ದಿಲ್ಲಿ: ಕೋಮು ಗಲಭೆಯಲ್ಲಿ ಬಲಕೈ ಕಳೆದುಕೊಂಡ ಸಂತ್ರಸ್ತನ ಮೇಲೆಯೇ ಪೊಲೀಸರಿಂದ ಎಫ್‌ಐಆರ್!

0
467

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.2: ದಿಲ್ಲಿ ಕೋಮುಗಲಭೆಯಲ್ಲಿ ನಡೆದ ಬಾಂಬ್‍ ದಾಳಿಯಿಂದಾಗಿ 22 ವರ್ಷದ ಅಕ್ರಂ ಖಾನ್ ತನ್ನ ಬಲಗೈ ಕಳೆದುಕೊಂಡಿದ್ದಾನೆ. ಓಲ್ಡ್ ಮುಸ್ತಫಾಬಾದ್ ನಿವಾಸಿಯಾಗಿದ ಆತ ಫೆಬ್ರುವರಿ 24ರ ಗಲಭೆಯಲ್ಲಿ ಗಾಯಗೊಂಡಿದ್ದ ಈತನಿಗೆ ಮುಂದೆ ಒಂದಕ್ಕಿಂತ ಹೆಚ್ಚು ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯಕೀಯ ವರದಿ ಇದೆ. ಆದರೆ ದಿಲ್ಲಿ ಪೊಲೀಸರು ವಾಹನ ಅಪಘಾತದಲ್ಲಿ ಕೈ ಕಳಕೊಂಡಿದ್ದಾನೆಂದು ಕೇಸು ದಾಖಲಿಸಿಕೊಂಡಿದ್ದಾರೆ.

ಬಲಗೈ, ಎಡಗೈಯ ಒಂದು ಬೆರಳೂ ಹೋಗಿವೆ. ಫೆಬ್ರುವರಿ 25ಕ್ಕೆ ಗುರು ತೇಜ್ ಬಹಾದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಅಕ್ರಂನ ಕೈ ಕತ್ತರಿಸಿ ತೆಗೆಯಲಾಗಿತ್ತು. ಆದರೆ, ಶಾಸ್ತ್ರಿ ಪೊಲೀಸ್ ಠಾಣೆಯಲ್ಲಿ ಅತೀವೇಗದಿಂದ ವಾಹನ ಚಲಾಯಿಸಿ ತನಗೂ ಇತರರ ಜೀವಕ್ಕೆ ಅಪಾಯವೊಡ್ಡಲು ಯತ್ನಿಸಿದ್ದಾನೆ ಎಂದು ಅಕ್ರಮ್ ಖಾನ್ ವಿರುದ್ಧವೇ ಕೇಸು ದಾಖಲಾಗಿದೆ.

ಬಟ್ಟೆ ತಯಾರಿ ಕಾರ್ಮಿಕನಾಗಿರುವ ಅಕ್ರಂ ಮನೆಯಿಂದ ಕೆಲಸದೆಡೆಗೆ ಹೊರಟಿದ್ದ. ಭಜನ್‍ಪುರ ಮಝಾರಕ್ಕೆ ಬಂದಾಗ ಅವನ ಮೇಲೆ ಉದ್ರೀಕ್ತ ತಂಡವು ದಾಳಿ ಮಾಡಿತು ಎಂದು ಅಕ್ರಂ ತಿಳಿಸಿದ್ದಾನೆ. ಜೀವ ಉಳಿಸಲು ಓಡಿದ ಅಕ್ರಂನ ಸಮೀಪಕ್ಕೆ ಬಾಂಬ್ ಬಿತ್ತು. ಪ್ರಜ್ಞೆ ಕಳಕೊಂಡು ಬಿದ್ದ ತಾನು ಆಸ್ಪತ್ರೆಯಲ್ಲಿ ಕಣ್ಣು ತೆರೆದದ್ದು. ಮೆಹರ್ ಆಸ್ಪತ್ರೆಯಿಂದ ನಂತರ ಜಿಟಿಬಿ ಆಸ್ಪತ್ರೆಗೆ ಕರಕೊಂಡು ಹೋಗಲಾಯಿತು. ಅಲ್ಲಿಗೆ ಹೋದಾಗ ಅಕ್ರಂ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಮೆಡಿಕೊ-ಲೀಗಲ್ ಪ್ರಕರಣವಾಗಿ ಪರಿವರ್ತಿಸಿ ಅಪಘಾತ ಎಂದು ಎಫ್‍ಐಆರ್ ದಾಖಲಿಸಲಾಗಿತ್ತು ಎಂಬುದಾಗಿ ಹೆಸರು ಬಹಿರಂಗ ಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.