ಮಸ್ಜಿದುನ್ನಬವಿಯ ರೌಲ ಸಂದರ್ಶನ ಮಾಡಬಯಸುವವರಿಗೆ ಈ ಮಾಹಿತಿ ಗೊತ್ತಿರಲಿ

0
444

ಸನ್ಮಾರ್ಗ ವಾರ್ತೆ

ಮದೀನಾದ ಮಸ್ಜಿದುನ್ನಬವಿಯ ರೌಲಕ್ಕೆ ಭೇಟಿ ನೀಡುವುದು ಮತ್ತು ಅಲ್ಲಿ ಎರಡು ರಕಾತ್ ನಮಾಜ್ ಮಾಡುವುದನ್ನೆಲ್ಲಾ ಮುಸ್ಲಿಮರು ಬಹಳವೇ ಭಾವನಾತ್ಮಕವಾಗಿ ಪರಿಗಣಿಸುತ್ತಾರೆ. ಆ ಪುಟ್ಟ ಜಾಗಕ್ಕೆ ಸ್ವರ್ಗ ಸದೃಶ ಶ್ರೇಷ್ಠತೆ ಇದೆ. ಮಸ್ಜಿದುನ್ನ ಬವಿಗೆ ಹೋದವರು ಇಲ್ಲಿ ನಮಾಜ್ ಮಾಡದೆ ಹಿಂತಿರುಗುವುದಿಲ್ಲ.

ಆದರೆ ಇನ್ನು ಮುಂದೆ ನಿಮಗೆ ಬೇಕಾದಂತೆ ಇಲ್ಲಿ ನಮಾಜ್ ಮಾಡುವುದಕ್ಕೆ ಅನುಮತಿ ಇಲ್ಲ. ವರ್ಷದಲ್ಲಿ ಒಂದು ಬಾರಿ ಮಾತ್ರ ಓರ್ವ ವ್ಯಕ್ತಿ ಇಲ್ಲಿ ನಮಾಜ್ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇಂಥದ್ದೊಂದು ನಿಯಮವನ್ನು ಸೌದಿ ಇದೀಗ ಜಾರಿಗೆ ತಂದಿದೆ.

ಇಲ್ಲಿ ನಮಾಜ್ ಮಾಡುವುದಕ್ಕೆ ಸೌದಿಯ ಹಜ್ ಮತ್ತು ಉಮ್ರಾ ಸಚಿವಾಲಯದ ನುಸುಕ್ ಆಪ್ ಮೂಲಕ ಅನುಮತಿ ಪಡೆಯಬೇಕಾಗಿದೆ. ಇದು ವರ್ಷದ 365 ದಿನಗಳಲ್ಲಿ ಓರ್ವ ವ್ಯಕ್ತಿಗೆ ಒಂದು ಬಾರಿ ಮಾತ್ರ ಅನುಮತಿಯನ್ನು ಕೊಡುತ್ತದೆ. ಮಾತ್ರ ಅಲ್ಲ ಮಹಿಳೆಯರಿಗೂ ಮತ್ತು ಪುರುಷರಿಗೂ ಸಂದರ್ಶನಕ್ಕೆ ಬೇರೆ ಬೇರೆ ಅವಧಿಯನ್ನು ನಿರ್ಣಯಿಸಿ ಕೊಡುತ್ತದೆ.

ಮಸ್ಜಿದುನ್ನಬವಿಯ ಪಶ್ಚಿಮದ 37ನೇ ಸಂಖ್ಯೆಯ ದ್ವಾರವಾದ ಮಕ್ಕಾ ಗೇಟ್ ಮೂಲಕ ಪ್ರವೇಶವನ್ನು ನಿಗದಿಪಡಿಸಲಾಗಿದೆ. ವೃದ್ಧರಿಗೆ ವೀಲ್ ಚೇರ್ ಮೂಲಕ ಇಲ್ಲಿಗೆ ಪ್ರವೇಶ ಪಡೆಯಬಹುದು. ಶುಕ್ರವಾರವನ್ನು ಬಿಟ್ಟು ಉಳಿದ ದಿನಗಳಲ್ಲಿ ಪುರುಷರಿಗೆ ಮುಂಜಾನೆ ಎರಡು ಗಂಟೆಯಿಂದ ಫಜ್ರ್ ನಮಾಜಿನವರೆಗೆ ಮತ್ತು ಬೆಳಿಗ್ಗೆ ಹನ್ನೊಂದು ಗಂಟೆ 20 ನಿಮಿಷದಿಂದ ರಾತ್ರಿ ಇಶಾ ನಮಾಜ್ ನವರೆಗೆ ಸಮಯ ನಿಗದಿಪಡಿಸಲಾಗಿದೆ.

ಮಹಿಳೆಯರಿಗೆ ಸಾಮಾನ್ಯ ದಿನಗಳಲ್ಲಿ ಫಜ್ರ್ ನಮಾಜ್ ನಿಂದ ಮುಂಜಾನೆ 11 ಗಂಟೆಯವರೆಗೆ ಮತ್ತು ಇಶಾ ನಮಾಜಿನ ಬಳಿಕ ಮುಂಜಾನೆ ಎರಡು ಗಂಟೆಯವರೆಗೆ ಬೇಟಿಗೆ ಸಮಯ ನಿಗದಿಪಡಿಸಲಾಗಿದೆ.

ಇದೆ ವೇಳೆ ಶುಕ್ರವಾರದಂದು ಪುರುಷರಿಗೆ ಮುಂಜಾನೆ ಎರಡು ಗಂಟೆಯಿಂದ ಫಜ್ರ್ ನಮಾಜಿನವರೆಗೆ ಮತ್ತು ಬೆಳಗ್ಗೆ ಒಂಬತ್ತು ಗಂಟೆ 20 ನಿಮಿಷದಿಂದ 11 ಗಂಟೆ 20 ನಿಮಿಷದವರೆಗೆ ಅವಕಾಶವನ್ನು ನೀಡಲಾಗಿದೆ. ಹಾಗೆಯೇ ಜುಮ ನಮಾಜಿನ ಬಳಿಕ ಇಶಾ ನಮಾಜ್ ನ ವರೆಗೆ ಪುರುಷರಿಗೆ ರೌಲ ಸಂದರ್ಶನಕ್ಕೆ ಅನುಮತಿ ನೀಡಲಾಗಿದೆ.

ಮಹಿಳೆಯರಿಗೆ ಶುಕ್ರವಾರದಂದು ಫಜ್ರ್ ನಮಾಜಿನ ಬಳಿಕ ಬೆಳಗೆ ಒಂಬತ್ತು ಗಂಟೆಯವರೆಗೆ ಮತ್ತು ರಾತ್ರಿ ಇಷಾ ನಮಾಝಿನ ಬಳಿಕ ಮುಂಜಾನೆ ಎರಡು ಗಂಟೆಯವರೆಗೆ ರೌಲ ಬೇಟಿಗೆ ಅವಕಾಶ ನೀಡಲಾಗಿದೆ.

ಸಾಮಾನ್ಯವಾಗಿ ಮಕ್ಕಾಕ್ಕೆ ಉಮ್ರ ನಿರ್ವಹಿಸಲು ಹೋಗುವವರು ಮದೀನಾದ ಮಚ್ಚಿದನ್ನಬವಿಗೆ ಭೇಟಿ ನೀಡುವುದು ಸಾಮಾನ್ಯ. ಮಾತ್ರ ಅಲ್ಲ ರೌಲ ಸಂದರ್ಶನ ಮಾಡುವುದು ಮತ್ತು ನಮಾಜ್ ಮಾಡುವುದು ಕೂಡ ಸಾಮಾನ್ಯ. ಈ ಕಾರಣದಿಂದಾಗಿ ರೌಲ ಸದಾ ಗಿಜಿ ಗುಟ್ಟುತ್ತಿರುತ್ತದೆ ಮತ್ತು ಜನನಿ ಬಿಡತ್ತೆಯಿಂದಾಗಿ ಅಲ್ಲಿಗೆ ಭೇಟಿ ನೀಡುವುದಕ್ಕೂ ತ್ರಾಸ ಪಡಬೇಕಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಇದೀಗ ಸೌದಿ ಸಚಿವಾಲಯವು ಇದರಲ್ಲಿ ಮಾರ್ಪಾಡು ಮಾಡಲು ನಿರ್ದರಿಸಿದೆ ಎಂದು ಹೇಳಲಾಗಿದೆ. ಈ ಬದಲಾವಣೆಯಿಂದಾಗಿ ಎಲ್ಲರಿಗೂ ರೌಲ ಸಂದರ್ಶನಕ್ಕೆ ಅವಕಾಶ ಸಿಗಲಿದೆ ಮತ್ತು ರೌಲವನ್ನು ಕಣ್ತುಂಬಿಸಿಕೊಳ್ಳುವ ಬಯಕೆ ಈಡೇರಲಿದೆ ಎಂದು ಸಮರ್ಥಿಸಲಾಗಿದೆ.