ಟಿವಿ ಚಾನೆಲ್, ಪತ್ರಿಕೆಗಳಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ರಿಪಬ್ಲಿಕ್ ಟಿವಿ ಸೇರಿದಂತೆ ಇತರೆ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮುಸ್ಲಿಮ್ ಸಂಘಟನೆಗಳು

0
1941

ನವದೆಹಲಿ: ಮುಸ್ಲಿಮ್ ಸಮುದಾಯದ ಕುರಿತು ಇಲ್ಲಸಲ್ಲದ ಆರೋಪಗಳನ್ನು ಹುಟ್ಟು ಹಾಕಿರುವ ಅರ್ಬನ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಲು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರ ಅಧ್ಯಕ್ಷರಾದ ಮೌಲಾನ ಜಲಾಲುದ್ದೀನ್ ಉಮರಿಯವರು ಮುಂದಾಗಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ಜಮಾಅತೆ ಇಸ್ಲಾಮೀ ಕಾಶ್ಮೀರ ನಿಷೇಧದ ಕುರಿತು ವರದಿ ಮಾಡುವ ಧಾವಂತದಲ್ಲಿ ರಿಪಬ್ಲಿಕ್ ಟಿವಿಯು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರ ಅಧ್ಯಕ್ಷರಾದ ಮೌಲಾನ ಜಲಾಲುದ್ದೀನ್ ಉಮರಿಯವರ ಭಾವಚಿತ್ರವನ್ನು ಬಳಸಿ, ಕಾಶ್ಮೀರ ಜಮಾಅತೆ ಇಸ್ಲಾಮೀ ಯ ಕಮಾಂಡರ್ ಇನ್ ಚೀಫ್ ಎಂದು  ಚಿತ್ರಿಸಿತ್ತು. ವಾಸ್ತವದಲ್ಲಿ ಜಮಾಅತೆ ಇಸ್ಲಾಮೀ ಕಾಶ್ಮೀರ ಸಂಘಟನೆಗೆ  ಜಮಾಅತೆ ಇಸ್ಲಾಮೀ ಹಿಂದ್ ನೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಮುಸ್ಲಿಮ್ ಸಮುದಾಯ ಅರಿತಿದೆಯಾದರೆ ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಅರಿತಿಲ್ಲ. ಈ ವರದಿಗಾರಿಕೆಯಿಂದ ರಿಪಬ್ಲಿಕ್ ಟಿವಿಯು ಹಲವಾರು ಊಹಾಪೋಹಗಳಿಗೆ ಎಡಮಾಡಿಕೊಟ್ಟಿದೆ.

ಉಮರಿಯವರ ಭಾವಚಿತ್ರವನ್ನು ಬಳಸಿದುದರ ಕುರಿತು ರಿಪಬ್ಲಿಕ್ ಟಿವಿ ಟ್ವಿಟ್ಟರ್ ನಲ್ಲಿ ಕ್ಷಮೆ ಯಾಚಿಸಿದೆಯಾದರೆ ಸುಳ್ಳು ವರದಿಯನ್ನು ಮಾಡಿದ ರಿಪಬ್ಲಿಕ್ ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿಯೇ ಈ ಕುರಿತು ಕ್ಷಮೆ ಯಾಚಿಸಬೇಕೆಂಬ ಬೇಡಿಕೆಯು ಕೇಳಿ ಬರುತ್ತಿದೆ. ಇದಲ್ಲದೇ ಜಲಾಲುದ್ದೀನ್ ಉಮರಿಯವರ ಭಾವಚಿತ್ರವನ್ನು ತಪ್ಪಾಗಿ ಬಳಸಿಕೊಂಡಿದ್ದ ಟೈಮ್ಸ್ ಆಫ್ ಇಂಡಿಯಾ ಕೂಡ ಕ್ಷಮೆ ಯಾಚಿಸಿದ್ದು ಉದಯವಾಣಿ  ಪತ್ರಿಕೆಯು ಇದುವರೆಗೆ ಯಾವುದೇ ರೀತಿಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ.

ಇದಲ್ಲದೇ ಇಂಕ್ಯುಲಾಬ್ ವರದಿಗಳ ಪ್ರಕಾರ ಸಿಸಿಎನ್ 18 ಟಿವಿಯು ಜೈಶೇ ಮುಹಮ್ಮದ್ ನಾಯಕ ಮಸೂದ್ ಅಝರ್‌ನ ಆಸ್ತಿಪಾಸ್ತಿಯ ಚಿತ್ರಣವನ್ನು ತೋರಿಸುವಾಗ ಮುಸ್ಲಿಮರ ಪವಿತ್ರ ಸ್ಥಳಗಳಾದ ಮಸ್ಜಿದೆ ಹರಮ್, ಮಸ್ಜಿದ್ ನಬವಿ ಹಾಗೂ ಮಸ್ಜಿದ್ ಏ ಅಕ್ಸಾಗಳನ್ನು ತೋರಿಸುವ ಮೂಲಕ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿತ್ತು.

ದೇಶದಲ್ಲಿ ಮುಸ್ಲಿಮ್ ಸಮುದಾಯದ ಕುರಿತು ಇಂತಹ ಕೀಳ್ಮಟ್ಟದ ಸುಳ್ಳು ವರದಿಗಾರಿಕೆಗಳನ್ನು ಪ್ರದರ್ಶಿಸುತ್ತಿರುವ ಪತ್ರಿಕೆಗಳು ಹಾಗೂ ಚಾನೆಲ್‌ಗಳು ತಮ್ಮ ಪತ್ರಿಕಾ ಧರ್ಮವನ್ನೂ, ಸ್ವಾತಂತ್ರ್ಯವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಬೇಕೆಂದು ಮುಸ್ಲಿಮ್ ಸಂಘಟನೆಗಳು ಆಗ್ರಹಿಸಿವೆ.