ರೈತ ಆಂದೋಲನ: ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಸಹಿತ ಹಲವರ ಬಂಧನ, ಬಿಡುಗಡೆ

0
733

ಸನ್ಮಾರ್ಗ ವಾರ್ತೆ

ಚಂಡೀಗಡ,ಅ.2: ವಿವಾದಿತ ಕೃಷಿ ಕಾನೂನು ವಿರುದ್ಧ ಪ್ರತಿಭಟನೆಯಲ್ಲಿ ಚಂಡಿಗಡಕ್ಕೆ ರ‌್ಯಾಲಿ ಹೊರಟಿದ್ದ ಕೇಂದ್ರ ಮಾಜಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್, ಪ್ರೇಮ್ ಸಿಂಗ್ ಚಂದು ಮಾಜ್ರರನ್ನೂ ಬಂಧಿಸಲಾಗಿದೆ. ಗುರುವಾರ ಮಧ್ಯರಾತ್ರೆಯ ವೇಳೆ ಕೌರ್‌ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ರಾತ್ರೆಯೇ ಬಿಡುಗಡೆಗೊಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಅಕಾಲಿದಳ ಗುರುವಾರ ಬೆಳಗ್ಗೆ ಮೂರು ಕಡೆಗಳಿಂದ ರೈತ ಪ್ರತಿಭಟನಾ ಜಾಥವನ್ನು ಮಾಡಿತ್ತು. ಅಕಾಲಿದಳ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅಮೃತಸರದಿಂದ ಹಾಗೂ ಭಟಿಂಡಾದಿಂದ ಹರ್ಸಿಮ್ರತ್ ಕೌರ್ ನೇತೃತ್ವ ನೀಡಿದ್ದರು. ಮೂರನೆ ರ್ಯಾಲಿಯು ಅನಂತಪುರ ಸಾಹಿಬ್‍ನಿಂದ ಹೊರಟಿತ್ತು ಮೂರು ರ್ಯಾಲಿಗಳು ಚಂಡಿಗಡದಲ್ಲಿ ಒಟ್ಟು ಸೇರಿ ರಾಜ್ಯಪಾಲರಿಗೆ ಮನವಿ ನೀಡಲಿತ್ತು.

ರೈತರ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದಕ್ಕಾಗಿ ನಾವು ಬಂಧನಕ್ಕೊಳಗಾಗಬೇಕಾಯಿತೆಂದು ಹರ್ಸಿಮ್ರತ್ ಕೌರ್ ಬಾದಲ್ ಟ್ವೀಟ್‍ ಮಾಡಿದ್ದಾರೆ. ನಾವು ಸತ್ಯದ ಮಾರ್ಗದಲ್ಲಿದ್ದೇವೆ. ಯಾವ ಶಕ್ತಿಗೂ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹರ್ಸಿಮ್ರತ್ ಕೌರ್ ಹೇಳಿದರು.