ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆದರೆ ಸಂಸದರು ಹಾಜರಾಗಬೇಕು: ಉಪರಾಷ್ಟ್ರಪತಿ

0
229

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕ್ರಿಮಿನಲ್ ಕೇಸುಗಳಲ್ಲಿ ತನಿಖಾ ಏಜೆನ್ಸಿಗಳು ವಿಚಾರಣೆಗೆ ಕರೆದರೆ ಸಂಸದರು ಹಾಜರಾಗಬೇಕು ಎಂದು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತನಿಖಾ ಏಜೆನ್ಸಿಗಳು ವಿಚಾರಣೆಗೆ ಕರೆದುದು ಸರಿಯಾಗಿದೆಯೇ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದರು.

ವಿವಿಧ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶಿವಸೇನೆ ಸಂಸದ ಸಂಜಯ್ ರಾವುತ್, ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿಯವರನ್ನು ಇಡಿ ವಿಚಾರಣೆ ಮಾಡಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದರು.

ಆದರೆ ಜನಪ್ರತಿನಿಧಿಗಳಿಗೆ ವಿಶೇಷ ಅಧಿಕಾರ ಅನ್ವಯವಲ್ಲ ಎಂದು ರಾಜ್ಯಸಭಾ ಅಧ್ಯಕ್ಷರು ರೂಲಿಂಗ್ ನೀಡಿದರು. ಸಿವಿಲ್ ಕೇಸುಗಳಲ್ಲಿ ಮಾತ್ರ ಸಂಸದರಿಗೆ ವಿಶೇಷ ಅಧಿಕಾರ ಇದೆ ಎಂದು ಹೇಳಿದರು.

ಅಧಿವೇಶನದ ವೇಳೆ ಅಥವಾ ಅಲ್ಲದಿದ್ದರೂ ಕ್ರಿಮಿನಲ್ ಕೇಸುಗಳಲ್ಲಿ ತನಿಖಾ ಸಂಸ್ಥೆಗಳು ವಿಚಾರಣೆಗೆ ಸಮನ್ಸ್ ನೀಡಿದರೆ ಉತ್ತರಿಸಿದಿರಲು ಸಂಸದರಿಗೆ ಸಾಧ್ಯವಿಲ್ಲ. ಕಾನೂನು ಅನುಸರಿಸುವ ಪ್ರಜೆ ಎಂಬ ನೆಲೆಯಲ್ಲಿ ಕಾನೂನು ಮತ್ತು ಕಾನೂನು ಕ್ರಮವನ್ನು ಗೌರವಿಸುವುದು ಜನ ಪ್ರತಿನಿಧಿಗಳ ಕರ್ತವ್ಯ ಎಂದು ಅವರು ಹೇಳಿದರು.