ಕೆಂಪುಕೋಟೆ ಬ್ಲಾಸ್ಟ್‌ನೊಂದಿಗೆ ಜಮಾಅತೆ ಇಸ್ಲಾಮಿ ಹಿಂದ್ ಲಿಂಕ್: ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾನೂನು ನೋಟಿಸ್

0
457

ಸನ್ಮಾರ್ಗ ವಾರ್ತೆ

ಕೇರಳ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ಮನೋರಮ ನ್ಯೂಸ್ನ ಸಂಪಾದಕರು ಮತ್ತು ನ್ಯೂಸ್ ಆಂಕರ್‌ಗೆ ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕವು ಕಾನೂನು ನೋಟಿಸ್ ಜಾರಿ ಮಾಡಿದೆ. ಕೆಂಪುಕೋಟೆಯ ಬಳಿ ನಡೆದ ಸ್ಫೋಟಕ್ಕೆ ಜಮಾಅತೆ ಇಸ್ಲಾಮಿ ಹಿಂದನ್ನು ಕೆ. ಸುರೇಂದ್ರನ್ ಹೊಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಅವರಿಗೆ ನೋಟಿಸು ಕಳುಹಿಸಲಾಗಿದೆ.

ಕೊಚ್ಚಿಯ ಸುಭಾಷ್ ಪಾರ್ಕಿನಲ್ಲಿ ನಡೆದ ಮನೋರಮ ನ್ಯೂಸ್ ಕಾರ್ಯಕ್ರಮದ ಸಂದರ್ಭದಲ್ಲಿ ಕೆ. ಸುರೇಂದ್ರನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕೆಂಪುಕೋಟೆ ಬಾಂಬು ಸ್ಫೋಟವನ್ನು ನಡೆಸಿದವರು ಯಾರು? ಅದು ಜಮಾಅತೆ ಇಸ್ಲಾಮಿ ಅಲ್ಲವೇ? ನೀವು ಅದನ್ನು ಮರೆ ಮಾಡುತ್ತಿದ್ದೀರಿ? ಕೆಂಪುಕೋಟೆಯ ಮೇಲೆ ಬಾಂಬುದಾಳಿ ಮಾಡಿದ್ದು ಜಮಾ ಅತೆ ಇಸ್ಲಾಮಿ. ಇದರ ರಾಜಕೀಯ ಮುಖ ವೆಲ್ಫೇರ್ ಪಾರ್ಟಿ ಎಂದು ಅವರು ಹೇಳಿದ್ದರು.

ಈ ಕಾರ್ಯಕ್ರಮವನ್ನು ಮನೋರಮ ನ್ಯೂಸ್ youtube ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿತ್ತು ಮತ್ತು ಸುರೇಂದ್ರನ್ ಅವರು ತಮ್ಮ facebook ಪುಟದಲ್ಲಿ ಇದನ್ನು ಹಂಚಿಕೊಂಡಿದ್ದರು.

ಸುರೇಂದ್ರನ್ ಅವರ ಹೇಳಿಕೆ ಸುಳ್ಳು ಆಧಾರ ರಹಿತ ಮತ್ತು ಸಂಘಟನೆಯ ಕಾರ್ಯಕರ್ತರ ಹೆಸರಿಗೆ ಕಳಂಕ ತರುವ ಉದ್ದೇಶವನ್ನು ಹೊಂದಿದೆ ಎಂದು ನ್ಯಾಯಾಂಗ ನೋಟಿಸ್ ನಲ್ಲಿ ಹೇಳಲಾಗಿದೆ.

ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕದ ಕಾರ್ಯದರ್ಶಿ ಶಿಹಾಬ್ ಪೂಕೊಟ್ಟೂರ್ ಅವರ ಪರವಾಗಿ ವಕೀಲ ಅಮೀನ್ ಹಸನ್ ಅವರು ಈ ನೋಟಿಸು ಜಾರಿ ಮಾಡಿದ್ದಾರೆ.

ತಮ್ಮ ಹೇಳಿಕೆಗಾಗಿ ಸುರೇಂದ್ರನ್ ಬೇಶರತ್ತಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಒಂದು ಕೋಟಿ ರೂಪಾಯಿ ಮಾನಹಾನಿ ಪ್ರಕರಣವನ್ನು ದಾಖಲಿಸುವುದಾಗಿಯೂ ನೋಟಿಸ್‌ನಲ್ಲಿ ಹೇಳಲಾಗಿದೆ. ಏಳು ದಿನಗಳಲ್ಲಿ ಇದಕ್ಕೆ ಉತ್ತರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.