಿಸುವುದು ಅನಿವಾರ್ಯವಾಗಿಬಿಟ್ಟರೆ ಅವನು ಓ ಅಲ್ಲಾಹ್! ಜೀವನವು ನನ್ನ ಪಾಲಿಗೆ ಉತ್ತಮವಾಗಿರುವ ತನಕ ನನ್ನನ್ನು ಜೀವಂತವಿಡು ಮತ್ತು ಸಾಯುವುದೇ ನನ್ನ ಪಾಲಿಗೆ ಉತ್ತಮವಾದಾಗ ನನಗೆ ಮರಣ ನೀಡು ಎಂದು ಪ್ರಾರ್ಥಿಸಲಿ.