ಸನ್ಮಾರ್ಗ ವಾರ್ತೆ
ಸಂವಿಧಾನವು ಭಾರತವನ್ನು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಶಾಶ್ವತ ಮೌಲ್ಯಗಳ ಮೇಲೆ ಕಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಮತ್ತು ಶಾಂತಿಯುತವಾಗಿ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಈ ಹಕ್ಕುಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವು ಸಂವಿಧಾನದ ಆತ್ಮದ ಮೇಲಿನ ದಾಳಿಯಾಗಿದೆ.
CJP ವೇದಿಕೆಯಡಿ ವಿದ್ಯಾರ್ಥಿಗಳು ಹಾಗೂ ಯುವಜನರು ನಡೆಸಿದ ಶಾಂತಿಯುತ ಹೋರಾಟವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಂತವಾಗಿರಿಸುವ ನಾಗರಿಕ ಚಳುವಳಿಯಾಗಿದೆ. ಈ ಹೋರಾಟದ ಒತ್ತಡಕ್ಕೆ ಕೇಂದ್ರ ಸರ್ಕಾರವು ತನ್ನ ನಿಲುವಿನಲ್ಲಿ ಬದಲಾವಣೆ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಗಿದೆ. ಆದರೆ ಇದನ್ನು ಪ್ರಜಾಪ್ರಭುತ್ವದ ಗೆಲುವಾಗಿ ಸ್ವೀಕರಿಸುವ ಬದಲು, ಅದನ್ನು ಬೆಂಬಲಿಸಿದವರನ್ನು ಗುರಿಯಾಗಿಸಿಕೊಂಡು ರಾಜಕೀಯ ದ್ವೇಷದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿರುವುದು ಅತ್ಯಂತ ವಿಷಾದನೀಯ.
ಉಡುಪಿಯಲ್ಲಿ 28 ಜುಲೈ 2026ರಂದು ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಾಸಕ ಯಶಪಾಲ ಸುವರ್ಣ ಅವರು CJP ಚಳುವಳಿಗಾರರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಚಳುವಳಿಯನ್ನು ಬೆಂಬಲಿಸಿದ ನಟ ಪ್ರಕಾಶ್ ರಾಜ್ ಅವರ ವಿರುದ್ಧ ಕ್ರಿಮಿನಲ್ ಅಪರಾಧಿಗಳಂತೆ ಬಿಂಬಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಅನಾಮಧೇಯ ಅಧ್ಯಾಪಕರ ವಿರುದ್ಧವೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಅಪರಾಧೀಕರಿಸುವ ಅಪಾಯಕಾರಿ ಪ್ರವೃತ್ತಿಗೆ ಉತ್ತೇಜನ ನೀಡುತ್ತವೆ.
ಶಾಸಕರಾಗಿ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿಭಾಯಿಸುವ ಬದಲು, ಪದೇ ಪದೇ ದ್ವೇಷಪೂರಿತ ಹಾಗೂ ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಹೇಳಿಕೆಗಳ ಮೂಲಕವೇ ತಮ್ಮ ಶಾಸಕತ್ವವನ್ನು ನೆನಪಿಸುವ ಪ್ರವೃತ್ತಿ ಅತ್ಯಂತ ಆತಂಕಕಾರಿಯಾಗಿದೆ. ಜನಪ್ರತಿನಿಧಿಯ ಸ್ಥಾನವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನಿನ ಆಳ್ವಿಕೆಯನ್ನು ಬಲಪಡಿಸಲು ಬಳಸಬೇಕಾದದ್ದು; ದ್ವೇಷ, ವಿಭಜನೆ ಮತ್ತು ಪ್ರಚೋದನೆಯನ್ನು ಹರಡಲು ಅಲ್ಲ. ರಾಜಕೀಯದಲ್ಲಿ ಪ್ರತೀಕಾರವಲ್ಲ; ಸಂವಾದ,ದ್ವೇಷವಲ್ಲ; ಭ್ರಾತೃತ್ವ,ವಿಭಜನೆಯಲ್ಲ; ಸಮಾನತೆ, ಬೆದರಿಕೆಯಲ್ಲ; ಸಂವಿಧಾನದ ಆಳ್ವಿಕೆ.
ಜನಪ್ರತಿನಿಧಿಗಳ ಪ್ರಚೋದನಕಾರಿ ಹೇಳಿಕೆಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದ್ದಾಗ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ತತ್ವದಂತೆ ಯಾವುದೇ ವಿನಾಯಿತಿ ಇರಬಾರದು. ಆದ್ದರಿಂದ ಉಡುಪಿ ಶಾಸಕ ಯಶಪಾಲ ಸುವರ್ಣ ಅವರ ವಿರುದ್ಧ ಕಾನೂನುಬದ್ಧ ತನಿಖೆ ನಡೆಸಿ, ಅಗತ್ಯವಿದ್ದಲ್ಲಿ ಬಂಧನ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯನ್ನು ನಾವು ಒತ್ತಾಯಿಸುತ್ತೇವೆ.
ಬುದ್ಧಿವಂತರ ಜಿಲ್ಲೆಯೆಂದು ಹೆಸರಾದ ಉಡುಪಿ ಜಿಲ್ಲೆಯ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಕಾಪಾಡುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ದ್ವೇಷದ ರಾಜಕೀಯಕ್ಕೆ ಅವಕಾಶ ನೀಡದೆ, ಸಂವಿಧಾನದ ಮೌಲ್ಯಗಳಾದ ನ್ಯಾಯ, ಸಮಾನತೆ, ಭ್ರಾತೃತ್ವ ಮತ್ತು ಧರ್ಮನಿರಪೇಕ್ಷತೆಯನ್ನು ಎತ್ತಿಹಿಡಿದು ಜಿಲ್ಲೆಯ ನೆಮ್ಮದಿಯನ್ನು ಕಾಪಾಡುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ.
ಪ್ರಧಾನ ಕಾರ್ಯದರ್ಶಿ
– ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಉಡುಪಿ ಜಿಲ್ಲೆ












