ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೆ ಪ್ರಧಾನಿಯನ್ನು ಆಗ್ರಹಿಸಿದ ಸುವೇಂದು ಅಧಿಕಾರಿ

0
561

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಆದಷ್ಟು ಶೀಘ್ರವಾಗಿ ಸಿಎಎ(citizenship Amendment Act) ಜಾರಿಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಆಗ್ರಹಿಸಿದ್ದಾರೆ.

ಇಂದು ಪ್ರಧಾನ ಮಂತ್ರಿ ಯವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ‌ 45 ನಿಮಿಷಗಳಷ್ಟು ಗಂಟೆ ಚರ್ಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೊದಲಿನಿಂದಲೂ ಸಿಎಎ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಬೆನ್ನಿಗೆ ನಡೆದ ಅಕ್ರಮ ಘಟನೆಗಳು ಕೂಡ ಭೇಟಿಯ ವೇಳೆ ಚರ್ಚಿಸಲಾಯಿತೆಂದು ಇದೇ ವೇಳೆ ಸುವೇಂದು ಅಧಿಕಾರಿ ಹೇಳಿದರು.

ಸಿಎಎ ಜಾರಿಗೊಳಿಸುವ ಶ್ರಮಗಳನ್ನು ಐದು ರಾಜ್ಯಗಳಲ್ಲಿ ಆರಂಭಿಸಲಾಗಿದೆ. ಪಶ್ಚಿಮ ಬಂಗಾಳ ಬೇರೆ ದೇಶವಲ್ಲ. ರಾಜಸ್ಥಾನ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೊಟ್ ಸಿಎಎಯನ್ನು ಸ್ವಾಗತಿಸಿದ್ದಾರೆ. ಪಶ್ಚಿಮ ಬಂಗಾಳ ಬೇರೆಯೇ ದೇಶವೆಂದು ಕೆಲವರು ಯೋಚಿಸುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಮೋದಿಯನ್ನು ಭೇಟಿಯಾಗಿ ಬಂದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನುದ್ದೇಶಿಸಿ ಮಾಧ್ಯಮಗಳಿಗೆ ಹೇಳಿದರು.

ಪಶ್ಚಿಮ ಬಂಗಾಳದ ಚುನಾವಣೆ ಪ್ರಚಾರದ ವೇಳೆ ರಾಜ್ಯದಲ್ಲಿ ಸಿಎಎ ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದರು. ಪ.ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸಿ ಸುವೇಂದು ಅಧಿಕಾರಿ ಗೆದ್ದಿದ್ದಾರಾದರೂ ಶತಾಯಗತಾಯ ಪ್ರಯತ್ನ ನಡೆಸಿದರೂ ಕೂಡ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ವಿಫಲವಾಗಿತ್ತು. ಇದು ಇಡೀ ದೇಶದಲ್ಲಿ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿತ್ತು.

ಮಮತಾ ಬ್ಯಾನರ್ಜಿಯವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿಯ ಕೇಂದ್ರದ ನಾಯಕರು ಬಹಳ ಶ್ರಮಪಟ್ಟಿದ್ದರು. ಆದರೆ ಪಶ್ಚಿಮ ಬಂಗಾಳದ ಜನತೆ ಇದಕ್ಕೆ ಅವಕಾಶ ನೀಡದೆ ಮತ್ತೆ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ್ದರು. ಚುನಾವಣಾ ಫಲಿತಾಂಶದ ಬಳಿಕ ಕೇಂದ್ರ ಸರಕಾರದೊಂದಿಗೆ ಮಮತಾ ನೇರ ಠಕ್ಕರ್ ಗಿಳಿದದ್ದು ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ಬಳಿಕ ಬೆಳವಣಿಗೆಗಳು ಸಾಕ್ಷಿಯಾಗಿದೆ . ಈ‌ ಎಲ್ಲಾ ಬೆಳವಣಿಗೆಗಳು ಮಮತಾರವರು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ ಎಂದು ರಾಜಕೀಯ ಪರಿಣಿತರು ವಿಶ್ಲೇಷಿಸಿದ್ದಾರೆ.