ಮಗ್ಗಗಳ ನಗರ ಭೀವಂಡಿಯ ರೋಧನ; ಆರ್ಥಿಕ ಕುಸಿತದಿಂದ ಕಂಗಾಲಾದ ಜವಳಿ ನಗರ: ಮಗ್ಗಗಳನ್ನು ಗುಜರಿಗೆ ಮಾರುತ್ತಿರುವ ಮಾಲೀಕರು- ದ ಎಕನಾಮಿಕ್ಸ್ ಟೈಮ್ಸ್ ವರದಿ

0
741

ಸನ್ಮಾರ್ಗ ವಾರ್ತೆ-

ವಿದ್ಯುತ್ ಮಗ್ಗಗಳ ನಗರವಾದ ಭೀವಂಡಿಯನ್ನು ಒಂದು ಕಾಲದಲ್ಲಿ ‘ಮ್ಯಾಂಚೆಸ್ಟರ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತಿತ್ತು. ಇಂದು ಅದು ತನ್ನ ಗುರುತನ್ನು ಕಳೆದುಕೊಳ್ಳುವ ಹಾದಿಯಲ್ಲಿದೆ. ಹಿಂದೆ, ನಗರಕ್ಕೆ ಭೇಟಿ ನೀಡುವ ಜನರನ್ನು ಪ್ರತಿ ಓಣಿಯಿಂದ ಹೊರಹೊಮ್ಮುವ ಮಗ್ಗಗಳ ಲಯಬದ್ಧ ಧ್ವನಿಯೊಂದಿಗೆ ಸ್ವಾಗತಿಸಲಾಗುತ್ತಿತ್ತು. ಆದರೆ, ಖಾದಿಪರ್, ನಲಾಪರ್, ದರ್ಗಾ ರಸ್ತೆ, ಇತ್ಯಾದಿಗಳು ಇವತ್ತು ಸದ್ದು ನಿಲ್ಲಿಸಿ ಮೌನವಾಗುವ ಹಾದಿಯಲ್ಲಿದೆ. ಒಂದು ದಿನ ಈ ಶಬ್ದವು ಮಸುಕಾಗುತ್ತದೆ ಎಂಬ ಕಲ್ಪನೆಯೂ ಅಲ್ಲಿನವರಿಗೆ ಇರಲಿಲ್ಲ. ಆದರೆ ಅದು ಸಂಭವಿಸಿದೆ. ಆರ್ಥಿಕ ಕುಸಿತವು ಮಗ್ಗ ಉದ್ಯಮದ ಮೇಲೂ ಪರಿಣಾಮ ಬೀರಿದೆ.

ನಗರವು ಒಮ್ಮೆ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳನ್ನು ಹೊಂದಿತ್ತು ಮತ್ತು ಇಲ್ಲಿನ ಜವಳಿ ಕೇಂದ್ರವು ಆಂಧ್ರಪ್ರದೇಶ ಮತ್ತು ಉತ್ತರ ಭಾರತದ ಅನೇಕ ಕಾರ್ಮಿಕರಿಗೆ ಉದ್ಯೋಗ ನೀಡಿತ್ತು. ಇಂದು, ಶೇಕಡಾ 40 ಮಗ್ಗಗಳನ್ನು ಮುಚ್ಚಲಾಗಿದೆ ಮತ್ತು ಬಂಡವಾಳದ ಕೊರತೆಯಿಂದಾಗಿ ಸಾವಿರಾರು ಮಗ್ಗಗಳು ಮಾರಾಟವಾಗಿದೆ.

ಜವಳಿ ಸಚಿವಾಲಯದ 2017-18ರ ವಾರ್ಷಿಕ ವರದಿಯ ಪ್ರಕಾರ, ಈ ವಲಯವು ಜಿಡಿಪಿಯ ಶೇಕಡಾ 2, ಕೈಗಾರಿಕಾ ಉತ್ಪಾದನೆಯ ಶೇಕಡಾ 7 ಮತ್ತು ಭಾರತದ ರಫ್ತು ಗಳಿಕೆಯ ಶೇಕಡಾ 15 ರಷ್ಟಿದೆ. ಇದರಲ್ಲಿ ಸುಮಾರು 4.5 ಕೋಟಿ ಜನರು ಕೆಲಸ ಮಾಡುತ್ತಾರೆ. ದೇಶದ ಒಟ್ಟು ಬಟ್ಟೆ ಉತ್ಪಾದನೆಯಲ್ಲಿ ಶೇಕಡಾ 57 ರಷ್ಟು ಬಟ್ಟೆಯನ್ನು ವಿದ್ಯುತ್ ಮಗ್ಗ ಕ್ಷೇತ್ರವು ಕೊಡುಗೆ ನೀಡುತ್ತದೆ ಮತ್ತು ರಫ್ತು ಮಾಡಲಾಗುವ ಶೇಕಡಾ 60 ಕ್ಕಿಂತ ಹೆಚ್ಚು ಬಟ್ಟೆಗಳನ್ನು ಸಹ ಅದರಿಂದ ಪಡೆಯಲಾಗುತ್ತದೆ.

ಭಿವಾಂಡಿ ಜವಳಿ ತಯಾರಕರ ಸಂಘ, ಭಿವಾಂಡಿ ಆಟೋ ಪವರ್‌ಲೂಮ್ ವೀವರ್ಸ್ ಅಸೋಸಿಯೇಷನ್, ಭಿವಾಂಡಿ ಪವರ್‌ಲೂಮ್ ವೀವರ್ಸ್ ಫೆಡರೇಶನ್, ಮತ್ತು ಭಿವಾಂಡಿ ಪದ್ಮಣಗರ್ ಪವರ್‌ಲೂಮ್ ವೀವರ್ಸ್ ಅಸೋಸಿಯೇಷನ್ ​​ಕಳೆದ ಮೂರು ತಿಂಗಳಲ್ಲಿ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಗೆ ಹಲವಾರು ಪತ್ರಗಳನ್ನು ಬರೆದಿದ್ದು, ಇದರಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿದ್ದಾರೆ.

ಪ್ರಸ್ತುತ ಕುಸಿತವು ಕಳೆದ ಆರು ತಿಂಗಳಲ್ಲಿ ಗರಿಷ್ಠವಾಗಿದೆ ಎಂದು ಮಗ್ಗ ಮಾಲೀಕರು ಮತ್ತು ನೇಕಾರರು ಹೇಳುತ್ತಾರೆ. ವಿದ್ಯುತ್ ದರ, ಭಾರೀ ನಿರ್ವಹಣಾ ವೆಚ್ಚ ಮತ್ತು ಜಿಎಸ್‌ಟಿ ಸಮಸ್ಯೆಗಳ ಬಗ್ಗೆಯೂ ಅವರು ದೂರು ನೀಡುತ್ತಾರೆ. ಅನೇಕ ಮಾಲೀಕರು ತಮ್ಮ ಮಗ್ಗಗಳನ್ನು ಗುಜರಿಗೆ ಮಾರಾಟ ಮಾಡಿದ್ದಾರೆ, ಇತರರು ತಮ್ಮ ಘಟಕಗಳನ್ನು ಮುಚ್ಚಿದ್ದಾರೆ. ಕೆಲವರು ತಮ್ಮ ಘಟಕಗಳನ್ನು ಖಾಲಿ ಮಾಡಿದ್ದಾರೆ ಮತ್ತು ಇತರ ವ್ಯವಹಾರಗಳಿಗೆ ಬಾಡಿಗೆಗೆ ನೀಡಿದ್ದಾರೆ ಎಂದು ದ ಎಕನಾಮಿಕ್ಸ್ ಟೈಮ್ಸ್ ಅಕ್ಟೊಬರ್ ಮೂರರಂದು ಪ್ರಕಟಿಸಿದ ಲೇಖನದಲ್ಲಿ ವಿವರಿಸಿದೆ.