ಸುಮಾಮಾ ಇಬ್ನು ಅಸಾಲ್: ದ್ವೇಷದಿಂದ ಪ್ರೀತಿಯೆಡೆಗೆ ಸಾಗಿದ ಪಯಣ

0
25

✍️ ಪ್ರಸನ್ನನ್

ಸುಮಾಮಾ ಇಬ್ನು ಅಸಾಲ್ ಅವರು ಯಮಾಮಾದ ಬನೂ ಹನೀಫಾ ಗೋತ್ರದ ನಾಯಕನಾಗಿದ್ದರು. ಪ್ರವಾದಿ ಮುಹಮ್ಮದ್(ಸ) ಮತ್ತು ಮುಸ್ಲಿಮರ ಬಗ್ಗೆ ತೀವ್ರ ದ್ವೇಷ ಹೊಂದಿದ್ದ ವ್ಯಕ್ತಿಯಾಗಿದ್ದರು. ಆರಂಭಿಕ ಕಾಲದಲ್ಲಿ ಮುಸ್ಲಿಮರಿಗೆ ಸಾಕಷ್ಟು ಕಿರುಕುಳವನ್ನೂ ನೀಡಿದ್ದರು. ವಿಷಯವೇನೆಂದು ತಿಳಿಯದೆ ಕೇವಲ ಜನಾಂಗೀಯ ದ್ವೇಷವನ್ನು ಪ್ರದರ್ಶಿಸುವವರು ಇಂದಿಗೂ ಇದ್ದಾರಲ್ಲವೇ?

ಮಸ್ಜಿದುನ್ನಬವಿಯನ್ನು ಕೇಂದ್ರವಾಗಿಟ್ಟುಕೊಂಡು ಇಸ್ಲಾಮ್‌ ಬಲಿಷ್ಠವಾಗಿ ಬೆಳೆದಂತೆ, ಕೊನೆಗೆ ಸುಮಾಮಾ ಬಂಧನಕ್ಕೊಳಗಾದರು. ಅವರನ್ನು ಮದೀನಾ ಮಸೀದಿಯ ಒಂದು ಕಂಬಕ್ಕೆ ಕಟ್ಟಿಹಾಕಲಾಯಿತು. ಅಂದು ಮಸೀದಿಯಲ್ಲಿ ಕೇವಲ ನಮಾಝ್ ಮಾತ್ರವಲ್ಲದೆ, ಪಾಠಪ್ರವಚನಗಳು, ಚರ್ಚೆಗಳು, ಸಾಂಸ್ಕೃತಿಕ ವಿನಿಮಯಗಳು ಕೂಡ ನಡೆಯುತ್ತಿದ್ದವು.

ಮೊದಲ ದಿನದ ಕೊನೆಯಲ್ಲಿ ಪ್ರವಾದಿ(ಸ) ಅವರು ಸುಮಾಮಾರನ್ನು ಉದ್ದೇಶಿಸಿ ಕೇಳಿದರು: “ಸುಮಾಮಾ, ನನ್ನಿಂದ ನೀನು ಏನನ್ನು ನಿರೀಕ್ಷಿಸುತ್ತೀಯ?” ಸುಮಾಮಾ ಹೀಗೆ ಉತ್ತರಿಸಿದರು: “ನೀವು ನನ್ನನ್ನು ಕೊಲ್ಲುವುದಾದರೆ, ಒಬ್ಬ ಪ್ರತಿಷ್ಠಿತ ವ್ಯಕ್ತಿಯನ್ನೇ ಕೊಲ್ಲುತ್ತಿರುವಿರಿ. ನೀವು ಕರುಣೆ ತೋರಿಸಲು ಬಯಸಿದರೆ, ಕೃತಜ್ಞತೆ ಸಲ್ಲಿಸುವ ವ್ಯಕ್ತಿಯ ಮೇಲೆ ಕರುಣೆ ತೋರಿಸುತ್ತೀರುವಿರಿ. ನೀನು ಪರಿಹಾರ ಧನ ವಸೂಲಿ ಮಾಡಲು ಬಯಸಿದರೆ, ಅದನ್ನು ತೀರಿಸುವ ಸಾಮರ್ಥ್ಯವಿರುವ ಶ್ರೀಮಂತನನ್ನೇ ಆರಿಸಿಕೊಳ್ಳುತ್ತಿರುವಿರಿ.”

ಮೊದಲ 3 ದಿನಗಳಲ್ಲಿಯೂ ಇದೇ ಪ್ರಶ್ನೆ ಮತ್ತು ಅದರೊಳಗೆ ಪ್ರಲೋಭನೆಯನ್ನು ಅಡಗಿಸಿಟ್ಟಿದ್ದ ಇದೇ ಉತ್ತರ ಯಾವುದೇ ಬದಲಾವಣೆಯಿಲ್ಲದೆ ಪುನರಾವರ್ತನೆಯಾಯಿತು. ನಂತರ ಸುಮಾಮಾರನ್ನು ಬಿಡುಗಡೆ ಮಾಡುವಂತೆ ಪ್ರವಾದಿ(ಸ) ಅವರು ಆದೇಶಿಸಿದರು. ಯಾರೊಂದಿಗೂ ಏನನ್ನೂ ಮಾತನಾಡದೆ ಸುಮಾಮಾ ಅವರು ಮದೀನಾ ಮಸೀದಿಯಿಂದ ಹೊರಟುಹೋದರು. ಸ್ವಲ್ಪ ದೂರದಲ್ಲಿದ್ದ ಒಂದು ತೋಟದಲ್ಲಿ ವಿಶ್ರಾಂತಿ ಪಡೆದು, ಶುದ್ಧೀಕರಣ ಮಾಡಿಕೊಂಡು ಮತ್ತೆ ರಸ್ತೆಗೆ ಬಂದರು. ತಮ್ಮ ಗೋತ್ರದ ಜನರು ಸುಮಾಮಾ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿದುಕೊಳ್ಳಲು ಅವರ ಸುತ್ತಲೂ ಸೇರಿದರು. ಆಗ ಅವರು ಹೀಗೆ ಹೇಳಿದರು: “ಬಂಧಿಯಾಗಿದ್ದ ಸಂದರ್ಭದಲ್ಲಿ ಸುಮಾಮಾ ಇಂತಹ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿಯೇ ನಾನು ಇಲ್ಲಿಗೆ ಮರಳಿ ಬಂದಿದ್ದೇನೆ.”

ನಂತರ ಅವರು ಮದೀನಾ ಮಸೀದಿಗೆ ಬಂದು ಹೀಗೆ ಘೋಷಿಸಿದರು: ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹ್, ವ ಅಶ್ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್. (ಅರ್ಥಾತ್‌: ಅಲ್ಲಾಹನ ಹೊರತು ಆರಾಧನೆಗೆ ಅರ್ಹನಾದ ಅನ್ಯ ದೇವನಿಲ್ಲ ಮತ್ತು ಮುಹಮ್ಮದ್(ಸ) ಅವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ನಾನು ಸಾಕ್ಷಿ ವಹಿಸುತ್ತೇನೆ.) 

ಆ ಮಾತುಗಳ ಗಾಂಭೀರ್ಯದಿಂದ ಆಶ್ಚರ್ಯಚಕಿತರಾದ ಮದೀನಾ ಮಸೀದಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಸುಮಾಮಾ(ರ) ಹೀಗೆ ಹೇಳಿದರು: “ನಾನು ಇಲ್ಲಿಗೆ ಕರೆತರಲ್ಪಟ್ಟಾಗ ಈ ಜಗತ್ತಿನಲ್ಲಿ ನನಗೆ ಅತ್ಯಂತ ಹೆಚ್ಚು ದ್ವೇಷವಿದ್ದ ವ್ಯಕ್ತಿ ಮುಹಮ್ಮದ್(ಸ) ಆಗಿದ್ದರು. ಆದರೆ ಈ ಜಗತ್ತಿನಲ್ಲಿ ಈಗ ನನಗೆ ಅತ್ಯಂತ ಪ್ರೀತಿಪಾತ್ರರಾದ ವ್ಯಕ್ತಿ ಮುಹಮ್ಮದ್(ಸ) ಅವರಾಗಿದ್ದಾರೆ.”

ಮದೀನಾ ಮಸೀದಿಯಲ್ಲಿನ ಆ ಮೂರು ದಿನಗಳು, ಪ್ರವಾದಿಯವರು ತಮ್ಮ ಅನುಯಾಯಿಗಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಅವರ ಉಪದೇಶಗಳು ಮತ್ತು ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಬ್ಬ ವ್ಯಕ್ತಿಯಲ್ಲಿ ಉಂಟಾದ ಮಹತ್ತರ ಬದಲಾವಣೆಯ ಇತಿಹಾಸವಿದು. ಸಾಮಾಜಿಕ ನ್ಯಾಯದ ಪರಿಮಳವನ್ನು ಹೊಂದಿದ್ದ ಮುಸ್ಲಿಮರೊಂದಿಗಿನ ಸಹವಾಸ ಮತ್ತು ಅವರೊಂದಿಗಿನ ವ್ಯವಹಾರಗಳಲ್ಲಿ ಇಸ್ಲಾಮಿನ ಸೌಂದರ್ಯವನ್ನು ಕಂಡುಕೊಂಡವರು ಅನೇಕರಿದ್ದಾರೆ. ಇತಿಹಾಸ ಇಂತಹ ಘಟನೆಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಿದೆ. ಬಹುಶಃ ಇದೇ ಕಾರಣದಿಂದ ಇಸ್ಲಾಮಿನ ಬಗ್ಗೆ ದ್ವೇಷ ಹೊಂದಿರುವ ಕೆಲವು ಧಾರ್ಮಿಕ ಸಮುದಾಯಗಳು ತಮ್ಮ ಮಕ್ಕಳನ್ನು ಹೊರಗಿನ ಪ್ರಭಾವವೇ ತಲುಪದ ಬಂಧಿ ಕೋಣೆಯಲ್ಲಿರುವಂತೆ ಬೆಳೆಸಲು ಪ್ರಯತ್ನಿಸುತ್ತವೆ. ಮುಸ್ಲಿಂ ಮಕ್ಕಳೊಂದಿಗೆ ಸ್ನೇಹ ಬೆಳೆಸಿದರೆ ಕಾಗೆ ಕುಕ್ಕುತ್ತದೆ ಎಂಬಂತೆ ಅವರನ್ನು ಹೆದರಿಸುತ್ತವೆ. ಹಿಜಾಬ್ ಧರಿಸಿದ ಹೆಣ್ಣುಮಗುವನ್ನು ಕಂಡರೆ ಭಯದಿಂದ ಆ ಹಿಜಾಬ್ ಧರಿಸಿದ ಮಗುವನ್ನೇ ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತವೆ.

ಇದೇ ರೀತಿಯ ಫ್ಯಾಸಿಸ್ಟ್ ಮನೋಭಾವ ಹೊಂದಿರುವವರು ದ್ವೇಷವನ್ನು ಮನಸ್ಸಿನಲ್ಲಿ ತುಂಬಿಕೊಂಡರೂ, ಅದಕ್ಕೆ ಸೌಜನ್ಯಯುತವಾಗಿ ಪ್ರತಿಕ್ರಿಯಿಸುವ ಮುಸ್ಲಿಮರು ಇಲ್ಲಿ ಇದ್ದೇ ಇರುತ್ತಾರೆ. ಪ್ರತಿಯೊಂದು ಇಸ್ಲಾಮೋಫೋಬಿಕ್ ಹೇಳಿಕೆಗೂ ಸೌಜನ್ಯದಿಂದ ಪ್ರತ್ಯುತ್ತರ ನೀಡುತ್ತಾ, ದ್ವೇಷದ ಬೆಂಕಿಗೆ ಶಾಂತಿಯ ನೀರನ್ನು ಎರಚುತ್ತಿರುವ ಮುಸ್ಲಿಂ ಸಮುದಾಯದೊಂದಿಗೆ ಇತರ ಸಹೋದರ ಸಮುದಾಯಗಳೂ ಕೈಜೋಡಿಸುತ್ತಿರುವುದು ಸಂತೋಷದ ವಿಚಾರವಾಗಿದೆ.

ಮದೀನಾ ಮಸೀದಿಗೆ ಬಂದು ಮೂತ್ರ ವಿಸರ್ಜನೆ ಮಾಡಿದ ಗ್ರಾಮೀಣ ಅರಬನನ್ನು ಗದರಿಸಲು ಮುಂದಾದ ಸತ್ಯವಿಶ್ವಾಸಿಗಳಿಗೆ ಪ್ರವಾದಿ(ಸ) ಅವರು ಹೇಳಿದ ಉಪದೇಶ ಹೀಗಿತ್ತು: “ಅವನನ್ನು ಅವನ ಪಾಡಿಗೆ ಬಿಟ್ಟು ಬಿಡಿರಿ. ಆ ಸ್ಥಳಕ್ಕೆ ಸ್ವಲ್ಪ ನೀರು ಸುರಿದು ಸ್ವಚ್ಛಗೊಳಿಸಿರಿ.”

ಕೆಲವು ವರದಿಗಳಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರು ಹೀಗೆಂದಿರುವುದಾಗಿಯೂ ಉಲ್ಲೇಖಿಸಲಾಗಿದೆ: “ನೀವು ಜನರಿಗೆ ಸುಲಭಗೊಳಿಸಲು ಕಳುಹಿಸಲ್ಪಟ್ಟವರೇ ಹೊರತು, ಕಷ್ಟವನ್ನುಂಟುಮಾಡಲು ಕಳುಹಿಸಲ್ಪಟ್ಟವರಲ್ಲ.”