ಬಾಬಾ ರಾಮ್‌ದೇವ್‌ ಮಾಲಕತ್ವದ ‘ಪತಂಜಲಿ’ ಜಾಹೀರಾತು ನಿಷೇಧಿಸಿದ ಸುಪ್ರೀಂ ಕೋರ್ಟ್

0
279

ಸನ್ಮಾರ್ಗ ವಾರ್ತೆ

ಯೋಗ ಗುರು ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿ ಆರ್ಯುವೇದ ಕಂಪನಿಯ ದಾರಿ ತಪ್ಪಿಸುವ ಹಾಗೂ ಸುಳ್ಳು ಜಾಹೀರಾತಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಕಿಡಿಕಾರಿದ್ದು, ತಪ್ಪು ದಾರಿಗೆಳೆಯುವ ಮಾಹಿತಿ ನೀಡುವ ಔಷಧಗಳ ಎಲ್ಲ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಜಾಹೀರಾತುಗಳನ್ನು ತಕ್ಷಣ ನಿಲ್ಲಿಸುವಂತೆ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.

ಅಲೋಪತಿ ಮತ್ತು ವೈದ್ಯರನ್ನು ಕಳಪೆ ಎನ್ನುವ ರೀತಿಯಲ್ಲಿ ಬಿಂಬಿಸುವ ಹಲವಾರು ಜಾಹೀರಾತುಗಳನ್ನು ಬಾಬಾ ರಾಮ್‌ದೇವ್‌ರ ಪತಂಜಲಿ ಸಂಸ್ಥೆ ಪ್ರಕಟಿಸಿತ್ತು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯ ಬಳಿಕ ಈ ತಾತ್ಕಾಲಿಕ ಆದೇಶ ಹೊರಡಿಸಿದೆ.

“ಪತಂಜಲಿ ಕಂಪನಿಯು ತಮ್ಮ ಜಾಹೀರಾತುಗಳಿಂದ ಇಡೀ ದೇಶವನ್ನೇ ದಾರಿ ತಪ್ಪಿಸುತ್ತಿದೆ” ಎಂದು ಗರಂ ಆಗಿರುವ ಸುಪ್ರೀಂ ಕೋರ್ಟ್‌, “ಇದು ನಿಜಕ್ಕೂ ದುರದೃಷ್ಟದ ಸಂಗತಿ. ಕೇಂದ್ರ ಸರ್ಕಾರ ಏನು ಮಾಡುತ್ತಿದೆ. ಕಣ್ಮುಚ್ಚಿ ಕುಳಿತಿದೆಯೇ? ಸರ್ಕಾರ ಈ ಕುರಿತಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ” ಎಂದು ಪೀಠ ಹೇಳಿದೆ.

ತಪ್ಪು ದಾರಿಗೆಳೆಯುವ ಮಾಹಿತಿ ನೀಡುವ ಔಷಧಗಳ ಎಲ್ಲ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಜಾಹೀರಾತುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ಪೀಠವು ಕಂಪನಿಗೆ ನಿರ್ದೇಶನ ನೀಡಿದೆ.

“ಇಂಥ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡದೇ ಇರುವಂತೆ ಕಾಯ್ದೆಗಳೇ ಇರುವಾಗಲೂ ನೀವು ಎರಡು ವರ್ಷ ಕಣ್ಮುಚ್ಚಿಕೊಂಡು ಕುಳಿತಿದ್ದೀರಿ. ಸರ್ಕಾರ ಕಣ್ಣು ಮುಚ್ಚಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಪೀಠದ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆಎಂ ನಟರಾಜ್‌ ಅವರಿಗೆ ಹೇಳಿದರು.

ಈ ವೇಳೆ ಮಾತನಾಡಿದ ಕೇಂದ್ರದ ಕಾನೂನು ಅಧಿಕಾರಿ, “ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಸ್ವೀಕರಿಸಲಾಗುವುದಿಲ್ಲ. ಆದರೆ, ನೀವು ಹೇಳಿದ ಕಾಯಿದೆಯಡಿಯಲ್ಲಿ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ರಾಜ್ಯಗಳಿಗೆ ಬಿಟ್ಟದ್ದು” ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಪತಂಜಲಿ ಆಯುರ್ವೇದ ತನ್ನ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ “ಸುಳ್ಳು” ಮತ್ತು “ದಾರಿ ತಪ್ಪಿಸುವ” ಮಾಹಿತಿಗಳನ್ನು ನೀಡುವುದರ ವಿರುದ್ಧ ಎಚ್ಚರಿಕೆ ನೀಡಿತ್ತು. ಆದರೂ ಮರುದಿನವೇ ಪತ್ರಿಕಾಗೋಷ್ಠಿ ನಡೆಸಿದ್ದ ಬಾಬಾ ರಾಮ್‌ದೇವ್ ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಇದರ ವಿರುದ್ಧವೇ ಮಾತನಾಡಿದ್ದರು.

ಈ ಬಗ್ಗೆ ಇಂದು ವಿಚಾರಣೆಯ ವೇಳೆ ಗರಂ ಆದ ಸುಪ್ರೀಂ ಕೋರ್ಟ್‌, ನಿಮ್ಮ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂದು ಕೇಳಿ, ನೋಟಿಸ್ ಜಾರಿ ಮಾಡಿದೆ.

ಪತಂಜಲಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್‌, ”ಈ ನ್ಯಾಯಾಲಯದ ಆದೇಶದ ನಂತರವೂ ಇಂಥ ಜಾಹೀರಾತು ನೀಡಲು ನಿಮಗೆ ಧೈರ್ಯ ಹೇಗೆ ಬಂತು. ಕೋರ್ಟ್‌ನ ಆದೇಶವಿದ್ದರೂ ತಪ್ಪು ಜಾಹೀರಾತು ನೀಡಿದ್ದೀರಿ. ಶಾಶ್ವತ ಪರಿಹಾರ ಎನ್ನುತ್ತೀರಿ. ಶಾಶ್ವತ ಪರಿಹಾರ ಎಂದರೆ ಏನು? ಇದು ಚಿಕಿತ್ಸೆಯೇ? ಇಂದು ನಾವು ಕಠಿಣ ಆದೇಶವನ್ನು ನೀಡಲಿದ್ದೇನೆ. ನೀವು ನ್ಯಾಯಾಲಯವನ್ನೇ ಕೆಣಕುವ ಕೆಲಸ ಮಾಡುತ್ತಿದ್ದೀರಿ” ಎಂದು ನ್ಯಾಯಮೂರ್ತಿ ತಿಳಿಸಿದರು.

ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ 1954 ರಲ್ಲಿ ನಿರ್ದಿಷ್ಟಪಡಿಸಿದ ರೋಗಗಳು/ಅಸ್ವಸ್ಥತೆಗಳಿಗೆ ಸಂಬಂಧಿಸಿದ ತನ್ನ ಉತ್ಪನ್ನಗಳನ್ನು ಜಾಹೀರಾತು ನೀಡದಂತೆ ನ್ಯಾಯಾಲಯವು ಪತಂಜಲಿ ಆಯುರ್ವೇದವನ್ನು ಈ ಕ್ಷಣದಿಂದಲೇ ನಿರ್ಬಂಧಿಸಿದೆ. ಅದರೊಂದಿಗೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟ ಮಾಡಿದ್ದಕ್ಕಾಗಿ ಪತಂಜಲಿ ಆಯುರ್ವೇದ ಮತ್ತು ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಅನ್ನೂ ಕಳುಹಿಸುವಂತೆ ತಿಳಿಸಿದೆ.

ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡಿದ ಪ್ರತಿಯೊಂದು ಸುಳ್ಳು ಪ್ರತಿಪಾದನೆಗಳಿಗೆ ತಲಾ ₹1 ಕೋಟಿ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಈ ಹಿಂದೆ ಎಚ್ಚರಿಕೆ ನೀಡಿತ್ತು.