ಎಥೆನ್ಸ್: ಯುದ್ಧಭೂಮಿಯ ದೈನ್ಯತೆಯನ್ನು ಸೆರೆಹಿಡಿದು ಜಗತ್ತಿನ ಗೌರವಕ್ಕೆ ಪಾತ್ರರಾದ ರಾಯಿಟರ್ಸ್ ಫೋಟೊಗ್ರಾಫರ್ ಮತ್ತು ಪುಲಿಟ್ಝರ್ ಪ್ರಶಸ್ತಿ ವಿಜೇತ ಯಾನಿಸ್ ಬಹಿರಾಕಿಸ್ ನಿಧನರಾದರು. ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ತನ್ನ 58 ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅಫ್ಘಾನಿಸ್ತಾನ, ಚೆಚ್ನಿಯ ಮುಂತಾದ ಹಲವು ದೇಶಗಳ ಸಂಘರ್ಷದ ದಾರುಣ ಮುಖವನ್ನು ತನ್ನ ಫೋಟೊಗಳ ಮೂಲಕ ಜಗತ್ತಿನ ಮುಂದೆ ಅವರು ಅನಾವರಣಗೊಳಿಸಿದ್ದರು. ಈಜಿಪ್ಟ್ ನ 2011ರ ಜನರ ಕ್ರಾಂತಿ ಮತ್ತು ಕಾಶ್ಮೀರ ಭೂಕಂಪದ ಫೋಟೊಗಳನ್ನು ಕೂಡ ಅವರು ತೆಗೆದು ಗಮನಸೆಳೆದಿದ್ದರು.

2000ದಲ್ಲಿ ಸಿಯಾರ ಲಿಯೊನ್ನಲ್ಲಿ ಪ್ರಯಾಣಿಸುವಾಗ ಅವರ ವಾಹನಕ್ಕೆ ದಾಳಿ ನಡೆದಿತ್ತು. ಅದರಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಈ ದಾಳಿಯಲ್ಲಿ ಅವರ ಆತ್ಮೀಯ ಮಿತ್ರರ ಸಹಿತ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದರು. ಗಂಟೆಗಟ್ಟಲೆ ರಸ್ತೆ ಬದಿಯ ಗಿಡಗಂಟಿಗಳ ನಡುವೆ ಅಡಗಿ ಕೂತು ಯಾನಿಸ್ ಪಾರಾಗಿದ್ದರು. ನಿರಾಶ್ರಿತರ ದೈನ್ಯತೆಯನ್ನು ತೋರಿಸುತ್ತಿದ್ದ ಅವರ ಚಿತ್ರಗಳಿಗೆ 2016ರಲ್ಲಿ ಪುಲಿಟ್ಝರ್ ಪ್ರಶಸ್ತಿ ಸಿಕ್ಕಿತ್ತು. ನನ್ನ ಫೋಟೊಗಳು ನಿಮ್ಮೊಂದಿಗೆ ದುರ೦ತ ಮುಖಗಳ ಕುರಿತು ಹೇಳುತ್ತವೆ. ಅಲ್ಲಿ ಏನು ಮಾಡಬೇಕಾಗಿದೆ ಎಂಬುದನ್ನು ನೀವು ತೀರ್ಮಾನಿಸಬೇಕಾಗಿದೆ ಎಂದು ಒಮ್ಮೆ ಯಾನಿಸ್ ಹೇಳಿದ್ದರು. ಸಿರಿಯದ ನಿರಾಶ್ರಿತರ ಪಲಾಯನ ಚಿತ್ರವನ್ನೂ ಅವರು ತೆಗೆದಿದ್ದರು.
ಮಾಸಿಡೊನಿಯನ್ ಗಡಿಯಲ್ಲಿ ಮಳೆಯಲ್ಲಿ ಪುಟ್ಟ ಮಗಳನ್ನು ಚುಂಬಿಸಿ ನಡೆಯುತ್ತಿರುವ ಸಿರಿಯನ್ ನಿರಾಶ್ರಿತ ತಂದೆಯ ಚಿತ್ರ ಅವರ ಫೋಟೊಗಳಲ್ಲಿ ಉತ್ಕೃಷ್ಟವಾದದ್ದು. ಪತ್ನಿ ಎಲಿಝಬೆತ್ ಮತ್ತು ಮಗಳು ರೆಬೆಕಾಳನ್ನು ಅವರು ಅಗಲಿದ್ದಾರೆ. ಗ್ರೀಸ್ನ ಎಥೆನ್ಸ್ ನಲ್ಲಿ ಜನಿಸಿದ ಬಹಿರಾಕಿಸ್ 1989ರಲ್ಲಿ ರಾಯಿಟರ್ಸ್ ಗಾಗಿ ಫೋಟೊ ತೆಗೆಯುವ ಕೆಲಸಕ್ಕೆ ಸೇರಿದರು. ಲಿಬಿಯನ್ ಆಡಳಿತಗಾರ ಮುಅಮ್ಮರ್ ಗದ್ದಾಫಿಯ ಚಿತ್ರಗಳೊಂದಿಗೆ ಅವರು ಫೋಟೊ ತೆಗೆಯುವ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.












