ಸನ್ಮಾರ್ಗ ವಾರ್ತೆ
ಸುನಾಲಿ ಖಾತುನ್ ಮತ್ತು ಆಕೆಯ ಕುಟುಂಬ ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದೆ. ಗರ್ಭಿಣಿಯಾಗಿದ್ದ ಈಕೆಯನೂ ಈಕೆಯ ಮಗನನ್ನೂ ಮತ್ತು ಪತಿಯನ್ನೂ ದೆಹಲಿ ಪೊಲೀಸರು ಬಂಧಿಸಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದರು. ಬಾಂಗ್ಲಾದೇಶ ಆ ಬಳಿಕ ಇವರನ್ನು ನುಸುಳುಕೋರರು ಎಂದು ಹೇಳಿ ಜೈಲಿಗಟ್ಟಿತ್ತು. ಇದರ ಬೆನ್ನಿಗೆ ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂದು ಅವರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಅದರ ಪ್ರಕಾರ ಇದೀಗ ಅವರು ಭಾರತಕ್ಕೆ ಮರಳಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ಗಡಿ ಭದ್ರತಾ ಪಡೆಗಳ ನಡುವೆ ಮಾತುಕತೆ ನಡೆದ ಬಳಿಕ ಮೆಹದೀಪೂರ್ ಗಡಿಯ ಮೂಲಕ ಖಾತೂನ್ ಮತ್ತು ಅವರ ಎಂಟು ವರ್ಷದ ಮಗ ಭಾರತ ಪ್ರವೇಶಿಸಿದ್ದಾರೆ.
ಎರಡು ಕುಟುಂಬಗಳ ಒಟ್ಟು ಆರು ಮಂದಿಯನ್ನು ತಕ್ಷಣವೇ ಭಾರತಕ್ಕೆ ಮರಳಿ ಕರೆತನ್ನಿ ಎಂದು ಸೆಪ್ಟೆಂಬರ್ 26ರಂದು ಕೊಲ್ಕತ್ತಾ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಆದರೆ ಕೇಂದ್ರ ಸರಕಾರ ಈ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತು. ಇದರಲ್ಲಿ ಸುಪ್ರೀಂ ಕೋರ್ಟು ಸುನಾಲಿ ಮತ್ತು ಆಕೆಯ ಎಂಟು ವರ್ಷದ ಮಗನನ್ನು ಭಾರತಕ್ಕೆ ಕರೆತರುವಂತೆ ಹೇಳಿದೆ ಆದರೆ ಈಕೆಯ ಪತಿ ದಾನಿಶ್ ಮತ್ತು ಇನ್ನೋರ್ವ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿ ಬಾಂಗ್ಲಾದೇಶದಲ್ಲೇ ಇದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಕೇಂದ್ರ ಸರಕಾರ ಆದೇಶ ಜಾರಿ ಮಾಡಲು ಮುಂದಾಗಲಿಲ್ಲ. ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಈ ಬಗ್ಗೆ ಅರ್ಜಿ ಹಾಕಿದ ಬಳಿಕ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲು ಮುಂದಾಯಿತು ಎಂದು ತೃಣ ಮೂಲ ಕಾಂಗ್ರೆಸ್ ಸದಸ್ಯ ಸಮೀರುಲ್ ಇಸ್ಲಾಂ ಟ್ವೀಟ್ ಮಾಡಿದ್ದಾರೆ.












