ಸನ್ಮಾರ್ಗ ವಾರ್ತೆ
✍️ ಅರಫಾ ಮಂಚಿ
ಮುಸ್ಲಿಮರನ್ನು ಕಟ್ಮುಲ್ಲ ಎಂದು ಕರೆದ ಅಲಹಾಬಾದ್ ಹೈಕೋರ್ಟಿನ ಜಡ್ಜ್ ರದ್ದು ಯಾವ ಪ್ರವೃತ್ತಿ? ಹಿಂದುತ್ವ ದೇಶೀಯತೆಯ ಪೋಷಕರಾಗಿ ಜಡ್ಜ್ ಗಳು ಬದಲಾದರೆ ಸಂವಿಧಾನ ಅರ್ಥ ಕಳಕೊಳ್ಳುತ್ತದೆ. ನ್ಯಾಯ ಕಟಕಟೆಗೆ ಸರಿಯುತ್ತದೆ. ಅದರ ಜಾತ್ಯತೀತ ಪ್ರತಿಪಾದನೆ ಮೂಕಪ್ರೇಕ್ಷಕನಾಗುತ್ತದೆ. ಮೋದಿ ಆಡಳಿತ ಕಾಲದಲ್ಲಿ ಏನೂ ಆಗಬಹುದಾಗಿದೆ. ಅಲಹಾಬಾದ್ನ ಹೈಕೋರ್ಟಿನ ಹಾಲಿ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಮುಸ್ಲಿಮರನ್ನು `ಕಟ್ಮುಲ್ಲ’ ಎಂದು ಕರೆದದ್ದು ಮಾತ್ರವಲ್ಲ ಬಹುಸಂಖ್ಯಾತರ ಹಿತದ ಪ್ರಕಾರವೇ ದೇಶದಲ್ಲಿ ಎಲ್ಲವೂ ತೀರ್ಮಾನಿಸಲ್ಪಡುತ್ತದೆ ಎಂದು ಹೇಳಿದ್ದಾರೆ. ಹಿಂದುತ್ವ ರಾಷ್ಟ್ರೀಯತೆ ಎನ್ನುವುದು ಜಾತ್ಯತೀತತೆಗೆ ಪ್ರತಿಯಾಗಿ ಆರೆಸ್ಸೆಸ್, ಸಂಘಪರಿವಾರ ಪ್ರತಿಪಾದಿಸುವಂತಹದ್ದು. ಶೇಖರ್ ಗುಪ್ತ ಟೂಲ್ ಮಾತ್ರ.
ಬಾಬರಿ ಮಸೀದಿ ಬಿದ್ದಾಗ ದುಃಖಿಸಿದವರು ನಂತರ ಕೋರ್ಟ್ ಹೇಳಿದ್ದನ್ನು ಅನುಸರಿಸುತ್ತೇವೆ ಎಂದಿದ್ದನ್ನು ನೆನಪಿಸಿ ನೋಡಿ. ಕೋರ್ಟು ಯಾವುದೇ ದಾಖಲೆಗಳಿಲ್ಲದಿದ್ದರೂ ಬಹುಸಂಖ್ಯಾತರ ಹಿತದಂತೆ ತೀರ್ಮಾನಿಸಿತು. ಹೋದದ್ದು ಹೋಯಿತು ಇನ್ನು ನೆಮ್ಮದಿಯಾಗಿರಬಹುದೆಂದು ಎಷ್ಟೋ ಮಂದಿ ಭಾವಿಸಿದರು. ಏನಾಯಿತು? ಇದೀಗ ಒಂದೊಂದೇ ಮಸೀದಿಯನ್ನು ಕೇಳ ತೊಡಗಿದ್ದಾರೆ. ರಾಜರ ಕಾಲದಲ್ಲಿ ಕಟ್ಟಿದ ಮಸೀದಿಗಳೆಲ್ಲವೂ ಮಂದಿರವಾಗಿತ್ತು ಎನ್ನುತ್ತಾ ಹಿಂದುತ್ವ ಆತ್ಮಾಭಿಮಾನವನ್ನು ರಕ್ಷಿಸುವ ಸಲುವಾಗಿ ಐತಿಹಾಸಿಕ ಪ್ರಸಿದ್ಧ ಮಸೀದಿಯನ್ನು ಕೇಳತೊಡಗಿದ್ದಾರೆ. ಅಲ್ಲೆಲ್ಲ ಅಗೆಯಬೇಕಂತೆ. ಒಳಗೇನಿದೆ ಎಂದು ನೋಡಬೇಕಂತೆ. ಅಗೆಯುವುದೇ ಇವರಿಗೆ ಆತ್ಮಾಭಿಮಾನವಾ? ಇತಿಹಾಸವನ್ನು ಅಗೆಯಲು ಹೊರಟವರು ಇನ್ನೇನು ಹೇಳಬಹುದು? ವಿಷಯ ಹಿಂದುತ್ವ ರಾಷ್ಟ್ರೀಯತೆಯದು. ಐತಿಹಾಸಿಕ ಮಸೀದಿಗಳನ್ನು ಟೂಲ್ ಮಾಡುತ್ತಿದ್ದಾರೆ. ಆ ರಾಷ್ಟ್ರೀಯತೆಯಡಿ ಬಹುಸಂಖ್ಯಾತರನ್ನು ಸಾರ ಸಂಪೂರ್ಣ ಧ್ರುವೀಕರಿಸುವುದಕ್ಕಾಗಿ.
ನೋಡಿ, ಈಗ ಇವರು ಮಥುರಾ, ಕಾಶಿ, ಸಂಭಾಲ್, ಪುಣೆ ಹೀಗೆ ದೇಶದ ನಾನಾ ಭಾಗಗಳಲ್ಲಿ ಸುಲ್ತಾನರ ಕಾಲದ ಮಸೀದಿಯಲ್ಲಿ ಮಂದಿರ ಹುಡುಕ ತೊಡಗಿದ್ದಾರೆ. ನ್ಯಾಯಾಲಯದ ಪರಿಸ್ಥಿತಿ ಎಷ್ಟು ಕೆಟ್ಟು ಹೋಗಿದೆ ಎಂದರೆ ಮಸೀದಿಯ ಕುರಿತು ಅರ್ಜಿ ಹಾಕಿದವರಿಗೆಲ್ಲ ಸರ್ವೆ ಮಾಡಲು ಕೋರ್ಟು ಅನುಮತಿಯನ್ನು ನೀಡುತ್ತಿದೆ. ಒಂದು ಬಾಬರಿ ಹೋದರೆ ದೇಶದಲ್ಲಿ ಶಾಂತಿಯಿಂದ ಬದುಕಬಹುದಲ್ಲ ಎಂದು ಯೋಚಿಸಿದವರು ಇದಕ್ಕೆ ಏನು ಹೇಳಬಹುದು? ಬಾಬರಿ ಮಸೀದಿ ಒಂದು ಆರಂಭ, ದೇಶದಲ್ಲಿರುವ ಎಲ್ಲ ಐತಿಹಾಸಿಕ ಮಸೀದಿಯನ್ನು, ಮಝಾರಗಳನ್ನು ಅವರು ಕಿತ್ತುಕೊಳ್ಳ ತೊಡಗುತ್ತಿದ್ದಾರೆ.
ಮೋದಿ ಹೋಗಿ ಚಾದರ ಹಾಕಿ ಬಂದ ಅಜ್ಮೀರ್ ಶರೀಫ್ ದರ್ಗಾವನ್ನೂ ಅವರು ಕೇಳ ತೊಡಗಿದ್ದಾರೆ. ಬಾಬರಿ ಮಸೀದಿಯ ನೆಲದೊಳಗೂ ಹೊರಗೂ ಮಂದಿರದ ಏನೂ ಇರಲಿಲ್ಲ ಎನ್ನಲಾಗಿತ್ತು.. ತೀರ್ಪು ಅವರ ಪರವೇ ಬಂತು. ಈ ಮಸೀದಿ, ಮಝಾರಗಳ ಭವಿಷ್ಯವೂ ಅಷ್ಟೇ. ಅಲ್ಲಿ ಏನೂ ಇರುವುದಿಲ್ಲ. ಕೋರ್ಟಿನಿಂದ ಬಾಬರಿ ಮಸೀದಿಯಂತಹದೇ ತೀರ್ಪು ಬಂದರೂ ಬರಬಹುದು. ದೇವನ ಪ್ರೇರಣೆಯಿಂದ ಬಾಬರಿ ತೀರ್ಪನ್ನು ಬರೆದಿದ್ದೆ ಎಂದು ಸುಪ್ರೀಂ ಕೋರ್ಟಿನ ಮಾಜಿ ಚೀಫ್ ಜಸ್ಟಿಸ್ ಡಿವೈ ಚಂದ್ರಚೂಡ್ ಹೇಳಿದರು. ಈ ಪ್ರಕರಣಗಳಲ್ಲಿಯೂ ದೇವ ಪ್ರೇರಣೆಯಿಂದ ತೀರ್ಪು ಬರೆಯುವ ಜಡ್ಜ್ ಗಳು ಸಿಗಬಹುದು. ಒಟ್ಟಿನಲ್ಲಿ ಇಂತಹ ಘಟನೆಗಳಲ್ಲಿ ಕೆಲವರು ಹಿಂದುತ್ವ ರಾಷ್ಟ್ರೀಯತೆಯಡಿಯಲ್ಲಿ ಟೂಲ್ ಬಳಸಲ್ಪಡಲಿದ್ದಾರೆ. ಮೋದಿ ಆಡಳಿತ ಯುಗದಲ್ಲಿ ಬಹುತೇಕ ನ್ಯಾಯ ಕೇಳಿದವರೆಲ್ಲ ಬೇಸ್ತು ಬೀಳುತ್ತಿದ್ದಾರೆ. ಇರಲಿ,
ಮೋದಿ ಆಡಳಿತ ಕಾಲವು ಹಿಂದುತ್ವ ರಾಷ್ಟ್ರೀಯತೆಯ ಪ್ರಖರ ದಿನಗಳೇ. ಹಿಂದುತ್ವವಾದಿ ಹೇಳಿಕೆಗಳು, ದಾವೆಗಳು ಇಂದು ಪುರಸ್ಕರಿಸಲ್ಪಡುತ್ತಿರುವುದು ಈ ಮಾತಿಗೆ ಸಾಕ್ಷಿ. ಇವೆಲ್ಲ ಅಂಬೇಡ್ಕರ್ ಬರೆದ ಸಂವಿಧಾನನ್ನು ಮುಂದಿಟ್ಟುಕೊಂಡೇ ನಡೆಯುತ್ತಿದೆ. ಭಾರತ ಜಾತ್ಯತೀತ ದೇಶ ಎಂದು ಬೊಬ್ಬೆ ಹೊಡೆಯುವವರಿಗೆ ಮೋದಿ ಸರಕಾರ ಗುದ್ದಾಡುವುದಕ್ಕೆ ಹೊಸ ಹೊಸ ವಸ್ತುಗಳನ್ನು ಒದಗಿಸುತ್ತಲೂ ಇದೆ. ಅವರು ಅಡಾನಿ, ಅಂಬಾನಿ, ಉದ್ಯೋಗ, ನಿರುದ್ಯೋಗ, ವಿಮಾನ ನಿಲ್ದಾಣ ಇತ್ಯಾದಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯು ಮುಸ್ಲಿಮರನ್ನು ಸತಾಯಿಸುವ ವಿಷಯಗಳನ್ನೆತ್ತಿ ನ್ಯಾಯಾಲಯಗಳಲ್ಲೂ ಗೆದ್ದು ಬರುತ್ತಿದೆ.
ಸರಿ, 1991ರ ಆರಾಧಾನಾಲಯಗಳ ಅಧಿನಿಯಮ ಪ್ರಕಾರ ಅದನ್ನು ಪ್ರಶ್ನಿಸಿದ ಅರ್ಜಿಯಲ್ಲಿ ಸುಪ್ರೀಂ ಕೋರ್ಟು ಮಧ್ಯಂತರ ತಡೆಯಾಜ್ಞೆ ನೀಡಿತು. ನಾಲ್ಕು ವಾರಗಳಲ್ಲಿ ಮೋದಿ ಸರಕಾರ ಉತ್ತರಿಸಬೇಕೆಂದು ನೋಟಿಸು ಜಾರಿ ಮಾಡಿತು. ಚೀಪ್ ಜಸ್ಟಿಸ್ ಸಂಜೀವ್ ಖನ್ನರು ಮಸೀದಿಯ ಕುರಿತು ಹೊಸ ಕೇಸು ದಾಖಲಿಸಲ್ಪಡಬಾರದು, ಸರ್ವೆ ಮಾಡಬಾರದು ಎಂದು ತಡೆ ನೀಡಿದ್ದಾರೆ. ಆ ನಾಲ್ಕು ವಾರಗಳ ನಂತರ 1991ರಲ್ಲಿ ಅಂದಿನ ನರಸಿಂಹ ಸರಕಾರ ಜಾರಿ ಮಾಡಿದ್ದ 1991ರ ಆರಾಧನಾಲಯಗಳ ಕಾಯ್ದೆಯನ್ನು ಮೋದಿ ಸರಕಾರ ದುರ್ಬಲಗೊಳಿಸುವ ಎಲ್ಲವನ್ನೂ ಮಾಡಬಹುದು. ಮಧ್ಯಂತರ ತಡೆಯಾಜ್ಞೆಯ ಬಾಬತ್ತಿರುವುದು ನಾಲ್ಕು ವಾರಗಳವರೆಗೆ. ಹೀಗಾಗಿ ಹಿಂದುತ್ವ ರಾಷ್ಟ್ರೀಯತೆ ಒಂದು ಮಸೀದಿ(ಬಾಬರಿ ಮಸೀದಿ) ಗೆಲ್ಲುವುದರೊಂದಿಗೆ ಹಲವು ಮಸೀದಿಯನ್ನು ಕಿತ್ತುಕೊಳ್ಳಲು ಪ್ರಯತ್ನ ಮುಂದುವರಿಸುತ್ತಿರುತ್ತದೆ. ಪರಿಣಾಮದಲ್ಲಿ ದೇಶಾದ್ಯಂತ ದ್ವೇಷ ಹೆಚ್ಚುತ್ತಿರುತ್ತದೆ. ಹಿಂದುತ್ವ ಗಟ್ಟಿಯಾಗುತ್ತಿರುತ್ತದೆ. ಆದ್ದರಿಂದ ಮುಸ್ಲಿಮರು ಕಳಕೊಳ್ಳುವುದಕ್ಕೆ ಸಿದ್ಧರಾಗಿ ಎನ್ನುವುದು ನ್ಯಾಯ ಎನಿಸಿಕೊಳ್ಳುತ್ತಿದೆ.
ವಿಷಯ ಬದಲಿಸೋಣ:
ಅಸ್ಸಾಮಿನಲ್ಲಿ ಎನ್ ಆರ್ಸಿಗೆ ಅರ್ಜಿ ಹಾಕದಿದ್ದರೆ ಆಧಾರ್ ಕಾರ್ಡ್ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ್ ಶರ್ಮ ಗುಡುಗಿದ್ದಾರೆ. ಸರಕಾರದ ತಳಮಟ್ಟದಲ್ಲಿ ಫೀಲ್ಡ್ ಸರ್ಕಲ್ ಆಫಿಸರ್ಗಳು ಅರ್ಜಿಯನ್ನು ಪರಿಶೀಲಿಸಿ ಕೇಂದ್ರಕೆ ರಿಪೋರ್ಟ್ ಕೊಡಲಿದ್ದಾರೆ ಎಂದು ಶರ್ಮ ಹೇಳಿದ್ದಾರೆ. ಈ ಎನ್ಆರ್ಸಿ ಯಾಕೆ? ಮುಸ್ಲಿಮರನ್ನು ಬಾಂಗ್ಲಾದೇಶಿ ಮಾಡುವುದಕ್ಕೆ. ಹಿಮಂತ ಶರ್ಮ ಈಗ ಹಿಂದುತ್ವ ರಾಷ್ಟ್ರೀಯತೆಯ ಮುಖವಾಡ ಹಾಕಿದ್ದಾರೆ. ಬೀಫ್ ತಿನ್ನಬಾರದು, ಮುಸ್ಲಿಂ ಮದುವೆ ರಿಜಸ್ತ್ರಾರ್ಗಳ ಕೆಲಸ ತೆಗೆದದ್ದು ಇತ್ಯಾದಿ ಹಲವು ಕುತಂತ್ರಗಳನ್ನು ಮಾಡಿದರು. ಹಿಂದೆ ಅಪ್ಪಟ ಕಾಂಗ್ರೆಸ್ಸಿಗ ಆಗಿದ್ದವರು ಈಗ ಉಗ್ರ ಬಿಜೆಪಿಗ. ಕಾಂಗ್ರೆಸ್ಸಿನಲ್ಲಿದ್ದಾಗ ವೋಟಿಗಾಗಿ ಮುಸ್ಲಿಮರ ಮುಂದೆ ಹಲ್ಲು ಗಿಂಜುತ್ತಿದ್ದವರು ಈಗ ಮುಸ್ಲಿಮರನ್ನು ಸತಾಯಿಸುವ ಕೆಲಸಕ್ಕಿಳಿದಿದ್ದಾರೆ. ಇನ್ನೂ ಕುತೂಹಲದ ವಿಚಾರವೆಂದರೆ ಸಾರ್ವಜನಿಕ ಸ್ಥಳದಲ್ಲಿ ಬೀಫ್ ತಿನ್ನಬಾರದೆಂದು ಹಿಮಂತ ಸರಕಾರ ಹೇಳುತ್ತಿದೆ. ಅದರ ಮಂತ್ರಿ ಪಿಜೂಷ್ ಹಝಾರಿಕ ಬೀಫ್ ನಿಷೇಧ ಕ್ರಮವನ್ನು ಬೆಂಬಲಿಸಿ ಅಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಕಾಂಗ್ರೆಸ್ಸಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಪಿಜೂಸಿಗೂ, ಹಿಮಂತ್ ರಿಗೂ ಅಸ್ಸಾಮಿನಲ್ಲಿ ಬೀಫ್ ನಿಷೇಧ ಸಾಧ್ಯವಿಲ್ಲ. ಅಲ್ಲಿ ಅದನ್ನು ಮುಸ್ಲಿಮರು ಮಾತ್ರ ತಿನ್ನುವುದಲ್ಲ. ದಲಿತರು ತಿನ್ನುತ್ತಾರೆ. ಹಿಂದೂ ಕ್ರೈಸ್ತ, ಗೋತ್ರ ವಿಭಾಗದವರೂ ತಿನ್ನುತ್ತಾರೆ. ಕೇರಳದಲ್ಲಿಯೂ ಈಶಾನ್ಯ ಭಾರತದಲ್ಲಿಯೂ ತಿನ್ನುತ್ತಾರೆ.
ಸಾಲದ್ದಕ್ಕೆ ಮೋದಿ ಸರಕಾರದ ಅಧೀನದಲ್ಲಿ ಬೀಫ್ ಎಕ್ಸ್ಪೋರ್ಟ್ ನಿರಂತರ ನಡೆಯಿತು. ಬಿಜೆಪಿ ಆರೆಸ್ಸೆಸ್ ಆಡಳಿತ ಕೂಡ 2021-22ರಲ್ಲಿ 3,303.34 ದಶಲಕ್ಷ ಡಾಲರ್ನ ಬೀಫ್ ರಫ್ತು ಮಾಡಿದೆ. 2023-24 ವರ್ಷ ಅದು 3,740.53 ದಶಲಕ್ಷ ಡಾಲರ್ಗೆ ಏರಿತು. ರಾಜ್ಯಸಭಾ ಸದಸ್ಯ ಪಿಪಿ ಸುನೀರ್ ಎತ್ತಿದ ಪ್ರಶ್ನೆಗೆ ಸರಕಾರ ನೀಡಿದ ಉತ್ತರ ಇದು. ಹಿಂದುತ್ವವಾದಿ ಮೋದಿ ಸರಕಾರ ಹಿಂದುತ್ವ ರಾಷ್ಟ್ರೀಯತೆಯವರ ಮುಂದೆಯೇ ಬೀಫ್ ಅನ್ನು ಹೊರಗೆ ಮಾರಿ ಹಣ ಮಾಡುತ್ತದೆ.
ಇನ್ನೊಂದು ಘಟನೆಯನ್ನು ನೋಡಿ,
ಇದು ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ಹಿಂದಿನ ಕಾಲದಲ್ಲಿ ಒಬ್ಬ ರಾಜ ಇದ್ದ ಎಂದು ಕತೆ ಹೇಳಿದ ಘಟನೆಯಿದು. ಹಿಂದೊಬ್ಬ ರಾಜನಿದ್ದ. ಆತ ಬಜಾರಿಗೆ ವೇಷ ಬದಲಿಸಿ ಹೋಗುತ್ತಿದ್ದ. ಜನರು ಏನು ಹೇಳುತ್ತಾರೆ ಎಂದು ನೋಡುತ್ತಿದ್ದ. ಆದರೆ ಇಂದಿನ ರಾಜ ಆಗಾಗ ವೇಷ ಬದಲಿಸುತ್ತಾನೆ. ಜನರ ನಡುವೆ ಹೋಗಲು ಹೆದರುತ್ತಾನೆ. ಜನರ ಮಾತುಗಳನ್ನು ಕೇಳಲು ಆತನಿಗೆ ಭಯವಾಗುತ್ತಿದೆ. ಹಿಂದುತ್ವವಾದಿಗಳ ಬಹುಪರಾಕ್ರಮ ಮತ್ತು ಅದರ ಅಸಲಿಯತ್ತನ್ನು ಹೀಗೂ ಬಹಿರಂಗ ಪಡಿಸಿರಬಹುದೇ? ಇದ್ದರೂ ಏನಿದ್ದರೂ ಪ್ರಧಾನಿ ಮೋದಿ ಸಂಸತ್ತಿಗೆ ಸೆಂಗೋಲ್ ತಂದಿಟ್ಟ ನಂತರ ಭಾರತದಲ್ಲಿ ರಾಜಾಡಳಿತ ಶುರುವಾಗಿದೆ ಎಂದು ಕೆಲವರು ಅಭಿಮತ ವ್ಯಕ್ತಪಡಿಸುತ್ತಿದ್ದಾರೆ. ಅದನ್ನೇ ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ಉಚ್ಚರಿಸಿರಬಹುದು.
ಇನ್ನು ಮುಸ್ಲಿಮರನ್ನು ಸತಾಯಿಸುವ ಹಿಂದುತ್ವ ರಾಷ್ಟ್ರೀಯತೆಯವರ ಮುಂದೆ ಮಹಾರಾಷ್ಟ್ರದ ಜನರು ತಿರುಗಿ ಬಿದ್ದಿದ್ದಾರೆ. ಮುಂದೆ ಏನೂ ಆಗಬಹುದು? ಯಾಕೆಂದರೆ ಇವಿಎಂನ ಮೂಲಕ ನಡೆದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲೇ ಅವರಿಗೆ ವಿಶ್ವಾಸವಿಲ್ಲ. ಬ್ಯಾಲೆಟ್ ಪೇಪರ್ನಲ್ಲಿ ಅಣಕು ಮತದಾನ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಅವರು ವ್ಯಕ್ತ ಪಡಿಸಿದರು.
ವಿಷಯಕ್ಕೆ ಬರೋಣ:
ಧಾರ್ಮಿಕ ಸ್ಥಳಗಳ ವಿಚಾರದಲ್ಲಿ 1947ರ ಆಗಸ್ಟ್ ಹದಿನೈದರ ಯಥಾ ಸ್ಥಿತಿಯ 1991ರ ಧಾರ್ಮಿಕ ಸ್ಥಳ ಕಾನೂನು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಮೂರು ವರ್ಷಗಳ ಹಿಂದೆ ಸಲ್ಲಿಕೆಯಾಗಿತ್ತು. ಸಲ್ಲಿಸಿದ್ದು ಬೇರಾರೂ ಅಲ್ಲ, ಬಿಜೆಪಿ ಸುಬ್ರಮಣಿಯನ್ ಸ್ವಾಮಿ, ಅಶ್ವಿನಿ ಉಪಾಧ್ಯಾಯ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ ಉತ್ತರಿಸಿಲ್ಲ. ಆದ್ದರಿಂದ ಸಂಜೀವ್ ಖನ್ನ 4 ವಾರಗಳಲ್ಲಿ ಉತ್ತರಿಸಬೇಕೆಂದು ಆದೇಶ ಹೊರಡಿಸಿದರು. ಕೇಂದ್ರ ಸರಕಾರ ಯಾಕೆ ಉತ್ತರಿಸಿಲ್ಲ. ಉತ್ತರಿಸುವ ಮೊದಲು ಸಂಭಾಲ್, ಮಥುರಾ ಕಾಶಿ, ಈದ್ಗಾಹ್, ಅಜ್ಮೀರ್ ಹೀಗೆ ಹಲವು ಮುಸ್ಲಿಮರ ಧಾರ್ಮಿಕ ಸ್ಥಳಗಳಿಗೆಲ್ಲ ಹಿಂದುತ್ವದವರು ಅರ್ಜಿ ಸಲ್ಲಿಸಿ ದೂರು ನೀಡಲು ಸಮಯ ಸಿಗಬೇಕೆಂದಿರಬಹುದು. ಮಸೀದಿ ಸರ್ವೆಗಳು. ಮುಸ್ಲಿಮರ ಮಸೀದಿಯಲ್ಲಿ ದೇವಸ್ಥಾನವನ್ನು ಹುಡುಕುವ ಪ್ರಕ್ರಿಯೆ ಎದ್ದು ನಿಂತವು. ಈಗ ಹಳ್ಳಿ ಗಲ್ಲಿಗೂ ದಾಂಧಲೆಯಿಡುವ ಸಾಧ್ಯತೆ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಸಂಜೀವ್ ಖನ್ನ ಅದಕ್ಕೆ ಮದ್ಯಂತರ ಆದೇಶದಲ್ಲಿ ಬ್ರೇಕ್ ಹಾಕಿದ್ದಾರೆ. ಬರೇ ನಾಲ್ಕು ವಾರಗಳವರೆಗೆ ಒಂದು ಅವಧಿ ಇದೆ. ಕೇಂದ್ರ ಸರಕಾರದ ಉತ್ತರ ಬಂದ ಮೇಲೆ ಈ ಖನ್ನ ಯಾವ ತೀರ್ಪು ನೀಡುತ್ತಾರೆ ಎಂದು ನೋಡಬೇಕಾಗುತ್ತದೆ. ಆದ್ದರಿಂದ ಈಗ ಸಂಜೀವ್ ಖನ್ನರ ತೀರ್ಪನ್ನು ಸ್ವಾಗತಿಸುತ್ತಿರುವ ಮುಸ್ಲಿಂ ಸಂಘಟನೆಗಳೇ ಸಂಯಮ ಪಾಲಿಸಿದರೆ ಉತ್ತಮ. ಬಾಬರಿಯ ನಂತರ ಒಂದೊಂದೇ ಮಸೀದಿಗಳನ್ನು ಮುಸ್ಲಿಮರು ಕಳಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ. ಹೀಗಾಗಿ ಮುಸ್ಲಿಂ ಪರ್ಸನಲ್ ಲಾ ಬೋರ್ಡಿಗೆ, ಮುಸ್ಲಿಂ ಲೀಗಿಗೆ ಇಂತಹ ಮುಸ್ಲಿಮ್ ಸಂಘಟನೆಗಳಿಗೆ ಜಾತ್ಯತೀತ ಸಂಘಟನೆಗಳಿಗೆ ಸಮ್ಮತ ಸಲಹೆ ಇದು.
ಇನ್ನು ಮುಸ್ಲಿಮರ ವಿರುದ್ಧ ಕಟ್ಮುಲ್ಲ ಎಂದ ಜಡ್ಜ್ ವಿರುದ್ಧ ಕಾನೂನು ಕ್ಷೇತ್ರದಿಂದಲೇ ವ್ಯಾಪಕ ಪ್ರತಿಭಟನೆ ನಡೆಯಿತು. ಜಡ್ಜ್ ವಿರುದ್ಧ ಆಂತರಿಕ ಕ್ರಮ ನಡೆಸಬೇಕೆಂದು ಕ್ಯಾಂಪಯಿನ್ ಫಾರ್ ಜ್ಯುಡಿಷಿಯಲ್ ಅಕೌಂಟೇಬಲಿಟಿ ಆಂಡ್ ರಿಫಾಮ್ಸ್ (ಸಿಜೆಎಆರ್) ಕಳೆದ ದಿವಸ ಚೀಪ್ ಜಸ್ಟಿಸ್ಗೆ ದೂರ ನೀಡಿದರು. ಜಡ್ಜ್ ರನ್ನು ವಜಾಗೊಳಿಸಬೇಕೆಂದು ಪ್ರಸ್ತಾವ ತರಲು ನ್ಯಾಶನಲ್ ಕಾನ್ಫರೆನ್ಸ್ ನ ಸಂಸದ ಲೋಕ ಸಭೆಯ ಸ್ಪೀಕರ್ಗೆ ನೋಟಿಸು ನೀಡಿದರು. ನೋಟಿಸಿನಲ್ಲಿ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ, ಭಾರತ್ ಆದಿವಾಸಿ ಪಾರ್ಟಿ ಸದಸ್ಯ ರಾಜಕುಮಾರ್, ಸಂಸದ ಸುಧಾಮ ಪ್ರಸಾದ್, ಸಮಾಜವಾದಿ ಪಾರ್ಟಿ ಸಂಸದರಾದ ಮೊಹಿಬುಲ್ಲ ನದವಿ, ಝಿಯರ್ರಹ್ಮಾನ್ ಬರ್ಕ್ ಸಹಿತ ಏಳು ಸಂಸದರು ಸಹಿ ಹಾಕಿದ್ದರು. ರಾಜ್ಯ ಸಭೆಯಲ್ಲಿಯೂ ನೋಟಿಸು ನೀಡುತ್ತೇವೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ನೀಡಿರಬಹುದು. ಕನಿಷ್ಠ ಅವರಿಗೆ ವರ್ಗಾವಣೆಯಾಗಬಹುದು. ಯಾಕೆಂದರೆ ಇಂತಹ ಮುಸ್ಲಿಮರನ್ನು ಹಳಿಯುವ ಹೇಳಿಕೆಗಳನ್ನು ಹಿಂದುತ್ವ ರಾಷ್ಟ್ರೀಯತೆಯ ಶೌರ್ಯ ಪ್ರಕಟದಂತೆ ತಿಳಿಯಬಹುದು. ನಮ್ಮ ಇಂದಿನ ಪ್ರಜಾಪ್ರಭುತ್ವ ಸಿಸ್ಟಮ್ ಇದು ಸಂಸತ್ತಿನಲ್ಲಿ, ಬೀದಿಯಲ್ಲಿ ಬೊಬ್ಬೆ ಹೊಡೆದವರು ಹೊಡೆಯುತ್ತಿರುತ್ತಾರೆ. ಸರಕಾರ ಮಾಡುವುದನ್ನು ಮಾಡುತ್ತಲೇ ಹೋಗುತ್ತಿರುತ್ತದೆ. ಏಕೆ ಗೊತ್ತೆ? ಸಂವಿಧಾನ್ ಬಚಾವೊಕ್ಕಿಳಿದವರು, ಮೋದಿ ಸಂವಿಧಾನವನ್ನು ಕಿತ್ತೆಸೆಯಲು ನೋಡುತ್ತಿದೆ ಎಂದವರೇ ಅದೇ ಮೋದಿಯ ಬಿಜೆಪಿಯೊಂದಿಗೆ ಸೇರುತ್ತಾರೆ. ನಾವು ಜನಸಾಮಾನ್ಯರು ಮಿಕ ಮಿಕ ಕಣ್ಣು ಬಿಡುವುದು ಬಿಟ್ಟೇನು ಮಾಡಬಹುದು. ಹಾಗಿದ್ದರೆ ಮುಂದೇನು? ಈ ಪ್ರಶ್ನೆಗೆ ಉತ್ತರವಾಗಿ ಅಸಲಿ ಮತ್ತು ನಕಲಿಗಳ ಫೈಟ್ ನಡೆಯಬಹುದೆಂದ ಕಪಿಲ್ ಸಿಬಲ್ರ ಮಾತನ್ನೇ ಎತ್ತಿಕೊಳ್ಳೋಣ.












